ಭದ್ರಾವತಿ ಗಾಂಧಿನಗರದ ಗಾಂಧಿ ಉದ್ಯಾನವನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ನೂತನ ಅಧ್ಯಕ್ಷ ಬಿ.ಎಸ್ ಗಣೇಶ್‌ರವರನ್ನು ಸ್ಥಳೀಯ ನಾಗರಿಕರು ಸನ್ಮಾನಿಸಿ ಅಭಿನಂದಿಸಿದರು.
ಭದ್ರಾವತಿ: ನಗರಸಭೆ ವ್ಯಾಪ್ತಿಯ ೧೬ನೇ ವಾರ್ಡಿನ ಅಭಿವೃದ್ದಿಗೆ ಸರ್ಕಾರದಿಂದ ಶಾಸಕರು ಕೋಟ್ಯಾಂತರ ರೂ ಅನುದಾನ ಬಿಡುಗಡೆ ಮಾಡಿಸಿಕೊಟ್ಟಿದ್ದು, ಸದ್ಯದಲ್ಲಿಯೇ ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಕಾಮಗಾರಿಗಳ ಆರಂಭಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆಂದು ನಗರಸಭೆ ಹಿರಿಯ ಸದಸ್ಯ ವಿ.ಕದಿರೇಶ್ ಹೇಳಿದರು.
ಅವರು ಗಾಂಧಿನಗರದ ಗಾಂಧಿ ಉದ್ಯಾನವನದಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಮೃತ್ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳಿಂದ ೧೬ ಮತ್ತು ೧೭ನೇ ವಾರ್ಡ್ ವ್ಯಾಪ್ತಿಯ ೬ ಉದ್ಯಾನವನಗಳ ನಿರ್ವಹಣೆ ಕಾರ್ಯಾರಂಭ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಶಾಸಕರು ಯಾರು ಸಹ ನಿರೀಕ್ಷಿಸಲಾಗದಷ್ಟರಮಟ್ಟಿಗೆ ಅಭಿವೃದ್ದಿ ಕಾರ್ಯಗಳಿಗೆ ಒತ್ತು ನೀಡುತ್ತಿದ್ದಾರೆ ಎಂದರು.
೫ ಉದ್ಯಾನವನಗಳ ನಿರ್ವಹಣೆಗೆ ೨೦ ಲಕ್ಷ ರು., ರಸ್ತೆ ದೀಪಗಳಿಗೆ ೪೦ ಲಕ್ಷ ರು., ಗಾಂಧಿನಗರದ ಗಣಪತಿ ದೇವಾಲಯದ ಅಭಿವೃದ್ಧಿಗೆ ೨೦ ಲಕ್ಷ ರು., ಸೇಂಟ್ ಜೋಸೆಫ್ ಕಾಲೇಜು ರಸ್ತೆಗೆ ೧೮ ಲಕ್ಷ ರು., ಫುಟ್‌ಪಾತ್ ನಿರ್ಮಾಣಕ್ಕೆ ೩೦ ಲಕ್ಷ ರು. ಕೆರಕೋಡಮ್ಮ ದೇವಾಲಯ ಬಳಿಯ ಕೆರೆ ಅಭಿವೃದ್ದಿಗೆ ೧.೫೦ ಕೋಟಿ ರು., ಕೇಶವಪುರ ಬಡಾವಣೆ ಫುಟ್‌ಪಾತ್ ಟೈಲ್ಸ್ ಹಾಕಲು ೩೦ ಲಕ್ಷ ರು., ಹಿಂದೂ ಮಹಾಸಭಾ ಗಣಪತಿ ದೇವಾಲಯ ಬಳಿಯ ನಾಲ್ಕು ಕನ್ಸರ್‌ವೆನ್ಸಿ ಅಭಿವೃದ್ದಿಗೆ ೧೮ ಲಕ್ಷ ರು., ತಡೆಗೋಡೆಗೆ ೫೦ ಕೋಟಿ ರು. ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಇದೇ ರೀತಿ ನಗರಸಭೆ ಅಧ್ಯಕ್ಷರು ಕುಡಿಯುವ ನೀರಿನ ಟ್ಯಾಂಕುಗಳ ಅಭಿವೃದ್ದಿಗೆ ೬ ಲಕ್ಷ ರು. ಅನುದಾನ ಬಿಡುಗಡೆ ಮಾಡಿದ್ದಾರೆ ನೀಡಿದ್ದಾರೆಂದರು.
ನಾಗರೀಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಜನರ ಸೇವೆ ಮಾಡಲು ನನ್ನನ್ನು ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿಗೆ ನೇಮಿಸಿದ್ದಾರೆ. ಕ್ಷೇತ್ರದಲ್ಲಿ ೫೦ ರಿಂದ ೬೦ ಸಾವಿರ ಜನರು ಸರ್ಕಾರದ ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆಯುತ್ತಿದ್ದಾರೆ. ಕ್ಷೇತ್ರದಲ್ಲಿ ೪ ಬಾರಿ ಶಾಸಕರನ್ನಾಗಿ ನಮ್ಮ ತಂದೆಯವರನ್ನು ಆಯ್ಕೆ ಮಾಡಿದ್ದೀರಿ ಆ ರುಣವನ್ನು ನಾವೆಂದೂ ಮರೆಯದೆ ನಿಮ್ಮ ರುಣವನ್ನು ತೀರಿಸಲು ಹಗಲಿರುಳು ಶ್ರಮಿಸುತ್ತಿದ್ದೇವೆಂದರು.
ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗಾಂಧಿನಗರದ ಹಿರಿಯ ನಾಗರೀಕರಾದ ಡಾ: ನರೇಂದ್ರಭಟ್, ಮೆಸ್ಕಾಂ ಗ್ರಾಹಕರ ಸಲಹಾ ಸಮಿತಿ ತಾಲೂಕು ಅಧ್ಯಕ್ಷ ಬಿ. ಬಸವಂತಪ್ಪ ಮಾತನಾಡಿದರು.
ನಗರಸಭೆ ಮಾಜಿ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಪೌರಾಯುಕ್ತ ಪ್ರಕಾಶ್ ಎಂ.ಚೆನ್ನಪ್ಪನವರ್, ಪರಿಸರ ಅಭಿಯಂತರ ಪ್ರಭಾಕರ್, ಅಭಿಯಂತರ ಸಂತೋಷ್ ಪಾಟೀಲ್, ಮುಖಂಡರಾದ ಸುರೇಶ್ ವರ್ಮಾ, ನಾಗೇಶ್, ತಿಪ್ಪೇಸ್ವಾಮಿ, ಚಲುವರಾಜ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.
ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ