ಭದ್ರೆಗೆ ಬಾಗಿನ ಅರ್ಪಣೆ, ಪರಿವೀಕ್ಷಣಾ ಮಂದಿರ ಉದ್ಘಾಟನೆ ಕಾರ್ಯಕ್ರಮ
ಭದ್ರಾವತಿ ಜೀವ ನದಿ ಭದ್ರೆ ಈ ಬಾರಿ ಸಹ ಮೈತುಂಬಿ ಹರಿಯುತ್ತಿದ್ದು, ಭದ್ರಾ ಜಲಾಶಯ ಪೂರ್ಣಗೊಂಡಿದೆ. ಈ ಹಿನ್ನಲೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರತಿ ವರ್ಷದಂತೆ ಈ ಬಾರಿ ಸಹ ಭಾನುವಾರ ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಭದ್ರೆಗೆ ಬಾಗಿನ ಸಮರ್ಪಿಸಿದರು.
ಭದ್ರಾವತಿ : ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸದಾ ಕಾಲ ಶ್ರಮಿಸುತ್ತಿದ್ದಾರೆ. ಇವರ ಕೋರಿಕೆಯಂತೆ ರಾಜ್ಯ ಸರ್ಕಾರ ಸಹ ಪೂರಕವಾಗಿ ಸ್ಪಂದಿಸುವ ಮೂಲಕ ಹೆಚ್ಚಿನ ಅನುದಾನ ಸಹ ಬಿಡುಗಡೆಗೊಳಿಸುತ್ತಿದೆ. ಮುಂದಿನ ದಿನಗಳಲ್ಲಿ ಇವರಿಗೂ ಸಚಿವ ಸ್ಥಾನ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಾ ಜಲಾಶಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೀವನದಿ ಭದ್ರೆಗೆ ಬಾಗಿನ ಅರ್ಪಣೆ, ಗಂಗಾ ಪೂಜೆ ಹಾಗು ನೂತನವಾಗಿ ನಿರ್ಮಾಣಗೊಂಡಿರುವ ಪರಿವೀಕ್ಷಣಾ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಜಾತಿ, ಪಂಥ, ಮತಗಳನ್ನು ಮೀರಿದ ಜಿಲ್ಲೆಯ ಏಕೈಕ ಜನಪ್ರತಿನಿಧಿ ಶಾಸಕ ಬಿ.ಕೆ ಸಂಗಮೇಶ್ವರ್ ಎಂದರೆ ತಪ್ಪಾಗಲಾರದು. ಅವರು ಕ್ಷೇತ್ರದಲ್ಲಿ ಶಾಸಕರಾದಾಗಿನಿಂದಲೂ ನಿರಂತರವಾಗಿ ಭದ್ರೆಗೆ ಬಾಗಿನ ಅರ್ಪಿಸುವ ಪುಣ್ಯದ ಕಾರ್ಯ ನೆರವೇರಿಸಿಕೊಂಡು ಬರುತ್ತಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅಭಿವೃದ್ಧಿ ಹರಿಕಾರರಾಗಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ, ಅಧಿಕಾರ, ಸ್ಥಾನಮಾನಗಳು ಲಭಿಸುವಂತಾಗಲಿ. ಅಲ್ಲದೆ ಕ್ಷೇತ್ರದ ಪ್ರತಿಯೊಬ್ಬರ ಸಹಕಾರ ಬಹಳ ಮುಖ್ಯವಾಗಿದ್ದು, ಶಾಸಕರು ಮಾತ್ರವಲ್ಲ ಅವರ ಇಡೀ ಕುಟುಂಬ ಪ್ರಸ್ತುತ ಜನರ ಸೇವೆಯಲ್ಲಿ ತೊಡಗಿದೆ. ಇಂತಹ ಕುಟುಂಬಕ್ಕೆ ಮುಂದಿನ ದಿನಗಳಲ್ಲೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಭದ್ರೆ ಕೇವಲ ನೀರಲ್ಲ. ಇದೊಂದು ಅಮೃತವಾಗಿದ್ದು, ಇಂದು ಲಕ್ಷಾಂತರ ಜನರು ಅವಲಂಬಿಸಿದ್ದಾರೆ. ಇಂತಹ ಅಮೃತ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುತ್ತಿರುವುದು ಶಾಸಕರು ಪುಣ್ಯ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಳೆಯಾಗದೆ ಬರಗಾಲ ಬರುತ್ತದೆ. ಜಲಾಶಯಗಳಲ್ಲಿ ನೀರಿಲ್ಲದೆ ಜನರು ಸಂಕಷ್ಟಕ್ಕೆ ಒಳಗಾಗುತ್ತಾರೆಂದು ಕೆಲವರು ದೂರುತ್ತಾರೆ. ಆದರೆ ಇಂದು ರಾಜ್ಯದೆಲ್ಲೆಡೆ ನಿರಂತರವಾಗಿ ಮಳೆಯಾಗುತ್ತಿದೆ ಜಲಾಶಯಗಳು ಭರ್ತಿಯಾಗಿ ಜನರು ನೆಮ್ಮದಿ ಬದುಕು ಕಾಣುವಂತಾಗಿದೆ ಎಂದರು.
ನಗರದ ಜಾಮೀಯಾ ಮಸೀದಿ ಮೌಲಾನ ಖಾದೀರಿ ಮಾತನಾಡಿ, ಪ್ರತಿವರ್ಷ ಶಾಸಕರು ಸರ್ವಧರ್ಮ ಗುರುಗಳ ನೇತೃತ್ವದಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮ ನೆರವೇರಿಸಿಕೊಂಡು ಬರುತ್ತಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿರುವ ಇವರಿಗೆ ಇನ್ನೂ ಹೆಚ್ಚಿನ ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರ ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಪ್ರಮುಖರಾದ ಎಸ್. ಕುಮಾರ್, ಸಿ.ಎಂ ಖಾದರ್, ಮಣಿಶೇಖರ್, ಎಚ್. ರವಿಕುಮಾರ್, ಬಿ.ಕೆ ಜಗನ್ನಾಥ್, ಸೈಯದ್ ರಿಯಾಜ್, ಬಿ.ಎಸ್ ಗಣೇಶ್, ಬಿ.ಎಂ. ರವಿಕುಮಾರ್, ಬಿ.ಎಂ ಮಂಜುನಾಥ್, ಬಸವೇಶ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಮಹಿಳಾ ಸಂಘಟನೆಗಳ ಪ್ರಮುಖರು, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಎಚ್.ಎಲ್ ಷಡಾಕ್ಷರಿ ಸ್ವಾಗತಿಸಿ, ಲತಾ ಚಂದ್ರಶೇಖರ್ ಸಂಗಡಿಗರು ಪ್ರಾರ್ಥಿಸಿದರು. ಎಂ. ಶಿವಕುಮಾರ್, ಮುಸ್ವೀರ್ ಬಾಷಾ ನಿರೂಪಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ