ಸೋಮವಾರ, ಆಗಸ್ಟ್ 25, 2025

ಪ್ರತಿಯೊಬ್ಬರೂ ಕಲಾವಿದರಿಗೆ ನೆರವಾಗಿ : ಎಸ್. ಮಣಿಶೇಖರ್

ಸಂತೋಷ್ ಸವದತ್ತಿ ಕರ್ನಾಟಕ ಸ್ಟಾರ್ ಸಿಂಗರ್-೨೦೨೫ 

ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶ್ರೀ ಬಸವೇಶ್ವರ ಧರ್ಮಸಂಸ್ಥೆ ಸಹಕಾರದೊಂದಿಗೆ ಸಂಘದ ೫ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭದ್ರಾವತಿ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಸ್ಟಾರ್ ಸಿಂಗರ್-೨೦೨೫, ಸೀಸನ್-೨ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯ ಅಂತಿಮ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಬೆಳಗಾವಿ ಸವದತ್ತಿ ತಾಲೂಕಿನ ಸಂತೋಷ್ ಸವದತ್ತಿ ಅವರಿಗೆ ನಗದು, ಪ್ರಶಸ್ತಿ ಪತ್ರ ಹಾಗು ಟ್ರೋಫಿ ವಿತರಿಸಲಾಯಿತು. 


ಭದ್ರಾವತಿ: ಕಲಾವಿದರಿಗೂ ಒಂದು ಬದುಕಿದ್ದು, ಸಮಾಜದಲ್ಲಿ ಇನ್ನೂ ಹೆಚ್ಚಿನ ಪ್ರೋತ್ಸಾಹ ಲಭಿಸಿದಾಗ ಅವರು ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ಕ್ಷೇತ್ರದ ಕೀರ್ತಿ ಪತಾಕೆಯನ್ನು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಹಾರಿಸುವರು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸಹ ಕಲಾವಿದರಿಗೆ ನೆರವಾಗುವಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್ ಹೇಳಿದರು. 
     ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶ್ರೀ ಬಸವೇಶ್ವರ ಧರ್ಮಸಂಸ್ಥೆ ಸಹಕಾರದೊಂದಿಗೆ ಸಂಘದ ೫ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ  ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಸ್ಟಾರ್ ಸಿಂಗರ್-೨೦೨೫, ಸೀಸನ್-೨ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯ ಅಂತಿಮ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಕಲಾವಿದರು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಇಂತಹ  ಕಾರ್ಯಕ್ರಮಗಳು ಸಹಕಾರಿಯಾಗಿವೆ. ಸಂಘದ ವತಿಯಿಂದ ಯುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
         ನಗರಸಭೆ ಉಪಾಧ್ಯಕ್ಷರಾದ ಮಣಿ ಎಎನ್‌ಎಸ್ ರವರು ಕಳೆದ ವರ್ಷ ನೀಡಿದ ಭರವಸೆಯಂತೆ ಸಂಘಕ್ಕೆ ತಮ್ಮ ಸ್ವಂತ ನಿವೇಶನ ಉಚಿತವಾಗಿ ಅವರ ತಾಯಿಯ ನೆನಪಿನಲ್ಲಿ ನೀಡುತ್ತಿದ್ದಾರೆ. ಈ ನಿವೇಶನದಲ್ಲಿ ಮುಂದಿನ ದಿನಗಳಲ್ಲಿ ನಿರ್ಮಾಣಗೊಳ್ಳುವ ಕಟ್ಟಡಕ್ಕೆ ಅವರ ತಾಯಿಯ ಹೆಸರನ್ನು ನಾಮಕರಣಗೊಳಿಸುವಂತೆ ಮನವಿ ಮಾಡಿದರು.
          ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಮಾತನಾಡಿ, ಕ್ಷೇತ್ರದಲ್ಲಿ ಕಲಾವಿದರಿಗೆ ಶಾಸಕರು ಹಾಗೂ ಕುಟುಂಬ ವರ್ಗದವರು ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಂದ ಇನ್ನು ಹೆಚ್ಚಿನ ಪ್ರೋತ್ಸಾಹ ಲಭಿಸುವ ವಿಶ್ವಾಸವಿದೆ. ನಾನು ಸಹ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲು ಸಿದ್ಧವಿದ್ದೇನೆ. ಕಲಾವಿದರು ತಮ್ಮ ಸಂಘಟನೆಯನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಬಲಪಡಿಸುವ ಮೂಲಕ ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಮುಂದುವರಿಸಬೇಕೆಂದು ಕರೆ ನೀಡಿದರು.
ಗಾಯಕರಾದ `ಅಜಯ್ ವಾರಿಯರ್' ಮತ್ತು `ಉಷಾ ಕೋಕಿಲ' ತೀರ್ಪುಗಾರರಾಗಿ ಹಾಗು `ವಿದ್ವಾನ್ ಮಹೇಂದ್ರ ಗೋರೆ'  ಸಹ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಅಂತಿಮ ಸ್ಪರ್ಧೆಯಲ್ಲಿ ಕಿರಣ್, ಮಂಜುನಾಥ್, ಅವಿನಾಶ್, ಸಂತೋಷ್, ಜೀವಿಕಾ, ಸಂಗೀತ, ಏಳುಮಲೈ, ಸುಪ್ರಜಾ ಜಿ. ಕಾಮತ್, ವಿಶಾಲ್, ವಿಶ್ವಾ ಜೆ. ಆಚಾರ್ಯ, ಪ್ರಜ್ಞಾ ದೀಪ್ತಿ, ವರ್ಷಿಣಿ, ರಘುಪತಿ ಮತ್ತು ಮಹೇಂದ್ರ ಶೆಟ್ಟಿ ಸೇರಿದಂತೆ ಒಟ್ಟು ೧೬ ಸ್ಪರ್ಧಿಗಳು ಪೈಪೋಟಿ ನಡೆಸಿದರು. 
ಪ್ರಶಸ್ತಿ ವಿಜೇತರು : 
ಬೆಳಗಾವಿ ಸವದತ್ತಿ ತಾಲೂಕಿನ ಸಂತೋಷ್ ಸವದತ್ತಿ ಮೊದಲ ಬಹುಮಾನ ರು. ೨೫ ಸಾವಿರ ನಗದು, ಅಭಿನಂದನಾ ಪತ್ರ ಮತ್ತು ಟ್ರೋಫಿ, ಶಿವಮೊಗ್ಗ ಸುಪ್ರಜಾ ಜಿ. ಕಾಮತ್ ದ್ವಿತೀಯ ಬಹುಮಾನ ರು. ೧೫ ಸಾವಿರ ನಗದು, ಅಭಿನಂದನಾ ಪತ್ರ ಮತ್ತು ಟ್ರೋಫಿ ಹಾಗು ಭದ್ರಾವತಿ ಸಿ.ಎನ್ ಚಂದನ ತೃತೀಯ ಬಹುಮಾನ ರು. ೧೦ ಸಾವಿರ ನಗದು, ಅಭಿನಂದನಾ ಪತ್ರ ಮತ್ತು ಟ್ರೋಫಿ, ಎನ್.ಪುರ ತಾಲೂಕಿನ ವಿಶ್ರಯಾ ಜೆ. ಆಚಾರ್ ಮತ್ತು ಮಂಗಳೂರಿನ ಮಹೇಂದ್ರ ಶೆಟ್ಟಿ  ಸಮಾಧಾನಕರ ಬಹುಮಾನ ರು. ೨ ಸಾವಿರ ನಗದು ಮತ್ತು ಭಿನಂದನ ಪತ್ರ ಪಡೆದುಕೊಂಡರು. ಉಳಿದಂತೆ ತೀರ್ಥಹಳ್ಳಿ ವರ್ಷಿಣಿ ಬೆಸ್ಟ್ ಎಂಟರ್ ಟೈನರ್ ಪ್ರಶಸ್ತಿಗೆ ಭಾಜನರಾದರು. 
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಲಾವಿದರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಜೀವಮಾನ ಸಾಧನೆಗಾಗಿ ಹಿರಿಯ ಕಲಾವಿದರಾದ ಬಿ. ಲೋಕನಾಥರಿಗೆ ದಿವಂಗತ ಡಾ. ಎಸ್.ಪಿ ಬಾಲಸುಬ್ರಹ್ಮಣ್ಯಂ ರಾಜ್ಯ ಪ್ರಶಸ್ತಿ, ಧನಪಾಲ್ ಸಿಂಗ್ ರಜಪೂತ್‌ರಿಗೆ ದಿವಂಗತ ಜಯಶೀಲನ್ ರಾಜ್ಯ ಪ್ರಶಸ್ತಿ ಮತ್ತು ದೀಪಕ್ ಜಯಶೀಲನ್‌ಗೆ ದಿವಂಗತ ಗೀತಾಂಜಲಿ ಶ್ರೀನಿವಾಸ್ ರಾಜ್ಯಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೆ ಹಿರಿಯ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. 
ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.  ಶ್ರೀ ಬಸವೇಶ್ವರ ಧರ್ಮಸಂಸ್ಥೆ ಅಧ್ಯಕ್ಷ ಶಿವಕುಮಾರ್, ಯುವ ಕಾಂಗ್ರೆಸ್ ಮುಖಂಡ ಜನ್ನಾಪುರ ಪ್ರಭಾಕರ್, ಬೆಂಗಳೂರಿನ ಮಹಿಳಾ ಕೈಗಾರಿಕೋದ್ಯಮಿ ಪವಿತ್ರ ರಾಮಮೂರ್ತಿ, ನಿವೇಶನ ದಾನಿ ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಸದಸ್ಯರಾದ ಚನ್ನಪ್ಪ, ಲತಾ ಚಂದ್ರಶೇಖರ್ ಐ.ವಿ ಸಂತೋಷ್ ಕುಮಾರ್, ಭೋವಿ ಸಮಾಜದ ಅಧ್ಯಕ್ಷ ಶಿವು ಪಾಟೀಲ್, ಗುತ್ತಿಗೆದಾರ ಎಂ.ಜಿ ರಾಮಚಂದ್ರನ್, ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಮಂಜುನಾಥ್, ಲಯನ್ಸ್ ಎಲ್. ದೇವರಾಜ್, ಸಂಘದ ಗೌರವ ಸಲಹೆಗಾರ ಬಿ. ರಾಜಾ ವಿಕ್ರಮ್, ಉಪಾಧ್ಯಕ್ಷ ವೈ.ಕೆ ಹನುಮಂತಯ್ಯ, ಪ್ರಧಾನ ಕಾರ್ಯದರ್ಶಿ ಚರಣ್ ಕವಾಡ್, ಸಹ ಕಾರ್ಯದರ್ಶಿ ಚಿದಾನಂದ, ಖಜಾಂಚಿ ಎ. ಪ್ರಶಾಂತ್, ಸಹ ಕಾರ್ಯದರ್ಶಿ ಬಿ. ಚಿದಾನಂದ್, ಸಂಘಟನಾ ಕಾರ್ಯದರ್ಶಿ ಡಿ.ವಿ ರಾಮು, ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವನಾಥ್, ಶಂಕರ್ ಬಾಬು, ಮುರುಗೇಶ್, ದೇವರಾಜ್, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ