ಮಂಗಳವಾರ, ಆಗಸ್ಟ್ 26, 2025

ಆ.೨೯ರಿಂದ ವೆಳಾಂಗಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದಲ್ಲಿ ೪೧ನೇ ವಾರ್ಷಿಕ ಮಹೋತ್ಸವ

ಭದ್ರಾವತಿ ಗಾಂಧಿನಗರದ ವೆಳಾಂಗಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದ ಧರ್ಮಗುರು ಪಾದರ್ ಸ್ಟೀವನ್ ಡೇಸಾರವರು ಪತ್ರಿಕಾಗೋಷ್ಠಿಯಲ್ಲಿ ೪೧ನೇ ವಾರ್ಷಿಕ ಮಹೋತ್ಸವ ಕುರಿತು ಮಾಹಿತಿ ನೀಡಿದರು. 
    ಭದ್ರಾವತಿ : ಗಾಂಧಿನಗರದ ವೆಳಾಂಗಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದಲ್ಲಿ ಆ.೨೯ ರಿಂದ ಸೆ.೮ರವರೆಗೆ ೪೧ನೇ ವಾರ್ಷಿಕ ಮಹೋತ್ಸವ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಪುಣ್ಯಕ್ಷೇತ್ರದ ಧರ್ಮಗುರು ಪಾದರ್ ಸ್ಟೀವನ್ ಡೇಸಾ ತಿಳಿಸಿದರು. 
    ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಕುರಿತು ಮಾಹಿತಿ ನೀಡಿದರು. ಆ.೨೯ರ ಸಂಜೆ ೫.೩೦ಕ್ಕೆ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಎಸ್.ಜೆ ಸೆರಾವೊರವರು ಧ್ವಜಾರೋಹಣ ನೆರವೇರಿಸುವ ಮೂಲಕ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಪ್ರತಿ ವರ್ಷ ವಾರ್ಷಿಕ ಮಹೋತ್ಸವ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. 
    ಈ ಬಾರಿ ಸಹ ಪ್ರತಿದಿನ ವಿವಿಧ ಧಾರ್ಮಿಕ ಆಚರಣೆಗಳು ನಡೆಯಲಿದ್ದು, ಹಿರಿಯರ ದಿನ, ಧಾರ್ಮಿಕರ ದಿನ, ವ್ಯಾಧಿಷ್ಟರ ದಿನ, ಯುವಜನರ ದಿನ, ವೈದ್ಯ, ದಾದಿಯರ ದಿನ, ಮಕ್ಕಳ ದಿನ, ಶಿಕ್ಷಕರ ದಿನ, ಕುಟುಂಬದ ದಿನ, ಯಾತ್ರಿಕರ ದಿನ ಮತ್ತು ಕೊನೆಯದಾಗಿ ಸರ್ವರ ದಿನ ಹೀಗೆ ಒಂದೊಂದು ದಿನ ಒಂದೊಂದು ಆಚರಣೆಗಳು ನಡೆಯಲಿವೆ. ಪ್ರತಿಯೊಂದು ಆಚರಣೆಯ ಹಿಂದೆ ಒಂದೊಂದು ಮಹತ್ವವಿದೆ. ಒಂದೊಂದು ಧ್ಯೆಯ ವಾಕ್ಯದೊಂದಿಗೆ ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದರು.
    ಕಬಳೆ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಧರ್ಮಗುರು ಫಾ. ರೋಮನ್ ಪಿಂಟೋ ಪ್ರಬೋಧಕರಿಂದ ಆ.೩೧ರ ಭಾನುವಾರ ಬೆಳಿಗ್ಗೆ ೮.೩೦ ರಿಂದ ಸಂಜೆ ೭ ಗಂಟೆವರೆಗೆ ಆಧ್ಯಾತ್ಮಿಕ ನವೀಕರಣ ಧ್ಯಾನ ಕೂಟ & ನವೇನ ಮತ್ತು ಬಲಿಪೂಜೆ ನಡೆಯಲಿದೆ. ಸೆ.೭ರ ಭಾನುವಾರ ಸಂಜೆ ೫ ಗಂಟೆಗೆ ಜಪಸರ, ಬಲಿಪೂಜೆ, ಪ್ರಬೋಧನೆ ಮತ್ತು ನವೇನ ಸಂಜೆ ೬.೩೦ಕ್ಕೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಾತೆಯ ಅಲಂಕೃತ ತೇರಿನ ಭಕ್ತಿಯುತ ಮೆರವಣಿಗೆ ನಡೆಯಲಿದೆ. ಸೆ.೮ರ ಸೋಮವಾರ ಮಾತೆಯ ಮಹೋತ್ಸವ ನಡೆಯಲಿದ್ದು, ಬೆಳಿಗ್ಗೆ ೭ಕ್ಕೆ, ೮.೩೦ಕ್ಕೆ ಮತ್ತು ೧೦ ಗಂಟೆಗೆ ಪೂಜೆಗಳು ಮತ್ತು ೧೧ ಗಂಟೆಗೆ ಸಿರೋ ಮಲಬಾರ್ ವಿಧಿಯಲ್ಲಿ ದಿವ್ಯ ಬಲಿಪೂಜೆ, ಮಧ್ಯಾಹ್ನ ೧೨.೩೦ಕ್ಕೆ ಅನ್ನದಾನ, ಸಂಜೆ ೫.೩೦ಕ್ಕೆ ಮಹೋತ್ಸವದ ಸಾಂಭ್ರಮಿಕ ದಿವ್ಯ ಬಲಿಪೂಜೆ ಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಎಸ್.ಜೆ ಸೆರಾವೊರವರಿಂದ ನೆರವೇರಲಿದೆ ಎಂದರು. 
    ಪತ್ರಿಕಾಗೋಷ್ಠಿಯಲ್ಲಿ ಪುಣ್ಯಕೇತ್ರದ ಪಾಲನ ಕಾರ್ಯದರ್ಶಿ ಅಂತೋಣಿ ವಿಲ್ಸನ್, ಕ್ಯಾಥೋಲಿಕ್ ಅಸೋಯೇಷನ್‌ನ ಅಂತೋಣಿ, ನಿರ್ಮಲ ಆಸ್ಪತ್ರೆ ವ್ಯವಸ್ಥಾಪಕಿ ಸಿಸ್ಟರ್ ವಿಲ್ಮಾ, ಪುಣ್ಯಕೇತ್ರದ ಕಾರ್ಯದರ್ಶಿ ಎಲಿಜಾ ಲಾರೆನ್ಸ್, ಜೆಸ್ಸಿ ಗೋನ್ಸಾಲಿಸ್ ಮತ್ತು ಪೌಲ್ ಡಿಸೋಜಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ