ಭಾನುವಾರ, ಆಗಸ್ಟ್ 31, 2025

ಲಕ್ಷಾಂತರ ರು. ಮೌಲ್ಯದ ಮಾಂಗಲ್ಯ ಸರ ಕಳ್ಳತನ : ಇಬ್ಬರ ಸೆರೆ

ಮನೆಯ ಬೀರುವಿನಲ್ಲಿದ್ದ ಲಕ್ಷಾಂತರ ರು. ಮೌಲ್ಯದ ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಇಬ್ಬರನ್ನು ಭದ್ರಾವತಿ ಪೇಪರ್‌ಟೌನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಭದ್ರಾವತಿ : ಮನೆಯ ಬೀರುವಿನಲ್ಲಿದ್ದ ಲಕ್ಷಾಂತರ ರು. ಮೌಲ್ಯದ ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಇಬ್ಬರನ್ನು ಪೇಪರ್‌ಟೌನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಬೆಂಗಳೂರಿನ ಕೆಂಗೇರಿ ನಿವಾಸಿಗಳಾದ ಆರ್. ಮಂಜುಳಾ(೨೧) ಮತ್ತು ಸುಜೈನ್ ಖಾನ್(೨೪) ಎಂಬುವರನ್ನು ಬಂಧಿಸಲಾಗಿದೆ. ಇಬ್ಬರು ದಂಪತಿಯಾಗಿದ್ದು, ಕಳ್ಳತನ ಮಾಡಿದ್ದ ಸುಮಾರು ೭,೮೨,೦೦೦ ರು. ಮೌಲ್ಯದ ೮೩ ಗ್ರಾಂ ತೂಕದ ಮಾಂಗಲ್ಯ ಸರ ವಶಪಡಿಸಿಕೊಳ್ಳಲಾಗಿದೆ. 
    ಘಟನೆ ವಿವರ : 
    ಆ.೧೮ ರಂದು ಕಾಗದನಗರದ ೫ನೇ ವಾರ್ಡ್ ನಿವಾಸಿ ಚಂದ್ರಮ್ಮ ಎಂಬುವರ ಮನೆಯ ಬೀರುವಿನಲ್ಲಿದ್ದ ೯೫ ಗ್ರಾಂ ತೂಕದ ಬಂಗಾರದ ಆಭರಣಗಳು ಕಳ್ಳತನವಾಗಿರುವ ಸಂಬಂಧ ದೂರು ದಾಖಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪತ್ತೆ ಕಾರ್ಯಾಚರಣೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎ.ಜಿ ಕಾರಿಯಪ್ಪ ಹಾಗು ಎಸ್. ರಮೇಶ್ ಕುಮಾರ್‌ರವರ ಮಾರ್ಗದರ್ಶನದಲ್ಲಿ ಹಾಗೂ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜರವರ ಮೇಲ್ವಿಚಾರಣೆಯಲ್ಲಿ, ಠಾಣಾ ಪೊಲೀಸ್ ನಿರೀಕ್ಷಕಿ ಕೆ. ನಾಗಮ್ಮರವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳಾದ ಸಹಾಯಕ ಠಾಣಾ ನಿರೀಕ್ಷಕ ರತ್ನಾಕರ್, ಪ್ರಕಾಶ, ಅರುಣ್, ನಾಗರಾಜ, ಹನುಮಂತ, ಆಸ್ಮಾ, ಸ್ವೀಕೃತ ಮತ್ತು ಅನುರೂಪ ಅವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು. 
    ಆರ್. ಮಂಜುಳಾ ಮತ್ತು ಸುಜೈನ್ ಖಾನ್ ಇಬ್ಬರು ಚಂದ್ರಮ್ಮನವರ ಸಂಬಂಧಿಗಳಾಗಿದ್ದು, ಮನೆಯಲ್ಲಿ ಯಾರು ಇಲ್ಲದಿರುವಾಗ ಬೀರುವಿನಲ್ಲಿದ್ದ ಮಾಂಗಲ್ಯ ಸರ ಕಳ್ಳತನ ಮಾಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. 
    ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎ.ಜಿ ಕಾರಿಯಪ್ಪ ಹಾಗು ಎಸ್. ರಮೇಶ್ ಕುಮಾರ್‌ರವರು ತನಿಖಾ ತಂಡದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. 
 

ಭದ್ರಾವತಿ ಪೇಪರ್‌ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಲಕ್ಷಾಂತರ ರು. ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಬೆಂಗಳೂರಿನ ದಂಪತಿ ಆರ್. ಮಂಜುಳಾ-ಸುಜೈನ್ ಖಾನ್. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ