ಭದ್ರಾವತಿ ಹಳೇನಗರದ ಬಸವೇಶ್ವರವೃತ್ತದ ಬಲಿಜ ಸಮುದಾಯ ಭವನದಲ್ಲಿ ತಾಲೂಕು ಬಲಿಜ ಸಂಘ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೧೯೦ನೇ ಜಯಂತ್ಯೋತ್ಸವ ಕಾರ್ಯಕ್ರಮ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಂ.ಆರ್ ಸೀತಾರಾಮು ಉದ್ಘಾಟಿಸಿ ಮಾತನಾಡಿದರು.
ಭದ್ರಾವತಿ : ಬಲಿಜ ಸಮುದಾಯದವರು ಸಂಘಟಿತಗೊಂಡಲ್ಲಿ ಮಾತ್ರ ಭವಿಷ್ಯದಲ್ಲಿ ಬಲಾಢ್ಯಗೊಳ್ಳಲು ಸಾಧ್ಯ. ಇದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಂಡು ಸಂಘಟನೆಯಲ್ಲಿ ಮುನ್ನಡೆಯಬೇಕೆಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಂ.ಆರ್ ಸೀತಾರಾಮು ಹೇಳಿದರು.
ಹಳೇನಗರದ ಬಸವೇಶ್ವರವೃತ್ತದ ಬಲಿಜ ಸಮುದಾಯ ಭವನದಲ್ಲಿ ತಾಲೂಕು ಬಲಿಜ ಸಂಘ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೧೯೦ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾವಂತರು, ಬುದ್ದಿವಂತರು ಇರುವ ಬಲಿಜ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಇದನ್ನು ಸರಿಪಡಿಸಿಕೊಂಡಲ್ಲಿ ಮಾತ್ರ ಸಮಾಜ ಬಲಾಢ್ಯವಾಗಿ ಬೆಳೆಯಲು ಸಾಧ್ಯ. ಬಲಿಜ ಸಮುದಾಯದವರು ಯಾವುದೇ ಪಕ್ಷದಲ್ಲಿರಲಿ, ಯಾವುದೇ ಕ್ಷೇತ್ರದಲ್ಲಿರಲಿ, ಯಾವುದೇ ಹುದ್ದೆಯಲ್ಲಿರಲಿ ಅವರನ್ನು ಸಂಘಟನೆ ಮೂಲಕ ಪ್ರೋತ್ಸಾಹಿಸಿ ಬೆಂಬಲಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು. ಆ ಮೂಲಕ ಸಮುದಾಯಕ್ಕೆ ಉತ್ತಮ ಸಂದೇಶ ನೀಡಬೇಕೆಂದರು.
ರಾಜಕಾರಣದಲ್ಲಿ ಹಲವಾರು ಜಾತಿಯವರಿದ್ದಾರೆ. ಆಯಾ ಜಾತಿಯ ರಾಜಕಾರಣಿಗಳು ಆಯಾ ಸಮಾಜದ ಮೇಲೆ ಪ್ರೀತಿ, ವಿಶ್ವಾಸದ ಮೂಲಕ ಅಭಿವೃದ್ದಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸಮುದಾಯದ ನಾಯಕರು ರಾಜಕೀಯವಾಗಿ ಹೆಚ್ಚು ಹೆಚ್ಚಾಗಿ ಬೆಳೆಯಬೇಕು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನಮ್ಮ ಸಮುದಾಯದವರು ಪ್ರತಿನಿಧಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮನ್ನು ಪ್ರತಿನಿಧಿಸುವ ವ್ಯಕ್ತಿ ಇದ್ದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದರು.
ಈ ಕ್ಷೇತ್ರದಲ್ಲಿನ ಬಲಿಜ ಸಮುದಾಯದವರ ಸಮಸ್ಯೆಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಅವರ ಕುಟುಂಬ ಸದಸ್ಯರು ಹೆಚ್ಚಿನ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಭವಿಷ್ಯದಲ್ಲಿ ಸಮುದಾಯದವರು ಶಾಸಕರು ಮತ್ತು ಅವರ ಕುಟುಂಬ ಸದಸ್ಯರನ್ನು ಬೆಂಬಲಿಸಲು ಮುಂದಾಗುವುದು ಸೂಕ್ತ ಎಂದರು.
ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಕ್ಷೇತ್ರದಲ್ಲಿ ಬಲಿಜ ಸಮುದಾಯದ ಅಭಿವೃದ್ದಿಗೆ ಶಾಸಕರು ಸಾಕಷ್ಟು ಶ್ರಮಿಸಿದ್ದಾರೆ. ಎಂ.ಆರ್ ಸೀತಾರಾಮು ಅವರು ಸಹ ತಮಗೆ ಲಭ್ಯವಿರುವ ಅನುದಾನ ಕ್ಷೇತ್ರಕ್ಕೆ ನೀಡಿದ್ದಾರೆ. ಶ್ರೀಕೃಷ್ಣ ದೇವರಾಯ ರಸ್ತೆ ಹೆಸರು ನಾಮಕರಣಗೊಳಿಸುವಲ್ಲಿ ಪಕ್ಷತೀತವಾಗಿ ಸಹಕರಿಸಿದ ನಗರಸಭೆ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಕೈವಾರ ತಾತಯ್ಯನವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಸಮುದಾಯದ ಅಭಿವೃದ್ದಿಗಾಗಿ ನಾನು ಹಾಗೂ ನನ್ನ ಕುಟುಂಬದವರು ಸದಾ ನಿಮ್ಮೊಂದಿಗಿರುವುದಾಗಿ ಭರವಸೆ ನೀಡಿದರು.
ಬಲಿಜ ಸಂಘದ ಅಧ್ಯಕ್ಷ ಎಚ್.ಆರ್ ರಂಗನಾಥ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಸದಸ್ಯರಾದ ಚನ್ನಪ್ಪ, ವಿ. ಕದಿರೇಶ್, ಬಸವರಾಜ ಬಿ. ಆನೇಕೊಪ್ಪ, ಅನುಸುಧ ಮೋಹನ್ ಪಳನಿ, ಕೆ. ಸುದೀಪ್ ಕುಮಾರ್, ಅನುಪಮ ಚನ್ನೇಶ್, ಮಾಜಿ ಸದಸ್ಯ ಕರಿಯಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಮಾಜಿ ಉಪ ಮೇಯರ್ ಮಹಮದ್ ಸನಾವುಲ್ಲಾ, ತಾಲೂಕು ಮಾಜಿ ಸದಸ್ಯ ಕೆ. ಮಂಜುನಾಥ್, ಬಲಿಜ ಸಮಾಜದ ತಾಲೂಕು ಗೌರವಾಧ್ಯಕ್ಷರಾದ ಜೆ.ಎಸ್ ಸಂಜೀವಮೂರ್ತಿ, ಎಸ್.ಎನ್ ಸುಬ್ರಮಣ್ಯ, ಉಪಾಧ್ಯಕ್ಷರಾದ ಪದ್ಮ ಹನುಮಂತಪ್ಪ, ಎಸ್.ಬಿ ಜಂಗಮಪ್ಪ, ಪ್ರಧಾನ ಕಾರ್ಯದರ್ಶಿ ಪಿ. ಸತೀಶ್, ಸಹ ಕಾರ್ಯದರ್ಶಿ ಟಿ. ರಮೇಶ್, ಮುಖಂಡರಾದ ಬಿ. ಗಂಗಾಧರ್, ಟಿ.ಡಿ ಶಶಿಕುಮಾರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ