ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ನಾರಾಯಣಗುರು ವಿಚಾರ ವೇದಿಕೆ, ಈಡಿಗ ಸಮಾಜದ ೨೬ ಪಂಗಡಗಳು ಮತ್ತು ಆರ್ಯ ಈಡಿಗ ಮಹಿಳಾ ಸಮಾಜ, ಕೇರಳ ಸಮಾಜ, ಈಡಿಗ ಸಮಾಜ ಹಾಗು ಬಿಲ್ಲವ ಸಮಾಜ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ೧೭೧ನೇ ಜಯಂತಿ ಕಾರ್ಯಕ್ರಮದಲ್ಲಿ ಶಿವಮೊಗ್ಗ ಕಸ್ತೂರಿಬಾ ಬಾಲಕಿಯರ ಕಾಲೇಜಿನ ಹಿರಿಯ ಉಪನ್ಯಾಸಕ ಎಸ್.ಎಚ್ ರವಿಕುಮಾರ್ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.
ಭದ್ರಾವತಿ : ಮೌಡ್ಯ, ಕಂದಾಚಾರಗಳಿಂದ ಮುಕ್ತವಾದ, ಸರ್ವಸಮಾನತೆಯಿಂದ ಕೂಡಿರುವ ಸಮಾಜ ನಿರ್ಮಾಣವಾಗಬೇಕೆಂಬ ಆಶಯ ಬ್ರಹ್ಮಶ್ರೀ ನಾರಾಯಣಗುರುಗಳು ಹೊಂದಿದ್ದರು. ಇಂತಹ ಆದರ್ಶ ವ್ಯಕ್ತಿಯ ಆದರ್ಶತನಗಳು ಮುಂದಿನ ಪೀಳಿಗೆಗೂ ಸಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಗಮನ ಹರಿಸಬೇಕಾಗಿದೆ ಎಂದು ಶಿವಮೊಗ್ಗ ಕಸ್ತೂರಿಬಾ ಬಾಲಕಿಯರ ಕಾಲೇಜಿನ ಹಿರಿಯ ಉಪನ್ಯಾಸಕ ಎಸ್.ಎಚ್ ರವಿಕುಮಾರ್ ಹೇಳಿದರು.
ಅವರು ಭಾನುವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ನಾರಾಯಣಗುರು ವಿಚಾರ ವೇದಿಕೆ, ಈಡಿಗ ಸಮಾಜದ ೨೬ ಪಂಗಡಗಳು ಮತ್ತು ಆರ್ಯ ಈಡಿಗ ಮಹಿಳಾ ಸಮಾಜ, ಕೇರಳ ಸಮಾಜ, ಈಡಿಗ ಸಮಾಜ ಹಾಗು ಬಿಲ್ಲವ ಸಮಾಜ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ೧೭೧ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.
ಜನರಲ್ಲಿನ ಮೌಢ ಕಂದಾಚಾರಗಳನ್ನು ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣದ ಮೂಲಕ ಉದ್ಯೋಗ, ಆರ್ಥಿಕವಾಗಿ ಸದೃಡರಾಗಲು ಸಾಧ್ಯವಾಗುತ್ತದೆ. ಜಾತ್ಯಾತೀತ ಮನೋಭಾವ ಬೆಳೆಸಿಕೊಂಡು ಸಾಮರಸ್ಯದಿಂದ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಚಿಂತನೆಗಳನ್ನು ಹೊಂದಿದ್ದ ನಾರಾಯಣ ಗುರುಗಳ ಹಲವಾರು ಅಂಶಗಳು ಅಂಬೇಡ್ಕರ್‌ರವರು ರಚಿಸಿದ ಸಂವಿಧಾನದಲ್ಲಿ ಕಾಣಬಹುದಾಗಿದೆ ಎಂದರು.
ಸಮಾಜ ಸುಧಾರಕರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸವಾಗಲು ಸರ್ಕಾರ ಜಯಂತಿಗಳನ್ನು ಆಚರಿಸುತ್ತಿದೆ. ಆದರೆ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾದ ಯುವಕರುಗಳೇ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದು ದೊಡ್ಡ ದುರಂತ. ಡಾ. ಬಿ.ಆರ್ ಅಂಬೇಡ್ಕರ್, ಜಗಜ್ಯೋತಿ ಬಸವಣ್ಣ, ನಾರಾಯಣಗುರುಗಳಂತಹ ಮಹನೀಯರು ಒಂದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಇವರು ಎಲ್ಲಾ ಸಮುದಾಯಗಳ, ಸಮಾಜದ ಉದ್ದಾರಕರು. ಇಂತಹ ಮಹನೀಯರ ಜಯಂತಿಗಳಿಗೆ ಎಲ್ಲಾ ಸಮುದಾಯದ ಜನರು ಸೇರಬೇಕು. ಅವರ ತತ್ವ ಆದರ್ಶಗಳನ್ನು ತಿಳಿದುಕೊಂಡು ಇನ್ನಿತರರಿಗೆ ತಿಳಿಸುವ ಕೆಲಸ ಆದಾಗ ಮಾತ್ರ ಅವರ ಅನುಯಾಯಿಗಳಾಗಲು ಸಾಧ್ಯವಾಗುತ್ತದೆ ಎಂದರು.
ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ನಾರಾಯಣಗುರುಗಳ ತತ್ವ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ಈಡಿಗ ಸಮುದಾಯಕ್ಕೆ ಕ್ಷೇತ್ರದ ಶಾಸಕರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಹಾಗೂ ವಿಧಾನಸಭೆ ಮಾಜಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರು ನಾರಾಯಣ ಗುರುಗಳ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರ ಪರಿಣಾಮವಾಗಿಯೇ ಜಾತ್ಯಾತೀತ ಮನೋಭಾವದ ಅತ್ಯುತ್ತಮ ಜನನಾಯಕರು ಎನಿಸಿಕೊಂಡರು ಎಂದರು.
ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ಶ್ರೀ ನಾರಾಯಣಗುರು ವಿಚಾರ ವೇದಿಕೆ ತಾಲೂಕು ಅಧ್ಯಕ್ಷ ಎನ್. ನಟರಾಜ್, ಗೌರವಾಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ತಹಸೀಲ್ದಾರ್ ಗ್ರೇಡ್-೨ ಮಂಜಾನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಇ.ಬಿ ಗಣೇಶ್, ಕೇರಳ ಸಮಾಜದ ಅಧ್ಯಕ್ಷ ಗಂಗಾಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ