ಸೋಮವಾರ, ಸೆಪ್ಟೆಂಬರ್ 8, 2025

ಮತ್ತಿಘಟ್ಟ ಗ್ರಾಮಕ್ಕೆ ಪ್ರತಿದಿನ ಒಂದು ಗಂಟೆ ಕುಡಿಯುವ ನೀರು ಸರಬರಾಜು ಮಾಡಿ

ತಡಸ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹ 

ಪ್ರತಿದಿನ ಒಂದು ಗಂಟೆ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಒತ್ತಾಯಿಸಿ ಭದ್ರಾವತಿ ತಾಲೂಕಿನ ಮತ್ತಿಘಟ್ಟ ಗ್ರಾಮಸ್ಥರು ಸೋಮವಾರ ತಡಸ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದರು. 
    ಭದ್ರಾವತಿ : ಪ್ರತಿದಿನ ಒಂದು ಗಂಟೆ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಒತ್ತಾಯಿಸಿ ತಾಲೂಕಿನ ಮತ್ತಿಘಟ್ಟ ಗ್ರಾಮಸ್ಥರು ಸೋಮವಾರ ತಡಸ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    ಅಂಬೇಡ್ಕರ್ ವೈಚಾರಿಕಾ ವೇದಿಕೆ ಕರ್ನಾಟಕ (ಎವೈವಿಕೆ) ಸಂಘಟನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮತ್ತಿಘಟ್ಟ ಗ್ರಾಮಸ್ಥರು ಪ್ರತಿದಿನ ಒಂದು ಗಂಟೆ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
    ಎವೈವಿಕೆ ತಾಲೂಕು ಸಂಚಾಲಕ ಪಿ. ಮೂರ್ತಿ ಮಾತನಾಡಿ, ಈ ಗ್ರಾಮದಲ್ಲಿ ೭ ರಿಂದ ೮ ವಿವಿಧ ಸಮುದಾಯಗಳಿಗೆ ಸೇರಿದ ಬೀದಿಗಳಿದ್ದು. ದಿನಕ್ಕೆ ಒಂದು ಬೀದಿಗೆ ಸರದಿಯಂತೆ ವಾರದಲ್ಲಿ ಒಂದು ದಿನ ನೀರು ಸರಬರಾಜು ಮಾಡಲಾಗುತ್ತಿದೆ. ಜನರು ಆ ನೀರನ್ನು ೬-೭ ದಿನ ಶೇಖರಿಸಿಟ್ಟುಕೊಂಡು ಕುಡಿಯುತ್ತಿದ್ದಾರೆ. ಈ ರೀತಿ ವಾರಗಟ್ಟಲೆ ಶೇಖರಿಸಿಟ್ಟುಕೊಂಡು ನೀರನ್ನು ಕುಡಿಯುವುದರಿಂದ ಜನರು ಅನೇಕ ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದಾಗಿ ಡೆಂಗ್ಯೂ, ಮಲೇರಿಯಾ. ಚಿಕನ್-ಗುನ್ಯಾದಂತಹ ರೋಗಗಳು ಗ್ರಾಮದಲ್ಲಿ ಜನರಿಗೆ ಹರಡುತ್ತಿವೆ. ಕೂಡಲೇ ಈ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು. 
  ಗ್ರಾಮದ ಮುಖಂಡ ಮುನಿರಾಜು ಮಾತನಾಡಿ, ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಇದೆ. ಆದರೆ ಸರಬರಾಜು ಮಾಡುವ ವ್ಯವಸ್ಥೆ ಸರಿ ಇಲ್ಲ. ಪಂಚಾಯಿತಿ ಅಧಿಕಾರಿಗಳು ಈ ಕುರಿತು ಗಮನಹರಿಸುತ್ತಿಲ್ಲ. ಗ್ರಾಮದ ನೀರುಗಂಟಿ ನಿರ್ಲಕ್ಷದಿಂದ ವರ್ತಿಸುತ್ತಿದ್ದಾರೆ. ಗ್ರಾಮದ ಎಲ್ಲಾ ಬೀದಿಗಳಿಗೂ ಪ್ರತಿದಿನ ಒಂದು ಬೀದಿಗೆ ಅರ್ಧ ಗಂಟೆಯಂತೆ ನೀರುಗಂಟಿ ನೀರು ಸರಬರಾಜು ಮಾಡಿದರೆ ಜನರಿಗೆ ಅನುಕೂಲವಾಗಲಿದೆ ಎಂದು ಒತ್ತಾಯಿಸಿದರು.
    ತಡಸ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನವಿ ಸ್ವೀಕರಿಸಿ ಮಾತನಾಡಿ, ಮತ್ತಿಘಟ್ಟ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ನಾನು ಇಲ್ಲಿಗೆ ವರ್ಗಾವಣೆಯಾಗಿ ಬಂದು ಎರಡು ತಿಂಗಳಾಯಿತು.  ತಕ್ಷಣ ಮತ್ತಿಘಟ್ಟ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. 
    ಪ್ರತಿಭಟನೆಯಲ್ಲಿ ಮುಖಂಡರಾದ ಚಂದ್ರಪ್ಪ, ರಮೇಶ್, ರವಿಕುಮಾರ್, ರಂಗರಾವ್, ವೆಂಕಟೇಶ್, ದಯಾನಂದ. ಸಂಜಯ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. 
 
 ಮತ್ತಿಘಟ್ಟ ಗ್ರಾಮದಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಗ್ರಾಮದಲ್ಲಿರುವ ಎರಡು ಬೋರ್ವೆಲ್‌ಗಳಲ್ಲಿ ಅಂತರ್ಜಲ ತುಂಬಿದೆ. ನೀರಿನ ಸಂಗ್ರಹಕ್ಕೆ ಟ್ಯಾಂಕ್ ವ್ಯವಸ್ಥೆ ಕೂಡ ಇದೆ. ಅಲ್ಲದೆ  ಗ್ರಾಮದ ಸಮೀಪದಲ್ಲಿಯೇ ಉಕ್ಕಿ ಹರಿಯುತ್ತಿರುವ ಭದ್ರಾನದಿಯೂ ಇದೆ. ಆದರೂ ಮತಿಘಟ್ಟ ಗ್ರಾಮದ ಜನರಿಗೆ ಕುಡಿಯುವ ಶುದ್ದ ನೀರಿನ ವ್ಯವಸ್ಥೆ ಇಲ್ಲ. ಪಂಚಾಯಿತಿ ಅಧಿಕಾರಿಗಳು ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು.
                                   -ಪಿ. ಮೂರ್ತಿ, ಎವೈವಿಕೆ ತಾಲೂಕು ಸಂಚಾಲಕ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ