ಭಾನುವಾರ, ಸೆಪ್ಟೆಂಬರ್ 14, 2025

ವಿಐಎಸ್‌ಎಲ್ ಕಾರ್ಖಾನೆ ಮುಂದಿನ ಪೀಳಿಗೆಗೆ ಹಸ್ತಾಂತರಗೊಂಡಾಗ ಮಾತ್ರ ಸಂಸ್ಥಾಪಕ ಅಧ್ಯಕ್ಷರಿಗೆ ಗೌರವ

ಇಂದು ಭಾರತರತ್ನ, ದೇಶದ ಅಪ್ರತಿಮ ಅಭಿಯಂತರ ಸರ್. ಮೋಕ್ಷಾಗುಂಡಂ ವಿಶ್ವೇಶ್ವರಾಯ ಜನ್ಮದಿನ 

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ. 
    * ಅನಂತಕುಮಾರ್ 
    ಭದ್ರಾವತಿ : ಭಾರತರತ್ನ, ದೇಶದ ಅಪ್ರತಿಮ ಅಭಿಯಂತರ ಸರ್. ಮೋಕ್ಷಾಗುಂಡಂ ವಿಶ್ವೇಶ್ವರಾಯ ಅವರ ಪರಿಶ್ರಮದ ಫಲವಾಗಿ ಸ್ಥಾಪನೆಗೊಂಡ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹೊಸದಾಗಿ ಪುನರ್ ಆರಂಭಗೊಳ್ಳುವ ಮೂಲಕ ಕಳೆದು ಹೋಗಿರುವ ತನ್ನ ವೈಭವ ಮರಳಿ ಪಡೆಯುವ ಆಶಾಭಾವನೆ ಇಲ್ಲಿನ ನಿವಾಸಿಗಳು ಹೊಂದಿದ್ದಾರೆ. ಮತ್ತೊಂದೆಡೆ ವಿಶ್ವೇಶ್ವರಾಯ ಅವರಿಗೆ ಗೌರವ ಸಲ್ಲಬೇಕಾದರೆ ಈ ಕಾರ್ಖಾನೆಯನ್ನು ಮುಂದಿನ ಪೀಳಿಗೆಗೂ ಹಸ್ತಾಂತರಿಸಬೇಕು. ಆ ಮೂಲಕ ಎಂದಿಗೂ ಕಾರ್ಖಾನೆ ಮುಚ್ಚಬಾರದು ಎಂಬ ನಿಲುವು ಸಹ ಹೊಂದಿದ್ದಾರೆ. 
    ಕಾರ್ಖಾನೆ ಆರಂಭಗೊಳ್ಳಲು ಸರ್.ಎಂ ವಿಶ್ವೇಶ್ವರಾಯ ಅವರ ದೂರದೃಷ್ಟಿ ಹಾಗು ಪರಿಶ್ರಮ ಕಾರಣ ಎಂಬುದನ್ನು ಇಲ್ಲಿನ ನಿವಾಸಿಗಳು ಇಂದಿಗೂ ಮರೆತ್ತಿಲ್ಲ. ಇಲ್ಲಿ ವಾಸಿಸುತ್ತಿರುವ ಬಹುತೇಕ ನಿವಾಸಿಗಳು ನಿವೃತ್ತ ಕಾರ್ಮಿಕರು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಮತ್ತು ಕಾರ್ಖಾನೆಯ ಅವಲಂಬಿತರು. ಈ ಹಿನ್ನಲೆಯಲ್ಲಿ ವಿಶ್ವೇಶ್ವರಾಯ ಅವರ ಕೊಡುಗೆ ಎಲ್ಲರಿಗೂ ತಿಳಿದಿದ್ದು, ಇಂದಿಗೂ ಅನ್ನದಾತರಾಗಿ ಉಳಿದುಕೊಂಡಿದ್ದಾರೆ. 
    ಕಾರ್ಖಾನೆ ಆರಂಭಗೊಂಡ ಪರಿಣಾಮ ಭದ್ರಾವತಿ ನಗರ ವಿಶ್ವದ ಭೂಪಟದಲ್ಲಿ ಗುರುತಿಸಿಕೊಳ್ಳಲು ಕಾರಣವಾಯಿತು. ಅಲ್ಲದೆ ಸಾವಿರಾರು ಜನರಿಗೆ ಉದ್ಯೋಗ ಲಭಿಸಿ, ಲಕ್ಷಾಂತರ ಜನರು ಒಂದೆಡೆ ನೆಲೆಗೊಳ್ಳಲು ಸಾಧ್ಯವಾಯಿತು. ಈ ಮೂಲಕ ದೇಶ ಹಾಗು ರಾಜ್ಯಕ್ಕೆ ತನ್ನದೇ ಕೊಡುಗೆಗಳನ್ನು ನೀಡಿ ವೈಭವದ ದಿನಗಳನ್ನು ಕಾಣಲು ಸಾಧ್ಯವಾಯಿತು.  ಈ ಕಾರ್ಖಾನೆ ಕೇವಲ ಯಂತ್ರಗಳು, ಸರಕುಗಳಿಂದ ಕೂಡಿಲ್ಲ. ಇಲ್ಲೊಂದು ಪರಂಪರೆ ಅಡಗಿದ್ದು, ಸಾಂಸ್ಕೃತಿಕ ರಾಯಬಾರಿಯಾಗಿ ಇಂದಿಗೂ ಉಳಿದುಕೊಂಡಿದೆ. 
    ಶತಮಾನ ಪೂರೈಸಿರುವ ಕಾರ್ಖಾನೆ ಪ್ರಸ್ತುತ ಮುಚ್ಚುವ ಹಂತಕ್ಕೆ ತಲುಪಿದ್ದು, ಆಡಳಿತ ನಡೆಸುತ್ತಿರುವ ಸರ್ಕಾರಗಳು ಕಾರ್ಖಾನೆ ಅಭಿವೃದ್ಧಿಪಡಿಸುವ ಭರವಸೆಗಳನ್ನು ಆಗಾಗ ನೀಡುತ್ತಾ ಬಂದಿದ್ದಾರೆ. ಆದರೆ ಇಂದಿಗೂ ಭರವಸೆಗಳು ಈಡೇರಿಲ್ಲ. ಪ್ರಸ್ತುತ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಕೇಂದ್ರ ಸಚಿವರಾಗಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಕಾರ್ಖಾನೆಯನ್ನು ಹೊಸದಾಗಿ ಪುನರ್ ಆರಂಭಿಸುವುದಾಗಿ ಕಳೆದ ಕೆಲವು ತಿಂಗಳ ಹಿಂದೆ ಹೇಳಿಕೆ ನೀಡಿದ್ದು, ವರ್ಷದ ಅಂತ್ಯದೊಳಗೆ ರೂಪುರೇಷೆಗಳು ಸಿದ್ದಗೊಂಡು ಪ್ರಧಾನಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆಂದು ಭರವಸೆ ನೀಡಿದ್ದಾರೆ. ಈ ಸಂಬಂಧ ಉನ್ನತ ಅಧಿಕಾರಿಗಳ ತಂಡ ಈಗಾಗಲೇ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರಳಿದೆ. ಆದರೆ ಕಾರ್ಖಾನೆ ಹೊಸದಾಗಿ ಆರಂಭಿಸುವ ಸಂಬಂಧ ರೂಪಿಸಲಾಗಿರುವ ರೂಪುರೇಷೆಗಳ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಇಲ್ಲವಾಗಿದೆ. 
    ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರು ಕಾರ್ಖಾನೆಯನ್ನು ಹೊಸದಾಗಿ ಪುನರ್ ಆರಂಭಿಸುವ ವಿಚಾರದಲ್ಲಿ ಕಾರ್ಖಾನೆಯ ಸಂಸ್ಥಾಪಕರು, ಮೊದಲ ಅಧ್ಯಕ್ಷರಾಗಿರುವ  ಸರ್.ಎಂ ವಿಶ್ವೇಶ್ವರಾಯ ಅವರನ್ನು ಪ್ರತಿಬಾರಿ ಸ್ಮರಿಸುವ ಮೂಲಕ  ಕಳೆದು ಹೋಗಿರುವ ವೈಭವ ಮರಳಿ ತಂದು ಕೊಡುವುದಾಗಿ ಭರವಸೆ ನೀಡುತ್ತಿದ್ದಾರೆ. ಈ ನಡುವೆ ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಕಾರ್ಖಾನೆ ಮುಂಭಾಗ ನಿರಂತರವಾಗಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಹಲವಾರು ಬಾರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚದೆ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಕಾಯಂ ಹಾಗು ನಿವೃತ್ತ ಕಾರ್ಮಿಕರು ಸಹ ಮನವಿ ಮಾಡಿದ್ದಾರೆ. ಅಲ್ಲದೆ ವಿವಿಧ ಮಠಾಧೀಶರು, ಗಣ್ಯರು, ಸಂಘ-ಸಂಸ್ಥೆಗಳು, ಹೋರಾಟಗಾರರು ಸಹ ಕೇಂದ್ರ ಸರ್ಕಾರಕ್ಕೆ ಕಾರ್ಖಾನೆ ಅಭಿವೃದ್ಧಿಗೊಳಿಸುವಂತೆ ಒತ್ತಾಯಿಸುತ್ತಾ ಬಂದಿದ್ದಾರೆ. 
    ಸೆ.೧೫ ವಿಶ್ವೇಶ್ವರಾಯ ಅವರ ೧೬೫ನೇ ಜನ್ಮದಿನವಾಗಿದ್ದು, ಈ ಶುಭದಿನದಂದು ಅವರ ಸ್ಮರಣೆಯ ಮೂಲಕ ಕಾರ್ಖಾನೆ ಅಭಿವೃದ್ಧಿಗೊಂಡು ಇತಿಹಾಸದ ವೈಭವ ಮರಳಿ ಪಡೆಯುವ  ಆಶಾಭಾವನೆ ಇಲ್ಲಿನ ನಿವಾಸಿಗಳು ಎದುರು ನೋಡುತ್ತಿದ್ದಾರೆ. 
 

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಗೆ ಈ ಹಿಂದೆ ಕೇಂದ್ರ ಉಕ್ಕು ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ