ಸೋರುತ್ತಿದೆ ಮಳೆ ನೀರು, ಮೇಲ್ಭಾಗ ಕುಸಿದು ಬೀಳುವ ಆತಂಕ
ಭದ್ರಾವತಿ ನಗರದ ಉಂಬ್ಳೆಬೈಲು ರಸ್ತೆ, ನ್ಯೂಟೌನ್, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಪಕ್ಕದಲ್ಲಿರುವ ಸರ್ಕಾರಿ ತಮಿಳು ಹಿರಿಯ ಪ್ರಾಥಮಿಕ ಶಾಲೆ.
* ಅನಂತಕುಮಾರ್
ಭದ್ರಾವತಿ : ನಗರದ ಉಂಬ್ಳೆಬೈಲು ರಸ್ತೆ, ನ್ಯೂಟೌನ್, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಪಕ್ಕದಲ್ಲಿರುವ ಸರ್ಕಾರಿ ತಮಿಳು ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಗೊಂಡಿದ್ದು, ಮಳೆ ನೀರು ಸೋರುತ್ತಿದೆ. ಕಟ್ಟಡದ ಮೇಲ್ಭಾಗ ಕುಸಿದು ಬೀಳುವ ಆತಂಕ ಎದುರಾಗಿದೆ.
1923ರಲ್ಲಿ ನಿರ್ಮಾಣಗೊಂಡಿರುವ ಕಟ್ಟಡ ಶತಮಾನ ಪೂರೈಸಿದ್ದು, ಸಂಪೂರ್ಣವಾಗಿ ಶಿಥಿಲಗೊಂಡಿದೆ. ಆರಂಭದಲ್ಲಿ 1946ರವರೆಗೆ ಈ ಕಟ್ಟಡವನ್ನು ಆಸ್ಪತ್ರೆಯನ್ನಾಗಿ ಬಳಸಿಕೊಳ್ಳಲಾಗಿತ್ತು. ನಂತರ ಸರ್ಕಾರಿ ತಮಿಳು ಶಾಲೆಯನ್ನಾಗಿ ಪರಿವರ್ತಿಸಲಾಯಿತು. ಸುಮಾರು 79 ವರ್ಷಗಳಿಂದ ಸರ್ಕಾರಿ ಶಾಲೆ ಅಸ್ತಿತ್ವದಲ್ಲಿದ್ದು, ಪ್ರಸ್ತುತ ಈ ಶಾಲೆ 1 ರಿಂದ 8ನೇ ತರಗತಿವರೆಗೆ ಕಾರ್ಯನಿರ್ವಹಿಸುತ್ತಿದೆ. ಪ್ರಸಕ್ತ ಸಾಲಿನಿಂದ ಈ ಕಟ್ಟಡಕ್ಕೆ ಅಂಗನವಾಡಿ ಸಹ ಹಸ್ತಾಂತರಿಸಲಾಗಿದೆ. ತಮಿಳು ಮಾಧ್ಯಮ ಮತ್ತು ಆಂಗ್ಲ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ.
ಶತಮಾನ ಪೂರೈಸಿರುವ ಈ ಕಟ್ಟಡ ಸಂರಕ್ಷಿಸಿಕೊಳ್ಳುವ ಅಗತ್ಯವಿದೆ. ಶಾಲೆಗೆ ಲಭ್ಯವಾಗುವ ಅಲ್ಪಸ್ವಲ್ಪ ಅನುದಾನದಲ್ಲಿ ಸಣ್ಣ ಪ್ರಮಾಣದ ದುರಸ್ತಿ ಕಾರ್ಯಗಳನ್ನು ಕೈಕೊಳ್ಳುವ ಮೂಲಕ ನಿರ್ವಹಣೆ ಮಾಡಿಕೊಂಡು ಹೋಗಲಾಗುತ್ತಿದೆ. ಕಟ್ಟಡದ ದುರಸ್ತಿ ಕಾರ್ಯಕ್ಕೆ ಹೆಚ್ಚಿನ ಅನುದಾನ ಲಭ್ಯವಿದೆ. ಆದರೆ ಅನುದಾನ ನೀಡಲು ಯಾರು ಸಹ ಮುಂದೆ ಬರುತ್ತಿಲ್ಲ. ಅದರಲ್ಲೂ ತಮಿಳು ಶಾಲೆಯಾಗಿರುವುದರಿಂದ ನಿರ್ಲಕ್ಷö್ಯ ಹೆಚ್ಚಾಗಿದೆ.
ಕಳೆದ ಸುಮಾರು 15-20 ವರ್ಷಗಳ ಹಿಂದೆ ಕಟ್ಟಡ ಮೇಲ್ಭಾಗ ದುರಸ್ತಿ ಮಾಡಲಾಗಿದ್ದು, ಆದರೆ ಸರಿಯಾಗಿ ದುರಸ್ತಿ ಕೈಗೊಳ್ಳದ ಕಾರಣ ಪುನಃ ಶಿಥಿಲಗೊಂಡು ಮಳೆ ನೀರು ಸೋರುತ್ತಿದೆ. ಕಟ್ಟಡ ದುರಸ್ತಿಗೊಳಿಸುವಂತೆ ಹಲವಾರು ಬಾರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೆ ಇಲಾಖೆಯಲ್ಲಿ ಕಟ್ಟಡ ದುರಸ್ತಿಗೊಳಿಸುವಂತೆ ಅನುದಾನ ಲಭ್ಯವಿಲ್ಲವೆಂದು ಕೈಚೆಲ್ಲಿ ಕುಳಿತುಕೊಳ್ಳಲಾಗಿದೆ.
ಒಂದು ಕಡೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಮಾಡಿದರೆ ಮಾತ್ರ ಹೆಚ್ಚಿನ ಅನುದಾನ ಲಭ್ಯವಾಗುತ್ತದೆ. ಮತ್ತೊಂದು ಕಡೆ ಶಾಲಾ ಕಟ್ಟಡ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಪೋಷಕರು ಮುಂದೆ ಬರುತ್ತಿಲ್ಲ. ಪ್ರಸ್ತುತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪೋಷಕರು ಸಹ ಬಡವರಾಗಿದ್ದು, ಆರ್ಥಿಕ ನೆರವು ನಿರೀಕ್ಷಿಸುವುದು ಸಹ ಕಷ್ಟವಾಗಿದೆ. ಇದರಿಂದಾಗಿ ಶಿಕ್ಷಕರು ಸಹ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಶಾಲಾಭಿವೃದ್ಧಿ ಸಮಿತಿ ರಚನೆಯಾಗಿಲ್ಲ :
ಶಾಲೆ ಕಟ್ಟಡ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಶಾಲಾಭಿವೃದ್ಧಿ ಸಮಿತಿ ಅಗತ್ಯವಾಗಿದೆ. ಆದರೆ ಸಮಿತಿ ರಚನೆ ಅಗತ್ಯವಿರುವಷ್ಟು ವಿದ್ಯಾರ್ಥಿಗಳನ್ನು ಈ ಶಾಲೆ ಹೊಂದಿಲ್ಲ. ಇದರಿಂದಾಗಿ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಪ್ರಸ್ತುತ ಶಾಲೆಯಲ್ಲಿ 7 ಜನ ವಿದ್ಯಾರ್ಥಿಗಳು ಮಾತ್ರ ಇದ್ದು, ಉಳಿದಂತೆ ಅಂಗನವಾಡಿಯಲ್ಲಿ ಸುಮಾರು 15 ರಿಂದ 20 ಮಕ್ಕಳಿದ್ದಾರೆ.
ಶಾಲಾಭಿವೃದ್ಧಿ ಸಮಿತಿ ರಚನೆಯಾದಲ್ಲಿ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ದಾನಿಗಳು ಸಹ ನೆರವಿಗೆ ಧಾವಿಸಲಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಭವಿಷ್ಯದಲ್ಲಿ ಈ ಶಾಲೆಯಿಂದ ಇನ್ನೂ ಹಲವಾರು ವರ್ಷಗಳ ವರೆಗೆ ಸೇವೆ ಲಭ್ಯವಾಗಲಿದೆ. ಈ ಹಿನ್ನಲೆಯಲ್ಲಿ ಈ ಶಾಲೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ.
ಇಲಾಖೆಯಲ್ಲಿ ಯಾವುದೇ ಅನುದಾನವಿಲ್ಲ. ಈ ಹಿನ್ನಲೆಯಲ್ಲಿ ಶಾಲೆ ಕಟ್ಟಡ ದುರಸ್ತಿಗೊಳಿಸುವಂತೆ ಜಿಲ್ಲಾ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ. ಉಳಿದಂತೆ ಸಣ್ಣ ಪ್ರಮಾಣದ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಶಾಲೆ ಕಟ್ಟಡ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು. ಶಾಲೆಯಲ್ಲಿ ಕೈಗೊಳ್ಳಬೇಕಾಗಿರುವ ಇನ್ನಿತರ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.- ಎ.ಕೆ ನಾಗೇಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಭದ್ರಾವತಿ.
ಭದ್ರಾವತಿ ನಗರದ ಉಂಬ್ಳೆಬೈಲು ರಸ್ತೆ, ನ್ಯೂಟೌನ್, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಪಕ್ಕದಲ್ಲಿರುವ ಸರ್ಕಾರಿ ತಮಿಳು ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಗೊಂಡು ಮಳೆ ನೀರು ಸೋರುತ್ತಿರುವುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ