ಬಿಳಿಕಿ ಹಿರೇಮಠದಲ್ಲಿ ನಡೆದ ೨೦ಕ್ಕೂ ಹೆಚ್ಚು ಸ್ವಾಮೀಜಿಗಳ ಸಭೆಯಲ್ಲಿ ಹಲವು ನಿರ್ಣಯ

ಭದ್ರಾವತಿ ತಾಲೂಕಿನ ಬಿಳಿಕಿ ಗ್ರಾಮದ ಶ್ರೀಮದ್ ರಂಭಾಪುರಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಭಾನುವಾರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವೀರಶೈವ-ಲಿಂಗಾಯತ ಶಿವಾಚಾರ್ಯರ ಸದ್ಬೋದನಾ ಪಾದಯತ್ರೆಗೆ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಎಡೆಯೂರು ಖಾಸಾ ಶಾಖಾ ಮಠದ ಪಟ್ಟಾಧ್ಯಕ್ಷರಾದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿಯವರು ಚಾಲನೆ ನೀಡಿದರು.
ಭದ್ರಾವತಿ : ಅಷ್ಟಾವರಣ, ಪಂಚಾಚಾರ, ಷಟ್ ಸ್ಥಳಗಳ ಬಗ್ಗೆ ವೀರಶೈವ ಲಿಂಗಾಯತರಲ್ಲಿ ಧರ್ಮ ಜಾಗೃತಿ ಮೂಡಿಸುವುದು, ಪಂಚಪೀಠಗಳ ಇತಿಹಾಸ ಕುರಿತು ಜನರಲ್ಲಿ ಅರಿವು ಮೂಡಿಸುವುದು ಸೇರಿದಂತೆ ಹಲವು ನಿರ್ಣಯಗಳನ್ನು ಭಾನುವಾರ ತಾಲೂಕಿನ ಬಿಳಿಕಿ ಗ್ರಾಮದ ಶ್ರೀಮದ್ ರಂಭಾಪುರಿ ಶಾಖಾ ಹಿರೇಮಠದಲ್ಲಿ ನಡೆದ ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು ಮತ್ತು ಮಂಗಳೂರು ಜಿಲ್ಲಾ ಘಟಕಗಳ ಸಭೆಯಲ್ಲಿ ಕೈಗೊಳ್ಳಲಾಯಿತು.
ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಸಹ ಕಾರ್ಯದರ್ಶಿ, ಬಿಳಿಕಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಮಳಲಿ ಸಂಸ್ಥಾನ ಮಠದ ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಬಸವಾದಿ ಶಿವಶರಣರ ಕುರಿತು ಹಾಗೂ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಚಿಂತನೆಗಳನ್ನು ಸಮಾಜಕ್ಕೆ ತಿಳಿಯಪಡಿಸುವುದು. ಪ್ರತಿ ಎರಡು ತಿಂಗಳಿಗೊಮ್ಮೆ ಎಲ್ಲಾ ಜಿಲ್ಲೆಗಳಲ್ಲಿ, ಆಯಾ ಭಾಗಗಳಲ್ಲಿ ಶಿವಾಚಾರ್ಯ ಸಂಸ್ಥೆಯ ಸಭೆ ನಡೆಸಿ ಧರ್ಮ ಜಾಗೃತಿ ಮೂಡಿಸುವುದು. ನಗರ ಹಾಗು ಗ್ರಾಮಾಂತರ ಪ್ರದೇಶಗಳಲ್ಲಿ ವರ್ಷದುದ್ದಕ್ಕೂ ಧರ್ಮ ಜಾಗೃತಿ ಸಮಾವೇಶ ಸಂಘಟಿಸುವುದು ಮತ್ತು ಸಾಂದರ್ಭಿಕವಾಗಿ ಜಿಲ್ಲೆಯ ವಿವಿಧ ಮಠಗಳಲ್ಲಿ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಕೈಂಕರ್ಯ ಸಂಘಟಿಸಿ ಇಷ್ಟಲಿಂಗ ದೀಕ್ಷೆ ನೀಡುವುದು ಹಾಗೂ ಗ್ರಾಮಗಳಿಗೆ ಹೋದಾಗ ಶ್ರೀಗಳು ಆ ಗ್ರಾಮಗಳಲ್ಲಿ ಪಾದಯಾತ್ರೆ ಮಾಡಿ ಭಕ್ತರಿಗೆ ವಿಭೂತಿ, ರುದ್ರಾಕ್ಷಿ ಧಾರಣೆ ಮಾಡಬೇಕೆಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮತ್ತು ಮಂಗಳೂರು ಜಿಲ್ಲೆಗಳ ಜಿಲ್ಲಾಧ್ಯಕ್ಷರು ಹಾಗು ಪದಾಧಿಕಾರಿಗಳು ಸೇರಿದಂತೆ ಸುಮಾರು ೨೦ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡಿದ್ದರು.
ಬಿಳಿಕಿ ಗ್ರಾಮದಲ್ಲಿ ಸ್ವಾಮೀಜಿಗಳಿಂದ ಸದ್ಬೋಧನಾ ಪಾದಯಾತ್ರೆ :
ಬಿಳಿಕಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವೀರಶೈವ-ಲಿಂಗಾಯತ ಶಿವಾಚಾರ್ಯರ ಸದ್ಬೋದನಾ ಪಾದಯತ್ರೆಗೆ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಎಡೆಯೂರು ಖಾಸಾ ಶಾಖಾ ಮಠದ ಪಟ್ಟಾಧ್ಯಕ್ಷರಾದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿಯವರು ಚಾಲನೆ ನೀಡಿದರು.
ಪಾದಯಾತ್ರೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪ್ರತಿ ಮನೆ ಮನೆಗೆ ತೆರಳಿ ಭಕ್ತರಿಗೆ ವಿಭೂತಿ, ರುದ್ರಾಕ್ಷಿ ಧಾರಣೆ ಮಾಡುವ ಮೂಲಕ ಧರ್ಮ ಜಾಗೃತಿ ಮೂಡಿಸಿತು. ಪಾದಯಾತ್ರೆ ಆಗಮಿಸುತ್ತಿದ್ದಂತೆ ಪ್ರತಿ ಮನೆಗಳ ಮುಂದೆ ಹಬ್ಬದ ಸಂಭ್ರಮ ಕಂಡು ಬಂದಿತು. ಕುಟುಂಬ ಸದಸ್ಯರೆಲ್ಲರೂ ಸ್ವಾಮೀಜಿಗಳ ದರ್ಶನದೊಂದಿಗೆ ಆಶಿರ್ವಾದ ಪಡೆದುಕೊಂಡರು.
ಪ್ರಮುಖರಾದ ಬಿಳಿಕಿ ಹಿರೇಮಠದ ಗೌರವಾಧ್ಯಕ್ಷರಾದ ಟಿ.ವಿ ಈಶ್ವರಯ್ಯ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಷ್ ಷಡಾಕ್ಷರಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ತಾಲೂಕು ಘಟಕದ ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ, ಶಿವಮೊಗ್ಗ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಬಳ್ಳೇಕೆರೆ ಸಂತೋಷ್, ಮಾಜಿ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್, ಜಮೀನ್ದಾರ್ ಕೂಡ್ಲಿಗೆರೆ ಹಾಲೇಶ್, ವಾಗೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ ತಾಲೂಕಿನ ಬಿಳಿಕಿ ಗ್ರಾಮದ ಶ್ರೀಮದ್ ರಂಭಾಪುರಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಮಳಲಿ ಸಂಸ್ಥಾನ ಮಠದ ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಭಾನುವಾರ ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು ಮತ್ತು ಮಂಗಳೂರು ಜಿಲ್ಲಾ ಘಟಕಗಳ ಸಭೆ ನಡೆಯಿತು.