Wednesday, May 6, 2020

ಮೇ ಅಂತ್ಯದವರೆಗೆ ನಾಲೆಗಳಲ್ಲಿ ನೀರು ಹರಿಸಲು ಕಾಂಗ್ರೆಸ್ ಆಗ್ರಹ

ಎಚ್.ಎಸ್ ಶಂಕರ್‌ರಾವ್ 
ಭದ್ರಾವತಿ: ಭದ್ರಾ ಜಲಾಶಯದ ಎಡ ಮತ್ತು ಬಡ ದಂಡೆ ನಾಲೆಗಳಲ್ಲಿ ಮೇ ಅಂತ್ಯದವರೆಗೆ ನೀರು ಹರಿಸುವಂತೆ ತಾಲೂಕು ಕಾಂಗ್ರೆಸ್ ಸಮಿತಿ ಕಿಸಾನ್ ಮತ್ತು ಕೃಷಿ ಕಾರ್ಮಿಕರ ವಿಭಾಗ ಒತ್ತಾಯಿಸಿದೆ.
ಭದ್ರಾ ಜಲಾಯಶಯದಿಂದ ನಾಲೆಗಳಿಗೆ ಹರಿಸಲಾಗುತ್ತಿರುವ ನೀರನ್ನು ಮೇ.೭ರಂದು ನಿಲ್ಲಿಸಲು ಮುಂದಾಗಿರುವುದು ಸರಿಯಲ್ಲ. ಪ್ರಸ್ತುತ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ರೈತರು ಭತ್ತ ಬೆಳೆಯಲು ಮುಂದಾಗಿದ್ದಾರೆ. ಇದೀಗ ನಾಟಿ ಹಂತದಲ್ಲಿದ್ದು, ಭತ್ತ ಬೆಳೆ ಬೆಳೆಯಲು ಕನಿಷ್ಠ ೧೨೫ ರಿಂದ ೧೩೫ ದಿನಗಳ ಅಗತ್ಯವಿದೆ. ಇದೀಗ ನೀರು ನಿಲ್ಲಿಸುವುದರಿಂದ ತೋಟದ ಬೆಳೆಗಳಿಗೂ ಹಾಗೂ ಕಬ್ಬಿನ ಬೆಳೆಗೂ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
  ಯಾವುದೇ ಕಾರಣಕ್ಕೂ ನೀರು ನಿಲ್ಲಿಸದೆ ಮೇ ಅಂತ್ಯದವರೆಗೆ ನೀರು ಹರಿಸುವ ಮೂಲಕ ರೈತರ ಹಿತಕಾಪಾಡುವಂತೆ ವಿಭಾಗದ ತಾಲೂಕು ಅಧ್ಯಕ್ಷ ಎಚ್.ಎಸ್ ಶಂಕರ್‌ರಾವ್, ಪ್ರಧಾನ ಕಾರ್ಯದರ್ಶಿ ಸತೀಶ್ ಅಯ್ಯರ್, ಉಪಾಧ್ಯಕ್ಷ ಗೊಂದಿ ಬಾಷಾಸಾಬ್, ಅತ್ತಿಗುಂದ ತಿಮ್ಮಪ್ಪ ಸೇರಿದಂತೆ ಇನ್ನಿತರರು ಆಗ್ರಹಿಸಿದ್ದಾರೆ.

ಅಪಘಾತ : ದ್ವಿಚಕ್ರ ವಾಹನ ಸವಾರ ಸಾವು

ಭದ್ರಾವತಿ: ಕ್ಯಾಂಟರ್ ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟಿರುವ ಘಟನೆ ಬುಧವಾರ ನಗರದ ಜೇಡಿಕಟ್ಟೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಳಿ ನಡೆದಿದೆ.
ದ್ವಿಚಕ್ರ ವಾಹನ ಸವಾರ ಜೇಡಿಕಟ್ಟೆ ನಿವಾಸಿ ರಾಜ(೪೪) ಎಂಬುವರು ಮೃತಪಟ್ಟಿದ್ದು, ಹಿಂಬದಿ ಸವಾರ ಚನ್ನಪ್ಪ ಎಂಬುವರು ತೀವ್ರ ಗಾಯಗೊಂಡಿದ್ದಾರೆ. ಇವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳದ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ಬುಧವಾರದಿಂದ ದಂಡ ವಿಧಿಸಲಾಗುತ್ತಿದೆ.
ಭದ್ರಾವತಿ, ಮೇ. ೬: ಸರ್ಕಾರದ ಆದೇಶದಂತೆ ನಗರಸಭೆ ವ್ಯಾಪ್ತಿಯಲ್ಲಿ ಮಾಸ್ಕ್ ಬಳಸದವರು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ಬುಧವಾರದಿಂದ ತಂಡ ವಿಧಿಸಲಾಗುತ್ತಿದೆ.
ನಗರಸಭೆ ಸೇರಿದಂತೆ ಸರ್ಕಾರಿ ಕಛೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಬರುವ ಸಾರ್ವಜನಿಕರಿಗೆ ಹಾಗೂ ರಸ್ತೆಗಳಲ್ಲಿ ವಾಹನ ಚಲಾಯಿಸುವವರಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ೧೦೦ ರು. ದಂಡ ವಿಧಿಸಲಾಗುತ್ತಿದೆ. ಪೌರಾಯುಕ್ತ ಮನೋಹರ್ ನೇತೃತ್ವದಲ್ಲಿ ಪರಿಸರ ಅಭಿಯಂತರ ರುದ್ರೇಗೌಡ, ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್, ಗೋವಿಂದ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡು ದಂಡ ವಿಧಿಸುತ್ತಿದೆ.
ಕೊರೋನಾ ವೈರಸ್ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಸರ್ಕಾರದ ಆದೇಶದಂತೆ  ದಂಡ ವಿಧಿಸಲಾಗುತ್ತಿದ್ದು, ಸಾರ್ವಜನಿಕರು ಕೊರೋನಾ ವೈರಸ್ ನಿರ್ಮೂಲನೆಗೆ ಸಹಕರಿಸುವಂತೆ ಕೋರಲಾಗಿದೆ. 

Tuesday, May 5, 2020

ಸೇವಾ ನಿರತರ ತಂಡದಿಂದ ಸಹಕರಿಸಿದವರಿಗೆ ಕೃತಜ್ಞತೆ

ಭದ್ರಾವತಿಯಲ್ಲಿ ಸೇವಾ ನಿರತರ ತಂಡದಿಂದ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್, ಸತೀಶ್ ಗೌಡ ಹಾಗೂ ತಂಡವನ್ನು ಅಭಿನಂದಿಸಲಾಯಿತು. 
ಭದ್ರಾವತಿ: ಹಳೇನಗರದ ಸ್ವರ್ಣ ಟ್ರಾವೆಲ್ಸ್, ವಾಣಿ ಸ್ಟ್ರೋರ್‍ಸ್, ಮಾಜಿ ಸೈನಿಕರನ್ನೊಳಗೊಂಡ ಸೇವಾ ನಿರತರ ತಂಡ ಲಾಕ್‌ಡೌನ್ ಘೋಷಣೆಯಾದಾಗಿನಿಂದಲೂ ಕಡು ಬಡವರು, ನಿರಾಶ್ರಿತರು, ಬೀದಿ ಬದಿ ವಾಸಿಗಳು, ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿ ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳು, ದಾನಿಗಳ ನೆರವಿನಿಂದ ಪ್ರತಿದಿನ ಸಾವಿರಾರು ಮಂದಿಗೆ ಅಡುಗೆ ತಯಾರಿಸಿ ವಿತರಿಸುವ ಮೂಲಕ ಗಮನ ಸೆಳೆದಿತ್ತು. ಇದೀಗ ಸೇವಾ ಕಾರ್ಯಕ್ಕೆ ತೆರೆ ಎಳೆದು ಸಹಕರಿಸಿದವರಿಗೆ ಕೃತಜ್ಞತಾ ಕಾರ್ಯಕ್ಕೆ ಮುಂದಾಗಿದೆ.
ಮಂಗಳವಾರ ಸೇವಾ ಕಾರ್ಯಕ್ಕೆ ಸಹಕರಿಸಿದ ಪಾತ್ರೆ, ಶಾಮಿಯಾನ, ಹಣ್ಣು, ತರಕಾರಿ, ಆಹಾರ ಸಾಮಗ್ರಿ ಕೊಡುಗೆಯಾಗಿ ನೀಡಿದ ದಾನಿಗಳ ಬಳಿ ತೆರಳಿ ಅವರನ್ನು ಸನ್ಮಾನಿಸಿ ಅಭಿನಂದಿಸುವ ಮೂಲಕ ಅವರ ಅನಿಸಿಕೆಗಳನ್ನು ಹಂಚಿ ಕೊಂಡಿತು.
ಇದೆ ರೀತಿ ನ್ಯೂಟೌನ್ ಭಾಗದಲ್ಲಿ ಪ್ರತಿ ದಿನ ಆಹಾರ ತಯಾರಿಕೆ, ಸಂಕಷ್ಟಕ್ಕೆ ಒಳಗಾದವರಿಗೆ ದಿನಸಿ ಸಾಮಗ್ರಿ ಸೇರಿದಂತೆ ಇನ್ನಿತರ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಸ್ನೇಹ ಜೀವಿ ಬಳಗ ಸಹ ಸೇವಾ ನಿರತರ ತಂಡಕ್ಕೆ ಆಹಾರ ಸಾಮಗ್ರಿ ಕೊಡುಗಿ ನೀಡಿತ್ತು. ಈ ಹಿನ್ನಲೆಯಲ್ಲಿ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್, ಸತೀಶ್ ಗೌಡ ಹಾಗೂ ತಂಡವನ್ನು ಅಭಿನಂದಿಸಲಾಯಿತು. 

ವಂದೇ ಮಾತರಂ ಟ್ರಸ್ಟ್ ವತಿಯಿಂದ ಮಜ್ಜಿಗೆ ವಿತರಣೆ ಸೇವೆ

 ಭದ್ರಾವತಿ ಬಾರಂದೂರು ವಂದೇ ಮಾತರಂ ಟ್ರಸ್ಟ್ ವತಿಯಿಂದ ಮಂಗಳವಾರ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಎಳ್ಳನೀರು ವಿತರಣೆ ಮಾಡುವ ಮೂಲಕ ೨೫ ದಿನಗಳ ಮಜ್ಜಿಗೆ ವಿತರಣೆ ಸೇವೆ ಅಂತ್ಯಗೊಳಿಸಲಾಯಿತು.
ಭದ್ರಾವತಿ: ಕೊರೋನಾ ವೈರಸ್ ವಿರುದ್ಧ ಹಗಲಿರುಳು ಹೋರಾಟ ನಡೆಸುತ್ತಿರುವ ವೈದ್ಯರು, ಪೊಲೀಸರು ಮತ್ತು ಪೌರಕಾರ್ಮಿಕರ ಸಂಕಷ್ಟಕ್ಕೆ ಕಳೆದ ೨೬ ದಿನಗಳಿಂದ ನಿರಂತರವಾಗಿ ತಾಲೂಕಿನ ಬಾರಂದೂರು ಶ್ರೀ ಲಕ್ಷ್ಮಿ ವೆಂಕಟೇಶ್ವರ ಪದ್ಮಾವತಿ ದೇವಾಲಯದ ವಂದೇ ಮಾತರಂ ಟ್ರಸ್ಟ್  ಸ್ಪಂದಿಸುವ ಮೂಲಕ ಕಿರು ಸೇವೆಯನ್ನು ಮಂಗಳವಾರ ಕೊನೆಗೊಳಿಸಿದೆ.
ತಾಲೂಕಿನ ಚೆಕ್‌ಪೋಸ್ಟ್ ಹಾಗೂ ಆಯಾಕಟ್ಟಿನ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಪ್ರತಿದಿನ ಮಜ್ಜಿಗೆ ವಿತರಣೆ ಹಾಗೂ ಕೊನೆಯ ದಿನ ಎಳ್ಳನೀರು ವಿತರಣೆ ಮಾಡುವ ಮೂಲಕ ಗಮನ ಸೆಳೆಯಿತು.
ಅಲ್ಲದೆ ಕೊರೋನಾ ವೈರಸ್ ಕುರಿತು ಜಾಗೃತಿ ಜಾಥಾ ಸಹ ನಡೆಸಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವಲ್ಲಿ ಟ್ರಸ್ಟ್ ಯಶಸ್ವಿಯಾಗಿದೆ. ಟ್ರಸ್ಟ್ ಅಧ್ಯಕ್ಷ ಬಿ.ಎ ಪ್ರಸನ್ನಕುಮಾರ್ ಗ್ರಾಮಸ್ಥರು ಹಾಗೂ ಸ್ನೇಹಿತರ ಸಹಕಾರದೊಂದಿಗೆ ಸೇವಾ ಕಾರ್ಯವನ್ನು ಯಶಸ್ವಿಗೊಳಿಸಿದ್ದಾರೆ.



ಸಾಲ ಮರುಪಾವತಿಗೆ ಕಾಲಾವಕಾಶ ನೀಡಲು ವೀರೇಂದ್ರ ಹೆಗಡೆಯವರಿಗೆ ಮನವಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಪಡೆಯಲಾಗಿರುವ ಸಾಲ ಮರು ಪಾವತಿ ಮಾಡಲು ಕಾಲಾವಕಾಶ ನೀಡುವಂತೆ ಒತ್ತಾಯಿಸಿ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ ಮಂಗಳವಾರ ಯೋಜನಾ ಶಾಖಾ ಕಛೇರಿಯಲ್ಲಿ ವ್ಯವಸ್ಥಾಪಕರ ಮೂಲಕ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರಿಗೆ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಮೇ. ೫: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಪಡೆಯಲಾಗಿರುವ ಸಾಲ ಮರು ಪಾವತಿ ಮಾಡಲು ಕಾಲಾವಕಾಶ ನೀಡುವಂತೆ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಮಂಗಳವಾರ ಹಳೇನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕಛೇರಿಯಲ್ಲಿ ಮನವಿ ಸಲ್ಲಿಸಿದರು.
ಯೋಜನೆಯ ದೂರದೃಷ್ಟಿಯ ಫಲವಾಗಿ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಗ್ರಾಮ ಹಾಗೂ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಬಡ ಮಹಿಳೆಯರು ಸ್ವಾಭಿಮಾನ, ಸ್ವಾವಲಂಬನೆಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಯಾವುದೇ ಚುನಾಯಿತ ಸರ್ಕಾರ ಮಾಡದಿರುವ ಕಾರ್ಯವನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರಸ್ತುತ ವಿಶ್ವದೆಲ್ಲೆಡೆ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ದೇಶಾದ್ಯಂತ ಲಾಕ್‌ಡೌನ್ ಜಾರಿ ಮಾಡಿದ ಹಿನ್ನಲೆಯಲ್ಲಿ ಯೋಜನೆವತಿಯಿಂದ ಸಾಲ ಪಡೆದಿರುವ ಮಹಿಳೆಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಯಾವುದೇ ಚಟುವಟಿಕೆಗಳಿಲ್ಲದೆ ಆರ್ಥಿಕ ಸಮಸ್ಯೆ ಎದುರಾಗಿದೆ. ಈ ಹಿನ್ನಲೆಯಲ್ಲಿ ಇವರಿಗೆ ಸಾಲ ಮರುಪಾವತಿ ಮಾಡಲು ಈ ವರ್ಷದ ಕೊನೆಯವರೆಗೂ ಕಾಲಾವಕಾಶ ನೀಡಬೇಕೆಂದು ಹಾಗೂ ತುರ್ತು ಸಾಲದ ಅವಶ್ಯಕತೆ ಇರುವವರಿಗೆ ಸಾಲ ಸೌಲಭ್ಯ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಕಛೇರಿ ವ್ಯವಸ್ಥಾಪಕಿ ಸುಧಾ ಅವರಿಗೆ ಮನವಿ ಸಲ್ಲಿಸಲಾಯಿತು. ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್‌ಕುಮಾರ್, ಮುಖಂಡರಾದ ಸುಬ್ಬೇಗೌಡ, ರವಿಕುಮಾರ್ ನಾಯ್ಕ, ಅಲಿಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

೫೦ ವರ್ಷಗಳಿಗೆ ಅನ್ವಯವಾಗುವಂತೆ ಪರಿಷ್ಕೃತ ಯೋಜನೆ ರೂಪಿಸಲು ಒತ್ತಾಯಿಸಿ ಸಚಿವರಿಗೆ ಮನವಿ

ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಪರಿಶುದ್ಧ, ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಿ 

ಆರ್. ವೇಣುಗೋಪಾಲ್ 

ಭದ್ರಾವತಿ, ಮೇ. ೫: ನಗರಸಭೆ ವ್ಯಾಪ್ತಿಯಲ್ಲಿ ಮುಂದಿನ ೫೦ ವರ್ಷಗಳಿಗೆ ಅನ್ವಯವಾಗುವಂತೆ ಪರಿಶುದ್ಧವಾದ ಹಾಗೂ ಸಮರ್ಪಕವಾದ ಕುಡಿಯುವ ನೀರು ಪೂರೈಕೆ ಮಾಡಲು ಪರಿಷ್ಕೃತ ಯೋಜನೆ ತಯಾರಿಸುವಂತೆ ಕರ್ನಾಟಕ  ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಬಸವರಾಜ್‌ಗೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ಛೇರ್ಮನ್ ಆರ್. ವೇಣುಗೋಪಾಲ್ ಮನವಿ ಸಲ್ಲಿಸಿದ್ದಾರೆ.
ನಗರದಲ್ಲಿ ಪ್ರಸ್ತುತ ರ್‍ಯಾಪಿಡ್ ಆಕ್ಷನ್ ಪೋರ್ಸ್ ಕಾರ್ಯನಿರ್ವಹಿಸುತ್ತಿದ್ದು, ಸುಮಾರು ೨೦೦೦ ಆರ್‌ಎಎಫ್ ಕುಟುಂಬದವರಿಗೆ ವಸತಿ ಸೌಲಭ್ಯ ಹಾಗೂ ನಗರಸಭೆ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಸತಿ ಯೋಜನೆಯಡಿ ಸುಮಾರು ೪೦೦೦ ವಸತಿ ರಹಿತ ನಿರಾಶ್ರಿತರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ನಡುವೆ ನಗರದಲ್ಲಿ ಖಾಸಗಿ ಲೇಔಟ್ ನಿರ್ಮಾಣ ಹೆಚ್ಚಾಗುತ್ತಿದ್ದು, ಅಲ್ಲದೆ ಮುಂಬರುವ ದಿನಗಳಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಆಡಳಿತ ವ್ಯಾಪ್ತಿಯ ಮನೆಗಳು ಸಹ ನಗರಸಭೆಗೆ ಹಸ್ತಾಂತರಗೊಳ್ಳುವ ಸಾಧ್ಯತೆಗಳಿವೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಕಲ್ಪಿಸಲಾಗಿರುವ ನೀರಿನ ಸರಬರಾಜಿನಲ್ಲಿ ವ್ಯತ್ಯಯಗಳಾಗಲಿದ್ದು, ಈ ಹಿನ್ನಲೆಯಲ್ಲಿ ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಗೆ ಮುಂದಿನ ೫೦ ವರ್ಷಗಳಿಗೆ ಅನ್ವಯವಾಗುವಂತೆ ಪರಿಷ್ಕೃತ ಯೋಜನೆ ರೂಪಿಸಬೇಕಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚುವರಿ ಕುಡಿಯುವ ನೀರಿನ ಟ್ಯಾಂಕ್‌ಗಳು, ಹಳೇ ಕುಡಿಯುವ ನೀರಿನ ಟ್ಯಾಂಕ್‌ಗಳ ದುರಸ್ತಿ, ವಿತರಣಾ ಕೊಳವೆಗಳ ಬದಲಾವಣೆ, ಹಳೇನಗರ ಮತ್ತು ನ್ಯೂಟೌನ್ ಭಾಗದ ತಲಾ ಒಂದೊಂದು ಪಂಪ್‌ಹೌಸ್‌ನಲ್ಲಿ ವಿದೇಶಿ ಜಪಾನ್ ತಂತ್ರಜ್ಞಾನದ ಮೈಕ್ರೋ ಫೈಬರ್ ಫಿಲ್ಟರ್ ಅಳವಡಿಕೆಯೊಂದಿಗೆ ಸ್ಕ್ಯಾಡಾ ೨೪*೭ ಸ್ಕೀಂ ವ್ಯವಸ್ಥೆ ಸೇರಿದಂತೆ ಒಂದು ಪರಿಷ್ಕೃತವಾದ ಯೋಜನೆಯೊಂದನ್ನು ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿಕೊಡಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ.
ನಗರಸಭಾ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು ಕೆಲವು ಭಾಗಗಳಲ್ಲಿ ಬಾಕಿ ಉಳಿದಿದೆ. ಕಾಮಗಾರಿ ಪೂರ್ಣಗೊಳಿಸಲು ಪರಿಷ್ಕೃತ ಯೋಜನೆ ರೂಪಿಸುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ತಕ್ಷಣ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು  ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಬೇಕೆಂದು ಒತ್ತಾಯಿಸಲಾಗಿದೆ.