Tuesday, May 5, 2020

೫೦ ವರ್ಷಗಳಿಗೆ ಅನ್ವಯವಾಗುವಂತೆ ಪರಿಷ್ಕೃತ ಯೋಜನೆ ರೂಪಿಸಲು ಒತ್ತಾಯಿಸಿ ಸಚಿವರಿಗೆ ಮನವಿ

ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಪರಿಶುದ್ಧ, ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಿ 

ಆರ್. ವೇಣುಗೋಪಾಲ್ 

ಭದ್ರಾವತಿ, ಮೇ. ೫: ನಗರಸಭೆ ವ್ಯಾಪ್ತಿಯಲ್ಲಿ ಮುಂದಿನ ೫೦ ವರ್ಷಗಳಿಗೆ ಅನ್ವಯವಾಗುವಂತೆ ಪರಿಶುದ್ಧವಾದ ಹಾಗೂ ಸಮರ್ಪಕವಾದ ಕುಡಿಯುವ ನೀರು ಪೂರೈಕೆ ಮಾಡಲು ಪರಿಷ್ಕೃತ ಯೋಜನೆ ತಯಾರಿಸುವಂತೆ ಕರ್ನಾಟಕ  ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಬಸವರಾಜ್‌ಗೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ಛೇರ್ಮನ್ ಆರ್. ವೇಣುಗೋಪಾಲ್ ಮನವಿ ಸಲ್ಲಿಸಿದ್ದಾರೆ.
ನಗರದಲ್ಲಿ ಪ್ರಸ್ತುತ ರ್‍ಯಾಪಿಡ್ ಆಕ್ಷನ್ ಪೋರ್ಸ್ ಕಾರ್ಯನಿರ್ವಹಿಸುತ್ತಿದ್ದು, ಸುಮಾರು ೨೦೦೦ ಆರ್‌ಎಎಫ್ ಕುಟುಂಬದವರಿಗೆ ವಸತಿ ಸೌಲಭ್ಯ ಹಾಗೂ ನಗರಸಭೆ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಸತಿ ಯೋಜನೆಯಡಿ ಸುಮಾರು ೪೦೦೦ ವಸತಿ ರಹಿತ ನಿರಾಶ್ರಿತರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ನಡುವೆ ನಗರದಲ್ಲಿ ಖಾಸಗಿ ಲೇಔಟ್ ನಿರ್ಮಾಣ ಹೆಚ್ಚಾಗುತ್ತಿದ್ದು, ಅಲ್ಲದೆ ಮುಂಬರುವ ದಿನಗಳಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಆಡಳಿತ ವ್ಯಾಪ್ತಿಯ ಮನೆಗಳು ಸಹ ನಗರಸಭೆಗೆ ಹಸ್ತಾಂತರಗೊಳ್ಳುವ ಸಾಧ್ಯತೆಗಳಿವೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಕಲ್ಪಿಸಲಾಗಿರುವ ನೀರಿನ ಸರಬರಾಜಿನಲ್ಲಿ ವ್ಯತ್ಯಯಗಳಾಗಲಿದ್ದು, ಈ ಹಿನ್ನಲೆಯಲ್ಲಿ ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಗೆ ಮುಂದಿನ ೫೦ ವರ್ಷಗಳಿಗೆ ಅನ್ವಯವಾಗುವಂತೆ ಪರಿಷ್ಕೃತ ಯೋಜನೆ ರೂಪಿಸಬೇಕಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚುವರಿ ಕುಡಿಯುವ ನೀರಿನ ಟ್ಯಾಂಕ್‌ಗಳು, ಹಳೇ ಕುಡಿಯುವ ನೀರಿನ ಟ್ಯಾಂಕ್‌ಗಳ ದುರಸ್ತಿ, ವಿತರಣಾ ಕೊಳವೆಗಳ ಬದಲಾವಣೆ, ಹಳೇನಗರ ಮತ್ತು ನ್ಯೂಟೌನ್ ಭಾಗದ ತಲಾ ಒಂದೊಂದು ಪಂಪ್‌ಹೌಸ್‌ನಲ್ಲಿ ವಿದೇಶಿ ಜಪಾನ್ ತಂತ್ರಜ್ಞಾನದ ಮೈಕ್ರೋ ಫೈಬರ್ ಫಿಲ್ಟರ್ ಅಳವಡಿಕೆಯೊಂದಿಗೆ ಸ್ಕ್ಯಾಡಾ ೨೪*೭ ಸ್ಕೀಂ ವ್ಯವಸ್ಥೆ ಸೇರಿದಂತೆ ಒಂದು ಪರಿಷ್ಕೃತವಾದ ಯೋಜನೆಯೊಂದನ್ನು ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿಕೊಡಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ.
ನಗರಸಭಾ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು ಕೆಲವು ಭಾಗಗಳಲ್ಲಿ ಬಾಕಿ ಉಳಿದಿದೆ. ಕಾಮಗಾರಿ ಪೂರ್ಣಗೊಳಿಸಲು ಪರಿಷ್ಕೃತ ಯೋಜನೆ ರೂಪಿಸುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ತಕ್ಷಣ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು  ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಬೇಕೆಂದು ಒತ್ತಾಯಿಸಲಾಗಿದೆ. 

1 comment: