Friday, May 8, 2020

ಅನಿಲ ವಿತರಕರಿಂದ ಹೆಚ್ಚುವರಿ ಹಣ ವಸೂಲಾತಿ : ಸ್ಥಳೀಯರಿಂದ ದೂರು

ಭದ್ರಾವತಿ ಜನ್ನಾಪುರದಲ್ಲಿರುವ ಓಂ ಸಾಯಿ ಇಂಡಿಯನ್ ಡಿಸ್ಟ್ರಿಬ್ಯೂಟರ್‍ಸ್ ಗ್ರಾಹಕರಿಗೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಮಾಡಲು ಹೆಚ್ಚುವರಿ ಹಣ ಪಡೆಯುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸ್ಥಳೀಯರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪನವರಿಗೆ ಶುಕ್ರವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ದೂರು ಸಲ್ಲಿಸಿ ಒತ್ತಾಯಿಸಿದ್ದಾರೆ. 

ಭದ್ರಾವತಿ: ನಗರದ ಜನ್ನಾಪುರದಲ್ಲಿರುವ ಓಂ ಸಾಯಿ ಇಂಡಿಯನ್ ಡಿಸ್ಟ್ರಿಬ್ಯೂಟರ್‍ಸ್ ಗ್ರಾಹಕರಿಗೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಮಾಡಲು ಹೆಚ್ಚುವರಿ ಹಣ ಪಡೆಯುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸ್ಥಳೀಯರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪನವರಿಗೆ ಶುಕ್ರವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ದೂರು ಸಲ್ಲಿಸಿ ಒತ್ತಾಯಿಸಿದ್ದಾರೆ.
ಅನಿಲ ಸಿಲಿಂಡರ್ ನಿಗದಿತ ದರಕ್ಕೆ ಪೂರೈಕೆ ಮಾಡದೆ ೭೪೩ ರು. ಇದ್ದರೆ, ೭೭೦ ರು. ಪಡೆಯಲಾಗುತ್ತಿದೆ. ಹೆಚ್ಚುವರಿಯಾಗಿ ಸುಮಾರು ೨೭ ಹೆಚ್ಚು ಪಡೆಯಲಾಗುತ್ತಿದೆ. ಆದರೆ ೭೪೩ ರು.ಗಳಿಗೆ ರಶೀದಿ ನೀಡಲಾಗುತ್ತಿದೆ. ಪ್ರಸ್ತುತ ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್‌ಡೌನ್ ಘೋಷಿಸಿದ ಪರಿಣಾಮ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲೂ ಹೆಚ್ಚುವರಿ ಹಣ ವಸೂಲಾತಿ ಮಾಡುತ್ತಿರುವುದು ಸರಿಯಲ್ಲ. ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ, ಮೋಹನ್‌ಕುಮಾರ್,  ಎಚ್. ಮಂಜುನಾಥ್, ಎಸ್. ಶಿವು, ಪ್ರಕಾಶ್, ಸುಬ್ಬೇಗೌಡ, ಅಲಿಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Thursday, May 7, 2020

ಗ್ರಾಮೀಣ ಭಾಗದಲ್ಲಿ ಕಡು ಬಡವರು, ವಿಕಲಚೇತನರಿಗೆ ಆಹಾರ ಸಾಮಗ್ರಿ ವಿತರಣೆ

ಭದ್ರಾವತಿ ಹಿರಿಯೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆಂಚೇನಹಳ್ಳಿ, ಬಾರಂದೂರು,  ಹಿರಿಯೂರು ಸೇರಿದದಂತೆ ೮ ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೀರು ಸರಬರಾಜು ಕಾರ್ಮಿಕರಿಗೆ, ವಿಕಲಚೇತನರಿಗೆ ಗುರುವಾರ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. 
ಭದ್ರಾವತಿ, ಮೇ. ೭: ಕೊರೋನಾ ವೈರಸ್ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿದ ಪರಿಣಾಮ ಕಡು ಬಡವರು, ನಿರಾಶ್ರಿತರು, ಕೂಲಿ ಕಾರ್ಮಿಕರು, ಕೊಳಗೇರಿ ನಿವಾಸಿಗಳು, ವಿಕಲಚೇತನರು ಸೇರಿದಂತೆ ಶ್ರೀಸಾಮಾನ್ಯರು ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರಸ್ತುತ ಎದುರಾಗಿರುವ ಸಂದಿಗ್ದ ಪರಿಸ್ಥಿತಿಯನ್ನು ಅರಿತುಕೊಂಡಿರುವ ಕೆಲವು ಸ್ವಯಂ ಸೇವಾ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು,  ದಾನಿಗಳು ನೆರವಿಗೆ ಮುಂದಾಗಿದ್ದಾರೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ಪ್ರತಿನಿಧಿಸುವ ಸ್ವಕ್ಷೇತ್ರ ಹಿರಿಯೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆಂಚೇನಹಳ್ಳಿ, ಬಾರಂದೂರು,  ಹಿರಿಯೂರು ಸೇರಿದದಂತೆ ೮ ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೀರು ಸರಬರಾಜು ಕಾರ್ಮಿಕರಿಗೆ, ವಿಕಲಚೇತನರಿಗೆ ಗುರುವಾರ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಬೆಂಗಳೂರಿನ ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆ ನಿರ್ದೇಶಕಿ ಡಾ. ಅನುರಾಧ ಪಟೇಲ್ ಚಾಲನೆ ನೀಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಮಾಜಿ ಸದಸ್ಯ ಎಸ್. ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸುಮಾರು ೮೦೦ ರಿಂದ ೧೦೦೦ ಮಂದಿಗೆ ಆಹಾರ ಸಾಮಾಗ್ರಿ  ವಿತರಿಸಲಾಯಿತು. 

ಮದ್ಯ ವ್ಯಸನಿಗಳಾದಿರಿ : ಜನಜಾಗೃತಿ ವೇದಿಕೆ ಮನವಿ

ಜಿ. ಆನಂದಕುಮಾರ್ 
ಭದ್ರಾವತಿ: ರಾಜ್ಯದಲ್ಲಿ ಕಳೆದ ಸುಮಾರು ೪೦ ದಿನಗಳಿಂದ ಮದ್ಯ ಮಾರಾಟವಿಲ್ಲದ ಕಾರಣ ಸಾಕಷ್ಟು ಕುಟುಂಬಗಳು ನೆಮ್ಮದಿಯಿಂದ ದಿನ ಕಳೆದಿವೆ. ಇದೀಗ ಪುನಃ ಮದ್ಯ ಮಾರಾಟ ಆರಂಭವಾಗಿದ್ದು, ನೆಮ್ಮದಿ ಕಂಡಿದ್ದ ಕುಟುಂಬಗಳಲ್ಲಿ ಆತಂಕ ಎದುರಾಗಿದೆ. ಈ ಹಿನ್ನಲೆಯಲ್ಲಿ ಯಾವುದೇ ಕಾರಣಕ್ಕೂ ಪುನಃ ಮದ್ಯ ವ್ಯಸನಿಗಳಾಗದಂತೆ ಎಚ್ಚರ ವಹಿಸಿ ಸುಂದರ ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನ ಹರಿಸಿ ಎಂದು ಅಖಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಜಿ. ಆನಂದಕುಮಾರ್ ಮನವಿ ಮಾಡಿದ್ದಾರೆ.
ಸುಮಾರು ೪೦ ದಿನಗಳ ವರೆಗೆ ಮದ್ಯ ಮಾರಾಟವಿಲ್ಲದ ಕಾರಣ ಕುಟುಂಬದಲ್ಲಿ ನೆಮ್ಮದಿ ಲಭಿಸಿದೆ ಎಂಬುದು ಶೇ.೮೯ರಷ್ಟು ಜನರ ಅಭಿಪ್ರಾಯವಾಗಿದೆ. ಕುಟುಂಬದಲ್ಲಿ ಆರೋಗ್ಯ ಸುಧಾರಿಸಿದೆ, ಖರ್ಚು ಕಡಿಮೆಯಾಗಿದೆ, ಯಾವುದೇ ಸಮಸ್ಯೆ ಎದುರಾಗಿಲ್ಲ. ಈ ನಡುವೆ ಪುನಃ ಮದ್ಯ  ಮಾರಾಟ ಆರಂಭಗೊಂಡಿರುವುದು ದುರಾದುಷ್ಟಕರ ಬೆಳವಣಿಗೆಯಾಗಿದೆ. ಶಾಶ್ವತವಾಗಿ ಮದ್ಯಪಾನದಿಂದ ದೂರು ಉಳಿಯುವ ದೃಢ ಸಂಕಲ್ಪ ಕೈಗೊಳ್ಳಬೇಕಾಗಿದೆ. ಮದ್ಯ ಮುಕ್ತ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಇದು ಮಹಾತ್ಮಗಾಂಧಿ ಅವರ ಕನಸು ಸಹ ಆಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರ ಆಶಯ ಸಹ ಆಗಿದೆ. ಈ ಹಿನ್ನಲೆಯಲ್ಲಿ ಪುನಃ ಮದ್ಯ ವ್ಯಸನಿಗಳಾಗಿದಿರಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

Wednesday, May 6, 2020

ತುಂಬಿದ ಸಿಲಿಂಡರ್ ಸ್ಪೋಟ

ಭದ್ರಾವತಿ ತುಂಬಿದ ಅಡುಗೆ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡಿರುವ ಘಟನೆ ಬಿ.ಎಚ್ ರಸ್ತೆ ವೈಶಾಲಿ ಹೋಟೆಲ್ ಹಿಂಭಾಗ ಬುಧವಾರ ಸಂಜೆ ನಡೆದಿದೆ. 
ಭದ್ರಾವತಿ: ತುಂಬಿದ ಅಡುಗೆ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡಿರುವ ಘಟನೆ ಬಿ.ಎಚ್ ರಸ್ತೆ ವೈಶಾಲಿ ಹೋಟೆಲ್ ಹಿಂಭಾಗ ಬುಧವಾರ ಸಂಜೆ ನಡೆದಿದೆ.
ನೂರುಲ್ಲಾ ಎಂಬುವರ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದು,  ಮನೆಯಲ್ಲಿ ಯಾರು ಇಲ್ಲದಿರುವಾಗ ಈ ಘಟನೆ ನಡದಿದೆ. ಇದರಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯ ಗೋಡೆ ಹಾಗೂ ಮೇಲ್ಛಾವಣಿ ಜಖಂಗೊಂಡಿದೆ.


ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್, ಸಿಬ್ಬಂದಿಗಳಾದ ಅಶೋಕ್‌ಕುಮಾರ್, ವಿನೂತನ್, ಹರೀಶ್, ಸುರೇಶ್‌ಚಾರ್ ಅವರನ್ನೊಳಗೊಂಡ ತಂಡ ಆಗಮಿಸಿ ಯಾವುದೇ ದುರ್ಘಟನೆ ನಡೆಯದಂತೆ ಎಚ್ಚರ ವಹಿಸಿತು.  ಪೊಲೀಸ್ ನಗರ ವೃತ್ತ ನಿರೀಕ್ಷಕ ನಂಜಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಅಪಘಾತ : ಪಾದಚಾರಿ ವೃದ್ಧ ಸಾವು

ಭದ್ರಾವತಿ: ಪಾದಚಾರಿ ವೃದ್ಧರೊಬ್ಬರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿರುವ ಘಟನೆ ನ್ಯೂಟೌನ್ ಶ್ರೀ ಸತ್ಯ ಸಾಯಿ ಬಾಬಾ ಮಂದಿರ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ.
ಟಿ.ಎನ್ ತಿಮ್ಮಪ್ಪ(೮೦) ಮೃತಪಟ್ಟಿದ್ದು, ಇವರು ಬೆಳಿಗ್ಗೆ ೮.೩೦ರ ಸಮಯದಲ್ಲಿ ವಾಯು ವಿಹಾರಕ್ಕೆ ತೆರಳಿದ್ದಾಗ ಶ್ರೀ ಸತ್ಯ ಸಾಯಿ ಬಾಬಾ ಮಂದಿರದ ಶಾಲಾ ಆಟದ ಮೈದಾನ ಎದುರು ಘಟನೆ ನಡೆದಿದೆ. ತಕ್ಷಣ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿದಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನ ಸವಾರ ಸಹ ತೀವ್ರ ಗಾಯಗೊಂಡಿದ್ದು, ಈ ಸಂಬಂಧ ಮೃತರ ಪುತ್ರ ಎ.ಟಿ ಕುಮಾರಸ್ವಾಮಿ ಸಂಚಾರಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಮೇ ಅಂತ್ಯದವರೆಗೆ ನಾಲೆಗಳಲ್ಲಿ ನೀರು ಹರಿಸಲು ಕಾಂಗ್ರೆಸ್ ಆಗ್ರಹ

ಎಚ್.ಎಸ್ ಶಂಕರ್‌ರಾವ್ 
ಭದ್ರಾವತಿ: ಭದ್ರಾ ಜಲಾಶಯದ ಎಡ ಮತ್ತು ಬಡ ದಂಡೆ ನಾಲೆಗಳಲ್ಲಿ ಮೇ ಅಂತ್ಯದವರೆಗೆ ನೀರು ಹರಿಸುವಂತೆ ತಾಲೂಕು ಕಾಂಗ್ರೆಸ್ ಸಮಿತಿ ಕಿಸಾನ್ ಮತ್ತು ಕೃಷಿ ಕಾರ್ಮಿಕರ ವಿಭಾಗ ಒತ್ತಾಯಿಸಿದೆ.
ಭದ್ರಾ ಜಲಾಯಶಯದಿಂದ ನಾಲೆಗಳಿಗೆ ಹರಿಸಲಾಗುತ್ತಿರುವ ನೀರನ್ನು ಮೇ.೭ರಂದು ನಿಲ್ಲಿಸಲು ಮುಂದಾಗಿರುವುದು ಸರಿಯಲ್ಲ. ಪ್ರಸ್ತುತ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ರೈತರು ಭತ್ತ ಬೆಳೆಯಲು ಮುಂದಾಗಿದ್ದಾರೆ. ಇದೀಗ ನಾಟಿ ಹಂತದಲ್ಲಿದ್ದು, ಭತ್ತ ಬೆಳೆ ಬೆಳೆಯಲು ಕನಿಷ್ಠ ೧೨೫ ರಿಂದ ೧೩೫ ದಿನಗಳ ಅಗತ್ಯವಿದೆ. ಇದೀಗ ನೀರು ನಿಲ್ಲಿಸುವುದರಿಂದ ತೋಟದ ಬೆಳೆಗಳಿಗೂ ಹಾಗೂ ಕಬ್ಬಿನ ಬೆಳೆಗೂ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
  ಯಾವುದೇ ಕಾರಣಕ್ಕೂ ನೀರು ನಿಲ್ಲಿಸದೆ ಮೇ ಅಂತ್ಯದವರೆಗೆ ನೀರು ಹರಿಸುವ ಮೂಲಕ ರೈತರ ಹಿತಕಾಪಾಡುವಂತೆ ವಿಭಾಗದ ತಾಲೂಕು ಅಧ್ಯಕ್ಷ ಎಚ್.ಎಸ್ ಶಂಕರ್‌ರಾವ್, ಪ್ರಧಾನ ಕಾರ್ಯದರ್ಶಿ ಸತೀಶ್ ಅಯ್ಯರ್, ಉಪಾಧ್ಯಕ್ಷ ಗೊಂದಿ ಬಾಷಾಸಾಬ್, ಅತ್ತಿಗುಂದ ತಿಮ್ಮಪ್ಪ ಸೇರಿದಂತೆ ಇನ್ನಿತರರು ಆಗ್ರಹಿಸಿದ್ದಾರೆ.

ಅಪಘಾತ : ದ್ವಿಚಕ್ರ ವಾಹನ ಸವಾರ ಸಾವು

ಭದ್ರಾವತಿ: ಕ್ಯಾಂಟರ್ ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟಿರುವ ಘಟನೆ ಬುಧವಾರ ನಗರದ ಜೇಡಿಕಟ್ಟೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಳಿ ನಡೆದಿದೆ.
ದ್ವಿಚಕ್ರ ವಾಹನ ಸವಾರ ಜೇಡಿಕಟ್ಟೆ ನಿವಾಸಿ ರಾಜ(೪೪) ಎಂಬುವರು ಮೃತಪಟ್ಟಿದ್ದು, ಹಿಂಬದಿ ಸವಾರ ಚನ್ನಪ್ಪ ಎಂಬುವರು ತೀವ್ರ ಗಾಯಗೊಂಡಿದ್ದಾರೆ. ಇವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.