Tuesday, May 12, 2020

ಶತಾಯುಷಿ ಬಾಬುನಾಯ್ಕ್ ನಿಧನ

ಶತಾಯುಷಿ ಬಾಬುನಾಯ್ಕ್ 
ಭದ್ರಾವತಿ, ಮೇ. ೧೨: ತಾಲೂಕಿನ ಕಲ್ಪನಹಳ್ಳಿ ತಾಂಡ ನಿವಾಸಿ ಶಿಕ್ಷಕ ಜುಂಜ್ಯಾನಾಯ್ಕರವರ, ಶತಾಯುಷಿ ಬಾಬುನಾಯ್ಕ್(೧೦೬) ಮಂಗಳವಾರ ವಯೋ ಸಹಜ ನಿಧನ ಹೊಂದಿದರು.
ತಾಂಡದಲ್ಲಿ ಹಿರಿಯರಾಗಿದ್ದ ಬಾಬುನಾಯ್ಕ್‌ರವರು ಜಮೀನ್ದಾರ್‌ರಾಗಿ ಗುರುತಿಸಿಕೊಂಡಿದ್ದರು. ೪ ಗಂಡು, ೩ ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. ಇವರ ನಿಧನಕ್ಕೆ ಬಂಜಾರ ಸಮಾಜದ ಮುಖಂಡರು, ದಲಿತ ಮುಖಂಡರು, ಶಿಕ್ಷಕ ವೃಂದದವರು ಹಾಗೂ ತಾಂಡ ನಿವಾಸಿಗಳು ಸಂತಾಪ ಸೂಚಿಸಿದ್ದಾರೆ. 

ನಗರಸಭೆ ೧೪ನೇ ವಾರ್ಡ್‌ನಲ್ಲಿ ಕಡು ಬಡವರಿಗೆ ದಿನಸಿ ಸಾಮಗ್ರಿ ವಿತರಣೆ

ಭದ್ರಾವತಿ ನಗರಸಭೆ ೧೪ನೇ ವಾರ್ಡ್‌ನ ಕಡು ಬಡವರಿಗೆ ನಗರಸಭೆ ಹಿರಿಯ ಸದಸ್ಯ ವಿ. ಕದಿರೇಶ್ ಮಂಗಳವಾರ ದಿನಸಿ ಸಾಮಗ್ರಿ ವಿತರಿಸಿದರು. ಕಾರ್ಯಕ್ರಮಕ್ಕೆ ತಹಸೀಲ್ದಾರ್ ಶಿವಕುಮಾರ್ ಚಾಲನೆ ನೀಡಿದರು. 
ಭದ್ರಾವತಿ, ಮೇ. ೧೨: ಕೊರೋನಾ ವೈರಸ್ ಪರಿಣಾಮ ಲಾಕ್‌ಡೌನ್ ಜಾರಿಗೊಳಿಸಿದ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ನಗರಸಭೆ ೧೪ನೇ ವಾರ್ಡ್‌ನ ಕಡು ಬಡವರಿಗೆ ನಗರಸಭೆ ಹಿರಿಯ ಸದಸ್ಯ ವಿ. ಕದಿರೇಶ್ ಮಂಗಳವಾರ ದಿನಸಿ ಸಾಮಗ್ರಿ ವಿತರಿಸಿದರು.
ತಹಸೀಲ್ದಾರ್ ಶಿವಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ಅಧ್ಯಕ್ಷರು ನಗರಸಭಾ ಸದಸ್ಯರಾಗಿರುವ ವಿ. ಕದಿರೇಶ್‌ರವರು ಈಗಾಗಲೇ ವಿನಾಯಕ ಸೇವಾ ಸಮಿತಿ ವತಿಯಿಂದ ಲಾಕ್‌ಡೌನ್ ಘೋಷಣೆಯಾದಾಗಿನಿಂದಲೂ ಪ್ರತಿದಿನ ಕಡು ಬಡವರು, ಕೂಲಿ ಕಾರ್ಮಿಕರು, ನಿರಾಶ್ರಿತರು, ಬೀದಿ ವಾಸಿಗಳು, ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿ ಅಡುಗೆ ತಯಾರಿಸಿ ಪೂರೈಕೆ ಮಾಡಿದ್ದರು.
ಇದೀಗ ಸ್ವಂತ ಖರ್ಚಿನಲ್ಲಿ ೧೪ನೇ ವಾರ್ಡಿನಲ್ಲಿರುವ ಕಡು ಬಡವರು, ಕೂಲಿಕಾರ್ಮಿಕರನ್ನು ಗುರುತಿಸಿ ದಿನಸಿ ಸಾಮಗ್ರಿ ವಿತರಿಸಿದರು. ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ, ತಾಲೂಕು ಪಂಚಾಯಿತಿ ಸದಸ್ಯ ಕೆ. ಮಂಜುನಾಥ್, ಮುಖಂಡರಾದ ಮಂಗೋಟೆ ರುದ್ರೇಶ್, ಪ್ರಕಾಶ್, ವಸಂತರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Monday, May 11, 2020

ಬಡವರ ಸಂಕಷ್ಟಕ್ಕೆ ಸ್ಪಂದಿಸಿದ ಹಾಲಿ-ಮಾಜಿ ಶಾಸಕರಿಗೆ ಅಭಿನಂದನೆ, ಕೃತಜ್ಞತೆ

ಭದ್ರಾವತಿಯಲ್ಲಿ ಬಡ ಶ್ರಮಿಕ ವರ್ಗದವರ ನೆರವಿಗೆ ಮುಂದಾದ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ವಿವಿಧ ಸಂಘಟನೆಗಳ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. 
ಭದ್ರಾವತಿ: ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ಪರಿಣಾಮ ತಾಲೂಕಿನಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಸವಿತ ಸಮಾಜ ಸೇರಿದಂತೆ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಶ್ರಮಿಕ ವರ್ಗದ ಸ್ಥಿತಿಗತಿಗಳನ್ನು ಅರಿತು ಆಹಾರ ಸಾಮಗ್ರಿ ವಿತರಿಸುವ ಮೂಲಕ ನೆರವಿಗೆ ಮುಂದಾದ ಹಾಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರನ್ನು ವಿವಿಧ ಸಂಘಟನೆಗಳ ವತಿಯಿಂದ ಅಭಿನಂದಿಸಲಾಯಿತು.
ಭದ್ರಾವತಿಯಲ್ಲಿ ಬಡ ಶ್ರಮಿಕ ವರ್ಗದವರ ನೆರವಿಗೆ ಮುಂದಾದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರನ್ನು ವಿವಿಧ ಸಂಘಟನೆಗಳ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. 
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎಂ. ಪರಮೇಶ್, ಉಪಾಧ್ಯಕ್ಷ ಎಂ.ಎಸ್  ಶ್ರೀನಿವಾಸ್, ಕಾರ್ಯದರ್ಶಿ ಅಶೋಕ್‌ರಾವ್  ಘೋರ್ಪಡೆ, ಗೌರವಾಧ್ಯಕ್ಷ ವೀರಲಾಲ್, ತಾಲೂಕು ಛಾಯ ಗ್ರಾಹಕರ ಸಂಘದ ಅಧ್ಯಕ್ಷ ರಾಮಕೃಷ್ಣ,  ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ರೆಡ್‌ಸನ್ ರಾಜು,ಸದಸ್ಯರಾದ ಜೆ. ಕುಮಾರ್, ಶಿವಪ್ರಸಾದ್ ಮತ್ತು ಪಿ. ಮಲ್ಲೇಶ್ ಇನ್ನಿತರರು ಅಭಿನಂದಿಸಿ ಕೃತಜ್ಞತೆ ಸಲ್ಲಿಸುವ ಮೂಲಕ ಮುಂದಿನ ದಿನಗಳಲ್ಲೂ ಇದೆ ರೀತಿ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿದರು. 




ಅಗ್ನಿಶಾಮಕ ಇಲಾಖೆ ಸಹಕಾರದೊಂದಿಗೆ ೨ನೇ ಹಂತದಲ್ಲಿ ಔಷಧಿ ಸಿಂಪಡಣೆ

ಭದ್ರಾವತಿ, ಮೇ. ೧೧: ಜನದಟ್ಟಣೆ ಅಧಿಕಗೊಳ್ಳುವ ಸ್ಥಳಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ೨ನೇ ಹಂತದ ಔಷಧಿ ಸಿಂಪಡಣೆ ಕಾರ್ಯ ಸೋಮವಾರದಿಂದ ನಡೆಯುತ್ತಿದೆ.
ರಾಜ್ಯದೆಲ್ಲೆಡೆ ಕೊರೋನಾ ವೈರಸ್ ಉಲ್ಬಣಗೊಂಡ ಪರಿಣಾಮ ಆರಂಭಿಕ ಹಂತದಲ್ಲಿಯೇ ಸ್ಥಳೀಯ ಸಂಸ್ಥೆಗಳು ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲೆಡೆ ಒಂದು ಹಂತದಲ್ಲಿ  ನೀರಿನೊಂದಿಗೆ ಸೋಡಿಯಂ ಹೈಪೋ ಕ್ಲೋರೈಟ್ ಮಿಶ್ರಣದ ಔಷಧಿ ಸಿಂಪಡಣೆ ಕಾರ್ಯ ಕೈಗೊಳ್ಳಲಾಗಿತ್ತು.
ಇದೀಗ ೨ನೇ ಹಂತವಾಗಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ ಸಿಂಪಡಣೆ ಕಾರ್ಯ ನಡೆಯಿತು. ಘಟಕ ವ್ಯವಸ್ಥಾಪಕಿ ಅಂಬಿಕಾ ಹಾಗು ಸಿಬ್ಬಂದಿ ಉಪಸ್ಥಿತರಿದ್ದರು.
ಮಧ್ಯಾಹ್ನ ಚನ್ನಗಿರಿ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಔಷಧಿ ಸಿಂಪಡಣೆ ಕಾರ್ಯ ನಡೆಯಿತು. ಸಮಿತಿ ಅಧ್ಯಕ್ಷ ಲವೇಶ್‌ಗೌಡ, ಸದಸ್ಯ ಡಾ. ಎನ್‌ಟಿಸಿ ನಾಗೇಶ್, ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ವಸಂತಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.





Virus-free. www.avast.com

Sunday, May 10, 2020

ಭದ್ರಾವತಿ : ಉಕ್ಕಿನ ನಗರಕ್ಕೆ ಕೊರೋನಾ ವೈರಸ್‌ ಭೀತಿ


ವಸತಿ ನಿಲಯಗಳಲ್ಲಿ ಕ್ವಾರಂಟೈನ್‌ಗೆ ವಿರೋಧಿಸಿ ಸ್ಥಳೀಯರಿಂದ ಪ್ರತಿಭಟನೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಉಂಬ್ಳೆಬೈಲ್ ರಸ್ತೆಯಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳನ್ನು ಕ್ವಾರಂಟೈನ್ ಆಗಿ ಬಳಕೆ ಮಾಡಿಕೊಳ್ಳುವುದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. 
ಭದ್ರಾವತಿ, ಮೇ. ೧೦: ನಗರಸಭೆ ವ್ಯಾಪ್ತಿಯ ಉಂಬ್ಳೆಬೈಲ್ ರಸ್ತೆಯಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳನ್ನು ಹೊರ ರಾಜ್ಯಗಳಿಂದ ಬಂದ ತಾಲೂಕಿನ ನಿವಾಸಿಗಳನ್ನು ನಿಗಾದಲ್ಲಿರಿಸಲು ಕ್ವಾರಂಟೈನ್ ಆಗಿ ಸಿದ್ದಗೊಳಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. 
ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಆತಂಕಕ್ಕೆ ಒಳಗಾಗಿರುವ ನಿವಾಸಿಗಳು ರಾತ್ರೋರಾತಿ ಏಕಾಏಕಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ನಗರಸಭೆ ಸದಸ್ಯ ಗುಣಶೇಖರ್, ಮುಖಂಡರಾದ ಉಮೇಶ್ ಸೇರಿದಂತೆ ಇನ್ನಿತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಯಾವುದೇ ಕಾರಣಕ್ಕೂ ವಿದ್ಯಾರ್ಥಿ ನಿಲಯಗಳನ್ನು ಬಳಸಿಕೊಳ್ಳಬಾರದು. ಜನವಸತಿ ಪ್ರದೇಶವಾಗಿರುವ ಕಾರಣ ಬೇರೆಡೆ ಕ್ವಾರಂಟೈನ್ ತೆರೆಯುವಂತೆ ಆಗ್ರಹಿಸಿದರು. ಜಿಲ್ಲಾಡಳಿತ ಬೇರೆಡೆ ಕ್ವಾರಂಟೈನ್ ತೆರೆಯುವುದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಅಂತ್ಯಗೊಂಡಿತು.  

ಆಹಾರ ತಯಾರಿಕೆಗೆ ಸಹಕರಿಸಿದವರಿಗೆ ಸನ್ಮಾನ, ಕೃತಜ್ಞತೆ

ಭದ್ರಾವತಿಯಲ್ಲಿ ಪ್ರತಿದಿನ ಮಧ್ಯಾಹ್ನ ಕಡುಬಡವರಿಗೆ ಆಹಾರ ಪೂರೈಕೆ ಮಾಡುತ್ತಿರುವ ತಾಲೂಕು ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕ್ಕೆ ಸಹಕರಿಸಿದರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು. 
ಭದ್ರಾವತಿ: ಕೊರೋನಾ ವೈರಸ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಬಡವರಿಗೆ ಪ್ರತಿ ದಿನ ಮಧ್ಯಾಹ್ನ ಆಹಾರ ತಯಾರಿಸಿ ಪೂರೈಕೆ ಮಾಡುತ್ತಿರುವ ತಾಲೂಕು ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಸಹ ಸೇವಾ ಕಾರ್ಯ ಕೈಗೊಂಡಿತು.
ಲಾಕ್‌ಡೌನ್ ಆರಂಭಗೊಂಡಾಗಿನಿಂದಲೂ ಸಂಘದ ವತಿಯಿಂದ ಪ್ರತಿದಿನ ಮಧ್ಯಾಹ್ನ ಸುಮಾರು ೧೨೦ ಮಂದಿಗೆ ಸಾಕಾಗುವಷ್ಟು ಆಹಾರ ತಯಾರಿಸಿ ವಿತರಿಸಲಾಗುತ್ತಿದ್ದು, ಹಳೇನಗರದ ಹೊಸಸೇತುವೆ ರಸ್ತೆಯ ಶ್ರೀ ಶೃಂಗೇರಿ ಶಂಕರ ಮಠದ ಶ್ರೀ ಶಾರದ ಭಜನಾ ಮಂಡಳಿ  ಒಂದು ದಿನದ ಆಹಾರ ತಯಾರಿಕೆ ಕೈಜೋಡಿಸಿ ಸಂಘದ ಕಾರ್ಯಕ್ಕೆ ಸಹಕರಿಸಿದೆ.
ಸಂಘದ ವತಿಯಿಂದ ಇದುವರೆಗೂ ಅಡುಗೆ ತಯಾರಿಕೆಗೆ ಸಹಕರಿಸಿದ ಅಡುಗೆ ತಯಾರಕರಾದ ಕುಮಾರ್ ಮತ್ತು ಕೃಷ್ಣ ಭಟ್ ಹಾಗೂ ಶ್ರೀ ಶಾರದ ಭಜನಾ ಮಂಡಳಿಯವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ವಿಲ್ಸನ್ ಬಾಬು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು, ಅರಳಿಕಟ್ಟೆ ಯುವಕರು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.