Sunday, May 17, 2020

೪೩ ಪಂಚಾಬ್ ನಿವಾಸಿಗಳ ಗಂಟಲು ದ್ರವ ಪರೀಕ್ಷೆ


ಭದ್ರಾವತಿ ತಾಲೂಕಿನ ದೇವರನರಸೀಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಕ್ವಾರಂಟೈನ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಭಾನುವಾರ ಪಂಜಾಬ್ ನಿವಾಸಿಗಳ ಗಂಟಲು ದ್ರವ ಪರೀಕ್ಷೆ ನಡೆಸಲಾಯಿತು. 
ಭದ್ರಾವತಿ, ಮೇ. ೧೭: ತಾಲೂಕಿನ ದೇವರನರಸೀಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಕ್ವಾರಂಟೈನ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಭಾನುವಾರ ಪಂಜಾಬ್ ನಿವಾಸಿಗಳ ಗಂಟಲು ದ್ರವ ಪರೀಕ್ಷೆ ನಡೆಸಲಾಯಿತು.
ಮೂಲತಃ ಪಂಜಾಬ್‌ನ ೪೩ ಮಂದಿ ದೆಹಲಿಯಿಂದ ರೈಲಿನ ಮೂಲಕ ಹೊರಟು ಹುಬ್ಬಳ್ಳಿಯಲ್ಲಿ ಇಳಿದು ಅಲ್ಲಿಂದ ಬಸ್ ಮೂಲಕ ಶಿವಮೊಗ್ಗ ನಗರಕ್ಕೆ ಮೇ.೧೬ರ ಶನಿವಾರ ರಾತ್ರಿ ಆಗಮಿಸಿದ್ದು, ಅವರನ್ನು ದೇವರನರಸೀಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್‌ಗೆ ಕರೆತರಲಾಗಿತ್ತು.
ಭಾನುವಾರ ಆರ್‌ಸಿಎಚ್‌ಓ ಡಾ. ನಾಗರಾಜ್ ನಾಯ್ಕ ನೇತೃತ್ವದ ತಂಡ ಗಂಟಲು ದ್ರವ ಪರೀಕ್ಷೆ ನಡೆಸಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಟ್ಟಿದೆ.
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ,  ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ,  ಅಂತರಗಂಗೆ ವೈದ್ಯಾಧಿಕಾರಿ ಡಾ. ಗಿರೀಶ್, ವಸತಿ ಶಾಲೆ ಪ್ರಾಂಶುಪಾಲ ಬಸವರಾಜ್, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ಸಹಾಯಕ ನಿಲೇಶ್‌ರಾಜ್, ಕವಿತಾರಾಣಿ, ನೆಲ್ಸನ್ ಕುಮಾರ್, ಸೋಮಶೇಖರ್  ಪ್ರದೀಪ್, ಚಾಲಕ ಅಮೀರ್ ಇನ್ನಿತರರು ತಂಡದಲ್ಲಿದ್ದರು. 

ಕೊರೋನಾ ಸೋಂಕಿತ ಪ್ರಕರಣ ಗಾಳಿ ಸುದ್ದಿ : ಭಯಭೀತಗೊಂಡ ನಾಗರಿಕರು

ಭದ್ರಾವತಿ : ನಗರದಲ್ಲಿ ಕೊರೋನಾ ಸೋಂಕಿತ ಪ್ರಕರಣ ಪತ್ತೆ ಎಂಬ ಸುದ್ದಿ ಭಾನುವಾರ ವ್ಯಾಪಕವಾಗಿ ಹಬ್ಬಿದ್ದು ಇದರಿಂದಾಗಿ ನಾಗರಿಕರು ಭಯ ಭೀತಿಗೊಂಡಿದ್ದಾರೆ.
      ಜಿಲ್ಲೆಯಲ್ಲಿ ಒಟ್ಟು ಎರಡು ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಒಂದು ಭದ್ರಾವತಿ ನಗರದಲ್ಲಿ ಕಂಡುಬಂದಿದೆ ಎಂಬ ಸುದ್ದಿ ಟಿವಿ ಮಾದ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
           ಆದರೆ  ಈ ಬಗ್ಗೆ  ಅಧಿಕೃತ ಮಾಹಿತಿ ಜಿಲ್ಲಾಡಾಳಿತ ಅಥವಾ ತಾಲೂಕು ಆಡಳಿತ ನೀಡಿಲ್ಲ .  ಮುಂಬೈ ನಗರದಿಂದ ಇತ್ತೀಚೆಗೆ  ಖಾಸಗಿ ವಾಹನದಲ್ಲಿ  ಬಂದ ಕ್ವಾರಂಟೈನಲ್ಲಿಡಲಾದ ಕುಟುಂಬವೊಂದರ ಸದಸ್ಯರಿಬ್ಬರಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ . ಆದರೆ ಎಲ್ಲೂ ಸಹ ಭದ್ರಾವತಿ ಹೆಸರು ಪ್ರಸ್ತಾಪವಾಗಿಲ್ಲ.

ಲಕ್ಷ್ಮಮ್ಮ ನಿಧನ

ಭದ್ರಾವತಿ : ಪತ್ರಕರ್ತ ಅನಂತಕುಮಾರ್ ರವರ ತಾಯಿ, ನ್ಯೂಟೌನ್ ನಿವಾಸಿ ಲಕ್ಮಮ್ಮ(೬೨) ಶನಿವಾರ ನಿಧನರಾದರು.
   ಪತಿ ಎಂಪಿಎಂ ನಿವೃತ್ತ ಉದ್ಯೋಗಿ ಮರಿಯಪ್ಪ,  ೪ ಜನ ಪುತ್ರರು, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟಗಲಿದ್ದಾರೆ.  ಮೃತರ ಅಂತ್ಯಕ್ರಿಯೆ  ಬುಳ್ಳಾಪುರ ಹಿಂದೂ ರುದ್ರ ಭೂಮಿಯಲ್ಲಿ  ನಡೆಯಿತು.
   ಸಂತಾಪ : ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಬಿ.ಕೆ ಸಂಗಮೇಶ್ವರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್,   ಪೌರಾಯುಕ್ತ ಮನೋಹರ್, ಮುಖಂಡರಾದ ಜಿ. ಆನಂದಕುಮಾರ್, ಮಂಗೋಟೆ ರುದ್ರೇಶ್,  ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಛಲವಾದಿ ಸಮಾಜ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಪತ್ರಿಕಾ ಭವನ ಟ್ರಸ್ಟ್  ಸೇರಿದಂತೆ ಇನ್ನಿತರೆ ಸಂಘ-ಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಲಕ್ಷ್ಮಮ್ಮ ನಿಧನ 16-05-2020

ಭದ್ರಾವತಿ ನಗರಸಭೆ ವಿಶೇಷ


Thursday, May 14, 2020

ಕ್ವಾರಂಟೈನ್ ತೆರೆಯಲು ಗ್ರಾಮಸ್ಥರೊಂದಿಗೆ ಶಾಂತಿ ಸಭೆ

ನೂತನ ದಂಡಾಧಿಕಾರಿ ಪ್ರಯತ್ನ ಯಶಸ್ವಿ 

ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಮತ್ತು ದೇವರನರಸೀಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ತೆರೆಯಲು ಗ್ರಾಮಸ್ಥರೊಂದಿಗೆ ಶಾಂತಿ ಸಭೆ ನಡೆಸುತ್ತಿರುವ ನೂತನ ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಶಿವಕುಮಾರ್. 
ಭದ್ರಾವತಿ, ಮೇ. ೧೪: ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಗ್ರಾಮಸ್ಥರ ಸಹಕಾರ ಪಡೆದು ಕ್ವಾರಂಟೈನ್ ತೆರೆಯುವಲ್ಲಿ ನೂತನ ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ.
ನಗರ ಪ್ರದೇಶದ ವ್ಯಾಪ್ತಿಯಲ್ಲಿ ಕ್ವಾರಂಟೈನ್ ತೆರೆಯಲು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ತಾಲೂಕಿನ ಹಂಚಿನ ಸಿದ್ದಾಪುರ ಮತ್ತು ದೇವರನರಸೀಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ತೆರೆಯಲು ಅಲ್ಲಿನ ಗ್ರಾಮಸ್ಥರೊಂದಿಗೆ ಶಾಂತಿ ಸಭೆ ನಡೆಸಿ ಕೊರೋನಾ ವೈರಸ್ ನಿರ್ಮೂಲನೆಗೆ ಕೈಗೊಂಡಿರುವ ಕ್ರಮ ಕುರಿತು ಮನವರಿಕೆ ಮಾಡಿಕೊಡುವ ಮೂಲಕ ಸಹಕರಿಸುವಂತೆ ಶಿವಕುಮಾರ್ ಮನವಿ ಮಾಡಿದರು.
ತಹಸೀಲ್ದಾರ್ ಮಾತಿಗೆ ಗ್ರಾಮಸ್ಥರು ಬೆಂಬಲ ವ್ಯಕ್ತಪಡಿಸಿದ್ದು, ಕಳೆದ ೩ ದಿನಗಳಿಂದ ಕ್ವಾರಂಟೈನ್ ಕಾರ್ಯಾಚರಣೆಯಲ್ಲಿದ್ದು, ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬಂದವರಿಗೆ ನಿಗಾದಲ್ಲಿರಿಸಲಾಗುತ್ತಿದೆ. ತುರ್ತು ಸಂದರ್ಭಕ್ಕೆ ಅಗತ್ಯ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಈ.ಓ ಮಂಜುನಾಥ್, ಗ್ರಾಮದ ಸ್ಥಳೀಯ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.   

ಅಧಿಕ ಮೊತ್ತದ ವಿದ್ಯುತ್ ಬಿಲ್ : ಮೆಸ್ಕಾಂ ಅಧಿಕಾರಿಗಳೊಂದಿಗೆ ಮಾಜಿ ಶಾಸಕ ಅಪ್ಪಾಜಿ ಮಾತುಕತೆ

ಗ್ರಾಹಕರಿಗೆ ಹೊರೆಯಾಗದಂತೆ ಕ್ರಮ ಕೈಗೊಳ್ಳಲು ಮನವಿ 

ಭದ್ರಾವತಿಯಲ್ಲಿ ಗುರುವಾರ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮೆಸ್ಕಾಂ ಕಛೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಭದ್ರಾವತಿ, ಮೇ. ೧೪: ಗ್ರಾಹಕರ ವಿದ್ಯುತ್ ಬಳಕೆಗೆ ಸಂಬಂಧಿಸಿದಂತೆ ಮೆಸ್ಕಾಂ ವತಿಯಿಂದ ನೀಡಲಾಗಿರುವ ಬಿಲ್‌ಗಳು ಅವೈಜ್ಞಾನಿಕವಾಗಿದ್ದು, ಪ್ರಸ್ತುತ ಎದುರಾಗಿರುವ ಸಂದಿಗ್ದ ಪರಿಸ್ಥಿತಿಯಲ್ಲಿ ಅಧಿಕ ಮೊತ್ತದ ಬಿಲ್ ಪಾವತಿಸುವುದು ಅಸಾಧ್ಯವಾಗಿದೆ. ಈ ಸಂಬಂಧ ಪರಿಶೀಲಿಸಿ ಗ್ರಾಹಕರಿಗೆ ಹೊರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಮೆಸ್ಕಾಂ ಅಧಿಕಾರಿಗಳಿಗೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮನವಿ ಮಾಡಿದರು.
ಗುರುವಾರ ಮೆಸ್ಕಾಂ ಕಛೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್‌ಡೌನ್ ಘೋಷಿಸಿದ ಪರಿಣಾಮ ಉದ್ಯೋಗವಿಲ್ಲದೆ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ವಿದ್ಯುತ್ ಬಳಕೆ ಬಿಲ್‌ಗಳನ್ನು ನೀಡಲಾಗಿದ್ದು, ಅವೈಜ್ಞಾನಿಕವಾಗಿ ಅಧಿಕ ಮೊತ್ತ ವಿಧಿಸಲಾಗಿದೆ. ಯೂನಿಟ್‌ಗೆ ನಿಗದಿತ ದರಕ್ಕಿಂತ ಹೆಚ್ಚಿನ ದರ ವಿಧಿಸಿರುವುದು ಸರಿಯಲ್ಲ.  ಇದರಿಂದಾಗಿ ಬಿಲ್ ಪಾವತಿಸುವುದು ಗ್ರಾಹಕರಿಗೆ ಕಷ್ಟವಾಗಿದೆ. ಯಾವುದೇ ರೀತಿ ಹೊರೆಯಾಗದಂತೆ ಬಿಲ್ ಪಾವತಿಸಲು ಅನುಕೂಲ ಕಲ್ಪಿಸಿಕೊಡಬೇಕೆಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯಪಾಲಕ ಇಂಜಿನಿಯರ್ ಮೋಹನ್‌ಕುಮಾರ್, ಇಲಾಖೆಯ ಮಾರ್ಗಸೂಚಿಯಂತೆ ಬಿಲ್ ನೀಡಲಾಗಿದೆ. ಗ್ರಾಹಕರಿಗೆ ಯಾವುದೇ ರೀತಿ ಅನುಮಾನ ಕಂಡು ಬಂದಲ್ಲಿ ಕಛೇರಿ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಗ್ರಾಹಕರಿಗೆ ಉಂಟಾಗಿರುವ ಗೊಂದಲ ಬಗೆಹರಿಸುವುದಾಗಿ ಭರವಸೆ ನೀಡಿದರು.
ಮೆಸ್ಕಾಂ ಅಧಿಕಾರಿ ರಾಮಚಂದ್ರ, ಹಿರಿಯ ಕಾರ್ಮಿಕ ಮುಖಂಡರಾದ ಎಸ್.ಎನ್ ಬಾಲಕೃಷ್ಣ, ನರಸಿಂಹಚಾರ್, ಡಿ.ಟಿ ಶ್ರೀಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.