Saturday, June 13, 2020

ಬಿಳಕಿ ಮಠದಲ್ಲಿ ೫೦ ಲಕ್ಷ ರು. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಶಾಖಾ ಮಠ ಭದ್ರಾವತಿ ತಾಲೂಕಿನ ಬಿಳಕಿ ಹಿರೇಮಠದಲ್ಲಿ ಮುಖ್ಯಮಂತ್ರಿಗಳ ಅನುದಾನದಲ್ಲಿ ಬಿಡುಗಡೆಯಾದ ೫೦ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಮುದಾಯ ಭವನಕ್ಕೆ ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್ ಗುದ್ದಲಿ ಪೂಜೆ ನೆರವೇರಿಸಿದರು. ಶ್ರೀ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. 
ಭದ್ರಾವತಿ, ಜೂ. ೧೩: ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಶಾಖಾ ಮಠ ತಾಲೂಕಿನ ಬಿಳಕಿ ಹಿರೇಮಠ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿಗಳ ಅನುದಾನದಲ್ಲಿ ಬಿಡುಗಡೆಯಾದ ೫೦ ಲಕ್ಷ ರು. ವೆಚ್ಚದಲ್ಲಿ ಮಠದಲ್ಲಿ ಸಮುದಾಯ ಭವನ ನಿರ್ಮಾಣಗೊಳ್ಳುತ್ತಿದೆ. 
ಸಮುದಾಯ ಭವನ ನಿರ್ಮಾಣಕ್ಕೆ ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್ ಗುದ್ದಲಿ ಪೂಜೆ ನೆರವೇರಿಸಿದರು. ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. 
ಶಿವಮೊಗ್ಗ ಬಸವೇಶ್ವರ ಸಹಕಾರ ಸಂಘದ ನಿದೆ೯ಶಕ ಬಿ.ಪಿ ಮರುಳೇಶ್,  ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಜಿತೇಂದ್ರ, ಸಿವಿಲ್ ಇಂಜಿನಿಯರ್ ಮಂಜುನಾಥ್, ಮಠದ ವ್ಯವಸ್ಥಾಪಕ ಚಿದಾನಂದ ಸ್ವಾಮಿ, ಬಿ.ಪಿ ಚಂದ್ರಶೇಖರಪ್ಪ, ಜಿ.ಎಸ್ ಸುರೇಶಯ್ಯ, ಎಚ್. ಮಂಜುನಾಥ್, ಆನಂದ ಸ್ವಾಮಿ, ಕೆ.ಆರ್ ಆನಂದ್, ಬಿ.ಎಂ. ರಮೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. 

ಬಿಎಸ್‌ಪಿ ಅಧ್ಯಕ್ಷರಾಗಿ ಬಿ.ಆರ್ ಸತೀಶ್

ಭದ್ರಾವತಿ, ಜೂ. ೧೩: ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ವಿಧಾನಸಭಾ ಕ್ಷೇತ್ರದ ನೂತನ ಪದಾಧಿಕಾರಿಗಳನ್ನು ಜಿಲ್ಲಾ ಸಮಿತಿ ಪುನರ್ ರಚಿಸಿದ್ದು, ಅಧ್ಯಕ್ಷರಾಗಿ ಬಿ.ಆರ್ ಸತೀಶ್ ನೇಮಕಗೊಂಡಿದ್ದಾರೆ.
ಸಂಯೋಜಕರಾಗಿ ವಿ. ರಾಜಶೇಖರ್, ಉಪಾಧ್ಯಕ್ಷರಾಗಿ ಸೋಮು, ಎಂ. ಶಿವಮೂರ್ತಿ, ಡಿ. ಮಹೇಶ್ವರನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ನಾಗಾನಾಯ್ಕ, ಕಾರ್ಯದರ್ಶಿಯಾಗಿ ಜಯರಾಜ್, ಖಜಾಂಚಿಯಾಗಿ ನಾಗರಾಜ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜೀವನ್‌ರಾವ್, ಸಿ. ಚಂದ್ರಪ್ಪ, ಕಾಡಪ್ಪ, ಮಹೇಶ್, ರಮೇಶ್, ಬಾಲಕಾಶಿ, ಶ್ರೀನಿವಾಸ್ ಮತ್ತು ಸಹೋದರತ್ವ ಸಮಿತಿ ಸಂಯೋಜಕರಾಗಿ ನಾದನ್ ಮತ್ತು ಸಹ ಸಂಯೋಜಕರಾಗಿ ಜಾವೇದ್ ಖಾನ್ ಹಾಗೂ ಎನ್. ಓಂಕಾರನಾಯ್ಕ ಅವರನ್ನು ನೇಮಕಗೊಳಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಎ.ಡಿ ಶಿವಪ್ಪ ತಿಳಿಸಿದ್ದಾರೆ.

Friday, June 12, 2020

ಆಶಾ ಕಾರ್ಯಕರ್ತೆಯರಿಗೆ ಬೂಸ್ಟರ್ ಕಿಟ್ ವಿತರಣೆ

ಭದ್ರಾವತಿಯಲ್ಲಿ ಕೋವಿಡ-೧೯ ಸಂಬಂಧ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಆಶಾ ಕಾರ್ಯಕರ್ತೆಯರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಬೂಸ್ಟರ್ ಕಿಟ್ ವಿತರಿಸಿದರು. 
ಭದ್ರಾವತಿ, ಜೂ. ೧೨:  ಕೋವಿಡ್-೧೯ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ತಾಲೂಕು ಆಯುಷ್ ಇಲಾಖೆಯಿಂದ ನೀಡಲಾದ ಇಮ್ಯುನಿಟಿ ಬೂಸ್ಟರ್ ಕಿಟ್ ವಿತರಿಸಿದರು. 
ತಮ್ಮ ಗೃಹ ಕಛೇರಿಯಲ್ಲಿ ಕಿಟ್ ವಿತರಿಸಿ ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ಸಲಹೆ ನೀಡಿದರು. ಆಶಾ ಕಾರ್ಯಕರ್ತೆಯರು, ಆಯುಷ ಇಲಾಖೆ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು. 

ಬಿಜೆಪಿ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ

ಭದ್ರಾವತಿ ಬಿಜೆಪಿ ಮಹಿಳಾ ಮೋರ್ಚಾ ನೂತನ ಅಧ್ಯಕ್ಷೆ ಕಲ್ಪನ
ಭದ್ರಾವತಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಜಯರಾಜ್ 
ಭದ್ರಾವತಿ, ಜೂ. ೧೨: ತಾಲೂಕಿನ ಬಿಜೆಪಿ ಮಂಡಲದ ವಿವಿಧ ಮೋರ್ಚಾಗಳಿಗೆ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನೇಮಕಗೊಂಡಿದ್ದಾರೆ. 
ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಕಲ್ಪನ, ಪ್ರಧಾನ ಕಾರ್ಯದರ್ಶಿಯಾಗಿ ಮಂಜುಳ, ಯುವ ಮೋರ್ಚಾ ಅಧ್ಯಕ್ಷರಾಗಿ ಎಂ. ವಿಜಯರಾಜ್, ಪ್ರಧಾನ ಕಾರ್ಯದರ್ಶಿಯಾಗಿ ನಕುಲ್ ರೇವಣಕರ್, ಓಬಿಸಿ ಮೋರ್ಚಾ ಅಧ್ಯಕ್ಷರಾಗಿ ಜೆ. ಸುಬ್ರಮಣಿ, ಆರ್.ಪಿ ವೆಂಕಟೇಶ್, ಎಸ್.ಸಿ ಮೋರ್ಚಾ ಅಧ್ಯಕ್ಷ ಗಣೇಶ್‌ರಾವ್, ಮುರುಳಿ, ರೈತ ಮೋರ್ಚಾ ಅಧ್ಯಕ್ಷರಾಗಿ ನಾಗರಾಜರಾವ್ ಅಂಬೋರೆ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಆರ್ ಮೋಹನ್‌ಕುಮಾರ್, ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಇಮ್ರಾನ್ ಆಲಿ, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಜಾಬೀರ್ ನೇಮಕಗೊಂಡಿದ್ದಾರೆಂದು ಪಕ್ಷದ ತಾಲೂಕು ಮಂಡಲದ ಅಧ್ಯಕ್ಷ ಎಂ. ಪ್ರಭಾಕರ್ ತಿಳಿಸಿದ್ದಾರೆ. 

ಕಂಟೈನ್‌ಮೆಂಟ್ ವಲಯಕ್ಕೆ ಜಿಲ್ಲಾಧಿಕಾರಿ ಭೇಟಿ : ಪರಿಶೀಲನೆ

ಭದ್ರಾವತಿಯಲ್ಲಿ ರಂಗಪ್ಪ ವೃತ್ತದಿಂದ ಹೊಳೆಹೊನ್ನೂರು ವೃತ್ತದ ವರೆಗೆ ಕಂಟೈನ್‌ಮೆಂಟ್ ವಲಯವೆಂದು ಘೋಷಿಸಲಾಗಿದ್ದು, ಶುಕ್ರವಾರ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ಭದ್ರಾವತಿ, ಜೂ. ೧೨: ಮಹಿಳೆಯೊಬ್ಬರಲ್ಲಿ ಗುರುವಾರ ಕೊರೋನಾ ವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ನಗರದ ರಂಗಪ್ಪ ವೃತ್ತದಿಂದ ಹೊಳೆಹೊನ್ನೂರು ವೃತ್ತದ ವರೆಗೆ ಕಂಟೈನ್‌ಮೆಂಟ್ ವಲಯವೆಂದು ಘೋಷಿಸಲಾಗಿದ್ದು, ಶುಕ್ರವಾರ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ವಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ವೈರಸ್ ಹರಡದಂತೆ ಕಟ್ಟೆಚ್ಚರ ವಹಿಸುವಂತೆ ಹಾಗೂ ನಿವಾಸಿಗಳಿಗೆ ದಿನ ನಿತ್ಯದ ಅಗತ್ಯ ವಸ್ತುಗಳನ್ನು ಕಲ್ಪಿಸಿಕೊಡುವಂತೆ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಸೂಚಿಸಿದರು. ಅಲ್ಲದೆ ಜನದಟ್ಟಣೆ ಅಧಿಕವಿರುವ ತಾಲೂಕು ಕಛೇರಿ, ನ್ಯಾಯಾಲಯ ಸಂಕೀರ್ಣ, ಜೈ ಭೀಮ ನಗರ, ಸಂತೆ ಮೈದಾನ ಭಾಗಗಳಲ್ಲಿ ಪರಿಶೀಲನೆ ನಡೆಸಿದರು.
ರಸ್ತೆಯ ಎರಡು ಕಡೆ ಬ್ಯಾರಿಗೇಡ್ ಅಳವಡಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ಭಾಗದಲ್ಲಿ ಒಟ್ಟು ೨೧ ಕುಟುಂಬಗಳಿದ್ದು, ಈ ಕುಟುಂಬಗಳ ಸದಸ್ಯರ ಮೊಬೈಲ್ ಸಂಖ್ಯೆ ಪಡೆಯಲಾಗಿದೆ. ನಗರಸಭೆ ಅಧಿಕಾರಿಗಳು ಈ ಕುಟುಂಬಗಳಿಗೆ ದಿನ ನಿತ್ಯದ ಅಗತ್ಯ ವಸ್ತುಗಳನ್ನು ಪೂರೈಸಲು ಕುಟುಂಬಗಳಿಗೆ ವಾಟ್ಸಪ್ ಸಂಖ್ಯೆ ನೀಡಿದ್ದು, ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಪೂರೈಸಲಿದ್ದಾರೆ. 
ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕ, ನಗರವೃತ್ತ ನಿರೀಕ್ಷಕರು, ನಗರಸಭೆ ಪರಿಸರ ಅಭಿಯಂತರ ರುದ್ರೇಗೌಡ, ಕಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ, ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Thursday, June 11, 2020

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವ ಸಿದ್ದತೆ : ಉಪಗ್ರಹ ಆಧಾರಿತ ತರಬೇತಿ

ವಿದ್ಯಾರ್ಥಿಗಳಲ್ಲಿ ಸುರಕ್ಷತೆ, ಆತ್ಮವಿಶ್ವಾಸ ಮೂಡಿಸಿ : ಉನ್ನತ ಅಧಿಕಾರಿಗಳಿಂದ ಸಲಹೆ 

ಭದ್ರಾವತಿಯಲ್ಲಿ ಗುರುವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕಛೇರಿಯಲ್ಲಿ ನಡೆಯಿತು. 
ಭದ್ರಾವತಿ, ಜೂ. ೧೧: ರಾಜ್ಯಾದ್ಯಂತ ಜೂ.೨೫ ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಕೈಗೊಳ್ಳಬೇಕಾಗಿರುವ ಅಗತ್ಯ ಕ್ರಮಗಳ ಕುರಿತು ಶಿಕ್ಷಣ ಇಲಾಖೆ ನಿರಂತರವಾಗಿ ಕಾರ್ಯ ಯೋಜನೆಯಲ್ಲಿ ತೊಡಗಿಸಿಕೊಂಡಿದೆ. ಈ ನಿಟ್ಟಿನಲ್ಲಿ ಗುರುವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕಛೇರಿಯಲ್ಲಿ ನಡೆಯಿತು. 
ತಾಲೂಕಿನ ೧೫ ಪರೀಕ್ಷಾ ಕೇಂದ್ರಗಳಿಗೆ ನಿಯೋಜನೆಗೊಂಡಿರುವ ಮುಖ್ಯ ಅಧೀಕ್ಷಕರನ್ನೊಳಗೊಂಡ ವಿವಿಧ ಹಂತದ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲಾಗಿರುವ ವೀಕ್ಷಕರು ಸೇರಿದಂತೆ ಸುಮಾರು ೫೦ ಮಂದಿ ಪಾಲ್ಗೊಂಡಿದ್ದು, ಇನ್ನೂ ಹೆಚ್ಚಿನವರು ಶಿವಮೊಗ್ಗ ಸಾರ್ವಜನಿಕ ಶಿಕ್ಷಣ ಇಲಾಖೆ ತರಬೇತಿ ಕೇಂದ್ರ(ಡಯಟ್)ದಲ್ಲಿ ಪಾಲ್ಗೊಂಡಿದ್ದರು. 
       ಪ್ರಮುಖವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಹಿಸಬೇಕಾದ ಸುರಕ್ಷತೆ ಮತ್ತು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವುದು. ಕೈಗೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮ ಕುರಿತು ಬೆಂಗಳೂರಿನ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕಾರಿಗಳು ಹಾಗೂ ಆರೋಗ್ಯ ನಿರ್ದೇಶನಾಲಯದ ಅಧಿಕಾರಿಗಳು ಮಾಹಿತಿ ನೀಡಿದರು. 
ತರಬೇತಿಯಲ್ಲಿ ಪಾಲ್ಗೊಂಡವರು ಮಾಹಿತಿಯನ್ನು ಶಾಲಾ ಹಂತಕ್ಕೆ ಕೊಂಡೊಯ್ದು ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ನೇರವಾಗಿ ಜಾಗೃತಿ ಮೂಡಿಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಕೈಗೊಳ್ಳಬೇಕಾಗಿದೆ. 
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಎ.ಜಿ ರಾಜಶೇಖರ್, ಶಿಕ್ಷಣ ಸಂಯೋಜಕ ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
ಜೂ.೨೦ರವರೆಗೆ ಶಾಲೆ ಪುನರ್ ಆರಂಭಿಸುವ ಕುರಿತ ಸಭೆ : 
ಈ ಹಿಂದೆ ಸರ್ಕಾರದ ಸೂಚನೆಯಂತೆ  ಶಾಲೆಗಳನ್ನು ಪುನರ್ ಆರಂಭಿಸಲು ಶಾಲಾ ಹಂತದಲ್ಲಿ ಶಾಲಾಭಿವೃದ್ಧಿ ಸಮಿತಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಅಭಿಪ್ರಾಯಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಜೂ.೧೦ ರಿಂದ ೧೨ರವರೆಗೆ ಸಭೆ ನಡೆಸಲು ತಿಳಿಸಲಾಗಿತ್ತು. ಇದೀಗ ಜೂ.೨೦ರವರೆಗೆ ವಿಸ್ತರಿಸಲಾಗಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಒಂದು ರೀತಿಯ ಮಾದರಿ ಹಾಗೂ ಖಾಸಗಿ ಶಾಲೆಗಳಿಗೆ ಮತ್ತೊಂದು ರೀತಿಯ ಮಾದರಿ ಸಿದ್ದಪಡಿಸಲಾಗಿದ್ದು, ಆಯಾ ಶಾಲೆಗಳು ನೇರವಾಗಿ ಸಭೆಯ ವರದಿಯನ್ನು ಶಾಲೆಯ ಲಾಗಿನ್ ಮೂಲಕ ಸ್ಯಾಟ್ಸ್ ತಂತ್ರಾಂಶದಲ್ಲಿ ಸಲ್ಲಿಸಬೇಕಾಗಿದೆ. ಉಳಿದಂತೆ ಸರ್ಕಾರದ ಮುಂದಿನ ಆದೇಶ ಬರುವವರೆಗೂ ಯಾವುದೇ ಕಾರಣಕ್ಕೂ ಶಾಲಾ ದಾಖಲಾತಿ ಪ್ರಕ್ರಿಯೆ ಆರಂಭಿಸುವಂತಿಲ್ಲ. ಈ ಕುರಿತು ಈಗಾಗಲೇ ಎಲ್ಲಾ ಶಾಲೆಗಳಿಗೂ ಎಚ್ಚರಿಸಲಾಗಿದೆ. 
ನೇರ ಪೋನ್ ಇನ್ ಕಾರ್ಯಕ್ರಮ: 
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರೊಂದಿಗೆ ಜೂ.೧೭ರಂದು ಮಧ್ಯಾಹ್ನ ೧೨ ಗಂಟೆಯಿಂದ ೧ ಗಂಟೆ ವರೆಗೆ ನೇರ ಪೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ. 
ಪರೀಕ್ಷೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಅಧಿಕಾರಿಗಳು ಉತ್ತರಿಸಲಿದ್ದಾರೆ. ಇದರ ಸದುಪಯೋಗಪಡೆದುಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೋರಿದ್ದಾರೆ.

ಉಕ್ಕಿನ ನಗರದ ಹೃದಯ ಭಾಗಕ್ಕೂ ವಕ್ಕರಿಸಿದ ಕೊರೋನಾ

ರಂಗಪ್ಪ ವೃತ್ತದಿಂದ ಹೊಳೆಹೊನ್ನೂರು ವೃತ್ತದವರೆಗೆ ಸೀಲ್ ಡೌನ್ 

ಭದ್ರಾವತಿಯಲ್ಲಿ ಗುರುವಾರ ಬೆಂಗಳೂರಿನ ಬಂದಿದ್ದ ಮಹಿಳೆಯೊಬ್ಬರಲ್ಲಿ ಕೊರೋನಾ ಪತ್ತೆಯಾದ ಹಿನ್ನಲೆಯಲ್ಲಿ ರಂಗಪ್ಪ ವೃತ್ತದಿಂದ ಹೊಳೆಹೊನ್ನೂರು ವೃತ್ತದ ವರೆಗೆ ಸೀಲ್ ಡೌನ್ ಜಾರಿಗೊಳಿಸಲಾಗಿದೆ. 
ಭದ್ರಾವತಿ, ಜೂ. ೧೧: ಜನದಟ್ಟಣೆ ಅಧಿಕವಿರುವ ನಗರದ ಹೃದಯ ಭಾಗದಲ್ಲಿ ಗುರುವಾರ ಮಹಿಳೆಯೊಬ್ಬರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಮಹಿಳೆ ವಾಸವಿದ್ದ ವ್ಯಾಪ್ತಿಯ ೧೦೦ ಮೀಟರ್ ವರೆಗೆ ಸೀಲ್ ಡೌನ್ ಜಾರಿಗೊಳಿಸಲಾಗಿದೆ. 
ನಗರದ ಚನ್ನಗಿರಿ ರಸ್ತೆಯ ಸತ್ಯ ಚಿತ್ರ ಮಂದಿರದ ಬಳಿ ಕುಟುಂಬ ವಾಸವಿದ್ದು, ಕಳೆದ ೪ ದಿನಗಳ ಹಿಂದೆ ಬೆಂಗಳೂರಿನಿಂದ ಬಂದಿದ್ದ ಮಹಿಳೆಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಪ್ರಯೋಗಾಲಯದಿಂದ ವರದಿ ಬಂದ ತಕ್ಷಣ ರಂಗಪ್ಪ ವೃತ್ತದಿಂದ ಹೊಳೆಹೊನ್ನೂರು ವೃತ್ತದ ವರೆಗೆ ಸೀಲ್ ಡೌನ್ ಜಾರಿಗೊಳಿಸಲಾಗಿದೆ. 
ರಸ್ತೆಯ ಎರಡು ಬದಿಯಲ್ಲೂ ಪೊಲೀಸರು ಬ್ಯಾರಿಗೇಡ್ ಅಳವಡಿಸಿದ್ದು, ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಶಿವಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ,  ನಗರಸಭೆ ಪೌರಾಯುಕ್ತ ಮನೋಹರ್, ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕ್ ಸೇರಿದಂತೆ ಇನ್ನಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಿಳೆ ವಾಸವಿದ್ದ ಸ್ಥಳದ ಸುತ್ತಮುತ್ತ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, ಸ್ಯಾನಿಟೈಸರ್ ಮಾಡಿಸಲಾಗಿದೆ. 
ಭದ್ರಾವತಿಯಲ್ಲಿ ಗುರುವಾರ ಬೆಂಗಳೂರಿನ ಬಂದಿದ್ದ ಮಹಿಳೆಯೊಬ್ಬರಲ್ಲಿ ಕೊರೋನಾ ಪತ್ತೆಯಾದ ಹಿನ್ನಲೆಯಲ್ಲಿ ಮಹಿಳೆ ವಾಸವಿದ್ದ ಸ್ಥಳದ ಸುತ್ತಮುತ್ತ ಪೌರಕಾರ್ಮಿಕರು ಸ್ವಚ್ಛತಾ ಕೈಗೊಂಡು ಸ್ಯಾನಿಟೈಸರ್ ಮಾಡಿದರು. 
ಜನದಟ್ಟಣೆ ಪ್ರದೇಶ : 
ಮಹಿಳೆ ವಾಸವಿದ್ದ ಸ್ಥಳ ಪ್ರಮುಖ ವಾಣಿಜ್ಯ ರಸ್ತೆಯಾಗಿದ್ದು, ಚಿತ್ರಮಂದಿರ, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ), ಉಪನೊಂದಾಣಿಕಾರಿಗಳ ಕಛೇರಿ, ಡಿ. ದೇವರಾಜ ಅರಸು ಹಿಂದುಳಿದ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳ ಕಛೇರಿ, ಕ್ಲಿನಿಕ್, ಹೋಟೆಲ್ ಸೇರಿದಂತೆ ಅಂಗಡಿಮುಂಗಟ್ಟುಗಳಿದ್ದು, ಸದಾ ಜನದಟ್ಟಣೆಯಿಂದ ಕೂಡಿದೆ. ಈ ಹಿನ್ನಲೆಯಲ್ಲಿ ಈ ಭಾಗದ ನಿವಾಸಿಗಳಲ್ಲಿ ಹೆಚ್ಚಿನ ಆತಂಕ ಮನೆ ಮಾಡಿದೆ. 
ತಹಸೀಲ್ದಾರ್ ಶಿವಕುಮಾರ್ ಪತ್ರಿಕೆಯೊಂದಿಗೆ ಮಾತನಾಡಿ, ಮಹಿಳೆ ಸೋಮವಾರ ಬೆಂಗಳೂರಿನಿಂದ ಬಂದಿದ್ದು, ಬಂದ ತಕ್ಷಣ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ಇದೀಗ ವರದಿ ಬಂದಿದ್ದು, ಕೊರೋನಾ ವೈರಸ್ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಮಹಿಳೆಯನ್ನು ಶಿವಮೊಗ್ಗ ಮೆಗ್ಗಾನ್ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಕ್ಷಣದಿಂದ ಜಾರಿ ಬರುವಂತೆ ಸೀಲ್‌ಡೌನ್ ಮಾಡಲಾಗಿದೆ. ಮಹಿಳೆ ಜೊತೆಯಲ್ಲಿ ವಾಸವಿದ್ದ ತಂದೆ-ತಾಯಿ ಇಬ್ಬರನ್ನು ಬೇರಡೆ ಪತ್ಯೇಕವಾಗಿ ಇರಿಸಲಾಗಿದೆ ಎಂದರು. 
ಪೌರಾಯುಕ್ತ ಮನೋಹರ್ ಮಾತನಾಡಿ, ಮಹಿಳೆಯೊಬ್ಬರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಆತಂಕಪಡಬಾರದು. ನಗರಸಭೆ ವತಿಯಿಂದ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಇನ್ನೂ ಹೆಚ್ಚಿನ ಎಚ್ಚರವಹಿಸಬೇಕೆಂದು ಮನವಿ ಮಾಡಿದರು.