Tuesday, June 23, 2020

ಜೂ.೨೪ರಂದು ಬೃಹತ್ ರಕ್ತದಾನ ಶಿಬಿರ

ಭದ್ರಾವತಿ, ಜೂ. ೨೩: ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಜೂ.೨೪ರಂದು ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೨ ಗಂಟೆವರೆಗೆ ಹಳೇನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ. 
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಕ್ತನಿಧಿ ಘಟಕ ಮೆಗ್ಗಾನ್ ಆಸ್ಪತ್ರೆ ಹಾಗೂ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಶಿಬಿರ ಆಯೋಜಿಸಲಾಗಿದ್ದು, ಹೆಚ್ಚಿನ ಮಾಹಿತಿಗೆ ಬಿ.ಕೆ ಮೋಹನ್, ಮೊ: ೯೪೪೭೩೯೦೭೨, ವಿಜಯ್, ಮೊ: ೭೬೭೬೭೦೯೪೪೫, ಸುಂದರ್ ಬಾಬು, ಮೊ: ೯೪೪೮೧೩೭೩೩೩ ಸಂಖ್ಯೆಗೆ ಕರೆ ಮಾಡಬಹುದಾಗಿದೆ. 

ಬಲವಂತದ ಸಾಲ ವಸೂಲಾತಿ ಕೈ ಬಿಡಿ : ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಮನವಿ

ಜೆಡಿಯು ಯುವ ಘಟಕ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಹೋರಾಟಕ್ಕೆ ಸ್ಪಂದನೆ 

ಭದ್ರಾವತಿಯಲ್ಲಿ ಮಂಗಳವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಅಧ್ಯಕ್ಷತೆಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳ ಸಭೆ ನಡೆಯಿತು. 
ಭದ್ರಾವತಿ, ಜೂ. ೨೩: ಕೊರೋನಾ ಸಂಕಷ್ಟದ ಹಿನ್ನಲೆಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ಯಾವುದೇ ಕಾರಣಕ್ಕೂ ಬಲವಂತವಾಗಿ ಸಾಲ ವಸೂಲಿ ಮಾಡಬಾರದು. ಅಲ್ಲದೆ ಯಾವುದೇ ರೀತಿ ಕಿರುಕುಳ ನೀಡದಂತೆ ಎಚ್ಚರ ವಹಿಸುವಂತೆ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮನವಿ ಮಾಡಿದರು. 
ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದ ಮಹಿಳೆಯರು ಅನುಭವಿಸುತ್ತಿರುವ ಶೋಷಣೆಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ಸಂಯುಕ್ತ ಜನತಾದಳ ರಾಜ್ಯ ಯುವ ಘಟಕದ ಉಪಾಧ್ಯಕ್ಷ ನಗರದ ಶಶಿಕುಮಾರ್ ಎಸ್. ಗೌಡ ಅವರ ಮನವಿಗೆ ಸ್ಪಂದಿಸಿ ಮಂಗಳವಾರ ತಹಸೀಲ್ದಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಲಿಸಿ ಮಾತನಾಡಿದರು. 
ಇದಕ್ಕೂ ಮೊದಲು ಮಾತನಾಡಿದ ಶಶಿಕುಮಾರ್ ಎಸ್. ಗೌಡ, ಮೈಕ್ರೋ ಪೈನಾನ್ಸ್ ಕಂಪನಿಗಳು ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿ ಮಹಿಳೆಯರಿಗೆ ಸಾಲ ನೀಡುತ್ತಿವೆ. ಸಾಲದ ಉದ್ದೇಶ ಹಾಗೂ ಸಾಧಕ-ಬಾಧಕಗಳನ್ನು ಅರಿಯದೆ ಮಹಿಳೆಯರಿಗೆ ಸಾಲ ನೀಡುತ್ತಿವೆ. ಒಂದು ಬಾರಿ ಒಂದು ಕಂಪನಿಯಿಂದ ಸಾಲ ಪಡೆದ ಮಹಿಳೆಗೆ ಸಾಲ ಮರುಪಾವತಿಯಾಗುವ ಮೊದಲೇ ಮತ್ತೊಂದು ಕಂಪನಿಯಿಂದ ಸಾಲ ನೀಡಲಾಗುತ್ತಿದೆ. ಇದರಿಂದಾಗಿ ಮಹಿಳೆಯರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಈ ನಡುವೆ ಮೈಕ್ರೋ ಫೈನಾನ್ಸ್ ಕಂಪನಿಯವರು ನಿಯಮ ಉಲ್ಲಂಘಿಸಿ ಸಾಲ ವಸೂಲಾತಿಯಲ್ಲಿ ತೊಡಗಿವೆ ಎಂದು ಆರೋಪಿಸಿದರು. 
ದೇಶದಲ್ಲಿ ಕೊರೋನಾ ವೈರಸ್ ಹಿನ್ನಲೆಯಲ್ಲಿ ಎಲ್ಲೆಡೆ ಆರ್ಥಿಕ ಸಂಕಷ್ಟ ಎದುರಾಗಿದೆ. ಸರ್ಕಾರ ಸಹ ಸಂಕಷ್ಟಕ್ಕೆ ಸ್ಪಂದಿಸಿ ನೆರವಿಗೆ ಮುಂದಾಗಿದೆ. ಆರ್‌ಬಿಐ ಬಲವಂತವಾಗಿ ಸಾಲ ವಸೂಲಾತಿ ಮಾಡದಿರುವಂತೆ ಆದೇಶಿಸಿದೆ. ಆದರೂ ಸಹ ಕಂಪನಿಯವರು ವಿನಾಕಾರಣ ನೋಟಿಸ್ ನೀಡುವುದು, ಹೊತ್ತಲ್ಲದ ಹೊತ್ತಿನಲ್ಲಿ ಮನೆ ಬಾಗಿಲಿಗೆ ಹೋಗಿ ವಸೂಲಾತಿ ಮಾಡುವುದು ಸೇರಿದಂತೆ ಇತ್ಯಾದಿ ಕಾರ್ಯಗಳಲ್ಲಿ ತೊಡಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. 
ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು ಮಾತನಾಡಿ, ಕಂಪನಿಗಳಿಂದ ಯಾವುದೇ ರೀತಿ ಕಿರುಕುಳ ನೀಡುತ್ತಿಲ್ಲ. ಯಾವುದೇ ನಿಯಮಗಳನ್ನು ಸಹ ಉಲ್ಲಂಘಿಸಿಲ್ಲ ಎಂದು ಸಮರ್ಥಿಸಿಕೊಂಡರು. ಆರ್‌ಬಿಐ ನಿರ್ದೇಶನದಂತೆ ಸಾಲ ವಸೂಲಾತಿ ಮಾಡಲಾಗುತ್ತಿದ್ದು, ಯಾರಿಂದಲೂ ಬಲವಂತವಾಗಿ ಸಾಲ ವಸೂಲಾತಿ ಮಾಡುತ್ತಿಲ್ಲ. ಮುಂದೆ ಸಹ ಇದೆ ರೀತಿ ನಡೆದುಕೊಳ್ಳುವುದಾಗಿ ಭರವಸೆ ನೀಡಿದರು.   
ಶಿರಸ್ತೆದಾರ್ ಮಲ್ಲಿಕಾರ್ಜುನಯ್ಯ, ಮಂಜಾನಾಯ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಕೆ. ಪ್ರಸಾದ್, ಮಂಜುನಾಥ್, ಯೋಗೇಶ್, ಕುಮಾರ್, ಕೃಷ್ಣ ಪ್ರಗತಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಕೋಡಾಕ್, ನಿರಂತರ, ಉಜ್ಜೀವನ ಸೇರಿದಂತೆ ಇನ್ನಿತರ ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು, ಜೆಡಿಯು ಮುಖಂಡ ಬಾಬು ದೀಪಕ್‌ಕುಮಾರ್ ಸಭೆಯಲ್ಲಿ ಭಾಗವಹಿಸಿದ್ದರು. 

ಜಮೀನಿನ ಅಕ್ರಮ ಕಲ್ಲುಕಂಬ, ಬೇಲಿ ತೆರವುಗೊಳಿಸಲು ಆಗ್ರಹಿಸಿ ಕುಟುಂಬ ಸಮೇತ ಪ್ರತಿಭಟನೆ

ಜಮೀನಿನ ಅಕ್ರಮ ಕಲ್ಲುಕಂಬ, ಬೇಲಿ ತೆರವುಗೊಳಿಸಲು ಆಗ್ರಹಿಸಿ ಕುಟುಂಬ ಸಮೇತ ಪ್ರತಿಭಟನೆ ಮಂಗಳವಾರ ಭದ್ರಾವತಿ ತಾಲೂಕಿನ ಗುಡ್ಡದ ನೇರಳೆಕೆರೆ ಗ್ರಾಮದ ಕಲಾಮನಿ ಕುಟುಂಬದವರು ಪ್ರತಿಭಟನೆ ನಡೆಸಿದರು. 
ಭದ್ರಾವತಿ, ಜೂ. ೨೩: ನ್ಯಾಯಾಲಯದ ಆದೇಶವಿದ್ದರೂ ಸಹ ಜಮೀನಿನಲ್ಲಿ ಅಕ್ರಮವಾಗಿ ಹಾಕಿರುವ ಬೇಲಿ ಮತ್ತು ಕಲ್ಲು ಕಂಬ ತೆಗೆದು ಯಥಾಸ್ಥಿತಿ ಮುಂದುವರೆಸುವಲ್ಲಿ ನಿರ್ಲಕ್ಷ್ಯತನ ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ತಾಲೂಕಿನ ಗುಡ್ಡದ ನೇರಳೆಕೆರೆ ಗ್ರಾಮದ ಕಲಾಮನಿ ಕುಟುಂಬದವರು ಪ್ರತಿಭಟನೆ ನಡೆಸಿದರು. 
ಸುಮಾರು ೫೫ ವರ್ಷಗಳಿಂದ ಪತಿ ಸುಬ್ಬರಾಜು ಹಾಗೂ ಅವರ ಅಣ್ಣ ಪೊನ್ನಯ್ಯರವರು ಜಮೀನು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಈ ಪೈಕಿ ಪತಿ ಸುಬ್ಬರಾಜುರವರ ಹೆಸರಿನಲ್ಲಿ ೩.೦೫ ಗುಂಟೆ ಜಮೀನು ಹಾಗೂ ಪೊನ್ನಯ್ಯ ಹೆಸರಿನಲ್ಲಿ ೩.೧೦ ಗುಂಟೆ ಜಮೀನು ಇದ್ದು, ೨೦೧೮ರಿಂದ ನನಗೆ ತಿಳಿಯದೆ ಪೋಡಿ ಮಾಡಿ ನನ್ನ ಜಮೀನನ್ನು ದುರಸ್ತಿ ಮಾಡಿ ಒತ್ತುವರಿಯಾಗಿದೆ ಎಂದು ಸುಮಾರು ೩೦೦ ಅಡಕೆ ಮರ ಒಳಗೊಂಡದಂತೆ ಜಮೀನಿಗೆ ಅಕ್ರಮವಾಗಿ ಕಲ್ಲು ಕಂಬದೊಂದಿಗೆ ಬೇಲಿ ಹಾಕಿಸಲಾಗಿದೆ. ಇದಕ್ಕೆ ಗ್ರಾಮ ಲೆಕ್ಕಾಧಿಕಾರಿ ಅನಿಲ್‌ಕುಮಾರ್, ರಾಜಸ್ವ ನಿರೀಕ್ಷಕ ಜಗದೀಶ್ ಹಾಗೂ ಸಿಬ್ಬಂದಿ ಪೂರ್ಣಿಮಾ ಕಾರಣಕರ್ತರಾಗಿದ್ದರೆಂದು ಆರೋಪಿಸಲಾಯಿತು. 
ಈ ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಹಳೇಯ ಆದೇಶ ರದ್ದು ಪಡಿಸಲಾಗಿದೆ. ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನ್ಯಾಯಾಲಯದ ಆದೇಶವಿದೆ. ಈ ಹಿನ್ನಲೆಯಲ್ಲಿ ಕಳೆದ ಒಂದು ವಾರದಿಂದ ಕಲ್ಲು ಕಂಬ, ಬೇಲಿ ತೆರವುಗೊಳಿಸುವಂತೆ ಮನವಿ ಮಾಡಿಕೊಂಡರೂ ಸಹ ಗ್ರಾಮ ಲೆಕ್ಕಾಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಹಿನ್ನಲೆ ತಕ್ಷಣ ತೆರವು ಕೈಗೊಂಡು ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಲಾಯಿತು. 

Monday, June 22, 2020

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಲಯನ್ಸ್ ಕ್ಲಬ್ ವತಿಯಿಂದ ಮಾಸ್ಕ್ ವಿತರಣೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜೂ.೨೫ರಿಂದ ಆರಂಭಗೊಳ್ಳಲಿದ್ದು, ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದೊಂದಿಗೆ ಭದ್ರಾವತಿ ಲಯನ್ಸ್ ಕ್ಲಬ್ ವತಿಯಿಂದ ಸುಮಾರು ಒಂದು ಸಾವಿರ ಮಾಸ್ಕ್‌ಗಳನ್ನು ಸೋಮವಾರ ವಿವಿಧ ಸರ್ಕಾರಿ ಶಾಲೆಗಳಿಗೆ ವಿತರಿಸಲಾಯಿತು. 
ಭದ್ರಾವತಿ, ಜೂ. ೨೨: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜೂ.೨೫ರಿಂದ ಆರಂಭಗೊಳ್ಳಲಿದ್ದು, ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದೊಂದಿಗೆ ನಗರದ ಲಯನ್ಸ್ ಕ್ಲಬ್ ವತಿಯಿಂದ ಸುಮಾರು ಒಂದು ಸಾವಿರ ಮಾಸ್ಕ್‌ಗಳನ್ನು ಸೋಮವಾರ ವಿವಿಧ ಸರ್ಕಾರಿ ಶಾಲೆಗಳಿಗೆ ವಿತರಿಸಲಾಯಿತು. 
ಲಯನ್ಸ್ ಕ್ಲಬ್ ಅಧ್ಯಕ್ಷ ಕುಮಾರಪ್ಪ ನೇತೃತ್ವದಲ್ಲಿ ನಡೆದ ಮಾಸ್ಕ್ ವಿತರಣೆ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎ.ಎನ್ ಕಾರ್ತಿಕ್, ಖಜಾಂಚಿ ಎಂ. ನಾಗರಾಜ ಶೇಟ್, ಎರಡನೇ ಉಪ ಜಿಲ್ಲಾ ಗವರ್ನರ್ ಕೆ.ಸಿ ವೀರಭದ್ರಪ್ಪ, ವಲಯ ಅಧ್ಯಕ್ಷ ಹೆಬ್ಬಂಡಿ ನಾಗರಾಜ್, ಕೆ.ವಿ ಚಂದ್ರಶೇಖರ್, ಪ್ರಹ್ಲಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

೪೦ ಲಕ್ಷ ರು. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಭದ್ರಾವತಿ ತಾಲೂಕಿನ ಕಾಗೆಕೋಡಮಗ್ಗಿ ಮತ್ತು ಬಾಬಳ್ಳಿ ಗ್ರಾಮಗಳಲ್ಲಿ ಸುಮಾರು ೪೦ ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು. 
ಭದ್ರಾವತಿ, ಜೂ. ೨೨: ತಾಲೂಕಿನ ಕಾಗೆಕೋಡಮಗ್ಗಿ ಮತ್ತು ಬಾಬಳ್ಳಿ ಗ್ರಾಮಗಳಲ್ಲಿ ಸುಮಾರು ೪೦ ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು. 
ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗಳು ಇದೀಗ ಪುನಃ ಪ್ರಗತಿಯಲ್ಲಿದ್ದು, ಈ ನಡುವೆ ಮಳೆಗಾಲ ಸಹ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಕಾಮಗಾರಿಗಳು ಕೈಗೊಳ್ಳಲು ಸಮಸ್ಯೆ ಎದುರಾಗಿದೆ. ಅಲ್ಲದೆ ಕಳೆದ ಸುಮಾರು ೪ ತಿಂಗಳಿನಿಂದ ದೇಶಾದ್ಯಂತ ಕೊರೋನಾ ವೈರಸ್ ಹಿನ್ನಲೆಯಲ್ಲಿ ಬಹುತೇಕ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಇದೀಗ ಕಾಮಗಾರಿ ಆರಂಭಗೊಂಡರೂ ಸಹ ಹಲವಾರು ಸಮಸ್ಯೆಗಳು ತಲೆತೋರುತ್ತಿವೆ. 
ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರರವರ ಸಂಸದರ ನಿಧಿಯಿಂದ ಬಿಡುಗಡೆಯಾದ ಅನುದಾನದಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ತಾಲೂಕು ಪಂಚಾಯಿತಿ ಸದಸ್ಯರಾದ ಧರ್ಮೇಗೌಡ, ಕೆ. ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಜರುಲ್ಲಾ ಖಾನ್, ತಾ.ಪಂ. ಮಾಜಿ ಸದಸ್ಯ ದಶರಥ ಗಿರಿ, ಮುಖಂಡರಾದ ಹನುಮಂತನಾಯ್ಕ್, ತೀರ್ಥಪ್ಪ, ನಟರಾಜ್, ಶಿವಮೂರ್ತಿ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಕೋವಿಡ್-೧೯ ಚಿಕಿತ್ಸೆಗೆ ೪ ಖಾಸಗಿ ಆಸ್ಪತ್ರೆಗಳಿಗೆ ಅನುಮೋದನೆ

ಜನವಸತಿ ಪ್ರದೇಶ, ಸ್ವಂತ ಕಟ್ಟಡವಿಲ್ಲ

ಭದ್ರಾವತಿ, ಜೂ. ೨೨: ಕೊರೋನಾ ವೈರಸ್ ಹಿನ್ನಲೆಯಲ್ಲಿ ಅನಾರೋಗ್ಯಕ್ಕೆ ಒಳಗಾಗದವರಿಗೆ ಚಿಕಿತ್ಸೆ ನೀಡಲು ಸರ್ಕಾರ ನಗರದ ೪ ಖಾಸಗಿ ಆಸ್ಪತ್ರೆಗಳಿಗೆ ಅನುಮೋದನೆ ನೀಡಿದೆ.
ಇದುವರೆಗೂ ಸರ್ಕಾರವೇ ಸರ್ಕಾರಿ ಕೋವಿಡ್-೧೯ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಪತ್ಯೇಕವಾಗಿ ಚಿಕಿತ್ಸೆ ನೀಡುತ್ತಿತ್ತು. ಆದರೆ ಇದೀಗ ಖಾಸಗಿ ಆಸ್ಪತ್ರೆಗಳಿಗೆ ಅನುಮೋದನೆ ನೀಡಿದ್ದು, ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಗಿದೆ. 
ಗಾಂಧಿನಗರದ ಭದ್ರಾ ನರ್ಸಿಂಗ್ ಹೋಂ, ದೂ. ೦೮೨೮೨-೨೬೬೪೮೩,  ತರೀಕೆರೆ ರಸ್ತೆಯಲ್ಲಿರುವ ನಯನ ಆಸ್ಪತ್ರೆ, ಮೊ. ೯೪೪೮೮೮೪೭೭೪, ಬಿ.ಎಚ್ ರಸ್ತೆ,  ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದ ಸಮೀಪದಲ್ಲಿರುವ ದುರ್ಗಾ ನರ್ಸಿಂಗ್ ಹೋಂ, ಮೊ. ೯೪೪೯೮೩೬೩೫೨ ಮತ್ತು ತಾಲೂಕು ಕಛೇರಿ ರಸ್ತೆಯಲ್ಲಿರುವ ನಿರ್ಮಲಾ ಆಸ್ಪತ್ರೆ, ಮೊ. ೯೪೪೯೫೫೧೨೭೫ ಕೋವಿಡ್-೧೯ ಚಿಕಿತ್ಸೆ ನೀಡಲು ಅನುಮೋದನೆ ನೀಡಲಾಗಿದೆ. 
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ತಹಸೀಲ್ದಾರ್ ಶಿವಕುಮಾರ್, ನಗರದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್-೧೯ ಚಿಕಿತ್ಸೆ ನೀಡಲು ಅನುಮೋದಿಸಿರುವ ಮಾಹಿತಿ ನಮ್ಮ ಗಮನಕ್ಕೆ ಬಂದಿಲ್ಲ. ಈ ಸಂಬಂಧ ಯಾವುದೇ ಸಭೆಯಲ್ಲೂ ಸಹ ಚರ್ಚೆಯಾಗಿಲ್ಲ. ಆಸ್ಪತ್ರೆಗಳಿಗೆ ಅನುಮೋದನೆ ನೀಡುವ ವಿಚಾರ ಆರೋಗ್ಯ ಇಲಾಖೆಗೆ ಸಂಬಂಧಿಸಿದೆ ಎಂದರು. 
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ ಮಾತನಾಡಿ, ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಸರ್ಕಾರ ಅನುಮೋದನೆ ನೀಡಿದೆ. ಆದರೆ ಯಾವ ಮಾನದಂಡಗಳ ಆಧಾರದ ಮೇಲೆ ನೀಡಿದೆ ಎಂಬ ಮಾಹಿತಿ ನಮಗೆ ಇಲ್ಲ. ಈ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಅವಕಾಶ ಕಲ್ಪಿಸಿಕೊಡಬೇಕೆಂಬ ಶಿಫಾರಸ್ಸು ನಾವು ಮಾಡಿಲ್ಲ.  ಹೆಚ್ಚಿನ ಮಾಹಿತಿ ಮೇಲಾಧಿಕಾರಿಗಳಿಂದ ಕೇಳಿ ತಿಳಿಯಬೇಕಾಗಿದೆ ಎಂದರು. 
ಖಾಸಗಿ ಆಸ್ಪತ್ರೆಗಳಿಂದ ಸಾರ್ವಜನಿಕರಿಗೆ ಅನುಕೂಲವಾಗುವುದೇ?
ಎಲ್ಲಾ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿರುವ ದರದಲ್ಲಿಯೇ ಚಿಕಿತ್ಸೆ ನೀಡಬೇಕು. ಯಾವುದೇ ಕಾರಣಕ್ಕೂ ಸುಲಿಗೆಗೆ ಮುಂದಾಗಬಾರದು. ಆದರೆ ಬಹುತೇಕ ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರಿಂದ ಹೆಚ್ಚಿನ ಹಣ ಪಡೆಯುತ್ತಿವೆ. ಪ್ರತಿಯೊಂದಕ್ಕೂ ಲೆಕ್ಕಾಚಾರ ಹಾಕುತ್ತಿವೆ. ಅಲ್ಲದೆ ನಗರದಲ್ಲಿ ಅನುಮೋದನೆ ನೀಡಲಾಗಿರುವ ೪ ಖಾಸಗಿ ಆಸ್ಪತ್ರೆಗಳು ಸಹ ಪತ್ಯೇಕ ಕಟ್ಟಡವನ್ನು ಹೊಂದಿಲ್ಲ. ಎಲ್ಲಾ ರೋಗಿಗಳಿಗೂ ಒಂದೇ ಕಟ್ಟಡದಲ್ಲಿ ಚಿಕಿತ್ಸೆ ನೀಡುತ್ತಿವೆ. ಕೋವಿಡ್-೧೯ ರೋಗಿಗಳಿಗೆ ಪ್ರತ್ಯೇಕ ಕಟ್ಟಡ ಬೇಕೇ ಬೇಕು. ಇಲ್ಲವಾದಲ್ಲಿ ಆಸ್ಪತ್ರೆಗೆ ಬರುವ ಇತರೆ ರೋಗಿಗಳಿಗೆ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಕೇವಲ ಕೋವಿಡ್-೧೯ ಚಿಕಿತ್ಸೆ ಮಾತ್ರ ನೀಡಬೇಕು. ಉಳಿದ ಕಾಯಿಲೆಗಳಿಗೆ ಬೇರೆಡೆಗೆ ಕಳುಹಿಸಿ ಕೊಡಬೇಕಾಗಿದೆ. ಅಲ್ಲದೆ ಈ ಆಸ್ಪತ್ರೆಗಳು ಜನವಸತಿ ಪ್ರದೇಶಗಳಲ್ಲಿದ್ದು, ಸಮುದಾಯಕ್ಕೆ ವೈರಸ್ ಹರಡುವ ಭೀತಿ ಎದುರಾಗಿದೆ. ಈ ಹಿನ್ನಲೆಯಲ್ಲಿ ಊರಿನ ಹೊರಭಾಗಗಳಲ್ಲಿ ಇರುವ ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್-೧೯ ಚಿಕಿತ್ಸೆಗೆ ಅನುಮೋದನೆ ನೀಡುವುದು ಸೂಕ್ತವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. 

Sunday, June 21, 2020

ಕಂಕಣ ಸೂರ್ಯ ಗ್ರಹಣದ ವೇಳೆ ಉಪಹಾರ ಸೇವನೆ : ಜಾಗೃತಿ ಮೂಡಿಸಿದ ಹವ್ಯಾಸಿ ಖಗೋಳ ಶಾಸ್ತ್ರಜ್ಞ ಹರೋನಹಳ್ಳಿ ಸ್ವಾಮಿ

ಭದ್ರಾವತಿಯಲ್ಲಿ ಹವ್ಯಾಸಿ ಖಗೋಳ ಶಾಸ್ತ್ರಜ್ಞ  ಹರೋನಹಳ್ಳಿ ಸ್ವಾಮಿ ಕಂಕಣ ಸೂರ್ಯ ಗ್ರಹಣದ ವೇಳೆ ಉಪಹಾರ ಸೇವನೆ ಮಾಡಿ ಜಾಗೃತಿ ಮೂಡಿಸಿದರು. 
ಭದ್ರಾವತಿ, ಜೂ. ೨೧: ಪ್ರಸ್ತುತ ವಿಜ್ಞಾನ ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಬೆಳವಣಿಗೆ ಸಾಧಿಸಿದ್ದರೂ ಸಹ ಗ್ರಹಣ ಕುರಿತು ಈಗಲೂ ಬಹುತೇಕ ಮಂದಿಯಲ್ಲಿ ಮೂಡನಂಬಿಕೆ ದೂರವಾಗಿಲ್ಲ. ಜನರಲ್ಲಿರುವ ಮೂಡನಂಬಿಕೆಯನ್ನು ದೂರಮಾಡಬೇಕೆಂದು ಹಲವಾರು ವರ್ಷಗಳಿಂದ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಗರದ ಹವ್ಯಾಸಿ ಖಗೋಳ ಶಾಸ್ತ್ರಜ್ಞ ಹರೋನಹಳ್ಳಿ ಸ್ವಾಮಿ ಭಾನುವಾರ ಸಹ ಕಂಕಣ ಸೂರ್ಯ ಗ್ರಹಣದ ಸಮಯದಲ್ಲಿ ಉಪಹಾರ ಸೇವಿಸುವ ಮೂಲಕ ಗಮನ ಸೆಳೆದರು. 
ಶಿಕ್ಷಕರಾಗಿರುವ ಹರೋನಹಳ್ಳಿ ಸ್ವಾಮಿ, ಪ್ರತಿ ಬಾರಿ ಗ್ರಹಣ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆಕಾಶ ಕಾಯಗಳ ವೀಕ್ಷಣೆಗೆ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಅವಕಾಶ ಕಲ್ಪಿಸಿಕೊಡುವ ಜೊತೆಗೆ ಗ್ರಹಣ ಕುರಿತು ಸಂಪೂರ್ಣ ಮಾಹಿತಿ ನೀಡುತ್ತಾ ಬಂದಿದ್ದಾರೆ. ಈ ಬಾರಿ ಕೊರೋನಾ ವೈರಸ್ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸಿದ್ದರೂಢನಗರದ ಶಂಕರ ಮಠದ ಬಳಿ ಇರುವ ನಿವಾಸದಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದು, ಕೆಲವರು ಸೌರ ಕನ್ನಡಕ ಬಳಸಿ ಗ್ರಹಣ ವೀಕ್ಷಿಸಿದರು. 
 ಭದ್ರಾವತಿಯಲ್ಲಿ ಹವ್ಯಾಸಿ ಖಗೋಳ ಶಾಸ್ತ್ರಜ್ಞ  ಹರೋನಹಳ್ಳಿ ಸ್ವಾಮಿ ಸಾರ್ವಜನಿಕರಿಗೆ ಭಾನುವಾರ ತಮ್ಮ ನಿವಾಸದಲ್ಲಿ ಕಂಕಣ ಸೂರ್ಯ ಗ್ರಹಣವನ್ನು ಸೌರ ಕನ್ನಡಕ ಬಳಸಿ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಟ್ಟರು.  
ಪತ್ರಿಕೆಯೊಂದಿಗೆ ಮಾತನಾಡಿದ ಹರೋನಹಳ್ಳಿ ಸ್ವಾಮಿ, ಸಾರ್ವಜನಿಕರು ಸೂರ್ಯಗ್ರಹಣ, ಚಂದ್ರಗ್ರಹಣಗಳ ಬಗ್ಗೆ ಭಯಪಡುವ ಅಗತ್ಯವಿಲ್ಲ. ಗ್ರಹಣ ಎಂಬುದು ಆಕಾಶದಲ್ಲಿ ಪ್ರಕೃತಿ ಸಹಜವಾಗಿ ನಡೆಯುವ ನೆರಳು ಬೆಳಕಿನ ಆಟವಷ್ಟೆ. ಆದರೆ ಅನೇಕ ಟಿ.ವಿ ಮಾಧ್ಯಮಗಳು ಗ್ರಹಣಕ್ಕೆ ಸಂಬಂಧಿಸದ ಆಧಾರರಹಿತ ಮಾಹಿತಿಗಳೊಂದಿಗೆ ಮತ್ತಷ್ಟು ಭಯಭೀತರನ್ನಾಗಿಸುತ್ತಿವೆ. ಸಾರ್ವಜನಿಕರು ಎಚ್ಚರಗೊಂಡು ಮೂಡನಂಬಿಕೆಗಳಿಂದ ಹೊರಬರಬೇಕು. ಗ್ರಹಣ ವೀಕ್ಷಣೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಪ್ರಕೃತಿಯ ಅದ್ಭುತ ವಿದ್ಯಾಮಾನವನ್ನು ಕಣ್ತುಂಬಿಕೊಳ್ಳಬೇಕೆಂದರು. 
ಯಾವುದೇ ಕಾರಣಕ್ಕೂ ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಾರದು. ವೈಜ್ಞಾನಿಕವಾಗಿ ರೂಪಿಸಲಾದ ಸೌರ ಕನ್ನಡಕ ಬಳಸಿ ವೀಕ್ಷಿಸಬೇಕು ಅಥವಾ ತೆಳುವಾದ ಕಾರ್ಡ್ ಬೋರ್ಡ್‌ನಲ್ಲಿ ಸಣ್ಣ ರಂಧ್ರಮಾಡಿ, ಕನ್ನಡಿಯನ್ನು ಮುಂಭಾಗದಲ್ಲಿಟ್ಟು ಸೂರ್ಯನ ಪ್ರತಿಬಿಂಬವನ್ನು ಗೋಡೆಯ ಮೇಲೆ ಬಿಟ್ಟು ನೋಡಬಹುದಾಗಿದೆ ಅಥವಾ ಟೆಲಿಸ್ಕೋಪ್‌ಗಳ ಮೂಲಕ ಸೂರ್ಯನ ಪರೋಕ್ಷ ಪ್ರತಿಬಿಂಬವನ್ನು ಪರದೆ ಮೇಲೆ ಬಿಟ್ಟು ವೀಕ್ಷಿಸಬಹುದು. ಈ ವಿಧಾನಗಳನ್ನು ಬಿಟ್ಟು ಬೇರೆ ಯಾವುದೇ ರೀತಿಯಲ್ಲೂ ನೇರವಾಗಿ ಗ್ರಹಣವನ್ನು ವೀಕ್ಷಿಸಬಾರದು ಎಂದರು.