Tuesday, June 30, 2020

ಉಕ್ಕಿನ ನಗರದಲ್ಲಿ ಕೊರೋನಾ ವೈರಸ್ ಸ್ಪೋಟ

೬ ವರ್ಷದ ಬಾಲಕ ಸೇರಿ ೭ ಮಂದಿಯಲ್ಲಿ ವೈರಸ್ ಪತ್ತೆ 

ಭದ್ರಾವತಿ ನಗರಸಭೆ ವ್ಯಾಪ್ತಿಯ ಗಾಂಧಿನಗರ ಹಾಗೂ ಹೊಸಮನೆ ಸುಭಾಷ್ ನಗರದಲ್ಲಿ ಒಟ್ಟು ೭ ಮಂದಿಯಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಮುನ್ನಚ್ಚರಿಕೆ ಕ್ರಮವಾಗಿ ವೈರಸ್ ಕಾಣಿಸಿಕೊಂಡಿರುವ ಸ್ಥಳದ ಸುತ್ತಮುತ್ತ ಕಂಟೈನ್‌ಮೆಂಟ್ ವಲಯದೊಂದಿಗೆ ಸೀಲ್ ಡೌನ್ ಮಾಡಲಾಗಿದೆ. 
ಭದ್ರಾವತಿ, ಜೂ. ೩೦: ಉಕ್ಕಿನ ನಗರದಲ್ಲಿ ದಿನ ದಿಂದ ದಿನಕ್ಕೆ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಂಗಳವಾರ ಒಂದೇ ದಿನ ೭ ಪ್ರಕರಣಗಳು ಧೃಢಪಟ್ಟಿವೆ. ಇದರಿಂದಾಗಿ ನಾಗರೀಕರು ಆತಂಕಕ್ಕೆ ಒಳಗಾಗುವಂತಾಗಿದೆ. 
ಗಾಂಧಿನಗರದ ಮೊದಲಿಯಾರ್ ಸಮುದಾಯ ಭವನ ಸಮೀಪದ ಒಂದೇ ಮನೆಯ ೬ ವರ್ಷದ ಬಾಲಕ ಸೇರಿದಂತೆ ೫ ಮಂದಿಯಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದೆ.  ೫೬ ವರ್ಷದ ವ್ಯಕ್ತಿ, ೪೪ ವರ್ಷದ ಆತನ ಹೆಂಡತಿ, ೨೬ ವರ್ಷದ ಪುತ್ರಿ, ೬ ವರ್ಷದ ಮೊಮ್ಮಗ  ಹಾಗೂ ೪೩ ವರ್ಷದ ನಾದಿನಿಯಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ. ಇತ್ತೀಚಿಗೆ ಜೂ.೧೯ರಂದು ಈ ಮನೆಯ ಮಹಿಳೆಯೊಬ್ಬರು ಮಗನಿಗೆ ಹೆಣ್ಣು ನೋಡಲು ಖಾಸಗಿ ವಾಹನದಲ್ಲಿ ಸುಮಾರು ೧೦ ಮಂದಿಯೊಂದಿಗೆ ತುಮಕೂರಿಗೆ ತೆರಳಿ, ಪುನಃ ಜೂ.೨೧ರಂದು ಹಿಂದಿರುಗಿದ್ದರು. 
ಕೆಲವು ದಿನಗಳ ಹಿಂದೆ ಹಳೇನಗರದ ಉಪ್ಪಾರ ಬೀದಿಯಲ್ಲಿ ವಾಸವಿರುವ ಚಾಲಕನಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿತ್ತು. ಇದೀಗ ಒಬ್ಬ ಮಹಿಳೆಯಿಂದ ಮನೆಯ ೪ ಮಂದಿಗೆ ವೈರಸ್ ಹರಡಿದೆ ಎನ್ನಲಾಗಿದೆ. ವಾಹನದಲ್ಲಿ ತೆರಳಿದ್ದ ೧೦ ಜನರನ್ನು ಸಹ ನಿಗಾದಲ್ಲಿ ಇರಿಸಲಾಗಿತ್ತು. ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಮಗನ ಪ್ರಯೋಗಾಲಯದ ವರದಿ ಇನ್ನೂ ಬಂದಿಲ್ಲ. 
ಹೊಸಮನೆ ಸುಭಾಷ್‌ನಗರದಲ್ಲಿ ೨ ಪ್ರಕರಣಗಳು ಪತ್ತೆಯಾಗಿದ್ದು, ಸೊಸೆಯ ಹೆರಿಗೆ ಹಿನ್ನಲೆಯಲ್ಲಿ ತಮಿಳುನಾಡಿಗೆ ತೆರಳಿದ್ದ ೫೬ ವರ್ಷದ ವ್ಯಕ್ತಿ ಹಾಗೂ ಆತನ ೪೮ ವರ್ಷದ ಹೆಂಡತಿಯಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದೆ. 

೩ ಕಡೆ ಸೀಲ್ ಡೌನ್: 
ಕೊರೋನಾ ವೈರಸ್ ದೃಢಪಟ್ಟ ಹಿನ್ನಲೆಯಲ್ಲಿ ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ ನೇತೃತ್ವದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸ್ ಸಿಬ್ಬಂದಿಗಳು ತೆರಳಿ ಸ್ಥಳ ಪರಿಶೀಲನೆ ನಡೆಸುವ ಜೊತೆಗೆ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದೊಂದಿಗೆ ಸ್ಯಾನಿಟೈಸರ್ ಕೈಗೊಂಡರು. ಉಳಿದಂತೆ ಮುನ್ನಚ್ಚರಿಕೆ ಕ್ರಮವಾಗಿ ಕೊರೋನಾ ವೈರಸ್ ಕಾಣಿಸಿಕೊಂಡಿರುವ ಗಾಂಧಿನಗರದ ಮೊದಲಿಯಾರ್ ಸಮುದಾಯ ಭವನ ಸಮೀಪದ ಮನೆಯ ೧೦೦ ಹಾಗೂ ೨೦೦ ಮೀಟರ್ ವಿಸ್ತೀರ್ಣದಲ್ಲಿ ಕಂಟೈನ್‌ಮೆಂಟ್ ವಲಯದೊಂದಿಗೆ ಸೀಲ್ ಡೌನ್  ಮಾಡಲಾಗಿದೆ. 
ಅಲ್ಲದೆ ಈ ಮನೆಯೊಂದಿಗೆ ಸಂಪರ್ಕದಲ್ಲಿದ್ದ ಮಹಿಳೆಯೊಬ್ಬರು ವಾಸಿಸುತ್ತಿದ್ದ ಹೊಸಮನೆ ಭೋವಿ ಕಾಲೋನಿ ಎಡಭಾಗದ ೭ನೇ ತಿರುವಿನ ೧೦೦ ಹಾಗೂ ೨೦೦ ಮೀಟರ್ ವಿಸ್ತೀರ್ಣದಲ್ಲಿ ಕಂಟೈನ್‌ಮೆಂಟ್ ವಲಯದೊಂದಿಗೆ ಸೀಲ್ ಡೌನ್ ಮಾಡಲಾಗಿದೆ. 
ಹೊಸಮನೆ ಸುಭಾಷ್‌ನಗರದ ೨ನೇ ತಿರುವಿನಲ್ಲಿ ವಾಸಿಸುತ್ತಿದ್ದ ದಂಪತಿಯಲ್ಲಿ ಕೊರೋನಾ ವೈರಸ್ ದೃಢಪಟ್ಟಿರುವ ಹಿನ್ನಲೆಯಲ್ಲಿ ಈ ಮನೆಯ ೧೦೦ ಹಾಗೂ ೨೦೦ ಮೀಟರ್ ವಿಸ್ತೀರ್ಣದಲ್ಲಿ ಕಂಟೈನ್‌ಮೆಂಟ್ ವಲಯದೊಂದಿಗೆ ಸೀಲ್ ಡೌನ್ ಮಾಡಲಾಗಿದೆ. ಒಟ್ಟು ನಗರದಲ್ಲಿ ೩ ಭಾಗದಲ್ಲಿ ಸೀಲ್ ಡೌನ್ ಮಾಡಲಾಗಿದ್ದು, ನಗರದ ನಾಗರೀಕರಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿದೆ. 

Monday, June 29, 2020

ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳ ಸೇವೆಗೆ ಪ್ರಶಂಸೆ, ಅಭಿನಂದನೆ

ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರನ್ನು ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಅಭಿನಂದಿಲಾಯಿತು. 
ಭದ್ರಾವತಿ, ಜೂ. ೨೯: ಕೊರೋನಾ ವೈರಸ್ ಪರಿಣಾಮ ಪ್ರಸ್ತುತ ಎದುರಾಗಿರುವ ಸಂಕಷ್ಟದ ಪರಿಸ್ಥಿತಿಯಲ್ಲೂ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಸೋಮವಾರ ಪ್ರಶಂಸೆ ವ್ಯಕ್ತಪಡಿಸಲಾಯಿತು. 
ತಾಲೂಕು ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಜೊತೆಗೆ, ಇತ್ತೀಚೆಗೆ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ರಕ್ತದಾನ ಶಿಬಿರ ಯಶಸ್ವಿಯಾಗಲು ಕಾರಣಕರ್ತರಾದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರನ್ನು ಅಭಿನಂದಿಸಲಾಯಿತು. 
ಹಿರಿಯ ವೈದ್ಯ ಡಾ. ರವೀಂದ್ರನಾಥ ಕೋಠಿ, ತಮಿಳು ಸಮಾಜದ ಅಧ್ಯಕ್ಷ ಸುರೇಶ್‌ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಅಧ್ಯಕ್ಷ ನೀಲೇಶ್‌ರಾಜ್, ರವೀಂದ್ರಕುಮಾರ್, ಆರೋಗ್ಯ ರಕ್ಷಾ ಸಮಿತಿಯ ಸುಂದರ್ ಬಾಬು, ಕೆ.ಎನ್ ನಾಗೇಶ್ ಹಾಗೂ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗದವರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಶಾಲಾ ಮಕ್ಕಳಿಗೆ ನೀಡಬೇಕಾದ ಅಕ್ಕಿ, ಬೇಳೆ ವಿತರಣೆಯಲ್ಲಿ ವಂಚನೆ

ಎಎಪಿ ವತಿಯಿಂದ ಆಕ್ರೋಶ : ತಪ್ಪತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ 

 ಸರ್ಕಾರಿ ಶಾಲಾ ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟದ ಬದಲು ವಿತರಿಸಲಾಗುತ್ತಿರುವ ಅಕ್ಕಿ, ಬೇಳೆ ವಿತರಣೆಯಲ್ಲಿ ವಂಚನೆ ನಡೆದಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ಸೋಮವಾರ ಆಮ್ ಆದ್ಮಿ ಪಾರ್ಟಿ ವತಿಯಿಂದ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಎ.ಜಿ ರಾಜಶೇಖರ್‌ಗೆ ಮನವಿ ಸಲ್ಲಿಸಲಾಯಿತು. 

ಭದ್ರಾವತಿ, ಜೂ. ೨೯: ಕಳೆದ ಸುಮಾರು ೪ ತಿಂಗಳಿನಿಂದ ವಿಶ್ವದೆಲ್ಲೆಡೆ ಕೊರೋನಾ ವೈರಸ್ ವ್ಯಾಪಕವಾಗಿ ಹರಡುವ ಜೊತೆಗೆ ಲಾಕ್‌ಡೌನ್ ಪರಿಣಾಮ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ಸಂಕಷ್ಟಕ್ಕೆ ಒಳಗಾಗದವರ ನೆರವಿಗೆ ಸರ್ಕಾರ, ಸರ್ಕಾರೇತರ ಸಂಸ್ಥೆಗಳು, ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ದಾನಿಗಳು ಮುಂದಾಗುತ್ತಿದ್ದಾರೆ. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಬಡ ಮಕ್ಕಳಿಗೆ ತಲುಪಬೇಕಾದ ಆಹಾರ ದಿನಸಿ ಸಾಮಗ್ರಿಗಳನ್ನು ಸಮರ್ಪಕವಾಗಿ ವಿತರಿಸದೆ ವಂಚಿಸುತ್ತಿರುವುದು ನಾಚಿಗೇಡಿನ ಸಂಗತಿಯಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. 
ಅವರು ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಪಕ್ಷದ ಮುಖಂಡರೊಂದಿಗೆ ತೆರಳಿ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾದಿಕಾರಿ ಎ.ಜಿ ರಾಜಶೇಖರ್‌ಗೆ ಮನವಿ ಸಲ್ಲಿಸಿದರು. 
ಸರ್ಕಾರ ಶಾಲಾ ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆಯಡಿ ಮಧ್ಯಾಹ್ನ ಬಿಸಿಯೂಟ ನೀಡುತ್ತಿದ್ದು, ಕೊರೋನಾ ವೈರಸ್ ಪರಿಣಾಮ ಲಾಕ್‌ಡೌನ್ ಜಾರಿಗೆ ಬಂದ ಹಿನ್ನಲೆಯಲ್ಲಿ ಶಾಲೆಗಳಿಗೆ ರಜಾ ಘೋಷಿಸಲಾಗಿದೆ. ಈ ಹಿನ್ನಲೆಯಲ್ಲಿ ಮಕ್ಕಳಿಗೆ ಊಟದ ಬದಲು ಪ್ರತಿ ತಿಂಗಳು ೨ ಕೆ.ಜಿ ಅಕ್ಕಿ ಹಾಗೂ ಬೇಳೆ ವಿತರಿಸಲಾಗುತ್ತಿದೆ. ಆಯಾ ಶಾಲೆಗಳು ಎಲ್ಲಾ ಮಕ್ಕಳಿಗೂ ವಿತರಿಸಲಾಗಿದೆ ಎಂದು ಸುಳ್ಳು ವರದಿಯನ್ನು ಮೇಲಾಧಿಕಾರಿಗಳಿಗೆ ನೀಡುತ್ತಿವೆ. ಆದರೆ ಶೇ.೪೦ರಷ್ಟು ಮಕ್ಕಳಿಗಳಿಗೆ ತಲುಪುತ್ತಿಲ್ಲ. ಈ ಸಂಬಂಧ ಪೋಷಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನಲೆಯಲ್ಲಿ ತಕ್ಷಣ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. 
ಪಕ್ಷದ ಪ್ರಮುಖರಾದ ಪರಮೇಶ್ವರಚಾರ್, ಇಬ್ರಾಹಿಂ ಖಾನ್, ಮುಳ್ಕೆರೆ ಲೋಕೇಶ್ ಹಾಗೂ  ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕಾಂತ ದಿನೇಶ್ ಸೇರಿದಂತೆ ಮಹಿಳಾ ಪ್ರಮುಖರು ಉಪಸ್ಥಿತರಿದ್ದರು. 

ಕೆರೆಗಳ ಅಭಿವೃದ್ಧಿಗೆ ಮುಂದಾದ ನಗರಸಭೆ ಆಡಳಿತ : ಪೌರಾಯುಕ್ತರ ಕಾರ್ಯಕ್ಕೆ ಮೆಚ್ಚುಗೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸಬುಳ್ಳಾಪುರ ಸರ್ವೆ ನಂ.೭೨ರ ಸರ್ಕಾರಿ ಚಿಕ್ಕಿಯ್ಯನ ಕೆರೆಯನ್ನು ಅಭಿವೃದ್ಧಿಗೊಳಿಸುವ ಸಂಬಂಧ ನಗರಸಭೆ ವತಿಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿರುವುದು. 

ಭದ್ರಾವತಿ, ಜೂ. ೨೯: ಬಹಳ ವರ್ಷಗಳಿಂದ ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳು ಅಭಿವೃದ್ಧಿ ಕಾಣದೆ ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಹಂತಕ್ಕೆ ತಲುಪಿವೆ. ಈ ನಡುವೆ ಇದೀಗ ಈ ಕೆರೆಗಳ ಅಭಿವೃದ್ಧಿಗೆ ನಗರಸಭೆ ಆಡಳಿತ ಮುಂದಾಗಿದೆ. 
ಪೌರಾಯುಕ್ತ ಮನೋಹರ್ ಕೆರೆಗಳ ಅಭಿವೃದ್ಧಿಗೆ ಇಚ್ಛಾಶಕ್ತಿ ಹೊಂದಿದ್ದು, ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ತಾಲೂಕು ಆಡಳಿತದ ನೆರವಿನೊಂದಿಗೆ ಬೌಂಡರಿ ಗುರುತಿಸಿ ಸ್ವಚ್ಛತಾ ಕಾರ್ಯ ನಡೆಸಿ ಅಭಿವೃದ್ದಿಗೆ ಸಂಬಂಧಪಟ್ಟಂತೆ ಯೋಜನಾ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. 
ಈ ಹಿನ್ನಲೆಯಲ್ಲಿ ಇದೀಗ ನಗರದ ಹೊಸಬುಳ್ಳಾಪುರ ಸರ್ವೆ ನಂ.೭೨ರ ಸರ್ಕಾರಿ ಚಿಕ್ಕಯ್ಯನ ಕೆರೆಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸುಮಾರು ೨೫ ವರ್ಷಗಳಿಂದ ಯಾವುದೇ ರೀತಿ ಅಭಿವೃದ್ಧಿ ಕಾಣದ ಕೆರೆಯನ್ನು ಜೆಸಿಬಿ ಯಂತ್ರ ಬಳಸಿ  ಸ್ವಚ್ಛತೆ ನಡೆಸಲಾಯಿತು. ಪರಿಸರ ಅಭಿಯಂತರ ರುದ್ರೇಗೌಡ, ಇಂಜಿನಿಯರ್ ಎಸ್.ಆರ್ ಸತೀಶ್, ಸ್ಥಳೀಯ ರೈತ ಮುಖಂಡ ಪ್ರಸನ್ನ ಹಾಗೂ ಇನ್ನಿತರರು ಉಪಸ್ಥಿತರಿದ್ದರು. 
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಪೌರಾಯುಕ್ತ ಮನೋಹರ್, ಎಲ್ಲಾ ಕೆರೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಜೊತೆಗೆ ದನಗಾಹಿಗಳಿಗೆ ಹಾಗೂ ರೈತರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು. ಈಗಾಗಲೇ ಈ ಸಂಬಂಧ ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಶೀಘ್ರದಲ್ಲಿಯೇ ಯೋಜನಾ ವರದಿ ಸಿದ್ದಪಡಿಸಲಾಗುವುದು ಎಂದರು. 
ಹೋರಾಟಕ್ಕೆ ಸಂದ ಫಲ: 
ತಾಲೂಕಿನಲ್ಲಿ ಕೆರೆಗಳ ಅಭಿವೃದ್ಧಿಗೆ ಸಂಬಂಧಪಟ್ಟದಂತೆ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ನಗರದ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ಪೌರಾಯುಕ್ತರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ, ಟ್ರಸ್ಟ್ ಛೇರ‍್ಮನ್ ಆರ್. ವೇಣುಗೋಪಾಲ್ ಪೌರಾಯುಕ್ತರು ದಿಟ್ಟ ಕ್ರಮ ತೆಗೆದುಕೊಂಡು ತಾಲೂಕು ಆಡಳಿತದ ನೆರವಿನೊಂದಿಗೆ ಬೌಂಡರಿ ನಿಗದಿಪಡಿಸುವ ಹಾಗೂ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿರುವುದು ಇದುವರೆಗೂ ನಡೆಸಿರುವ ಹೋರಾಟಕ್ಕೆ ಸಂದ ಫಲವಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಕೆರೆಗಳನ್ನು ಇದೆ ರೀತಿ ಅಭಿವೃದ್ಧಿಗೊಳಿಸಲು ತಾಲೂಕು ಆಡಳಿತ ಮುಂದಾಬೇಕೆಂದರು. 
ಪ್ರಮುಖರಾದ ರಮಾವೆಂಕಟೇಶ್, ಶೈಲಜಾ ರಾಮಕೃಷ್ಣ, ಆರ್. ಮುಕುಂದಯ್ಯ, ಗ್ಸೇವಿಯರ್, ಭವಾನಿಶಂಕರ್ ಸೇರಿದಂತೆ ಇನ್ನಿತರರು ಪೌರಾಯುಕ್ತರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ನಟರಾಜ್ ನಿಧನ

ನಟರಾಜ್ 
ಭದ್ರಾವತಿ, ಜೂ. ೨೯: ನಗರದ ಜನ್ನಾಪುರ ಲಿಂಗಾಯಿತರ ಬೀದಿ ನಿವಾಸಿ, ಹಳೇನಗರದ ಟಿಎಂಎಇಎಸ್ ಕೈಗಾರಿಕಾ ತರಬೇತಿ ಕೇಂದ್ರದ ಕಿರಿಯ ತರಬೇತಿ ಅಧಿಕಾರಿ ಎಂ. ನಟರಾಜ್(೫೪) ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು.
  ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನ ವನದಲ್ಲಿ ವಾಯು ವಿಹಾರಕ್ಕೆ ತೆರಳಿದ್ದಾಗ ಹೃದಯಾಘಾತ ಸಂಭವಿಸಿದ್ದು, ಪತ್ನಿ ಹಾಗೂ ಸಹೋದರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ಐಟಿಐ ಪ್ರಾಂಶುಪಾಲ ದಾನಪ್ಪ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ನಗರದ ಇನ್ನಿತರರು ಗಣ್ಯರು ಸಂತಾಪ ಸೂಚಿಸಿದ್ದಾರೆ. 

Sunday, June 28, 2020

ವೈದ್ಯರು, ಸಿಬ್ಬಂದಿಗಳಿಗೆ ಅಭಿನಂದನಾ ಸಮಾರಂಭ

ಭದ್ರಾವತಿ, ಜೂ. ೨೮: ಕೊರೋನಾ ವೈರಸ್ ಪರಿಣಾಮ ಪ್ರಸ್ತುತ ಎದುರಾಗಿರುವ ಸಂಕಷ್ಟದ ಪರಿಸ್ಥಿತಿಯಲ್ಲೂ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಜೂ.೨೯ರಂದು ಮಧ್ಯಾಹ್ನ ೩.೩೦ಕ್ಕೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. 
ತಾಲೂಕು ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಳೆದ ಕೆಲವು ದಿನಗಳ ಹಿಂದೆ ನಗರದ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರ ಯಶಸ್ವಿಯಾದ ಹಿನ್ನಲೆಯಲ್ಲಿ ಕಾರಣಕರ್ತರಾದವರಿಗೂ ಸಹ ಅಭಿನಂದನೆ ನಡೆಯಲಿದ್ದು, ಸಮಾರಂಭ ಯಶಸ್ವಿಗೊಳ್ಳುವಂತೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಓ ಮಲ್ಲಪ್ಪ ಕೋರಿದ್ದಾರೆ. 

ರೋಟರಿ ಕ್ಲಬ್ ವತಿಯಿಂದ ಸಂಚಾರಿ ಸೂಚಕ, ನಾಮಫಲಕ ವಿತರಣೆ

ಭದ್ರಾವತಿಯಲ್ಲಿ ರೋಟರಿ ಕ್ಲಬ್ ವತಿಯಿಂದ ಸಂಚಾರಿ ಸೂಚಕ ಹಾಗೂ ನಾಮಫಲಕಗಳನ್ನು ನಗರದ ರಂಗಪ್ಪ ವೃತ್ತದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು. 
ಭದ್ರಾವತಿ, ಜೂ. ೨೮: ಕೊರೋನಾ ವೈರಸ್ ಸಂಕಷ್ಟಗಳಿಗೆ ಸ್ಪಂದಿಸುವ ಜೊತೆಗೆ ಸೇವಾ ಕಾರ್ಯಗಳನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ರೋಟರಿ ಕ್ಲಬ್ ಈ ಬಾರಿ ನಗರದ ವಿವಿಧೆಡೆ ಸಂಚಾರಿ ಸೂಚಕ ಹಾಗೂ ನಾಮಫಲಕಗಳನ್ನು ಕೊಡುಗೆಯಾಗಿ ನೀಡಿದೆ. 
ಜಿಲ್ಲಾ ಗವರ್ನರ್ ಬಿ.ಎನ್ ರಮೇಶ್‌ರವರು ಕ್ಲಬ್‌ಗೆ ಅಧಿಕೃತ ಭೇಟಿ ನೀಡಿದ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರಿಗೆ ನೆರವಾಗುವ ಉದ್ದೇಶದೊಂದಿಗೆ ಸಂಚಾರಿ ಸೂಚಕ ಹಾಗೂ ನಾಮಫಲಕಗಳನ್ನು ನಗರದ ರಂಗಪ್ಪ ವೃತ್ತದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು. 
  ತಾಲೂಕಿನ ಗ್ರಾಮೀಣಾ ಭಾಗದ ಮಕ್ಕಳ ನೆರವಿಗೆ ಮುಂದಾಗುವ ಉದ್ದೇಶದೊಂದಿಗೆ ಕೊಮಾರನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಕ್ಲಬ್ ವತಿಯಿಂದ ಅಗತ್ಯವಿರುವ ಅಲ್ಮೇರಾ  ಕೊಡುಗೆಯಾಗಿ ನೀಡಲಾಯಿತು. 
ಸಹಾಯಕ ಜಿಲ್ಲಾ ಗವರ್ನರ್ ಮುರುಳಿ, ಕ್ಲಬ್ ಅಧ್ಯಕ್ಷ ತೀರ್ಥಯ್ಯ, ಕಾರ್ಯದರ್ಶಿ ಅಡವೀಶಯ್ಯ,  ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ, ಕ್ಲಬ್‌ನ ಪ್ರಮುಖವಾರ ಕೆ. ನಾಗರಾಜ್, ಕೂಡ್ಲಿಗೆರೆ ಹಾಲೇಶ್, ಡಿ. ಪ್ರಭಾಕರ ಬೀರಯ್ಯ, ಸುಂದರ್ ಬಾಬು, ಪಿ.ಸಿ ಜೈನ್, ರಾಘವೇಂದ್ರ ಉಪಾಧ್ಯಾಯ, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.