ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸಬುಳ್ಳಾಪುರ ಸರ್ವೆ ನಂ.೭೨ರ ಸರ್ಕಾರಿ ಚಿಕ್ಕಿಯ್ಯನ ಕೆರೆಯನ್ನು ಅಭಿವೃದ್ಧಿಗೊಳಿಸುವ ಸಂಬಂಧ ನಗರಸಭೆ ವತಿಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿರುವುದು.
ಭದ್ರಾವತಿ, ಜೂ. ೨೯: ಬಹಳ ವರ್ಷಗಳಿಂದ ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳು ಅಭಿವೃದ್ಧಿ ಕಾಣದೆ ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಹಂತಕ್ಕೆ ತಲುಪಿವೆ. ಈ ನಡುವೆ ಇದೀಗ ಈ ಕೆರೆಗಳ ಅಭಿವೃದ್ಧಿಗೆ ನಗರಸಭೆ ಆಡಳಿತ ಮುಂದಾಗಿದೆ.
ಪೌರಾಯುಕ್ತ ಮನೋಹರ್ ಕೆರೆಗಳ ಅಭಿವೃದ್ಧಿಗೆ ಇಚ್ಛಾಶಕ್ತಿ ಹೊಂದಿದ್ದು, ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ತಾಲೂಕು ಆಡಳಿತದ ನೆರವಿನೊಂದಿಗೆ ಬೌಂಡರಿ ಗುರುತಿಸಿ ಸ್ವಚ್ಛತಾ ಕಾರ್ಯ ನಡೆಸಿ ಅಭಿವೃದ್ದಿಗೆ ಸಂಬಂಧಪಟ್ಟಂತೆ ಯೋಜನಾ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.
ಈ ಹಿನ್ನಲೆಯಲ್ಲಿ ಇದೀಗ ನಗರದ ಹೊಸಬುಳ್ಳಾಪುರ ಸರ್ವೆ ನಂ.೭೨ರ ಸರ್ಕಾರಿ ಚಿಕ್ಕಯ್ಯನ ಕೆರೆಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸುಮಾರು ೨೫ ವರ್ಷಗಳಿಂದ ಯಾವುದೇ ರೀತಿ ಅಭಿವೃದ್ಧಿ ಕಾಣದ ಕೆರೆಯನ್ನು ಜೆಸಿಬಿ ಯಂತ್ರ ಬಳಸಿ ಸ್ವಚ್ಛತೆ ನಡೆಸಲಾಯಿತು. ಪರಿಸರ ಅಭಿಯಂತರ ರುದ್ರೇಗೌಡ, ಇಂಜಿನಿಯರ್ ಎಸ್.ಆರ್ ಸತೀಶ್, ಸ್ಥಳೀಯ ರೈತ ಮುಖಂಡ ಪ್ರಸನ್ನ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಪೌರಾಯುಕ್ತ ಮನೋಹರ್, ಎಲ್ಲಾ ಕೆರೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಜೊತೆಗೆ ದನಗಾಹಿಗಳಿಗೆ ಹಾಗೂ ರೈತರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು. ಈಗಾಗಲೇ ಈ ಸಂಬಂಧ ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಶೀಘ್ರದಲ್ಲಿಯೇ ಯೋಜನಾ ವರದಿ ಸಿದ್ದಪಡಿಸಲಾಗುವುದು ಎಂದರು.
ಹೋರಾಟಕ್ಕೆ ಸಂದ ಫಲ:
ತಾಲೂಕಿನಲ್ಲಿ ಕೆರೆಗಳ ಅಭಿವೃದ್ಧಿಗೆ ಸಂಬಂಧಪಟ್ಟದಂತೆ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ನಗರದ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ಪೌರಾಯುಕ್ತರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ, ಟ್ರಸ್ಟ್ ಛೇರ‍್ಮನ್ ಆರ್. ವೇಣುಗೋಪಾಲ್ ಪೌರಾಯುಕ್ತರು ದಿಟ್ಟ ಕ್ರಮ ತೆಗೆದುಕೊಂಡು ತಾಲೂಕು ಆಡಳಿತದ ನೆರವಿನೊಂದಿಗೆ ಬೌಂಡರಿ ನಿಗದಿಪಡಿಸುವ ಹಾಗೂ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿರುವುದು ಇದುವರೆಗೂ ನಡೆಸಿರುವ ಹೋರಾಟಕ್ಕೆ ಸಂದ ಫಲವಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಕೆರೆಗಳನ್ನು ಇದೆ ರೀತಿ ಅಭಿವೃದ್ಧಿಗೊಳಿಸಲು ತಾಲೂಕು ಆಡಳಿತ ಮುಂದಾಬೇಕೆಂದರು.
ಪ್ರಮುಖರಾದ ರಮಾವೆಂಕಟೇಶ್, ಶೈಲಜಾ ರಾಮಕೃಷ್ಣ, ಆರ್. ಮುಕುಂದಯ್ಯ, ಗ್ಸೇವಿಯರ್, ಭವಾನಿಶಂಕರ್ ಸೇರಿದಂತೆ ಇನ್ನಿತರರು ಪೌರಾಯುಕ್ತರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
No comments:
Post a Comment