Monday, June 29, 2020

ಶಾಲಾ ಮಕ್ಕಳಿಗೆ ನೀಡಬೇಕಾದ ಅಕ್ಕಿ, ಬೇಳೆ ವಿತರಣೆಯಲ್ಲಿ ವಂಚನೆ

ಎಎಪಿ ವತಿಯಿಂದ ಆಕ್ರೋಶ : ತಪ್ಪತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ 

 ಸರ್ಕಾರಿ ಶಾಲಾ ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟದ ಬದಲು ವಿತರಿಸಲಾಗುತ್ತಿರುವ ಅಕ್ಕಿ, ಬೇಳೆ ವಿತರಣೆಯಲ್ಲಿ ವಂಚನೆ ನಡೆದಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ಸೋಮವಾರ ಆಮ್ ಆದ್ಮಿ ಪಾರ್ಟಿ ವತಿಯಿಂದ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಎ.ಜಿ ರಾಜಶೇಖರ್‌ಗೆ ಮನವಿ ಸಲ್ಲಿಸಲಾಯಿತು. 

ಭದ್ರಾವತಿ, ಜೂ. ೨೯: ಕಳೆದ ಸುಮಾರು ೪ ತಿಂಗಳಿನಿಂದ ವಿಶ್ವದೆಲ್ಲೆಡೆ ಕೊರೋನಾ ವೈರಸ್ ವ್ಯಾಪಕವಾಗಿ ಹರಡುವ ಜೊತೆಗೆ ಲಾಕ್‌ಡೌನ್ ಪರಿಣಾಮ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ಸಂಕಷ್ಟಕ್ಕೆ ಒಳಗಾಗದವರ ನೆರವಿಗೆ ಸರ್ಕಾರ, ಸರ್ಕಾರೇತರ ಸಂಸ್ಥೆಗಳು, ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ದಾನಿಗಳು ಮುಂದಾಗುತ್ತಿದ್ದಾರೆ. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಬಡ ಮಕ್ಕಳಿಗೆ ತಲುಪಬೇಕಾದ ಆಹಾರ ದಿನಸಿ ಸಾಮಗ್ರಿಗಳನ್ನು ಸಮರ್ಪಕವಾಗಿ ವಿತರಿಸದೆ ವಂಚಿಸುತ್ತಿರುವುದು ನಾಚಿಗೇಡಿನ ಸಂಗತಿಯಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. 
ಅವರು ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಪಕ್ಷದ ಮುಖಂಡರೊಂದಿಗೆ ತೆರಳಿ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾದಿಕಾರಿ ಎ.ಜಿ ರಾಜಶೇಖರ್‌ಗೆ ಮನವಿ ಸಲ್ಲಿಸಿದರು. 
ಸರ್ಕಾರ ಶಾಲಾ ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆಯಡಿ ಮಧ್ಯಾಹ್ನ ಬಿಸಿಯೂಟ ನೀಡುತ್ತಿದ್ದು, ಕೊರೋನಾ ವೈರಸ್ ಪರಿಣಾಮ ಲಾಕ್‌ಡೌನ್ ಜಾರಿಗೆ ಬಂದ ಹಿನ್ನಲೆಯಲ್ಲಿ ಶಾಲೆಗಳಿಗೆ ರಜಾ ಘೋಷಿಸಲಾಗಿದೆ. ಈ ಹಿನ್ನಲೆಯಲ್ಲಿ ಮಕ್ಕಳಿಗೆ ಊಟದ ಬದಲು ಪ್ರತಿ ತಿಂಗಳು ೨ ಕೆ.ಜಿ ಅಕ್ಕಿ ಹಾಗೂ ಬೇಳೆ ವಿತರಿಸಲಾಗುತ್ತಿದೆ. ಆಯಾ ಶಾಲೆಗಳು ಎಲ್ಲಾ ಮಕ್ಕಳಿಗೂ ವಿತರಿಸಲಾಗಿದೆ ಎಂದು ಸುಳ್ಳು ವರದಿಯನ್ನು ಮೇಲಾಧಿಕಾರಿಗಳಿಗೆ ನೀಡುತ್ತಿವೆ. ಆದರೆ ಶೇ.೪೦ರಷ್ಟು ಮಕ್ಕಳಿಗಳಿಗೆ ತಲುಪುತ್ತಿಲ್ಲ. ಈ ಸಂಬಂಧ ಪೋಷಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನಲೆಯಲ್ಲಿ ತಕ್ಷಣ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. 
ಪಕ್ಷದ ಪ್ರಮುಖರಾದ ಪರಮೇಶ್ವರಚಾರ್, ಇಬ್ರಾಹಿಂ ಖಾನ್, ಮುಳ್ಕೆರೆ ಲೋಕೇಶ್ ಹಾಗೂ  ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕಾಂತ ದಿನೇಶ್ ಸೇರಿದಂತೆ ಮಹಿಳಾ ಪ್ರಮುಖರು ಉಪಸ್ಥಿತರಿದ್ದರು. 

No comments:

Post a Comment