Sunday, July 19, 2020

ಬಿ.ಪಿ ಸತ್ಯಲಕ್ಷ್ಮಿ ನಿಧನ

ಬಿ.ಪಿ ಸತ್ಯಲಕ್ಷ್ಮಿ 
ಭದ್ರಾವತಿ, ಜು. ೧೯: ಹಳೇನಗರದ ವಾಸವಿ ಕಾಲೋನಿ ನಿವಾಸಿ ಬಿ.ಪಿ ಸತ್ಯಲಕ್ಷ್ಮಿ(೭೩) ಭಾನುವಾರ ಬೆಳಿಗ್ಗೆ ನಿಧನ ಹೊಂದಿದರು.
ಪತಿ, ಇಬ್ಬರು ಪುತ್ರಿ, ಓರ್ವ ಪುತ್ರ ಸೇರಿದಂತೆ ಬಂಧು-ಬಳಗ ಬಿಟ್ಟಿಗಲಿದ್ದು, ಮೃತರ ಅಂತ್ಯ ಸಂಸ್ಕಾರ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಅರಣ್ಯ ಪ್ರದೇಶ ಒತ್ತುವರಿ : ಗ್ರಾಮಸ್ಥರು, ಅರಣ್ಯ ಇಲಾಖೆ ನಡುವೆ ಮಾತಿನ ಚಕಮಕಿ

ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ವ್ಯಕ್ತಿಯೊಬ್ಬರ ಮೇಲೆ 

ಅಮಾನುಷ ಹಲ್ಲೆ : ಆರೋಪ 

ಭದ್ರಾವತಿ ತಾಲೂಕಿನ ಕಲ್ಲಾಪುರ ಗ್ರಾಮದ ನಿವಾಸಿ ಬಸವರಾಜ ಎಂಬುವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. 
ಭದ್ರಾವತಿ, ಜು. ೧೯: ಕಳೆದ ೫ ದಿನಗಳ ಹಿಂದೆ ತಾಲೂಕಿನ ಕಲ್ಲಾಪುರ ಗ್ರಾಮದ ಮಾವಿನಕಟ್ಟೆ ಅರಣ್ಯ ವ್ಯಾಪ್ತಿಯಲ್ಲಿ ಒತ್ತುವರಿಗೆ ಸಂಬಂಧಿಸಿದಂತೆ ಅಲ್ಲಿನ ನಿವಾಸಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ನಡುವೆ ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಮರಕಡಿತಲೆಯಲ್ಲಿ ತೊಡಗಿದ್ದವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕ ವ್ಯಕ್ತಿಯೊಬ್ಬರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆಂದು ತಹಸೀಲ್ದಾರ್‌ಗೆ ದೂರಲಾಗಿದೆ. 
ಈ ವ್ಯಾಪ್ತಿಯಲ್ಲಿ ಬಹಳ ವರ್ಷಗಳಿಂದ ಅರಣ್ಯ ಪ್ರದೇಶ ಒತ್ತುವರಿ ನಡೆಯುತ್ತಿದ್ದು, ಅರಣ್ಯ ಇಲಾಖೆ ವತಿಯಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೂ ಸಹ ಒತ್ತುವರಿ ನಿಂತಿಲ್ಲ. ಈಗಾಗಲೇ ಒತ್ತುವರಿ ಮಾಡಿಕೊಂಡಿರುವ ಅರಣ್ಯ ವ್ಯಾಪ್ತಿಯಲ್ಲಿ ಅಡಕೆ, ತೆಂಗು, ಬಾಳೆತೋಟಗಳನ್ನು ನಿರ್ಮಿಸಿಕೊಂಡಿದ್ದಾರೆ. ಅರಣ್ಯದಲ್ಲಿ ಕಾವಲು ಕಾಯುವ ಸಿಬ್ಬಂದಿಗಳನ್ನು ಬೆದರಿಸಿ ಕಳುಹಿಸುವ ಮೂಲಕ ಮರಕಡಿತಲೆಯಲ್ಲಿ ತೊಡಗಿದ್ದಾರೆ. ಇಂತಹವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿನಾಕಾರಣ ಯಾವುದೇ ರೀತಿ ಯಾರ ಮೇಲೂ ಹಲ್ಲೆ, ದೌರ್ಜನ್ಯ ನಡೆಸಿಲ್ಲ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಸ್ಪಷ್ಟನೆಯಾಗಿದೆ. 
ಭದ್ರಾವತಿ ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಗ್ರಾಮಸ್ಥರ ನಡುವೆ ಒತ್ತುವರಿಗೆ ಸಂಬಂಧಿಸಿದಂತೆ ಮಾತಿನಚಕಮಕಿ ನಡೆದಿರುವುದು. 
ಆದರೆ ಡಿಎಸ್‌ಎಸ್ ಮುಖಂಡ ಕೆ. ರಂಗನಾಥ್, ಕಲ್ಲಾಪುರ ಗ್ರಾಮದ  ನಿವಾಸಿ ಬಸವರಾಜ(೩೫) ಎಂಬುವರು ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದು, ವೈದ್ಯರ ಮಾರ್ಗದರ್ಶನದಂತೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಣಬೆ ಹುಡುಕಿಕೊಂಡು ಅರಣ್ಯ  ಪ್ರವೇಶಿಸಿದ್ದು, ಇವರ ಮೇಲೆ ವಿನಾಕಾರಣ ಹಲ್ಲೆ ನಡೆಸಿ ಮರಕಡಿತಲೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದೂರಿದ್ದಾರೆ. 
ಅರಣ್ಯ  ಇಲಾಖೆ ಸಿಬ್ಬಂದಿಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದು, ಈ ಹಿನ್ನಲೆಯಲ್ಲಿ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಮತ್ತು ತಹಸೀಲ್ದಾರ್ ಶಿವಕುಮಾರ್ ಗಮನಕ್ಕೆ ತರಲಾಗಿದೆ. ಅಲ್ಲದೆ ಅರಣ್ಯ ಇಲಾಖೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದರು. 
ಘಟನೆಗೆ ಸಂಬಂಧಿಸಿದಂತೆ ತಹಸೀಲ್ದಾರ್ ಶಿವಕುಮಾರ್ ಪತ್ರಿಕೆಗೆ ಪ್ರತಿಕ್ರಿಯಿಸಿ, ಘಟನೆ ನಡೆದಿರುವುದು  ಗಮನಕ್ಕೆ ಬಂದಿದೆ. ಉಪವಿಭಾಗಾಧಿಕಾರಿಗಳು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಇದರಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. 

Saturday, July 18, 2020

ಎಸ್.ಪಿ ಕೃಷ್ಣೋಜಿರಾವ್ ಅಂಬೋರೆ ನಿಧನ

ಎಸ್.ಪಿ ಕೃಷ್ಣೋಜಿರಾವ್ ಅಂಬೋರೆ 
ಭದ್ರಾವತಿ, ಜು. ೧೮: ನಗರದ ಹೊಸಮನೆ ನಿವಾಸಿ, ವಾರ ಪತ್ರಿಕೆಯೊಂದರ ಸಂಸ್ಥಾಪಕ ಸಂಪಾದಕ ಎಸ್.ಪಿ ಕೃಷ್ಣೋಜಿರಾವ್(೭೨) ಅಂಬೋರೆ ಶುಕ್ರವಾರ ರಾತ್ರಿ ನಿಧನ ಹೊಂದಿದರು. 
ಶಿವಮೊಗ್ಗ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಉಪಾಧ್ಯಕ್ಷೆ ಪತ್ನಿ ಸುಮಿತ್ರಾ ಅಂಬೋರೆ, ಇಬ್ಬರು ಪುತ್ರರು ಸೇರಿದಂತೆ ಬಂಧು-ಬಳಗ ಬಿಟ್ಟಗಲಿದ್ದಾರೆ. ಇವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ತಾಲೂಕಿನ ಸೀತಾರಾಮಪುರದಲ್ಲಿ ನಡೆಯಿತು. ಮೃತರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.  

ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಯವರ ನಿಧನಕ್ಕೆ ಶ್ರದ್ದಾಂಜಲಿ

ಹೊನ್ನಾಳಿ ರಾಂಪುರ ಮಠದ ಪಟ್ಟಾಧ್ಯಕ್ಷರಾದ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಯವರ ನಿಧನಕ್ಕೆ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಬಿಳಿಕಿ ಹಿರೇಮಠ ವತಿಯಿಂದ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. 
ಭದ್ರಾವತಿ, ಜು. ೧೮:  ಹೊನ್ನಾಳಿ ರಾಂಪುರ ಮಠದ ಪಟ್ಟಾಧ್ಯಕ್ಷರಾದ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಯವರ ನಿಧನಕ್ಕೆ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಬಿಳಿಕಿ ಹಿರೇಮಠ ವತಿಯಿಂದ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. 
ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ಧಾರ್ಮಿಕ ಸೇವಾ ಕಾರ್ಯಗಳನ್ನು ಸ್ಮರಿಸಲಾಯಿತು. ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಮಹಾಸಭಾ ಅಧ್ಯಕ್ಷ ಶ್ರೀ ಸಿದ್ದಲಿಂಗಯ್ಯ, ಉಪಾಧ್ಯಕ್ಷ ವಾಗೀಶ್, ಪ್ರಧಾನ ಕಾರ್ಯದರ್ಶಿ ಬಿ.ಎಸ್ ಮಹೇಶ್‌ಕುಮಾರ್, ಯುವ ಮುಖಂಡರಾದ ಮಂಜುನಾಥ್, ವಕೀಲರಾದ ಕುಮಾರ್, ಉದಯಕುಮಾರ್, ಆನಂದ್, ರಮೇಶ್, ಸತೀಶ್, ಆನಂದಸ್ವಾಮಿ ಮತ್ತು ಗುರುಪ್ರಸಾದ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಪಿಯುಸಿ : ಬಿಜಿಎಸ್ ಪದವಿ ಪೂರ್ವ ಕಾಲೇಜು ಉತ್ತಮ ಫಲಿತಾಂಶ

ಬಡ ವಿದ್ಯಾರ್ಥಿನಿ ಜಿ. ಹರ್ಷಿತ ತಾಲೂಕಿಗೆ ಪ್ರಥಮ, 

ರಾಜ್ಯಕ್ಕೆ ೬ನೇ ರ‍್ಯಾಂಕ್  

ಭದ್ರಾವತಿ ಬೈಪಾಸ್ ರಸ್ತೆಯಲ್ಲಿರುವ ಬಿಜಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜಿ. ಹರ್ಷಿತ ಹೆಚ್ಚಿನ ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ ಹಿನ್ನಲೆಯಲ್ಲಿ ಆಕೆಗೆ ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಸಿಹಿ ತಿನಿಸಿ ಅಭಿನಂದಿಸಿದರು. 
ಭದ್ರಾವತಿ, ಜು. ೧೮: ನಗರದ ಬೈಪಾಸ್ ರಸ್ತೆಯಲ್ಲಿರುವ ಬಿಜಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ. 
ವಾಣಿಜ್ಯ ವಿಭಾಗದಲ್ಲಿ ೫೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ೧೧ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ.  ೩೪ ವಿದ್ಯಾರ್ಥಿಗಳು ಪ್ರಥಮ, ೧೧ ವಿದ್ಯಾರ್ಥಿಗಳು ದ್ವಿತೀಯ ಹಾಗೂ ಓರ್ವ ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.  ವಿಜ್ಞಾನ ವಿಭಾಗದಲ್ಲಿ ೮೦ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ೧೨ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಉಳಿಂದಂತೆ ೫೨ ಪ್ರಥಮ ಮತ್ತು ೧೧ ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 
ಬಡತನದಲ್ಲಿ ಅರಳಿದ ವಿದ್ಯಾರ್ಥಿನಿ ಜಿ.ಹರ್ಷಿತ: 
ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಜಿ. ಹರ್ಷಿತ ೫೮೯ ಅಂಕಗಳೊಂದಿಗೆ ಶೇ.೯೮ ಫಲಿತಾಂಶದೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನ, ರಾಜ್ಯಕ್ಕೆ ೬ನೇ ರ‍್ಯಾಂಕ್ ಪಡೆದುಕೊಂಡಿದ್ದಾಳೆ. ಈ ವಿದ್ಯಾರ್ಥಿನಿ ಸಾಧನೆ ಇತರರಿಗೆ ಮಾದರಿಯಾಗಿದೆ. 
ಈಕೆ ನಗರದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕ, ಸಿದ್ದಾಪುರದ ನಿವಾಸಿ ಗಿರಿಗೌಡ ಮತ್ತು ಯಶೋಧ ದಂಪತಿ ಪುತ್ರಿಯಾಗಿದ್ದು, ಕುಟುಂಬದ ಆರ್ಥಿಕ ಸಂಕಷ್ಟದ ನಡುವೆಯೂ ಕಠಿಣ ಪರಿಶ್ರಮದಿಂದ ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದಾಳೆ. 
ಈಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಉತ್ತಮ ಫಲಿತಾಂಶ ಪಡೆದುಕೊಂಡಿದ್ದು, ಆರ್ಥಿಕ ಸಂಕಷ್ಟದಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಎದುರು ನೋಡುತ್ತಿದ್ದ ಈಕೆಗೆ ಕಾಲೇಜಿನ ಆಡಳಿತ ಮಂಡಳಿ ಎರಡು ವರ್ಷ ಉಚಿತ ಶಿಕ್ಷಣ ನೀಡಿದ ಪರಿಣಾಮ ದ್ವಿತೀಯ ಪಿಯುಸಿಯಲ್ಲೂ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಇದೀಗ ಮುಂದಿನ ಉನ್ನತ ಶಿಕ್ಷಣದ ಚಿಂತೆ ಈ ವಿದ್ಯಾರ್ಥಿನಿಯನ್ನು ಕಾಡುತ್ತಿದೆ. ಪೋಷಕರು ವಿದ್ಯಾರ್ಥಿನಿಯ ಕನಸು ನನಸು ಮಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೂ ಸಹ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ. 
ಧನ ಸಹಾಯಕ್ಕೆ ಮನವಿ:
ವಿದ್ಯಾರ್ಥಿನಿ ಹರ್ಷಿತ ಉನ್ನತ ಶಿಕ್ಷಣಕ್ಕೆ ನೆರವಾಗುವ ದಾನಿಗಳು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಲಾಗಿದೆ. ದಾನಿಗಳು ಎಸ್‌ಬಿಐ ಬ್ಯಾಂಕ್, ಎಸ್.ಬಿ ಖಾತೆ ಸಂಖ್ಯೆ : ೩೫೯೨೭೭೬೧೦೨೨ ಐಎಫ್‌ಎಸ್‌ಸಿ ಎಸ್‌ಬಿಐಎನ್೦೦೧೧೩೩೫ ಸಂಖ್ಯೆಗೆ ಆರ್ಥಿಕ ನೆರವು ನೀಡಬಹುದಾಗಿದೆ.
ವಿದ್ಯಾರ್ಥಿಗಳಿಗೆ ಅಭಿನಂದನೆ:  
ಆದಿಚುಂಚನಗಿರಿ ಶ್ರೀಕ್ಷೇತ್ರದ ಪೀಠಾಧಿಪತಿಗಳಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಆಡಳಿತಾಧಿಕಾರಿ ಬಿ. ಜಗದೀಶ್, ಪ್ರಾಂಶುಂಪಾಲ ಜಿ.ಕೇಶವಮೂರ್ತಿ, ಉಪನ್ಯಾಸಕರು ಹಾಗೂ ಸಿಬ್ಬಂದಿ ವೃಂದದವರು ಕಾಲೇಜಿನ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.  

ಲಯನ್ಸ್, ಲಿಯೋ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಕೆ.ವಿ ಚಂದ್ರಶೇಖರ್, ಸಿ. ಸಿಂಚನ ನೇತೃತ್ವದ ತಂಡ ಅಧಿಕಾರ ಸ್ವೀಕಾರ 

ಭದ್ರಾವತಿ ಲಯನ್ಸ್ ಮತ್ತು ಲಿಯೋ ಕ್ಲಬ್‌ಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ನ್ಯೂಟೌನ್ ಲಯನ್ಸ್ ಭವನದಲ್ಲಿ ನಡೆಯಿತು.
ಭದ್ರಾವತಿ, ಜು. ೧೮: ನಗರದ ಲಯನ್ಸ್ ಮತ್ತು ಲಿಯೋ ಕ್ಲಬ್‌ಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ನ್ಯೂಟೌನ್ ಲಯನ್ಸ್ ಭವನದಲ್ಲಿ ನಡೆಯಿತು.
ಮಾಜಿ ಜಿಲ್ಲಾ ಗವರ್ನರ್ ಡಾ. ಬಿ.ಎಸ್ ನಾಗಪ್ರಕಾಶ್ ಪದಗ್ರಹಣ ನೆರವೇರಿಸಿದರು. ನೂತನ ಅಧ್ಯಕ್ಷರಾಗಿ ಕೆ.ವಿ ಚಂದ್ರಶೇಖರ್, ಕಾರ್ಯದರ್ಶಿಯಾಗಿ ಆರ್. ರಾಮಮೂರ್ತಿ ಮತ್ತು ಖಜಾಂಚಿಯಾಗಿ ಎನ್ ಶಿವಕುಮಾರ್ ಲಿಯೋ ಕ್ಲಬ್ ಅಧ್ಯಕ್ಷೆಯಾಗಿ ಸಿ. ಸಿಂಚನ, ಕಾರ್ಯದರ್ಶಿಯಾಗಿ ಆರ್. ನವೀನ್ ಮತ್ತು ಖಜಾಂಚಿಯಾಗಿ ಲಕ್ಷ್ಮೀ ಎಸ್ ಕುಮಾರ್ ಅಧಿಕಾರ ಸ್ವೀಕರಿಸಿದರು. 
  ಉಪ ಜಿಲ್ಲಾ ಗವರ್ನರ್ ಕೆ.ಸಿ ವೀರಭದ್ರಪ್ಪ, ವಲಯ ಅಧ್ಯಕ್ಷರಾದ ಅನಂತಕೃಷ್ಣ ನಾಯಕ್, ಕುಮಾರ್, ಮಾಜಿ ಜಿಲ್ಲಾ ಗವರ್ನರ್ ಬಿ. ದಿವಾಕರ ಶೆಟ್ಟಿ, ಮಾಜಿ ವಲಯ ಅಧ್ಯಕ್ಷರಾದ ಹೆಬ್ಬಂಡಿ ನಾಗರಾಜ್, ಏಸುದಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
  ನಿಕಟಪೂರ್ವ ಅಧ್ಯಕ್ಷ ಎಚ್.ಆರ್ ಕುಮಾರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎ.ಎನ್ ಕಾರ್ತಿಕ್ ಮತ್ತು ಖಜಾಂಚಿ ನಾಗರಾಜ್ ಶೇಟ್ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.  
ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಉಪ ಜಿಲ್ಲಾ ಗವರ್ನರ್ ಕೆ.ಸಿ ವೀರಭದ್ರಪ್ಪ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. 
ಕ್ಲಬ್ ಹಿರಿಯ ಸದಸ್ಯರಾದ ಡಾ. ಯು. ಕರುಣಾಕರ ಶೆಟ್ಟಿ, ಡಾ. ರವೀಂದ್ರನಾಥ ಕೋಠಿ, ಎಚ್.ವಿ ಶಿವರುದ್ರಪ್ಪ, ಡಾ. ಜಿ.ಎಂ ನಟರಾಜ್, ವೆಂಕಟರಮಣ ಶೇಟ್, ದೇವರಾಜ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ಭುವನೇಶ್ವರ್ ಕಾರ್ಯಕ್ರಮ ನಿರೂಪಿಸಿದರು. 

ಮುತ್ತೂಟ್ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿಯಿಂದ ವಂಚನೆ

ನ್ಯಾಯ ಒದಗಿಸಿ ಕೊಡಲು ತಹಸೀಲ್ದಾರ್‌ಗೆ ಮನವಿ 

ಭದ್ರಾವತಿ ರಂಗಪ್ಪ ವೃತ್ತದಲ್ಲಿರುವ ಮುತ್ತೂಟ್ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿಯಿಂದ ವಂಚನೆಗೆ ಒಳಗಾಗಿರುವ ಬಡ ಮಹಿಳೆಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿ ಶನಿವಾರ ತಹಸೀಲ್ದಾರ್ ಶಿವಕುಮಾರ್‌ಗೆ ಸಂಯುಕ್ತ ಜನತಾದಳ ರಾಜ್ಯ ಮುಖಂಡ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ  ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಜು. ೧೮: ನಗರದ ರಂಗಪ್ಪ ವೃತ್ತದಲ್ಲಿರುವ ಮುತ್ತೂಟ್ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿಯಿಂದ ವಂಚನೆಗೆ ಒಳಗಾಗಿರುವ ಬಡ ಮಹಿಳೆಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿ ಶನಿವಾರ ತಹಸೀಲ್ದಾರ್ ಶಿವಕುಮಾರ್‌ಗೆ ಸಂಯುಕ್ತ ಜನತಾದಳ ರಾಜ್ಯ ಮುಖಂಡ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ  ಮನವಿ ಸಲ್ಲಿಸಲಾಯಿತು. 
ತಾಲೂಕಿನ ಸಿದ್ದಾಪುರ ತಾಂಡ ನಿವಾಸಿ ದೇವಿಬಾಯಿ ಎಂಬುವರು ಜನವರಿ, ೨೦೧೮ರಲ್ಲಿ ಮುತ್ತೂಟ್ ಮೈಕ್ರೋ ಫೈನಾನ್ಸ್ ಕಂಪನಿಯಿಂದ ೪೫ ಸಾವಿರ ರು. ಸಾಲ ಪಡೆದಿದ್ದು, ಪ್ರತಿ ತಿಂಗಳು ೫೬೦ ರು. ಒಟ್ಟು ೮೭ ಕಂತು ಪಾವತಿಸುವ ಕಂಪನಿ ನಿಯಮದಂತೆ ಬ್ಯಾಂಕ್ ಸಿಬ್ಬಂದಿ ದೀಪಕ್ ಎಂಬುವರಿಗೆ ಪ್ರತಿ ತಿಂಗಳು ಹಣ ಪಾವತಿಸಿರುತ್ತಾರೆ. ಆದರೆ ಸಿಬ್ಬಂದಿ ಕಂಪನಿಗೆ ಹಣ ಪಾವತಿ ಮಾಡದೆ ವಂಚಿಸಿದ್ದು, ಕೆಲಸ ಬಿಟ್ಟು ನಾಪತ್ತೆಯಾಗಿರುತ್ತಾನೆ. ಈ ನಡುವೆ ಕಂಪನಿ ಅಧಿಕಾರಿಗಳು ಪೂರ್ಣ ಹಣ ಪಾವತಿ ಮಾಡುವಂತೆ ದೇವಿಬಾಯಿಗೆ ಒತ್ತಾಯಿಸುತ್ತಿದ್ದಾರೆಂದು ಆರೋಪಿಸಲಾಗಿದೆ. 
ಕಂಪನಿ ವಿಭಾಗೀಯ ವ್ಯವಸ್ಥಾಪಕರನ್ನು ಈ ಸಂಬಂಧ ಹಲವು ಬಾರಿ ದೇವಿಬಾಯಿಯವರು ಸಂಪರ್ಕಿಸಿ ಅನ್ಯಾಯವಾಗಿರುವುದನ್ನು ಮನವರಿಕೆ ಮಾಡಿಕೊಟ್ಟರೂ ಸಹ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದು, ಸಿಬ್ಬಂದಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಉತ್ತರಿಸುತ್ತಿದ್ದಾರೆ. ಇತ್ತೀಚೆಗೆ ದೇವಿಬಾಯಿಯವರ ಪತಿ ಪಾಪನಾಯ್ಕರವರು ಅನಾರೋಗ್ಯದಿಂದ ನಿಧನ ಹೊಂದಿದ್ದು, ಬಡತನದಲ್ಲಿ ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುವ ಮಹಿಳೆಗೆ ಈ ಸಾಲದ ಹೊರೆ ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ. ಈ ಹಿನ್ನಲೆಯಲ್ಲಿ ತಕ್ಷಣ ಕಂಪನಿಯವರನ್ನು ಕರೆಸಿ ಆಗಿರುವ ಅನ್ಯಾಯ ಸರಿಪಡಿಸಿಕೊಡಬೇಕೆಂದು ಮನವಿ ಮಾಡಲಾಗಿದೆ. ಒಂದು ವೇಳೆ ನಿರ್ಲಕ್ಷ್ಯತನ ವಹಿಸಿದ್ದಲ್ಲಿ ಲಾಕ್‌ಡೌನ್ ನಿಯಮಗಳನ್ನು ಪಾಲಿಸಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಲಾಗಿದೆ. 
ಪಕ್ಷದ ಯುವ ಮುಖಂಡ ಬಾಬು ದೀಪಕ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ವಂಚನೆಗೆ ಒಳಗಾಗಿರುವ ದೇವಿಬಾಯಿ, ರಘು, ಸುಭಾಷ್ ಮತ್ತು ಅಬ್ದುಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.