Saturday, August 1, 2020

ಈ ಬಾರಿ ಸಹ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ

ಮೆರವಣಿಗೆ ಸೇರಿ ಯಾವುದೇ ಆಡಂಬರವಿಲ್ಲ, ೯ನೇ ದಿನ ಪ್ರತಿಷ್ಠಾಪನೆ : ವಿ. ಕದಿರೇಶ್ 

ಭದ್ರಾವತಿ, ಆ. ೧: ಪ್ರತಿಷ್ಠಿತ ಹಿಂದೂಪರ ಸಂಘಟನೆಗಳಲ್ಲಿ ಒಂದಾಗಿರುವ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಈ ಬಾರಿ ಸಹ ವಿನಾಯಕ ಚತುರ್ಥಿ ಅಂಗವಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಮಾಡಲಿದೆ ಎಂದು ಸಮಿತಿ ಅಧ್ಯಕ್ಷ, ನಗರಸಭೆ ಹಿರಿಯ ಸದಸ್ಯ ವಿ. ಕದಿರೇಶ್ ತಿಳಿಸಿದರು.
ಅವರು ಸಮಿತಿಯ ಸರ್ವ ಸದಸ್ಯರ ಹಾಗೂ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಕೊರೋನಾ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆ ಸಂಪ್ರದಾಯದಂತೆ ಸಮಿತಿ ವತಿಯಿಂದ ಈ ಬಾರಿ ಸಹ ಸರ್ಕಾರದ ನಿಯಮಗಳನ್ನು ಪಾಲಿಸಿ  ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಿ ಯಾವುದೇ ಆಡಂಬರವಿಲ್ಲದೆ ಸರಳವಾಗಿ ವಿನಾಯಕ ಚತುರ್ಥಿ ಆಚರಿಸಲಾಗುವುದು ಎಂದರು. 
ಶಿವಮೊಗ್ಗ ಮಾದರಿಯಂತೆ ೯ ದಿನಗಳ ಕಾಲ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ತಾಲೂಕು ಆಡಳಿತ, ನಗರಸಭೆ ಮತ್ತು ಪೊಲೀಸ್ ಇಲಾಖೆ ನೀಡುವ ಸಲಹೆ, ಸೂಚನೆಗಳನ್ನು ಪಾಲಿಸಲಾಗುವುದು. ಈ ಬಾರಿ ಮೆರವಣಿಗೆಯನ್ನು ರದ್ದುಪಡಿಸಲಾಗಿದ್ದು, ಸರಳವಾಗಿ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ಸರ್ಕಾರದ ಇಲಾಖೆ ಸೇರಿದಂತೆ ಸಮಸ್ತ ನಾಗರಿಕರು ಸಹಕರಿಸಬೇಕೆಂದು ಮನವಿ ಮಾಡಿದರು. 

ಸರ್ಕಾರಿ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸಕ ಡಾ. ಡಿ.ಎಸ್ ಶಿವಪ್ರಕಾಶ್ ನೇಮಕ

ಭದ್ರಾವತಿ, ಆ.೧ : ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಹಳ  ವರ್ಷಗಳಿಂದ ಖಾಲಿ ಉಳಿದಿದ್ದ ಶಸ್ತ್ರ ಚಿಕಿತ್ಸಕರ ಹುದ್ದೆಯನ್ನು ಸರ್ಕಾರ ಭರ್ತಿ ಮಾಡಿದೆ. 
೧೦೦ ಹಾಸಿಗೆಯುಳ್ಳ ತಾಲೂಕಿನ ಏಕೈಕ ಸರ್ಕಾರಿ ಆಸ್ಪತ್ರೆಗೆ ಪ್ರತಿದಿನ ಸಾವಿರಾರು ಮಂದಿ ರೋಗಿಗಳು ಬಂದು ಹೋಗುತ್ತಾರೆ. ಕಡು ಬಡವರು, ಸಾಮಾನ್ಯ ವರ್ಗದವರು ಹೆಚ್ಚಾಗಿ ಬರುವ ಆಸ್ಪತ್ರೆಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ಸಿಬ್ಬಂದಿಗಳು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಈ ನಡುವೆ ಅತಿ  ಮುಖ್ಯವಾಗಿ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸಕರನ್ನು ನೇಮಕಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. 
ಇದೀಗ ಸರ್ಕಾರ ಜು.೩೦ರಂದು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ. ಡಿ.ಎಸ್ ಶಿವಪ್ರಕಾಶ್‌ರವರನ್ನು ವರ್ಗಾವಣೆಗೊಳಿಸಿ ಖಾಲಿ ಹುದ್ದೆಯನ್ನು ಭರ್ತಿ ಮಾಡಿದೆ. 

Friday, July 31, 2020

ಉಕ್ಕಿನ ನಗರದಲ್ಲಿ ಕೊರೋನಾ ಸ್ಪೋಟ : ಒಂದೇ ದಿನ ೧೮ ಸೋಂಕು ಪತ್ತೆ


ಭದ್ರಾವತಿ, ಜು. ೩೧: ಉಕ್ಕಿನ ನಗರದಲ್ಲಿ ಕೊರೋನಾ ಸೋಂಕು ಸ್ಪೋಟಗೊಳ್ಳುತ್ತಿದ್ದು, ವರಮಹಾಲಕ್ಷ್ಮಿ ಹಬ್ಬದ ದಿನವಾದ ಶುಕ್ರವಾರ ಒಂದೇ ದಿನ ೧೮ ಪ್ರಕರಣಗಳು ಪತ್ತೆಯಾಗಿವೆ. 
ಕಾಗದನಗರದ ೬ನೇ ವಾರ್ಡ್‌ನಲ್ಲಿ ೩೫ ವರ್ಷದ ಪುರುಷ, ಬಿ.ಎಚ್ ರಸ್ತೆಯಲ್ಲಿ ೪೫ ವರ್ಷದ ವ್ಯಕ್ತಿ, ದೊಡ್ಡಗೊಪ್ಪೇನಹಳ್ಳಿಯಲ್ಲಿ ೨೫ ವರ್ಷದ ಯುವಕ, ಗಾಂಧಿನಗರದಲ್ಲಿ ೭೭ ವರ್ಷದ ವೃದ್ಧೆ, ಉಜ್ಜನಿಪುರದಲ್ಲಿ ೧೯ ವರ್ಷದ ಯುವತಿ, ಭೂತನಗುಡಿಯಲ್ಲಿ ೩೦ ಮತ್ತು ೩೪ ವರ್ಷದ ಇಬ್ಬರು ಸಹೋದರರು, ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಿಲ್ಟ್ರಿಕ್ಯಾಂಪ್‌ನಲ್ಲಿ ವಾಸವಿರುವ ೨೮ ವರ್ಷದ ಪುರುಷ, ದೊಡ್ಡೇರಿ ಗ್ರಾಮದಲ್ಲಿ ೫೨ ವರ್ಷದ ವ್ಯಕ್ತಿ, ಆಂಜನೇಯ ಅಗ್ರಹಾರದಲ್ಲಿ ೩೫ ವರ್ಷದ ಪುರುಷ, ಅಂಬೇಡ್ಕರ್ ನಗರದಲ್ಲಿ ೫೪ ವರ್ಷ ವ್ಯಕ್ತಿ, ಸೀಗೆಬಾಗಿಯಲ್ಲಿ ೩೯ ವರ್ಷದ ಮಹಿಳೆ, ಅರಳಿಹಳ್ಳಿ ಬಸಲೀಕಟ್ಟೆ ಗ್ರಾಮದಲ್ಲಿ ೬೫ ವರ್ಷದ ವ್ಯಕ್ತಿ, ಸಿದ್ದರೂಢನಗರದಲ್ಲಿ ೬೨ ವ್ಯಕ್ತಿ ಹಾಗೂ ೫೮ ವರ್ಷದ ಈತನ ಪತ್ನಿ, ಖಾಜಿಮೊಹಲ್ಲಾ ಕೋಟೆ ಏರಿಯಾದಲ್ಲಿ ೬೯ ವರ್ಷದ ವೃದ್ಧೆ, ಅರಣ್ಯ ಇಲಾಖೆ ಕರ್ತವ್ಯ ನಿರ್ವಹಿಸುತ್ತಿರುವ ತರೀಕೆರೆ ಗೋಪಾಲ ಕಾಲೋನಿ ನಿವಾಸಿ ೩೩ ವರ್ಷದ ಪುರುಷ ಹಾಗೂ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆ ಮಾಡಿಸಿಕೊಂಡಿದ್ದ ಶಿವಮೊಗ್ಗ ಅಶೋಕ ನಗರದ ೨೬ ವರ್ಷದ ಯುವಕ ಸೋಂಕಿಗೆ ಒಳಗಾಗಿದ್ದು, ಸೋಂಕಿತರನ್ನು ಚಿಕಿತ್ಸೆಗಾಗಿ ನಿಗದಿತ ಕೋವಿಡ್ ೧೯ ಆಸ್ಪತ್ರೆಗೆ ದಾಖಲಿಸಲಾಗಿದೆ.  
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ,  ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ.

ಇತಿಹಾಸ ವಿಷಯ ಬದಲಾವಣೆ ತಪ್ಪು ನಿರ್ಧಾರ : ಮುಸ್ವೀರ್ ಬಾಷ

ಮುಸ್ವೀರ್ ಬಾಷ
ಭದ್ರಾವತಿ, ಜು. ೩೧: ರಾಜ್ಯ ಸರ್ಕಾರ ಪ್ರಾರ್ಥಮಿಕ ಹಾಗೂ ಪ್ರೌಢ ಶಿಕ್ಷಣ ಇತಿಹಾಸ ಪಠ್ಯ ಪುಸ್ತಕದಲ್ಲಿ ಕೆಲವು ವಿಷಯಗಳನ್ನು ಬದಲಾವಣೆ ಮಾಡಿರುವುದು ಮೂಲ ಇತಿಹಾಸ ಅಧ್ಯಾಯನಕ್ಕೆ ಧಕ್ಕೆಯನ್ನುಂಟು ಮಾಡಿದ್ದು, ಇದರಿಂದಾಗಿ ವಿದ್ಯಾರ್ಥಿಗಳು ಸರಿಯಾಗಿ ಇತಿಹಾಸ ಅರ್ಥ ಮಾಡಿಕೊಳ್ಳುವುದು ಅಸಾಧ್ಯವಾಗಿದೆ ಎಂದು ಎನ್‌ಎಸ್‌ಯುಐ ಮುಖಂಡ ಮುಸ್ವೀರ್ ಬಾಷ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ಇತಿಹಾಸ ಪಠ್ಯ ಪುಸ್ತಕದಲ್ಲಿ ಕೈ ಬಿಟ್ಟಿರುವ ಸಂಗೊಳ್ಳಿ ರಾಯಣ್ಣ, ಟಿಪ್ಪುಸುಲ್ತಾನ್, ರಾಣಿಅಬಕ್ಕ ಮತ್ತು ಹೈದರಾಲಿ ವಿಷಯಗಳನ್ನು ಅಧ್ಯಯನ ಮಾಡದೆ ಇತಿಹಾಸ ಪೂರ್ಣಗೊಳ್ಳುವುದಿಲ್ಲ. ಇದು ವಿದ್ಯಾರ್ಥಿಗಳಿಗೆ ಮೂಲ ಇತಿಹಾಸದಿಂದ ವಂಚನೆ ಮಾಡಿದಂತೆ. ಈ ಹಿನ್ನಲೆಯಲ್ಲಿ  ರಾಜ್ಯ ಸರ್ಕಾರ ಈ ಕೂಡಲೇ ತಮ್ಮ ನಿರ್ಧಾರ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದ್ದಾರೆ. 

ರಾಮ ಮಂದಿರ ಭೂಮಿ ಪೂಜೆ ವೀಕ್ಷಣೆಗೆ ಎಲ್‌ಇಡಿ ವ್ಯವಸ್ಥೆ

ಭದ್ರಾವತಿ, ಜು. ೩೧: ಅಯೋಧ್ಯೆ ಶ್ರೀರಾಮ ಜನ್ಮ ಭೂಮಿಯಲ್ಲಿ ಆ.೫ರಂದು ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿರುವ ಶ್ರೀರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಎಲ್‌ಇಡಿ ಪರದೆ ವ್ಯವಸ್ಥೆ ಕೈಗೊಳ್ಳಲಾಗಿದೆ. 
ಹೊಸಮನೆ ಮುಖ್ಯರಸ್ತೆಯಲ್ಲಿರುವ ಸಮಿತಿಯ ಹಿಂದೂ ಮಹಾಸಭಾ ಸಭಾಭವನದಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಸಮಿತಿ ಅಧ್ಯಕ್ಷ ವಿ. ಕದಿರೇಶ್, ಪ್ರಧಾನ ಕಾರ್ಯದರ್ಶಿ ಟಿ.ಎಸ್ ಭವಾನಿಕುಮಾರ್ ಕೋರಿದ್ದಾರೆ.

೫.೫೦ ಕೋ. ರು. ವೆಚ್ಚದ ರಸ್ತೆ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ

ಭದ್ರಾವತಿ ತಾಲ್ಲೂಕಿನ ಸಿಂಗನಮನೆ, ತಾವರಘಟ್ಟ ಮತ್ತು ಮಾಳೇನಹಳ್ಳಿ ಗ್ರಾಮಗಳಲ್ಲಿ ಒಟ್ಟು ಸುಮಾರು ೫.೫೦ ಕೋ. ರು.  ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಬಾಕ್ಸ್ ಡ್ರೈನೇಜ್ ಕಾಮಗಾರಿಗಳಿಗೆ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು. 
ಭದ್ರಾವತಿ, ಜು. ೩೧:  ತಾಲ್ಲೂಕಿನ ಸಿಂಗನಮನೆ, ತಾವರಘಟ್ಟ ಮತ್ತು ಮಾಳೇನಹಳ್ಳಿ ಗ್ರಾಮಗಳಲ್ಲಿ ಒಟ್ಟು ಸುಮಾರು ೫.೫೦ ಕೋ. ರು.  ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಬಾಕ್ಸ್ ಡ್ರೈನೇಜ್ ಕಾಮಗಾರಿಗಳಿಗೆ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು. 
ಗ್ರಾಮೀಣ ಭಾಗದಲ್ಲೂ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗಿದ್ದು, ಈಗಾಗಲೇ ಬಹುತೇಕ ರಸ್ತೆಗಳು ಪೂರ್ಣಗೊಂಡಿವೆ. ಗುಣಮಟ್ಟದ ಕಾಮಗಾರಿ ನಡೆಸುವ ಮೂಲಕ ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. 
ಸಿಂಗನಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರ್. ಉಮಾ, ಸದಸ್ಯರಾದ ಟಿ.ಡಿ ಶಶಿಕುಮಾರ್, ಜೆ. ಸುಜಾತ ಸೇರಿದಂತೆ ಗ್ರಾಮದ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.

ನಗರಕ್ಕೆ ಅಂತರಾಷ್ಟ್ರೀಯ ಹಿಂದೂ ಪರಿಷತ್ ರಾಜ್ಯ ಸಂಘಟನಾ ಪ್ರಮುಖ್ ಪ್ರವೀಣ್ ವಾಲ್ಕೆ ಆಗಮನ

ರಾಷ್ಟ್ರೀಯ ಬಜರಂಗದಳ ಕಾರ್ಯ ಚಟುವಟಿಕೆ ಪರಿಶೀಲನೆ

ಅಂತರಾಷ್ಟ್ರೀಯ ಹಿಂದೂ ಪರಿಷತ್ ರಾಜ್ಯ ಸಂಘಟನಾ ಪ್ರಮುಖರಾದ ಪ್ರವೀಣ್‌ವಾಲ್ಕೆ ಭದ್ರಾವತಿ ನಗರಕ್ಕೆ ಆಗಮಿಸಿ ರಾಷ್ಟ್ರೀಯ ಬಜರಂಗದಳ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದರು. 
ಭದ್ರಾವತಿ, ಜು. ೩೧: ಅಂತರಾಷ್ಟ್ರೀಯ ಹಿಂದೂ ಪರಿಷತ್ ರಾಜ್ಯ ಸಂಘಟನಾ ಪ್ರಮುಖರಾದ ಪ್ರವೀಣ್‌ವಾಲ್ಕೆ ನಗರಕ್ಕೆ ಆಗಮಿಸಿ ರಾಷ್ಟ್ರೀಯ ಬಜರಂಗದಳ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದರು. 
ಹೊಸಮನೆ ಓಂ ಹಿಂದು ಕೋಟೆ ರಾಮಮಂದಿರದಲ್ಲಿ ನಡೆದ ಸಭೆಯಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಸೂಚಿಸಿದರು. 
ಜಿಲ್ಲಾಧ್ಯಕ್ಷ ಬಿ.ವಿ. ಚಂದನ್ ರಾವ್, ಜಿಲ್ಲಾ ಗೋರಕ್ಷಾ ಪ್ರಮುಖ್ ಚರಣ್ ದೇವಾಂಗ, ಜಿಲ್ಲಾ ಮಾಧ್ಯಮ ಪ್ರಮುಖ್ ಲತೇಶ್ ಶೆಟ್ಟಿ, ಶಿವಮೊಗ್ಗ ತಾಲೂಕು ಅಧ್ಯಕ್ಷ ಕಿರಣ್ ಗೌಡ, ಭದ್ರಾವತಿ ತಾಲೂಕು ಅಧ್ಯಕ್ಷ ಮನು ಗೌಡ, ಗ್ರಾಮಾಂತರ ಅಧ್ಯಕ್ಷ ನವೀನ್ ಕುಮಾರ್ ಹಾಗೂ ಇನ್ನಿತರರಿಗೆ ಜವಾಬ್ದಾರಿಗಳನ್ನು ಘೋಷಿಸಿದರು.  
ಓಂ  ಹಿಂದೂ ಕೋಟೆ ಅಧ್ಯಕ್ಷ ಮಂಜುನಾಥ್, ಪ್ರಮುಖರಾದ ಯೋಗೇಶ್, ರಂಗನಾಥ, ಟೀ ಗೋಪಾಲ, ಪರಶುರಾಮ್ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.