Sunday, August 2, 2020

ಭಾನುವಾರ ಒಂದು ಸೋಂಕು, ಒಂದು ಸಾವು


ಭದ್ರಾವತಿ, ಆ. ೧: ನಗರಸಭೆ ವ್ಯಾಪ್ತಿಯಲ್ಲಿ ಭಾನುವಾರ ಒಂದೇ ಒಂದು ಕೊರೊನಾ ಸೋಂಕು ಪತ್ತೆಯಾಗಿದ್ದು, ಅಲ್ಲದೆ ಓರ್ವ ಕೊರೋನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ. 
ಜಟ್‌ಪಟ್ ನಗರದ ೩೧ ವರ್ಷದ ಯುವಕನಿಗೆ ಸೋಂಕು ತಗುಲಿದ್ದು, ಚಿಕಿತ್ಸೆಗಾಗಿ ನಿಗದಿತ ಕೋವಿಡ್ ೧೯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಸುಮಾರು ಒಂದು ವಾರದಿಂದ ೫ಕ್ಕೂ ಅಧಿಕ ಸೋಂಕು ಪ್ರಕರಣಗಳು ಪತ್ತೆಯಾಗಿದ್ದವು. ಇದೀಗ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ. 
ನಗರಸಭೆ ಪೌರಾಯುಕ್ತ ಮನೋಹರ್ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ ನೇತೃತ್ವದ ತಂಡ ಸೋಂಕು ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ೧೦೦ ಹಾಗು ೨೦೦ ಮೀಟರ್ ವ್ಯಾಪ್ತಿಯನ್ನು ಕಂಟೈನ್ಮೆಂಟ್ ವಲಯವನ್ನಾಗಿಸಿದ್ದು, ಸೀಲ್‌ಡೌನ್‌ಗೊಳಿಸಲು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ. 
ಓರ್ವ ಸಾವು: 
ಕೆಲವು ದಿನಗಳ ಹಿಂದೆ ಸೋಂಕಿಗೆ ಒಳಗಾಗಿದ್ದ ನಗರದ ಬಿ.ಎಚ್ ರಸ್ತೆ ಸ್ವೀಟ್ ಅಂಗಡಿಯೊಂದರ ಸುಮಾರು ೪೩ ವರ್ಷದ ಮಾಲೀಕ ಮೃತಪಟ್ಟಿದ್ದಾರೆ. 

ಆ.೩ರಂದು ಪತ್ರಿಕಾ ದಿನಾಚರಣೆ

ಭದ್ರಾವತಿ, ಆ. ೨: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆ.೩ರಂದು ಪತ್ರಿಕಾ ದಿನಾಚರಣೆ ಹಳೇನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 
ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎನ್. ರವಿಕುಮಾರ್, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈದ್ಯ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 
ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ. 

ತಾಯಿಯ ಎದೆ ಹಾಲು ಮಗುವಿನ ಬುದ್ದಿಮತ್ತೆ, ಭಾವನಾತ್ಮಕ ದೃಢತೆ ಹೆಚ್ಚಿಸುತ್ತದೆ : ಡಾ. ವೀಣಾ ಭಟ್

ಭದ್ರಾವತಿಯಲ್ಲಿ ಮಹಿಳಾ ಆರೋಗ್ಯ ವೇದಿಕೆ, ನಯನ ಆಸ್ಪತ್ರೆ ಹಾಗು ಐಎಂಎ ತಾಲೂಕು ಶಾಖೆ ಮತ್ತು ಇನ್ನಿತರ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತರೀಕೆರೆ ರಸ್ತೆಯ ನಯನ ಸಭಾಂಗಣದಲ್ಲಿ "ವಿಶ್ವಸ್ತನ್ಯಪಾನ ಸಪ್ತಾಹ" ಹಮ್ಮಿಕೊಳ್ಳಲಾಗಿತ್ತು. 
ಭದ್ರಾವತಿ, ಆ. ೨: ತಾಯಿಯ ಎದೆ ಹಾಲು ಮಗುವನ್ನು ಶ್ವಾಸಕೋಶ, ಜೀರ್ಣಾಂಗ ಹಾಗು ಚರ್ಮದ ಸೋಂಕು ಸೇರಿದಂತೆ ಹಲವು ಸೋಂಕುಗಳಿಂದ ರಕ್ಷಿಸುವ ಜೊತೆಗೆ ಅಲರ್ಜಿ, ಅಸ್ತಮ ಸಂಭವವನ್ನು ಕಡಿಮೆಮಾಡುತ್ತದೆ. ಮಗುವಿನ ಬುದ್ದಿಮತ್ತೆಯನ್ನು ಹಾಗು ಭಾವನಾತ್ಮಕ ದೃಢತೆಯನ್ನು ಹೆಚ್ಚಿಸುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ) ತಾಲೂಕು ಅಧ್ಯಕ್ಷೆ, ಸ್ತ್ರೀ ರೋಗ ತಜ್ಞೆ ಡಾ. ವೀಣಾ ಭಟ್ ತಿಳಿಸಿದರು. 
  ಅವರು ಮಹಿಳಾ ಆರೋಗ್ಯ ವೇದಿಕೆ, ನಯನ ಆಸ್ಪತ್ರೆ ಹಾಗು ಐಎಂಎ ತಾಲೂಕು ಶಾಖೆ ಮತ್ತು ಇನ್ನಿತರ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತರೀಕೆರೆ ರಸ್ತೆಯ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ "ವಿಶ್ವಸ್ತನ್ಯಪಾನ ಸಪ್ತಾಹ" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
ತಾಯಿಗೆ ಸ್ತನ್ಯಪಾನ ನಿಸರ್ಗದ ವರದಾನವಾಗಿದ್ದು, ಎದೆ ಹಾಲು ಮಗುವಿಗೆ ಅತ್ಯಂತ ರುಚಿಕರವಾದ, ಪರಿಶುದ್ಧವಾದ, ಯಾವುದೇ ಖರ್ಚಿಲ್ಲದ, ಸದಾ ಸಿದ್ಧವಾದ, ಯಾವ ಸಾಂದ್ರತೆಗೆ ಬೇಕೋ ಅದೇ ಸಾಂದ್ರತೆಯಲ್ಲಿರುವ ಲಭ್ಯವಿರುವ ಅತ್ಯುತ್ಕೃಷ್ಟವಾದ ಆಹಾರವಾಗಿದೆ ಎಂದರು. 
ಸ್ತನ್ಯಪಾನ ಮಕ್ಕಳಲ್ಲಿ ಭವಿಷ್ಯದಲ್ಲಿ ಕಾಣಿಸಿಕೊಳ್ಳಬಹುದಾದ ಮಧುಮೇಹ, ಕ್ಯಾನ್ಸರ್, ಬೊಜ್ಜು ಇತ್ಯಾದಿಗಳಿಂದ ಮಗುವನ್ನು ರಕ್ಷಿಸುತ್ತದೆ. ಅಲ್ಲದೆ ತಾಯಂದಿರಲ್ಲೂ ರಕ್ತಸ್ರಾವ ಕಡಿಮೆಮಾಡಿ, ರಕ್ತಹೀನತೆ ತಡೆಗಟ್ಟಿ, ಮೂಳೆಗಳನ್ನು ಗಟ್ಟಿಯಾಗಿಸಿ, ಅನವಶ್ಯಕ ಬೊಜ್ಜನ್ನು ಕರಗಿಸುತ್ತದೆ. ಸ್ತನ, ಅಂಡಾಶಯ, ಗರ್ಭಕೋಶದ ಕ್ಯಾನ್ಸರ್‌ಗಳ ಸಂಭವ ಕಡಿಮೆ ಮಾಡುತ್ತದೆ. ತಾಯಿ ಮಗುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ ಎಂದರು. 
ತಾಯಂದಿರು ಗರ್ಭಧಾರಣೆಯ ಅವಧಿಯಲ್ಲಿ ಸ್ತನ್ಯಪಾನ ಮಾಡಿಸಲು ದೈಹಿಕ ಹಾಗೂ ಮಾನಸಿಕವಾಗಿ ಸಿದ್ಧರಾಗಬೇಕು. ಆರಂಭದ ೧೦೦೦ ದಿನಗಳ ಹೂಡಿಕೆ ಮಗುವಿನ ಇಡೀ ಭವಿಷ್ಯವನ್ನೇ ನಿರ್ಣಯಿಸುತ್ತದೆ. ಆದರೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇಂದಿಗೂ ತಾಯಂದಿರು ಮಗುವಿಗೆ ನಿರಂತರ ಸ್ತನ್ಯಪಾನ ಮಾಡಿಸಲು ಹಲವಾರು ಅಡ್ಡಿಆತಂಕಗಳಿವೆ. ಈ ಬಗ್ಗೆ  ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಸ್ತನ್ಯಪಾನ ಒಕ್ಕೂಟ, ಯುನಿಸೆಫ್ ಸೇರಿದಂತೆ ಎಲ್ಲಾ ಜಾಗತಿಕ ಸಂಸ್ಥೆಗಳು ೧೯೯೨ ರಿಂದ ಆ. ೧ ರಿಂದ ೭ರವರೆಗೆ ಪ್ರತಿವರ್ಷ ವಿಶ್ವಸ್ತನ್ಯಪಾನ ಸಪ್ತಾಹ ಆಚರಿಸಿಕೊಂಡು ಬರುತ್ತಿವೆ ಎಂದರು. 
ಮಹಿಳಾ ಆರೋಗ್ಯ ವೇದಿಕೆ ಕಾರ್ಯದರ್ಶಿ ಡಾ. ಆಶಾಧರ್ಮಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ವಿನುತ ಸತೀಶ್ ವಂದಿಸಿದರು. ಕಾರ್ಯಕ್ರಮದಲ್ಲಿ ಎದೆಹಾಲಿನ ಮಹತ್ವ ಸಾರುವ ಕರಪತ್ರಗಳನ್ನು ತಾಯಂದಿರಿಗೆ ವಿತರಿಸಲಾಯಿತು. 

೬ರಂದು ಸರ್.ಎಂ.ವಿ ಪ್ರತಿಮೆ ಲೋಕಾರ್ಪಣೆ

ಭದ್ರಾವತಿ, ಆ. ೨: ನಗರದ ರೈಲ್ವೆ ನಿಲ್ದಾಣದ ಬಳಿ ಬಿ.ಎಚ್ ರಸ್ತೆಗೆ ಹೊಂದಿಕೊಂಡಿರುವ ನಿಲ್ದಾಣದ ದ್ವಾರಬಾಗಿಲಿನಲ್ಲಿ ಪ್ರತಿಷ್ಠಾಪಿಸಲಾಗಿರುವ ನಗರದ ಅನ್ನದಾತ, ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯನವರ ಪ್ರತಿಮೆ ಆ.೬ರಂದು ಬೆಳಿಗ್ಗೆ ೧೦ ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. 
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್, ಶಾಸಕ ಬಿ.ಕೆ ಸಂಗಮೇಶ್ವರ್, ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್, ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ರೈಲ್ವೆ ಸಲಹಾ ಸಮಿತಿ ಸದಸ್ಯ ಎನ್. ವಿಶ್ವನಾಥರಾವ್ ಕೋರಿದ್ದಾರೆ.
ಅನ್ನಸಂತರ್ಪಣೆ: 
ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಸ್ನೇಹ ಜೀವಿ ಬಳಗದ ಸ್ನೇಹ ಜೀವಿ ಉಮೇಶ್ ಪೊಲೀಸ್ ಅವರಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. 

Saturday, August 1, 2020

ಕೊರೋನಾ ಸೋಂಕು : ಒಂದೇ ದಿನ ೩೦ ಪ್ರಕರಣ ಪತ್ತೆ

ಭದ್ರಾವತಿ, ಆ. ೧: ತಾಲೂಕಿನಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಸ್ಪೋಟಗೊಳ್ಳುತ್ತಿದ್ದು, ಶನಿವಾರ ಮತ್ತಷ್ಟು ಸ್ಪೋಟಗೊಂಡಿದೆ. ಒಂದೇ ದಿನ ೩೦ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದಾಗಿ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. 
ಶುಕ್ರವಾರ ೧೮ ಪ್ರಕರಣಗಳು ಪತ್ತೆಯಾಗಿದ್ದವು. ಇದೀಗ ೩೦ಕ್ಕೆ ಏರಿಕೆಯಾಗಿದ್ದು, ಇದುವರೆಗೂ ಇಷ್ಟೊಂದು ಪ್ರಕರಣ ಪತ್ತೆಯಾಗಿರಲಿಲ್ಲ. ಈ ನಡುವೆ ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈಗಾಗಲೇ ಬಹುತೇಕ ಪ್ರದೇಶಗಳು ಸೀಲ್‌ಡೌನ್ ಆಗಿವೆ. ಇದರಿಂದಾಗಿ ನಿವಾಸಿಗಳು ಸಾಕಷ್ಟು ಸಂಕಷ್ಟ ಎದುರಿಸುವಂತಾಗಿದೆ. 
ಅಲ್ಲದೆ ಗ್ರಾಮೀಣ ಭಾಗದಲ್ಲೂ ಸೋಂಕು ಹೆಚ್ಚಾಗುತ್ತಿದ್ದು, ಗ್ರಾಮಸ್ಥರು ಸಹ ಆತಂಕಕ್ಕೆ ಒಳಗಾಗಿದ್ದಾರೆ. ತಾಲೂಕು ಆಡಳಿತ, ನಗರಸಭೆ, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸೋಂಕು ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿವೆ. ಆದರೂ ಸಹ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. 

ಚೈನ್ ಲಿಂಕ್ ಮೂಲಕ ವಂಚನೆ ಪ್ರಕರಣ : ದೂರು ದಾಖಲು

ಭದ್ರಾವತಿ, ಆ. ೧:  ಚೈನ್ ಲಿಂಕ್ ಮೂಲಕ ಅನಧಿಕೃತವಾಗಿ ಔಷಧಿ ಉತ್ಪನ್ನಗಳನ್ನು ಮಾರಾಟ ಮಾಡುವ ಜೊತೆಗೆ ಸದಸ್ಯರಿಗೆ ವಂಚನೆ ಮಾಡುತ್ತಿರುವ ಕಂಪನಿಯೊಂದರ ವಿರುದ್ಧ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 
ಕೆಂಚೇನಹಳ್ಳಿ ಮಾವಿನಕೆರೆ ನಿವಾಸಿ ಸುರೇಶ ಎಂಬುವರು ದೂರು ನೀಡಿದ್ದು, ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ರಸ್ತೆ, ನಂದಿನಿ ಬೇಕರಿ ಮುಂಭಾಗ ಎಸ್‌ಡಬ್ಲ್ಯೂಎಸ್ ಮಾರ್ಕೇಟಿಂಗ್ ಸಲೂಷನ್ಸ್ ಪ್ರೈ.ಲಿ. ಸ್ಕೈ ವೇ ಸ್ವಾರ್ ಎಂಬ ಹೆಸರಿನ ಕಂಪನಿಯ ಔಷಧಿ ಎಂದು ಹೇಳಿಕೊಂಡು ಯಾವುದೇ ಪರವಾನಿಗೆ ಪಡೆಯದೇ ಔಷಧಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಸದಸ್ಯರಿಗೆ ಚೈನ್ ಲಿಂಕ್ ಮೂಲಕ ದಿನಕ್ಕೆ ೫,೦೦೦ ರು. ಸಂಭಾವನೆ ಬರುವುದಾಗಿ ನಂಬಿಸಿದ್ದು, ಪ್ರತಿ ಗ್ರಾಹಕರಿಂದ ೩,೦೦೦ ರು. ಹಣ ಪಡೆಯುವಂತೆ ಸೂಚಿಸುತ್ತಿದೆ. ಪ್ರತಿಯೊಬ್ಬ ಸದಸ್ಯರಿಗೂ ಪ್ರತ್ಯೇಕ ಐ.ಡಿ ನೀಡುತ್ತಿದ್ದು, ಆದರೆ ಯಾರಿಗೂ ಸಹ ಚೈನ್‌ಲಿಂಕ್ ಮೂಲಕ ಹಣ ಸಂದಾಯವಾಗಿರುವುದಿಲ್ಲ. ಈ ನಡುವೆ ಕಂಪನಿ ನೀಡುತ್ತಿರುವ ಔಷಧಿ ಉತ್ಪನ್ನಗಳು ಬಳಕೆದಾರರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಈ ಕುರಿತು ದೂರುಗಳು ಬರುತ್ತಿವೆ. ಈ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ. 
ಹಳ್ಳಿಕೆರೆ ಬಾರಂದೂರು ನಿವಾಸಿ ಮಂಜುನಾಥ, ಶಿವಮೊಗ್ಗ ಎಸ್‌ಡಬ್ಲ್ಯೂಎಸ್ ಮಾರ್ಕೇಟಿಂಗ್ ಸಲೂಷನ್ಸ್ ಪ್ರೈ.ಲಿ. ಸಿಇಓ ಮತ್ತು ಎಂ.ಡಿ ಶಶಿಧರ ಹಾಗೂ ಶಿವಮೊಗ್ಗ ಮಲವಗೊಪ್ಪ ಯಲವಟ್ಟಿ ಗ್ರಾಮದ ನಿವಾಸಿ ವಿನೂತ ಎಂಬುವರ ವಿರುದ್ಧ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಈ ಬಾರಿ ಸಹ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ

ಮೆರವಣಿಗೆ ಸೇರಿ ಯಾವುದೇ ಆಡಂಬರವಿಲ್ಲ, ೯ನೇ ದಿನ ಪ್ರತಿಷ್ಠಾಪನೆ : ವಿ. ಕದಿರೇಶ್ 

ಭದ್ರಾವತಿ, ಆ. ೧: ಪ್ರತಿಷ್ಠಿತ ಹಿಂದೂಪರ ಸಂಘಟನೆಗಳಲ್ಲಿ ಒಂದಾಗಿರುವ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಈ ಬಾರಿ ಸಹ ವಿನಾಯಕ ಚತುರ್ಥಿ ಅಂಗವಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಮಾಡಲಿದೆ ಎಂದು ಸಮಿತಿ ಅಧ್ಯಕ್ಷ, ನಗರಸಭೆ ಹಿರಿಯ ಸದಸ್ಯ ವಿ. ಕದಿರೇಶ್ ತಿಳಿಸಿದರು.
ಅವರು ಸಮಿತಿಯ ಸರ್ವ ಸದಸ್ಯರ ಹಾಗೂ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಕೊರೋನಾ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆ ಸಂಪ್ರದಾಯದಂತೆ ಸಮಿತಿ ವತಿಯಿಂದ ಈ ಬಾರಿ ಸಹ ಸರ್ಕಾರದ ನಿಯಮಗಳನ್ನು ಪಾಲಿಸಿ  ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಿ ಯಾವುದೇ ಆಡಂಬರವಿಲ್ಲದೆ ಸರಳವಾಗಿ ವಿನಾಯಕ ಚತುರ್ಥಿ ಆಚರಿಸಲಾಗುವುದು ಎಂದರು. 
ಶಿವಮೊಗ್ಗ ಮಾದರಿಯಂತೆ ೯ ದಿನಗಳ ಕಾಲ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ತಾಲೂಕು ಆಡಳಿತ, ನಗರಸಭೆ ಮತ್ತು ಪೊಲೀಸ್ ಇಲಾಖೆ ನೀಡುವ ಸಲಹೆ, ಸೂಚನೆಗಳನ್ನು ಪಾಲಿಸಲಾಗುವುದು. ಈ ಬಾರಿ ಮೆರವಣಿಗೆಯನ್ನು ರದ್ದುಪಡಿಸಲಾಗಿದ್ದು, ಸರಳವಾಗಿ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ಸರ್ಕಾರದ ಇಲಾಖೆ ಸೇರಿದಂತೆ ಸಮಸ್ತ ನಾಗರಿಕರು ಸಹಕರಿಸಬೇಕೆಂದು ಮನವಿ ಮಾಡಿದರು.