Friday, August 7, 2020

ಗ್ರಾ.ಪಂ. ಡಿಇಓ ಮೃತ ಕುಟುಂಬಕ್ಕೆ ಸಹಾಯಾಸ್ತ : ೧.೫೦ ಲಕ್ಷ ರು. ಬಾಂಡ್ ವಿತರಣೆ

ಭದ್ರಾವತಿ ತಾಲೂಕಿನ ಅನವೇರಿ ಗ್ರಾಮ ಪಂಚಾಯಿತಿ ಡಿಇಓ ಪ್ರದೀಪ್‌ರವರು ನಿಧನ ಹೊಂದಿದ್ದು, ಸಂಕಷ್ಟದಲ್ಲಿರುವ ಮೃತರ ಕುಟುಂಬಕ್ಕೆ  ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಾಯಾಸ್ತ ನೀಡುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. 

ಭದ್ರಾವತಿ, ಆ. ೭: ಅನವೇರಿ ಗ್ರಾಮ ಪಂಚಾಯಿತಿ ಡಿಇಓ ಪ್ರದೀಪ್‌ರವರು ನಿಧನ ಹೊಂದಿದ್ದು, ಸಂಕಷ್ಟದಲ್ಲಿರುವ ಮೃತರ ಕುಟುಂಬಕ್ಕೆ  ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಾಯಾಸ್ತ ನೀಡುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. 

   ಶುಕ್ರವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮೃತರ ಪುತ್ರಿ ಮತ್ತು ಪತ್ನಿ ಹೆಸರಿನಲ್ಲಿ ಜಂಟಿಯಾಗಿ ೧,೫೦,೦೦೦ ರು. ಮೌಲ್ಯದ ಸಹಾಯಾಸ್ತದ  ಬಾಂಡ್ ವಿತರಣೆ ಮಾಡಲಾಯಿತು. 

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಮಂಜುನಾಥ್, ಜಿಲ್ಲಾ ಪಂಚಾಯಿತಿ ಸಿ.ಎ.ಓ ಪುರಾಣಿಕ್, ಸಹಾಯಕ ನಿರ್ದೇಶಕ ಸಂತೋಷ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಲೂಕಿನ ವಿವಿಧೆಡೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್ ನೇತೃತ್ವ ತಂಡ ಪರಿಶೀಲನೆ

ಭದ್ರಾವತಿ ನಗರದ ಹೃದಯ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಬಳಿ ಇರುವ ಹೊಸ ಸೇತುವೆಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್ ನೇತೃತ್ವ ತಂಡ ಪರಿಶೀಲನೆ ನಡೆಸಿತು. 

ಭದ್ರಾವತಿ, ಆ. ೭: ತಾಲೂಕಿನ ವಿವಿಧೆಡೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಹಿರಿಯ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. 

ಮಳೆಗಾಲದಲ್ಲಿ ಜಲಾಶಯದಿಂದ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ನಗರದ ಹೃದಯ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಬಳಿ ಇರುವ ಹೊಸ ಸೇತುವೆ ಸಂಪೂರ್ಣವಾಗಿ ಮುಳುಗಡೆಗೊಳ್ಳುತ್ತಿದ್ದು, ಅಲ್ಲದೆ ಪ್ರತಿ ಬಾರಿ ಸೇತುವೆ ಹಾನಿಗೊಳಗಾಗುತ್ತಿದೆ. ಈ ಹಿನ್ನಲೆಯಲ್ಲಿ ಮಣಿವಣ್ಣನ್ ತಂಡ ಸೇತುವೆ ಪರಿಶೀಲನೆ ನಡೆಸಿತು. 

ತಹಸೀಲ್ದಾರ್ ಎಚ್.ಸಿ ಶಿವಕುಮಾರ್ ಹಾಗೂ ಪೌರಾಯುಕ್ತ ಮನೋಹರ್ ಸೇತುವೆಯಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ವಿವರಿಸಿದರು. 

ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ನೇತೃತ್ವದ ತಂಡ ಭದ್ರಾವತಿ ತಾಲೂಕಿನ ಬಿಆರ್‌ಪಿಯಲ್ಲಿರುವ ಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ, ಕಂದಾಯಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಭದ್ರಾ ಜಲಾಶಯಕ್ಕೆ ಜಿಲ್ಲಾಧಿಕಾರಿ ತಂಡ ಭೇಟಿ: 

ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ನೇತೃತ್ವದ ತಂಡ ತಾಲೂಕಿನ ಬಿಆರ್‌ಪಿಯಲ್ಲಿರುವ ಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜಲಾಶಯದ ಅಧಿಕಾರಿಗಳು ಪ್ರಸ್ತುತ ಜಲಾಶಯದಲ್ಲಿ ಭರ್ತಿಯಾಗಿರುವ ನೀರಿನ ಪ್ರಮಾಣ, ಒಳ ಹಾಗೂ ಹೊರ ಹರಿವು ಮತ್ತು ಜಲಾಶಯದಿಂದ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ಪ್ರವಾಹಕ್ಕೆ ಒಳಗಾಗುವ ಪ್ರದೇಶಗಳ ಮಾಹಿತಿಗಳನ್ನು ನೀಡಿದರು. 

ತಾಲೂಕಿನಾದ್ಯಂತ ಮಳೆ : ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಲು ಶಾಸಕ ಸಂಗಮೇಶ್ವರ್ ಸೂಚನೆ

 

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. 

ಭದ್ರಾವತಿ, ಆ. ೭: ತಾಲೂಕಿನಾದ್ಯಂತ ಮಳೆ ಹೆಚ್ಚಾಗಿದ್ದು, ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು. 

ಅವರು ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳಿಗೆ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗು ನಗರಸಭೆ ಆಡಳಿತ ತಕ್ಷಣ ಸ್ಪಂದಿಸಬೇಕೆಂದರು. 

ಪ್ರವಾಹ, ರಸ್ತೆಗಳಿಗೆ ಮರಗಳು ಬಿದ್ದು ಸಂಚಾರಕ್ಕೆ ತೊಂದರೆ ಕಂಡು ಬಂದಲ್ಲಿ, ವಿದ್ಯುತ್ ಅಡಚಣೆ ಉಂಟಾದಲ್ಲಿ ಮೆಸ್ಕಾಂ, ಅರಣ್ಯ ಹಾಗು ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ತಕ್ಷಣ ಸ್ಪಂದಿಸಬೇಕು. ಅಗ್ನಿಶಾಮಕ ಇಲಾಖೆ ಸಹ ದಿನದ ೨೪ ಗಂಟೆ ಸೇವೆಗೆ ಲಭ್ಯವಿರಬೇಕು. ಒಟ್ಟಾರೆ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ ಉಂಟಾಗದಂತೆ ಎಚ್ಚರವಹಿಸಬೇಕೆಂದರು. 

೧೦೦ ಹಾಸಿಗೆಯುಳ್ಳ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-೧೯ ನಿರ್ವಹಣೆ ಸಮರ್ಪಕವಾಗಿ ಕೈಗೊಳ್ಳುತ್ತಿಲ್ಲ.  ಆಸ್ಪತ್ರೆಗೆ ಬರುವ ಇತರೆ ರೋಗಿಗಳಿಗೆ ಸರಿಯಾಗಿ ತಪಾಸಣೆ ನಡೆಸುತ್ತಿಲ್ಲ. ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳುತ್ತಿಲ್ಲ. ಇತ್ಯಾದಿ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ ಎಂದು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ ವಿರುದ್ಧ ಶಾಸಕರು ಅಸಮಧಾನ ವ್ಯಕ್ತಪಡಿಸಿದರು. 

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ತಾಲೂಕು ಪಂಚಾಯಿತಿ ಆಡಳಿತ ನೋಡಿಕೊಳ್ಳಬೇಕು. ರೈತರಿಗೆ ಮಳೆಯಿಂದ ಎದುರಾಗುವ ಸಮಸ್ಯೆಗಳಿಗೆ ಕೃಷಿ ಇಲಾಖೆ ಪೂರಕವಾಗಿ ಸ್ಪಂದಿಸಬೇಕೆಂದರು. 

ಪೌರಾಯುಕ್ತ ಮನೋಹರ್ ಮಾತನಾಡಿ, ಜಲಾಶಯದಿಂದ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ಸ್ವಲ್ಪ ಸಮಸ್ಯೆಯಾಗಲಿದೆ. ಉಳಿದಂತೆ ಸಂಭವಿಸಬಹುದಾದ ಘಟನೆಗಳಿಗೆ ಸ್ಪಂದಿಸಲು ಈಗಾಗಲೇ ಅಧಿಕಾರಿಗಳ ತಂಡ ರಚಿಸಲಾಗಿದೆ. ಅಲ್ಲದೆ ಸಾರ್ವಜನಿಕರ ಕುಂದುಕೊರತೆಗಳಿಗೆ ಸಹಾಯವಾಣಿ ಸಹ ನೀಡಲಾಗಿದೆ ಎಂದರು. 

ಕೃಷಿ ಅಧಿಕಾರಿ ಶಶಿಧರ್ ಮಾತನಾಡಿ, ಪ್ರಸ್ತುತ ತಾಲೂಕಿನಲ್ಲಿ ಭತ್ತ ನಾಟಿ ಕಾರ್ಯ ಪೂರ್ಣಗೊಂಡಿದೆ. ಕಳೆದ ೨-೩ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದರು. 

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಮಂಜುನಾಥ್, ಪೊಲೀಸ್ ಉಪಾಧೀಕ್ಷಕ ಸುಧಾಕರನಾಯ್ಕ ಮತ್ತು ವಲಯ ಅರಣ್ಯಾಧಿಕಾರಿ ಮಂಜುನಾಥ್ ಇಲಾಖೆ ವತಿಯಿಂದ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.  ಉಪ ವಲಯ ಅರಣ್ಯಾಧಿಕಾರಿ ದಿನೇಶ್‌ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

Thursday, August 6, 2020

ಕವನ ಸ್ಪರ್ಧೆಯಲ್ಲಿ ಎಚ್.ಆರ್ ಶ್ರೀಧರೇಶ್ ಭಾರದ್ವಾಜ್‌ಗೆ ಪ್ರಥಮ ಸ್ಥಾನ

ಭದ್ರಾವತಿ, ಆ. ೬: ಚಿತ್ರದುರ್ಗ ಹಿರಿಯೂರು ತಾಲೂಕಿನ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಕೇಂದ್ರ ಘಟಕ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಅಂತರ್ಜಾಲ ಕವನ ಸ್ಪರ್ಧೆಯಲ್ಲಿ ನಗರದ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನ ಪ್ರಾಧ್ಯಾಪಕ ಎಚ್.ಆರ್. ಶ್ರೀಧರೇಶ್ ಭಾರದ್ವಾಜ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 
ಶ್ರಾವಣ ಮಾಸದ ತುಂತುರು ಹನಿಗಳ ಸಂಗಮ ಎಂಬ ವಿಷಯದಡಿ ಪುರುಷರ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕವನ ಸ್ಪರ್ಧೆಯಲ್ಲಿ ಭಾರದ್ವಾಜ್‌ರವರು ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. 
ಉಳಿದಂತೆ ಶ್ರಾವಣ ಸಿರಿ ಎಂಬ ವಿಷಯದಡಿ ಮಹಿಳಾ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕವನ ಸ್ಪರ್ಧೆಯಲ್ಲಿ ನಗರದ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಎಚ್.ಆರ್ ಸುಧಾ ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ. 

ಶಿಲಾನ್ಯಾಸದಂದು ರಾಮ ಮಂದಿರ ಭಕ್ತರ ಆರಾಧನೆಗೆ ಮುಕ್ತ

ಕಬಳಿಕೆ ಯತ್ನ ತಪ್ಪಿಸಿದ ಶಾಸಕ ಬಿ.ಕೆ ಸಂಗಮೇಶ್ವರ್ 

ಭದ್ರಾವತಿ ತಾಲೂಕಿನ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಹುಣಸೇಕಟ್ಟೆ ಗ್ರಾಮದ ಬಿ.ಕೆ ಸಂಗಮೇಶ್ವರ್ ಬಡಾವಣೆಯ ಸರ್ವೆ ನಂ.೮ ಮತ್ತು ೧೪ರಲ್ಲಿ ಪಾಳುಬಿದ್ದಿದ್ದ ಶ್ರೀ ರಾಮ ಮಂದಿರಕ್ಕೆ ಸುಣ್ಣಬಣ್ಣ ಬಳಿದು ಬಾಳೆದಿಂಡು, ಮಾವಿನ ಎಲೆ ಹಸಿರು ತೋರಣಗಳಿಂದ ಶೃಂಗಾರಗೊಳಿಸುತ್ತಿರುವುದು. 
ಭದ್ರಾವತಿ: ಸುಮಾರು ೭ ದಶಕಗಳ ಇತಿಹಾಸವಿದ್ದು, ಪಾಳುಬಿದ್ದಿದ್ದ ಶ್ರೀ ರಾಮಮಂದಿರವೊಂದು ಆಯೋಧ್ಯೆ ರಾಮಮಂದಿರ ಶಿಲಾನ್ಯಾಸದಂದು ಪುನಃ ಭಕ್ತರ ಆರಾಧನೆಗೆ ಮುಕ್ತಗೊಂಡಿರುವ ಘಟನೆ ನಡೆದಿದೆ.  
ತಾಲೂಕಿನ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಹುಣಸೇಕಟ್ಟೆ ಗ್ರಾಮದ ಬಿ.ಕೆ ಸಂಗಮೇಶ್ವರ್ ಬಡಾವಣೆಯ ಸರ್ವೆ ನಂ.೮ ಮತ್ತು ೧೪ರಲ್ಲಿ ಶ್ರೀ ರಾಮ ಮಂದಿರವಿದ್ದು, ಹಲವಾರು ವರ್ಷಗಳಿಂದ ಈ ಮಂದಿರ ಪಾಳು ಬಿದ್ದಿತ್ತು. ಈ ನಡುವೆ ಮಂದಿರದ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಳ್ಳಲು ಯತ್ನಿಸುತ್ತಿದ್ದರು. ಈ ವಿಚಾರವನ್ನು ಸ್ಥಳೀಯ ಮುಖಂಡರು, ಗ್ರಾಮಸ್ಥರು ಶಾಸಕ ಬಿ.ಕೆ ಸಂಗಮೇಶ್ವರ್ ಗಮನಕ್ಕೆ ತಂದಿದ್ದರು. 
ಶಾಸಕರು ಒತ್ತುವರಿ ಯತ್ನವನ್ನು ತಡೆದು ಜಾಗವನ್ನು ರಾಮಮಂದಿರದ ಅಧೀನದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನಲೆಯಲ್ಲಿ ರಾಮಮಂದಿರಕ್ಕೆ ಸುಣ್ಣಬಣ್ಣ ಬಳಿದು ಆಯೋಧ್ಯೆ ಶ್ರೀ ರಾಮ ಮಂದಿರ ಶಿಲಾನ್ಯಾಸದಂದು ವಿಶೇಷವಾಗಿ ಪೂಜೆ ಸಲ್ಲಿಸುವ ಮೂಲಕ ಭಕ್ತರ ಆರಾಧನೆಗೆ ಮುಕ್ತಗೊಳಿಸಲಾಯಿತು. 
ಭದ್ರಾವತಿ ತಾಲೂಕಿನ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಹುಣಸೇಕಟ್ಟೆ ಗ್ರಾಮದ ಬಿ.ಕೆ ಸಂಗಮೇಶ್ವರ್ ಬಡಾವಣೆಯ ಸರ್ವೆ ನಂ.೮ ಮತ್ತು ೧೪ರಲ್ಲಿ ಪಾಳುಬಿದ್ದಿದ್ದ ಶ್ರೀ ರಾಮ ಮಂದಿರದಲ್ಲಿ ಆಯೋಧ್ಯೆ ರಾಮಮಂದಿರ ಶಿಲಾನ್ಯಾಸದಂದು ವಿಶೇಷ ಪೂಜೆ ಸಲ್ಲಿಸಿ ಭಕ್ತರ ಆರಾಧನೆಗೆ ಮುಕ್ತಗೊಳಿಸಲಾಯಿತು. 
ಅಲ್ಲದೆ ಕೊರೋನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೀಘ್ರವಾಗಿ ಗುಣಮುಖರಾಗುವಂತೆ ಪ್ರಾರ್ಥಿಸಲಾಯಿತು. 
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುನಿತಾ ನಂಬಿಯಾರ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷಪ್ಪ ಸೇರಿದಂತೆ ಇನ್ನಿತರ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.  

ದೇಶಭಕ್ತಿ ಗೀತೆ ಸ್ಪರ್ಧೆ : ವಿಜೇತರ ಆಯ್ಕೆ


ಭದ್ರಾವತಿ, ಆ. ೬: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆನ್‌ಲೈನ್ ಮುಖಾಂತರ ಹಮ್ಮಿಕೊಳ್ಳಲಾಗಿದ್ದ ದೇಶಭಕ್ತಿ ಗೀತೆಗಳ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಲಾಗಿದೆ. 
ಜ್ಯೂನಿಯರ್ ವಿಭಾಗದಲ್ಲಿ ನಗರದ ಚಂದನ ಪ್ರಥಮ ಸ್ಥಾನ, ಅಕ್ಷರಿಕೆ ದ್ವಿತೀಯ ಸ್ಥಾನ ಮತ್ತು ಶಿವಮೊಗ್ಗದ ಜಿ. ಸಾನ್ವಿ ತೃತೀಯ ಸ್ಥಾನ ಪಡೆದುಕೊಂಡಿದ್ದು, ಸೀನಿಯರ್ ವಿಭಾಗದಲ್ಲಿ ಶರಾವತಿ ಪ್ರಥಮ ಸ್ಥಾನ, ಸಿ.ಎಸ್ ಆನಗ ದ್ವಿತೀಯ ಸ್ಥಾನ ಹಾಗೂ ಶಿವಮೊಗ್ಗದ ಗಾಯತ್ರಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿಜೇತರನ್ನು ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ. 

ಫ್ರಾನ್ಸಿಸ್ ಡಯಾಸ್ ನಿಧನ

ಪ್ರಾನ್ಸಿಸ್ ಡಯಾಸ್ 
ಭದ್ರಾವತಿ, ಆ. ೬: ತಾಲೂಕು ಪಂಚಾಯಿತಿ ನಿವೃತ್ತ ಅಧಿಕಾರಿ ರೀಟಾರವರ ಪತಿ, ಎಂಪಿಎಂ ನಿವೃತ್ತ ಕಾರ್ಮಿಕ ಫ್ರಾನ್ಸಿಸ್ ಡಯಾಸ್(೭೦) ನಿಧನ ಹೊಂದಿದರು. 
ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ, ೪ ಮಂದಿ ಸಹೋದರಿಯರು, ೩ ಮಂದಿ ಸಹೋದರರು ಸೇರಿದಂತೆ ಬಂಧು-ಬಳಗ ಬಿಟ್ಟಗಲಿದ್ದಾರೆ. ಫ್ರಾನ್ಸಿಸ್ ಡಯಾಸ್ ಹವ್ಯಾಸಿ ಛಾಯಾಗ್ರಾಹಕರು ಸಹ ಆಗಿದ್ದರು. ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಎನ್. ಕೃಷ್ಣಪ್ಪ, ಹಿರಿಯ ಪತ್ರಕರ್ತ ರವೀಂದ್ರನಾಥ(ಬ್ರದರ‍್ಸ್) ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು. 
ನಗರದ ಮಿಲ್ಟ್ರಿಕ್ಯಾಂಪ್ ಬಳಿ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತ ಸಮಾಧಿಯಲ್ಲಿ ಗುರುವಾರ ಅಂತ್ಯ ಸಂಸ್ಕಾರ ನೆರವೇರಿತು.