Sunday, August 9, 2020

ಬಿಜೆಪಿ ಮಹಿಳಾ ಮೋರ್ಚಾ ನೂತನ ಪದಾಧಿಕಾರಿಗಳು

ಭದ್ರಾವತಿ, ಆ. ೯: ಬಿಜೆಪಿ ಮಹಿಳಾ ಮೋರ್ಚಾ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ತಿಳಿಸಿದ್ದಾರೆ.
ಅಧ್ಯಕ್ಷರಾಗಿ ಬಿ.ಎಸ್.ಕಲ್ಪನಾ, ಉಪಾಧ್ಯಕ್ಷರಾಗಿ ಜಯಲಕ್ಷ್ಮಿ,  ರೇಖಾ, ಪದ್ಮಾವತಿ, ಕಾರ್ಯದರ್ಶಿಯಾಗಿ ಕವಿತಾ, ವಿ.ಶ್ಯಾಮಲಾ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಂ.ಮಂಜುಳಾ, ಖಜಾಂಚಿಯಾಗಿ ಶಕುಂತಲಾ ಹಾಗು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಉಷಾ, ರುಕ್ಮಿಣಿ, ಉಮಾ, ಲಕ್ಷ್ಮಿ, ಉಜಾಲಾ ಬಾಯಿ, ವನಜಾಕ್ಷಿ, ಭಾಗ್ಯ, ಸುಶೀಲಾ, ಆರತಿ ಸಿಂಗ್, ರಾಜೇಶ್ವರಿ, ಸಿಂಧು ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳನ್ನು ಮಂಡಲ ಅಧ್ಯಕ್ಷರು ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಮುಖಂಡರು ಅಭಿನಂದಿಸಿದ್ದಾರೆ.




ಸಮಾಜ ಸೇವಕ ರೋಸಯ್ಯ ನಿಧನ

ರೋಸಯ್ಯ
ಭದ್ರಾವತಿ, ಆ. ೯: ಜನ್ನಾಪುರ ಎನ್‌ಟಿಬಿ ಲೇಔಟ್ ನಿವಾಸಿ, ಕ್ರೈಸ್ತ ಸಮಾಜದ ಮುಖಂಡ ರೋಸಯ್ಯ (೬೯) ನಿಧನ ಹೊಂದಿದರು.
ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ ಸೇರಿದಂತೆ ಬಂಧು-ಬಳಗ ಬಿಟ್ಟಗಲಿದ್ದಾರೆ. ರೋಸಯ್ಯ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಜೊತೆಗೆ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು.
ಮೃತರ ಅಂತ್ಯಕ್ರಿಯೆ ಭಾನುವಾರ ಮಿಲ್ಟ್ರಿಕ್ಯಾಂಪ್ ಸಮೀಪ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತರ ಸಮಾಧಿ ಭೂಮಿಯಲ್ಲಿ ನೆರವೇರಿತು. ನಗರದ ವಿವಿಧ ಸಂಘಟನೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

Saturday, August 8, 2020

ಭದ್ರಾವತಿಯಲ್ಲಿ ಒಂದೇ ದಿನ ೨೬ ಸೋಂಕು

ಭದ್ರಾವತಿ, ಆ. ೮: ತಾಲೂಕಿನಾದ್ಯಂತ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಶನಿವಾರ ಒಂದೇ ದಿನ ೨೬ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ತಾಲೂಕು ಕಛೇರಿಯ ೮ ಮಹಿಳೆಯರು, ೬ ವರ್ಷದ ಗಂಡು ಮಗುವಿಗೆ ಸೋಂಕು ತಗುಲಿದೆ.
    ತಾಲೂಕಿನ ಹೊಳೆಹೊನ್ನೂರಿನಲ್ಲಿ ೪೭ ವರ್ಷದ ವ್ಯಕ್ತಿ, ೨೪ ವರ್ಷದ ಯುವಕ, ಆಗರದಹಳ್ಳಿಯಲ್ಲಿ ೪೦ ವರ್ಷದ ಮಹಿಳೆ, ತಾಲೂಕು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ೨೯, ೫೫, ೨೨, ೨೩, ೪೦, ೨೭, ೩೧ ಮತ್ತು ೨೮ ವರ್ಷದ ಮಹಿಳಾ ಸಿಬ್ಬಂದಿಗಳು, ಹಾಲಪ್ಪ ವೃತ್ತದಲ್ಲಿ ೩೫ ವರ್ಷದ ಮಹಿಳೆ, ಉಪ್ಪಾರ ಬೀದಿಯಲ್ಲಿ ೫೩ ವರ್ಷದ ಮಹಿಳೆ, ಭಂಡಾರಹಳ್ಳಿಯಲ್ಲಿ ೪೭ ವರ್ಷದ ವ್ಯಕ್ತಿ, ಕಡದಕಟ್ಟೆಯಲ್ಲಿ ೫೦ ವರ್ಷದ ವ್ಯಕ್ತಿ, ಹುತ್ತಾ ಕಾಲೋನಿಯಲ್ಲಿ ೬ ವರ್ಷದ ಗಂಡು ಮಗು, ಹಳೇನಗರದ ಹಳದಮ್ಮ ಬೀದಿಯಲ್ಲಿ ೨೫  ವರ್ಷದ ಯುವಕ, ಕಬಳಿಕಟ್ಟೆಯಲ್ಲಿ ೨೦ ವರ್ಷದ ಯುವಕ, ೪೧ ವರ್ಷದ ಮಹಿಳೆ, ಹೊಸ ಸಿದ್ದಾಪುರದಲ್ಲಿ ೩೬ ವರ್ಷದ ಮಹಿಳೆ, ಹುತ್ತಾ ಕಾಲೋನಿಯಲ್ಲಿ ೪೪ ವರ್ಷದ ವ್ಯಕ್ತಿ, ಖಾಜಿ ಮೊಹಲ್ಲಾದಲ್ಲಿ ೪೮ ವರ್ಷದ ಮಹಿಳೆ ಮತ್ತು ಹೊಸಮನೆಯಲ್ಲಿ ೨೫ ವರ್ಷದ ಯುವಕ ಸೇರಿದಂತೆ ಒಟ್ಟು ೨೬ ಮಂದಿಗೆ ಸೋಂಕು ತಗುಲಿದೆ.
      ನಗರಸಭೆ ಪೌರಾಯುಕ್ತ ಮನೋಹರ್ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ನಿರೀಕ್ಷಕ ನೀಲೇಶ್‌ರಾಜ್ ನೇತೃತ್ವದ ತಂಡ ಸೋಂಕು ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ೧೦೦ ಹಾಗು ೨೦೦ ಮೀಟರ್ ವ್ಯಾಪ್ತಿಯನ್ನು ಕಂಟೈನ್ಮೆಂಟ್ ವಲಯವನ್ನಾಗಿಸಿದ್ದು, ಸೀಲ್‌ಡೌನ್‌ಗೊಳಿಸಲು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ.

ಭದ್ರಾ ಅಭಯಾರಣ್ಯಕ್ಕೆ ನಟ ದರ್ಶನ್ : ೨ ದಿನ ವೀಕ್ಷಣೆ

ಭದ್ರಾವತಿ ತಾಲೂಕಿನ ಭದ್ರಾ ಅಭಯಾರಣ್ಯ ವೀಕ್ಷಣೆಗೆ ಆಗಮಿಸಿರುವ ಚಿತ್ರ ನಟ ದರ್ಶನ್ ನೇತೃತ್ವದ ತಂಡ.

ಭದ್ರಾವತಿ ತಾಲೂಕಿನ ಭದ್ರಾ ಅಭಯಾರಣ್ಯ ವೀಕ್ಷಣೆಗೆ ಆಗಮಿಸಿದ ಚಿತ ನಟ ದರ್ಶನ್‌ಗೆ ಸ್ಥಳೀಯ ಮಹಿಳೆಯೊಬ್ಬರು ರಾಖಿ ಕಟ್ಟುವ ಮೂಲಕ ಶುಭ ಹಾರೈಸಿದರು.
ಭದ್ರಾವತಿ, ಆ. ೮: ತಾಲೂಕಿನ ಭದ್ರಾ ಆಭಯಾರಣ್ಯ ವೀಕ್ಷಣೆಗೆ ನಟ ದರ್ಶನ್ ನೇತೃತ್ವದ ತಂಡ ಆಗಮಿಸಿದ್ದು, ಬಿಆರ್‌ಪಿ ಅರಣ್ಯ ಇಲಾಖೆ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದೆ.
        ಕೆಲವು ದಿನಗಳ ಹಿಂದೆ ದರ್ಶನ್ ನೇತೃತ್ವದ ತಂಡ ಶ್ರೀ ಮಹಾದೇಶ್ವರ ಬೆಟ್ಟದ ದಟ್ಟಾರಣ್ಯದಲ್ಲಿ ವೀಕ್ಷಣೆ ನಡೆಸಿ ಸಸಿ ನೆಡುವ ಮೂಲಕ ವನ ಮಹೋತ್ಸವ ಆಚರಿಸಿತ್ತು. ಇದೀಗ ೨ ದಿನಗಳ ಕಾಲ ಅರಣ್ಯ ವೀಕ್ಷಣೆಗೆ ಆಗಮಿಸಿದ್ದು, ಕಾಡಿನ ವ್ಯನ್ಯಜೀವಿಗಳ ಕುರಿತು ಹೆಚ್ಚಿನ ಕಾಳಜಿ ಹೊಂದಿರುವ ದರ್ಶನ್ ಛಾಯಾಗ್ರಹಣದಲ್ಲೂ ಹೆಚ್ಚಿನ ಆಸಕ್ತಿ ಹೊಂದಿದ್ದು, ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಭದ್ರಾ ಅಭಯಾರಣ್ಯ ಪ್ರವೇಶಿಸಿದ ತಂಡ ರಾತ್ರಿ ಹಿಂದಿರುಗಿದೆ. ಭಾನುವಾರ ಸಹ ಅರಣ್ಯ ವೀಕ್ಷಣೆ ನಡೆಸಿ ಸಂಜೆ ತೆರಳಿಲಿದೆ.
        ಭದ್ರಾ ಜಲಾಶಯ ವೀಕ್ಷಣೆ:
     ದರ್ಶನ್ ನೇತೃತ್ವದ ತಂಡ ಮೈತುಂಬಿಕೊಂಡಿರುವ ಭದ್ರಾ ಜಲಾಶಯದ ವೀಕ್ಷಣೆ ಸಹ ನಡೆಸಿ ಪ್ರಕೃತಿ ಸೌಂದರ್ಯವನ್ನು ಕಂಡು ವಿಸ್ಮಯಗೊಂಡಿದೆ.
        ಅಭಿಮಾನಿಗಳ ದಂಡು:
        ನಟ ದರ್ಶನ್ ಬಂದಿರುವ ಮಾಹಿತಿ ತಿಳಿದು ಅವರ ಅಭಿಮಾನಿಗಳ ದಂಡು ವಾಸ್ತವ್ಯ ಹೂಡಿರುವ ಅತಿಥಿ ಗೃಹಕ್ಕೆ ಭೇಟಿ ನೀಡಿದ್ದು, ಆದರೆ ಪೊಲೀಸರು ಅಭಿಮಾನಿಗಳ ಭೇಟಿಗೆ ಹೆಚ್ಚಿನ ಅವಕಾಶ ಕೊಡಲಿಲ್ಲ. ಈ ನಡುವೆ ಸ್ಥಳೀಯ ಮಹಿಳೆಯೊಬ್ಬರು ದರ್ಶನ್ ಅವರಿಗೆ ರಾಖಿ ಕಟ್ಟುವ ಮೂಲಕ ಶುಭ ಹಾರೈಸಿದರು.
ದರ್ಶನ್ ನೇತೃತ್ವದ ತಂಡದಲ್ಲಿ ಹಾಸ್ಯ ನಟ ಚಿಕ್ಕಣ್ಣ ಸಹ ಇದ್ದು, ತಂಡಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ವ್ಯನ್ಯ ಜೀವಿ ಸಲಹಾ ಸಮಿತಿ ಸದಸ್ಯ ಸ್ವರೂಪ್ ಜೈನ್ ಸಹ ಮಾರ್ಗದರ್ಶನ ನೀಡಿದರು.

ಮಣಿಪಾಲ ಆರೋಗ್ಯ ಕಾರ್ಡ್ ನೋಂದಾಣೆಗೆ ಚಾಲನೆ

ಭದ್ರಾವತಿ, ಆ. ೮: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆಯೂ ಮಣಿಪಾಲ ಆರೋಗ್ಯ ಕಾರ್ಡ್ ೨೦೨೦ನೋಂದಾಣೆಗೆ ಚಾಲನೆ ನೀಡಲಾಗಿದೆ. ರಿಯಾಯಿತಿ ದರದಲ್ಲಿ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸಬೇಕೆಂಬ ಉದ್ದೇಶದೊಂದಿಗೆ ಆರಂಭಗೊಂಡ ಯೋಜನೆ ಪ್ರಸ್ತುತ ೨೦ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಕಾರ್ಡ್‌ಗಳನ್ನು ಸುಲಭವಾಗಿ ನೋಂದಾಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ.
     ಸರಳ ಹಾಗೂ ಪೂರ್ವ ಸಂಖ್ಯಾ ಮುದ್ರಿತ ಸ್ಮಾರ್ಟ್ ಕಾರ್ಡ್ ಜಾರಿಗೆ ತಂದಿದ್ದು, ಈ ಸ್ಮಾರ್ಟ್ ಕಾರ್ಡನ್ನು ಕಾರ್ಡುದಾರರಿಗೆ ಸ್ಥಳದಲ್ಲೇ ನೀಡಲಾಗುವುದು. ಪ್ರತಿಯೊಬ್ಬರು ಯಾವಾಗಲು ತಮ್ಮ ಬಳಿ ಇಟ್ಟು ಕೊಳ್ಳಲು ಅನುಕೂಲವಾಗುವಂತೆ  ಸ್ಮಾರ್ಟ್ ಕಾರ್ಡ್ ರೂಪಿಸಲಾಗಿದೆ.
        ೧ ಮತ್ತು ೨ ವರ್ಷದ ನೋಂದಾಣಿಗೆ ಅವಕಾಶವಿದ್ದು, ಈ ಬಾರಿ ಈ ಯೋಜನೆ ವ್ಯಾಪ್ತಿಗೆ ಕಟೀಲು ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯನ್ನು ಸಹ ತರಲಾಗಿದೆ. ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರು ಮಣಿಪಾಲ, ಉಡುಪಿ, ಕಾರ್ಕಳ, ಮಂಗಳೂರು, ಗೋವಾ ಮತ್ತು ಕಟೀಲಿನಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ದಂತ ಸೇವೆಗಳ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
       ಒಂದು ವರ್ಷದ ಯೋಜನೆಯಲ್ಲಿ ಕಾರ್ಡಿನ ಸದಸ್ಯತ್ವ ಒಬ್ಬರಿಗೆ ರು. ೨೫೦,  ಕುಟುಂಬಕ್ಕೆ ಅಂದರೆ ಕಾರ್ಡುದಾರ, ಅವರ ಸಂಗಾತಿ, ೨೫ ವರ್ಷದ ಒಳಗಿನ ಮಕ್ಕಳಿಗೆ ರು. ೫೦೦ ಮತ್ತು ಕುಟುಂಬ ಪ್ಲಸ್ ಯೋಜನೆಗೆ ಅಂದರೆ ಕಾರ್ಡುದಾರ, ಅವರ ಸಂಗಾತಿ, ೨೫ ವರ್ಷದ ಒಳಗಿನ ಮಕ್ಕಳು ಮತ್ತು ೪ ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) ರು. ೬೫೦ ನಿಗದಿಪಡಿಸಲಾಗಿದೆ.
     ೨ ವರ್ಷದ ಯೋಜನೆಯಲ್ಲಿ ಒಬ್ಬರಿಗೆ ರು. ೪೦೦,  ಕುಟುಂಬಕ್ಕೆ ರು. ೭೦೦ ಮತ್ತು ಕುಟುಂಬ ಪ್ಲಸ್ ಯೋಜನೆಗೆ ರು. ೮೫೦ ನಿಗದಿಪಡಿಸಿದ್ದು, ಕಾರ್ಡ್‌ನ್ನು ೧ ಅಥವಾ ೨ ವರ್ಷದ ಅವಧಿಯಲ್ಲಿ ಎಷ್ಟು ಬಾರಿಯಾದರೂ ಬಳಸಬಹುದಾಗಿದೆ.
  ಮಣಿಪಾಲ ಆರೋಗ್ಯ ಕಾರ್ಡಿನ ಪ್ರತಿನಿಧಿಯಾಗುವವರು ಶ್ರೀನಿವಾಸ ಭಾಗವತ್ ಮೊ: ೮೧೦೫೨೮೨೧೪೫ ಸಂಪರ್ಕಿಸಬಹುದಾಗಿದೆ.
      ಕಾರ್ಡ್ ನೋಂದಾಣಿಗೆ ಅಧಿಕೃತ ಪ್ರತಿನಿಧಿಗಳಾದ ಭದ್ರಾವತಿ ತಾಲೂಕಿನ ವಿಪ್ರ ಸೌಹರ್ಧ ಮೊ: ೯೭೩೯೦೮೦೫೯೯/ ೯೯೭೨೭೨೦೪೬೧, ಎಂ ಜಿ ಸುರೇಶ್ ಮೊ: ೯೮೪೫೬೮೧೩೬೩, ಡಿ ಶಬರಿವಾಸನ್ ಮೊ: ೯೦೩೫೬೧೬೧೮೮, ವೆಂಕಟಸುಬ್ರಾಯುಡು ಮೊ: ೭೮೪೮೮೩೩೫೬೮, ವೆಂಕಟೇಶ್ ಎ.ಜಿ ಮೊ: ೮೯೭೧೧೪೧೨೯೨ ಹಾಗೂ ಶಿವಮೊಗ್ಗ: ಎ.ಎನ್ ವಿಜೇಂದ್ರ ರಾವ್ ಮೊ: ೯೪೪೮೭೯೦೧೨೭ ಇವರನ್ನು ಸಂಪರ್ಕಿಸಬಹುದಾಗಿದೆ.


ಮಿನಿವಿಧಾನಸೌಧದ ಶೇ.೬೦ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಸೋಂಕು

ಭದ್ರಾವತಿ ತಾಲೂಕು ಕಛೇರಿ ಮಿನಿವಿಧಾನಸೌಧ
ಎರಡು ಹಂತದ ತಪಾಸಣೆ : 
೧೫ ಮಂದಿಯಲ್ಲಿ ೧೦ ಸೋಂಕು
ಭದ್ರಾವತಿ, ಆ. ೮: ತಾಲೂಕು ಶಕ್ತಿ ಸೌಧ ಮಿನಿವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಎಲ್ಲಾ ಸಿಬ್ಬಂದಿಗಳ ತಪಾಸಣೆ ನಡೆಸಲಾಗುತ್ತಿದೆ. ಶನಿವಾರ ೮ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಇತರೆ ಸಿಬ್ಬಂದಿಗಳಲ್ಲಿ ಆತಂಕ ಹೆಚ್ಚಾಗಿದೆ.
​           ಕಳೆದ ೨ ದಿನಗಳ ಹಿಂದೆ ಸುಮಾರು ೧೦ ಮಂದಿಗೆ ತಪಾಸಣೆ ನಡೆಸಿದ್ದು, ಈ ಪೈಕಿ ೮ ಮಂದಿಗೆ ಸೋಂಕು ತಗುಲಿದೆ. ಒಟ್ಟು ಸುಮಾರು ೨೫ ರಿಂದ ೩೦ ಮಂದಿ ತಾಲೂಕು ಕಛೇರಿಯ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ಎಲ್ಲಾ  ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಜರ್ ಬಳಕೆ ಮಾಡುತ್ತಿದ್ದಾರೆ. ಈ ನಡುವೆ ಕಛೇರಿ ಬರುವ ಸಾರ್ವಜನಿಕರ ಜ್ವರ ತಪಾಸಣೆ ಸಹ ನಡೆಸಲಾಗುತ್ತಿದೆ. ಅಲ್ಲದೆ ಆಗಾಗ ಮಿನಿವಿಧಾನಸೌಧಕ್ಕೆ ಸ್ಯಾನಿಟೈಜರ್ ಸಹ ಕೈಗೊಳ್ಳಲಾಗುತ್ತಿದೆ. ಆದರೂ ಸಹ ಸೋಂಕು ಏರಿಕೆಯಾಗುತ್ತಿದೆ.
           ಈಗಾಗಲೇ ಎರಡು ಹಂತದಲ್ಲಿ ಸುಮಾರು ಒಟ್ಟು ೧೫ ಮಂದಿ ತಪಾಸಣೆ ನಡೆಸಲಾಗಿದ್ದು, ಈ ಪೈಕಿ ೧೦ ಮಂದಿಗೆ ಸೋಂಕು ತಗುಲಿದೆ. ಈ ಹಿನ್ನಲೆಯಲ್ಲಿ ಕೆಲವು ದಿನಗಳವರೆಗೆ ತಾಲೂಕು ಕಛೇರಿಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡುವ ಸಾಧ್ಯತೆ ಹೆಚ್ಚಾಗಿದೆ.
            ವಿನಾಕಾರಣ ಕಛೇರಿಗೆ ಬರುವವರೇ ಹೆಚ್ಚು :
         ತಾಲೂಕು ಕಛೇರಿಯಲ್ಲಿ ಯಾವುದೇ ಕೆಲಸವಿಲ್ಲದಿದ್ದರೂ ವಿನಾಕಾರಣ ಕಛೇರಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಛೇರಿಗೆ ಬಂದವರು ಒಂದೇ ಕಡೆ ಇರದೆ ಮಿನಿವಿಧಾನಸೌಧದ ಎಲ್ಲಾ ಕಡೆ ತಿರುಗಾಡುತ್ತಾರೆ. ಯಾರನ್ನು ಸಹ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಬಲವಂತವಾಗಿ ನಿಯಂತ್ರಿಸಲು ಮುಂದಾದರೆ ಮೇಲಾಧಿಕಾರಿಗಳಿಗೆ ದೂರು ನೀಡುತ್ತಾರೆ. ಸಾರ್ವಜನಿಕರು ವಿನಾಕಾರಣ ಕಛೇರಿಗೆ ಬರುವುದನ್ನು ನಿಲ್ಲಿಸಿದ್ದಲ್ಲಿ ಸಿಬ್ಬಂದಿಗಳಿಗೆ ಸೋಂಕು ಹರಡುವುದು ನಿಯಂತ್ರಣಕ್ಕೆ ಬರಲಿದೆ ಎಂದು ಶಿರಸ್ತೆದಾರ್ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಮದ್ಯದಂಗಡಿ ವಿರುದ್ಧ ಕ್ರಮಕ್ಕೆ ಆಗ್ರಹ : ಆ.12ರಂದು ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ

ಭದ್ರಾವತಿ: ನಗರಸಭೆ ವ್ಯಾಪ್ತಿಯ ಉಜ್ಜನಿಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಿಂಭಾಗ ಹೊಸ ಆನೆಕೊಪ್ಪ ಗ್ರಾಮದಲ್ಲಿ ತೆರೆಯಲಾಗಿರುವ ಎಂಎಸ್‌ಐಎಲ್ ಮದ್ಯಂಗಡಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಹಾಗು ನಗರದಲ್ಲಿ ಖಾಸಗಿ ಶಾಲೆಗಳು ಪೋಷಕರಿಂದ ಬಲವಂತವಾಗಿ ಶುಲ್ಕ ವಸೂಲಾತಿ ಮಾಡುತ್ತಿರುವುದನ್ನು ವಿರೋಧಿಸಿ ಆ.12ರಂದು ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತ ಜನತಾದಳ ರಾಜ್ಯ ಯುವ ಮುಖಂಡ ಶಶಿಕುಮಾರ್ ಎಸ್ ಗೌಡ ತಿಳಿಸಿದ್ದಾರೆ.
ತಾಲೂಕಿನಲ್ಲಿ ಮದ್ಯದಂಗಡಿಗಳಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಕೆಲವು ದಿನಗಳ ಹಿಂದೆ ಹೊಸ ಆನೆಕೊಪ್ಪ ಗ್ರಾಮಸ್ಥರು ಗ್ರಾಮದಲ್ಲಿರುವ ಎಂಎಸ್‌ಐಎಲ್ ಮದ್ಯದಂಗಡಿ ಎದುರು ಪ್ರತಿಭಟನೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿದ್ದಾರೆ.
ಈ ಮದ್ಯದಂಗಡಿಯಿಂದ ಪ್ರತಿದಿನ ಇಲ್ಲಿನ ನಿವಾಸಿಗಳಿಗೆ ಕಿರಿಕಿರಿಯಾಗುತ್ತಿದೆ. ಎಂಆರ್‌ಪಿ ದರಗಿಂತ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಮದ್ಯ ಸೇವೆನೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಲಾಗಿದೆ. ಈ ಹಿನ್ನಲೆಯಲ್ಲಿ ಈ ಮದ್ಯದಂಗಡಿ ವಿರುದ್ಧ ಅಬಕಾರಿ ಅಧಿಕಾರಿಗಳು ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು.
ನಗರದಲ್ಲಿ ಖಾಸಗಿ ಶಾಲೆಗಳು ಪೋಷಕರಿಂದ ಬಲವಂತದಿಂದ ಶುಲ್ಕ ವಸೂಲಾತಿ ಮಾಡುತ್ತಿವೆ. ಪ್ರಸ್ತುತ ಎಲ್ಲೆಡೆ ಮಹಾಮಾರಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಈಗಾಗಲೇ ಸರ್ಕಾರ ಲಾಕ್‌ಡೌನ್ ಸೇರಿದಂತೆ ಇನ್ನಿತರ ಕಠಿಣ ಕ್ರಮಗಳನ್ನು ಕೈಗೊಂಡ ಹಿನ್ನಲೆಯಲ್ಲಿ ವ್ಯಾಪಾರ, ವಹಿವಾಟು, ಉದ್ಯೋಗವಿಲ್ಲದೆ ಶ್ರೀಸಾಮಾನ್ಯರು ಸಾಕಷ್ಟು ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆಗಳು ಬಲವಂತವಾಗಿ ಶುಲ್ಕ ವಸೂಲಾತಿ ಮಾಡುವುದು ಸರಿಯಲ್ಲ. ಈಗಾಗಲೇ ಸರ್ಕಾರ ಸಹ ಈ ಸಂಬಂಧ ಆದೇಶ ಹೊರಡಿಸಿದ್ದು, ಅಲ್ಲದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ, ತಹಸೀಲ್ದಾರ್‌ಗೆ ಸಹ ಮನವಿ ಸಲ್ಲಿಸಲಾಗಿದೆ. ಆದರೂ ಸಹ ಇದುವರೆಗೂ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.