ಭದ್ರಾವತಿ ತಾಲೂಕು ಕಛೇರಿ ಮಿನಿವಿಧಾನಸೌಧ
ಎರಡು ಹಂತದ ತಪಾಸಣೆ :
೧೫ ಮಂದಿಯಲ್ಲಿ ೧೦ ಸೋಂಕು
ಭದ್ರಾವತಿ, ಆ. ೮: ತಾಲೂಕು ಶಕ್ತಿ ಸೌಧ ಮಿನಿವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಎಲ್ಲಾ ಸಿಬ್ಬಂದಿಗಳ ತಪಾಸಣೆ ನಡೆಸಲಾಗುತ್ತಿದೆ. ಶನಿವಾರ ೮ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಇತರೆ ಸಿಬ್ಬಂದಿಗಳಲ್ಲಿ ಆತಂಕ ಹೆಚ್ಚಾಗಿದೆ.
ಕಳೆದ ೨ ದಿನಗಳ ಹಿಂದೆ ಸುಮಾರು ೧೦ ಮಂದಿಗೆ ತಪಾಸಣೆ ನಡೆಸಿದ್ದು, ಈ ಪೈಕಿ ೮ ಮಂದಿಗೆ ಸೋಂಕು ತಗುಲಿದೆ. ಒಟ್ಟು ಸುಮಾರು ೨೫ ರಿಂದ ೩೦ ಮಂದಿ ತಾಲೂಕು ಕಛೇರಿಯ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಜರ್ ಬಳಕೆ ಮಾಡುತ್ತಿದ್ದಾರೆ. ಈ ನಡುವೆ ಕಛೇರಿ ಬರುವ ಸಾರ್ವಜನಿಕರ ಜ್ವರ ತಪಾಸಣೆ ಸಹ ನಡೆಸಲಾಗುತ್ತಿದೆ. ಅಲ್ಲದೆ ಆಗಾಗ ಮಿನಿವಿಧಾನಸೌಧಕ್ಕೆ ಸ್ಯಾನಿಟೈಜರ್ ಸಹ ಕೈಗೊಳ್ಳಲಾಗುತ್ತಿದೆ. ಆದರೂ ಸಹ ಸೋಂಕು ಏರಿಕೆಯಾಗುತ್ತಿದೆ.
ಈಗಾಗಲೇ ಎರಡು ಹಂತದಲ್ಲಿ ಸುಮಾರು ಒಟ್ಟು ೧೫ ಮಂದಿ ತಪಾಸಣೆ ನಡೆಸಲಾಗಿದ್ದು, ಈ ಪೈಕಿ ೧೦ ಮಂದಿಗೆ ಸೋಂಕು ತಗುಲಿದೆ. ಈ ಹಿನ್ನಲೆಯಲ್ಲಿ ಕೆಲವು ದಿನಗಳವರೆಗೆ ತಾಲೂಕು ಕಛೇರಿಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ವಿನಾಕಾರಣ ಕಛೇರಿಗೆ ಬರುವವರೇ ಹೆಚ್ಚು :
ತಾಲೂಕು ಕಛೇರಿಯಲ್ಲಿ ಯಾವುದೇ ಕೆಲಸವಿಲ್ಲದಿದ್ದರೂ ವಿನಾಕಾರಣ ಕಛೇರಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಛೇರಿಗೆ ಬಂದವರು ಒಂದೇ ಕಡೆ ಇರದೆ ಮಿನಿವಿಧಾನಸೌಧದ ಎಲ್ಲಾ ಕಡೆ ತಿರುಗಾಡುತ್ತಾರೆ. ಯಾರನ್ನು ಸಹ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಬಲವಂತವಾಗಿ ನಿಯಂತ್ರಿಸಲು ಮುಂದಾದರೆ ಮೇಲಾಧಿಕಾರಿಗಳಿಗೆ ದೂರು ನೀಡುತ್ತಾರೆ. ಸಾರ್ವಜನಿಕರು ವಿನಾಕಾರಣ ಕಛೇರಿಗೆ ಬರುವುದನ್ನು ನಿಲ್ಲಿಸಿದ್ದಲ್ಲಿ ಸಿಬ್ಬಂದಿಗಳಿಗೆ ಸೋಂಕು ಹರಡುವುದು ನಿಯಂತ್ರಣಕ್ಕೆ ಬರಲಿದೆ ಎಂದು ಶಿರಸ್ತೆದಾರ್ ಮಲ್ಲಿಕಾರ್ಜುನ ತಿಳಿಸಿದ್ದಾರೆ.
No comments:
Post a Comment