Wednesday, August 19, 2020

ಕೋಟ್ಪಾ ಕಾಯ್ದೆಯಡಿ ವಿವಿಧೆಡೆ ದಾಳಿ : ೩೦ ಪ್ರಕರಣ ದಾಖಲು

ಭದ್ರಾವತಿ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ ನೇತೃತ್ವದ ತಂಡ ಬುಧವಾರ ತಾಲೂಕಿನ ವಿವಿಧೆಡೆ ಕೋಟ್ಪಾ ಕಾಯ್ದೆಯಡಿ ಅಂಗಡಿ, ಮುಂಗಟ್ಟುಗಳ ಮೇಲೆ ದಾಳಿ ನಡೆಸಿತು.  
ಭದ್ರಾವತಿ, ಆ. ೧೯:  ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ ನೇತೃತ್ವದ ತಂಡ ಬುಧವಾರ ತಾಲೂಕಿನ ವಿವಿಧೆಡೆ ಕೋಟ್ಪಾ ಕಾಯ್ದೆಯಡಿ ಅಂಗಡಿ, ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಒಟ್ಟು ೩೦ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
    ನಗರದ ಸಿ.ಎನ್ ರಸ್ತೆ, ತರೀಕೆರೆ ರಸ್ತೆ ಸೇರಿದಂತೆ ವಿವಿಧೆಡೆ ಅಂಗಡಿ, ಮುಂಗಟ್ಟುಗಳು ಹಾಗೂ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಲಾಗಿದ್ದು,  ಒಟ್ಟು ೫,೪೦೦ ರು. ದಂಡ ವಸೂಲಾತಿ ಮಾಡಲಾಗಿದೆ. ಜೊತೆಗೆ ತಂಬಾಕು ಉತ್ಪನ್ನಗಳ ದುಷ್ಟರಿಣಾಮಗಳು ಹಾಗೂ ಕೋಟ್ಪಾ ಕಾಯ್ದೆ ಕುರಿತು ಸಾರ್ವಜನಿಕರಿಗೆ ಹಾಗೂ ತಂಬಾಕು ಉತ್ಪನ್ನಗಳ ಮಾರಾಟಗಾರರಿಗೆ ಅರಿವು ಮೂಡಿಸಲಾಯಿತು.
     ತಂಡದ ಕಾರ್ಯಾಚರಣೆಯಲ್ಲಿ ಸಂಚಾರಿ ಪೊಲೀಸ್ ಠಾಣಾಧಿಕಾರಿ ಇ. ಕವಿತ.ಇ, ಬಿ.ಹೆಚ್.ಇ.ಓ ಮಧುಮತಿ,  ಹಿರಿಯ ಆರೋಗ್ಯ ಸಹಾಯಕನೀಲೇಶ್ ರಾಜ್, ಕಿರಿಯ ಆರೋಗ್ಯ ಸಹಾಯಕ ಶಶಿಕುಮಾರ್, ಡಿ. ದರ್ಜೆ ನೌಕರ ಕೃಷ್ಣ, ತಂಬಾಕು ನಿಯಂತ್ರಣ ವಿಭಾಗದ ರವಿರಾಜ್,  ಪೋಲಿಸ್ ಸಿಬ್ಬಂದಿಗಳಾದ ಚಿಕ್ಕಪ್ಪ, ಅಂತೋಣಿ ಮೋಹನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.



ಆ.೨೦ರಂದು ಅರಸು ಜನ್ಮದಿನಾಚರಣೆ

ಭದ್ರಾವತಿ, ಆ. ೧೯: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಿಂದುವರ್ಗಗಳ ನೇತಾರ, ಮಾಜಿ ಮುಖ್ಯಮಂತ್ರಿ, ಡಿ. ದೇವರಾಜ ಅರಸು ೧೦೫ನೇ ಜನ್ಮ ದಿನಾಚರಣೆ ಆ.೨೦ರಂದು ಬೆಳಿಗ್ಗೆ ೧೧ ಗಂಟೆಗೆ ತಾಲೂಕು ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
      ಕೋವಿಡ್-೧೯ರ ಹಿನ್ನಲೆಯಲ್ಲಿ  ಹಿಂದುಳಿದ ವರ್ಗಗಳ ಇಲಾಖೆ ಆಯುಕ್ತರ ಆದೇಶದಂತೆ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮ ಸರಳವಾಗಿ ನಡೆಯಲಿದೆ ಎಂದು ತಹಸಿಲ್ದಾರ್ ಎಚ್.ಸಿ ಶಿವಕುಮಾರ್ ತಿಳಿಸಿದ್ದಾರೆ.

Tuesday, August 18, 2020

ಬಿಜೆಪಿ ಎಸ್‌ಸಿ ಮೋರ್ಚಾ ಪದಾಧಿಕಾರಿಗಳ ನೇಮಕ

ಭದ್ರಾವತಿಯಲ್ಲಿ ಬಿಜೆಪಿ ಎಸ್.ಸಿ ಮೋರ್ಚಾವತಿಯಿಂದ ಮಂಗಳವಾರ ನಗರದ ವಿವಿಧೆಡೆ ಕಾರ್ಯಕರ್ತರ ಸಭೆಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಭದ್ರಾವತಿ, ಆ. ೧೮: ಭಾರತೀಯ ಜನತಾ ಪಕ್ಷ ಎಸ್‌ಸಿ ಮೋರ್ಚಾ ನೂತನ ಪದಾಧಿಕಾರಿಗಳನ್ನು ತಾಲೂಕು ಮಂಡಲ ವತಿಯಿಂದ ನೇಮಕ ಮಾಡಲಾಗಿದೆ.
   ಅಧ್ಯಕ್ಷರಾಗಿ ಪಿ. ಗಣೇಶ್‌ರಾವ್, ಉಪಾಧ್ಯಕ್ಷರಾಗಿ ಡಾ. ಪುಷ್ಪಲತಾ, ಸತ್ಯ, ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ್, ಕಾರ್ಯದರ್ಶಿಯಾಗಿ ಮಾಲತೇಶ್, ನಾಗೇಶ್, ಖಜಾಂಚಿಯಾಗಿ ರವಿಕುಮಾರ್ ನಾಯ್ಕ, ಸದಸ್ಯರಾದ ರಾಜು, ಮುರುಳಿ, ಹನುಮಂತನಾಯ್ಕ, ರವಿಕುಮಾರ್ ನಾಯ್ಕ, ಅವಿನಾಶ್, ಗೋಪಾಲನಾಯ್ಕ, ಚಂದ್ರು, ಕುಮಾರ್ ಸ್ವಾಮಿ, ಮತ್ತು ಗಿರೀಶ್‌ನಾಯ್ಕ ನೇಮಕಗೊಂಡಿದ್ದಾರೆ.
    ಎಸ್.ಸಿ ಮೋರ್ಚಾ ವತಿಯಿಂದ ಸನ್ಮಾನ, ಅಭಿನಂದನೆ:
ಎಸ್.ಸಿ ಮೋರ್ಚಾವತಿಯಿಂದ ಮಂಗಳವಾರ ನಗರದ ವಿವಿಧೆಡೆ ಕಾರ್ಯಕರ್ತರ ಸಭೆಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಯುವ ಮುಖಂಡ ಜಿ.ಆರ್ ಪ್ರವೀಣ್ ಪಟೇಲ್, ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಶಿವರಾಜ್ ಸೇರಿದಂತೆ ಇನ್ನಿತರರನ್ನು ಸಹ ಮೋರ್ಚಾವತಿಯಿಂದ ಅಭಿನಂದಿಸಲಾಯಿತು.

ಸಿಂಗನಮನೆ ಗ್ರಾ.ಪಂ. ನರೇಗಾ ಉತ್ತಮ ಸ್ಥಾನ : ಪಿಡಿಓ ಸೋಮಶೇಖರಪ್ಪಗೆ ಪ್ರಶಸ್ತಿ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುವ ಭದ್ರಾವತಿ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಲ್ ಸೋಮಶೇಖರಪ್ಪ ಅವರಿಗೆ ಈ ಬಾರಿ ತಾಲೂಕು ಮಟ್ಟದ ಪ್ರಶಸ್ತಿ ಲಭಿಸಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್, ತಾ.ಪಂ. ಡಿ. ಲಕ್ಷ್ಮೀದೇವಿ ಸೇರಿದಂತೆ ಇನ್ನಿತರರು ಪ್ರಶಸ್ತಿ ಪತ್ರ ವಿತರಿಸಿ ಅಭಿನಂದಿಸಿದರು.
ಭದ್ರಾವತಿ, ಆ. ೧೮: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುವ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಲ್ ಸೋಮಶೇಖರಪ್ಪ ಅವರಿಗೆ ಈ ಬಾರಿ ತಾಲೂಕು ಮಟ್ಟದ ಪ್ರಶಸ್ತಿ ಲಭಿಸಿದೆ.
      ಒಂದೆಡೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆ ಉದ್ಯೋಗವಿಲ್ಲದೆ ಗ್ರಾಮೀಣ ಭಾಗದ ನಿವಾಸಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ವರದಾನವಾಗಿದ್ದು, ಈ ಯೋಜನೆಯನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಸೋಮಶೇಖರಪ್ಪ ಹೆಚ್ಚಿನ ಶ್ರಮವಹಿಸಿದ್ದು, ಉತ್ತಮ ಸ್ಥಾನ ಲಭಿಸಿದೆ. ಈ ಹಿನ್ನಲೆಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಾಲೂಕು ಪಂಚಾಯಿತಿ ವತಿಯಿಂದ ಪ್ರಶಸ್ತಿ ಪತ್ರ ವಿತರಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.
    ಶಾಸಕ ಬಿ.ಕೆ ಸಂಗಮೇಶ್ವರ್, ತಾ.ಪಂ. ಅಧ್ಯಕ್ಷೆ ಡಿ. ಲಕ್ಷ್ಮೀದೇವಿ, ತಹಸೀಲ್ದಾರ್ ಎಚ್.ಸಿ ಶಿವಕುಮಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ. ಜಿ. ಮಂಜುನಾಥ್, ನಗರಸಭೆ ಪೌರಾಯುಕ್ತ ಮನೋಹರ್, ಜಿ.ಪಂ. ಸದಸ್ಯ ಎಸ್. ಮಣಿಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಾಲೆ ಆರಂಭಕ್ಕೂ ಮುನ್ನವೇ ಸಿದ್ದತೆ : ಸ್ವಂತ ಹಣದಲ್ಲಿ ಸ್ಯಾನಿಟೈಜರ್ ಯಂತ್ರ ಖರೀದಿ

ಭದ್ರಾವತಿ ತಾಲೂಕಿನ ಬಾಳೆಮಾರನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸ್ವಂತ ಯಂತ್ರದಲ್ಲಿ ಸ್ಯಾನಿಟೈಜರ್ ಯಂತ್ರ ಖರೀದಿಸಿ ಶಾಲಾ ಕೊಠಡಿಗಳನ್ನು ಸ್ಯಾನಿಟೈಜರ್ ಮಾಡುತ್ತಿರುವುದು.

ಗಮನ ಸೆಳೆಯುತ್ತಿರುವ ಬಾಳೆಮಾರನಹಳ್ಳಿ ಸರ್ಕಾರಿ ಪ್ರೌಢಶಾಲೆ

ಭದ್ರಾವತಿ, ಆ. ೧೮: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕಳೆದ ೫-೬ ತಿಂಗಳುಗಳಿಂದ ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟಿದ್ದು, ಪುನಃ ಆರಂಭಿಸಲು ಸರ್ಕಾರದಿಂದ ಇದುವರೆಗೂ ಯಾವುದೇ ಆದೇಶ ಬಂದಿಲ್ಲ. ಈ ಹಿನ್ನಲೆಯಲ್ಲಿ ಪ್ರಸ್ತಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ವಿಳಂಬವಾಗಿವೆ. ಈ ನಡುವೆ ಆನ್‌ಲೈನ್ ತರಗತಿಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಿದೆ. ಮತ್ತೊಂದೆಡೆ ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆಗೆ ಚಾಲನೆ ನೀಡಿದೆ. ಇವೆಲ್ಲದರ ನಡುವೆ ತಾಲೂಕಿನ ಸರ್ಕಾರಿ ಶಾಲೆಯೊಂದು ಶಾಲೆ ಯಾವಾಗ ಆರಂಭವಾಗುತ್ತದೆಯೋ ಗೊತ್ತಿಲ್ಲ. ಆದರೂ ಮುನ್ನಚ್ಚರಿಕೆ ಕ್ರಮವಾಗಿ ಅಗತ್ಯವಿರುವ ಸಿದ್ಧತೆಗಳನ್ನು ಕೈಗೊಳ್ಳುವ ಮೂಲಕ ಗಮನ ಸೆಳೆದಿದೆ.
    ತಾಲೂಕಿನ ಬಾಳೆಮಾರನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರ ಸಹಕಾರದೊಂದಿಗೆ ಸ್ಯಾನಿಟೈಜರ್ ಯಂತ್ರ ಖರೀದಿಸಲಾಗಿದೆ. ಈಗಾಗಲೇ ಈ ಯಂತ್ರ ಬಳಸಿಕೊಂಡು ೫-೬ ಬಾರಿ ಶಾಲಾ ಕೊಠಡಿಗಳನ್ನು ಸ್ಯಾನಿಟೈಜರ್ ಮಾಡಲಾಗಿದೆ. ಈ ಶಾಲೆಗೆ ಹೊಂದಿಕೊಂಡಂತೆ ಬಯಲು ರಂಗಮಂದಿರ ಸಹ ಇದ್ದು, ಇದನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಅದರಲ್ಲೂ ವಿದ್ಯಾಗಮ ಯೋಜನೆಗೆ ಸೂಕ್ತ ಸ್ಥಳವಾಗಿದೆ. ಈ ಹಿನ್ನಲೆಯಲ್ಲಿ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ.
     ಈಗಾಗಲೇ ಈ ಭಾಗದಲ್ಲಿ ಸುಮಾರು ೧೦ ಸ್ಥಳಗಳಲ್ಲಿ ವಿದ್ಯಾಗಮ ಯೋಜನೆಯಡಿ ತರಗತಿಗಳು ನಡೆಯುತ್ತಿವೆ. ಗ್ರಾಮಸ್ಥರು ಹಾಗೂ ಪೋಷಕರು ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಪಾಠ ಪ್ರವಚನಗಳು ಲಭ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಒಂದೆಡೆ ವ್ಯವಸ್ಥೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರಂಗಮಂದಿರ ಬಳಸಿಕೊಳ್ಳಲು ಅನುಮತಿಗಾಗಿ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಪುನಃ ಶಾಲೆಗಳು ಆರಂಭವಾಗುವವರೆಗೂ ಅಥವಾ ಸರ್ಕಾರದ ಆದೇಶ ಬರುವವರೆಗೂ ವಿದ್ಯಾಗಮ ಯೋಜನೆ ಮುಂದುವರೆಯಲಿದೆ. ಈ ಯೋಜನೆಯಲ್ಲಿ ತಾಲೂಕಿನಾದ್ಯಂತ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು, ಸಿಆರ್‌ಪಿಗಳು, ಶಿಕ್ಷಣ ಸಂಯೋಜಕರು ಸೇರಿದಂತೆ ಸುಮಾರು ೩೦ ರಿಂದ ೪೦ ಅಧಿಕಾರಿಗಳು ತೊಡಗಿಕೊಂಡಿದ್ದಾರೆಂದು ಶಾಲೆಯ ಮುಖ್ಯ ಶಿಕ್ಷಕರಾದ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಗಣೇಶ್ ತಿಳಿಸಿದ್ದಾರೆ.
   ಶಾಲೆಯಲ್ಲಿ ನಡೆಯುತ್ತಿರುವ ಸ್ಯಾನಿಟೈಜರ್ ಕಾರ್ಯವನ್ನು ಬಿಆರ್‌ಸಿ ಸಂಪನ್ಮೂಲ ಅಧಿಕಾರಿ ನವೀದ್ ಪರ್ವೀಜ್ ಅಹಮದ್ ಸೇರಿದಂತೆ ಇನ್ನಿತರರು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರು.

ವಿಐಎಸ್‌ಎಲ್-ಎಂಪಿಎಂ ಅಭಿವೃದ್ಧಿಗಾಗಿ ಜಿಲ್ಲಾ ಬಿಜೆಪಿ ಘಟಕ ಹೋರಾಟ : ಮೇಘರಾಜ್


ಭದ್ರಾವತಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ ಮಾತನಾಡಿದರು.
ಭದ್ರಾವತಿ, ಆ. ೧೮: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ ಎಂದು ಜಿಲ್ಲಾಧ್ಯಕ್ಷ ಮೇಘರಾಜ್ ತಿಳಿಸಿದರು.
        ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ರಾಜಕೀಯ ಪಕ್ಷವಾದರೂ ಸಹ ಇತರೆ ರಾಜಕೀಯ ಪಕ್ಷಗಳಿಗಿಂತ ಭಿನ್ನತೆಯನ್ನು ಹೊಂದಿದೆ. ದೇಶದ ಸಂಸ್ಕೃತಿ, ಆಚಾರ-ವಿಚಾರ, ದೇಶ ಭಕ್ತಿ, ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಸಹ ಗಮನ ಹರಿಸುತ್ತಿದೆ ಎಂದರು.
      ಕೋವಿಡ್-೧೯ರ ಹಿನ್ನಲೆಯಲ್ಲಿ ಈ ಬಾರಿ ಪಕ್ಷ ಸಂಘಟನೆ ವಿಳಂಬವಾಗಿದ್ದು, ಇದೀಗ ಜಿಲ್ಲೆಯ ಎಲ್ಲಾ ೧೦ ಮಂಡಲಗಳಲ್ಲಿ ಸಂಘಟನೆಗಳನ್ನು ಪುನಃ ಬಲಪಡಿಸುವ ನಿಟ್ಟಿನಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಈಗಾಗಲೇ ೩ ಮಂಡಲಗಳ ಪ್ರವಾಸ ಮುಕ್ತಾಯಗೊಂಡಿದ್ದು, ಇದೀಗ ೪ನೇ ಪ್ರವಾಸ ಭದ್ರಾವತಿಯಲ್ಲಿ ನಡೆಯುತ್ತಿದೆ. ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಅಗತ್ಯವಿದೆ ಎಂದರು.
     ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯದ್ದು, ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸವಿದೆ. ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರುವ ಎಲ್ಲಾ ತಂತ್ರಗಾರಿಕೆಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಅನುದಾನದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಇಲ್ಲಿನ ಮತದಾರರು ಸಹ ಬಿಜೆಪಿ ಪಕ್ಷವನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.
     ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಕಾರ್ಯದರ್ಶಿಗಳಾದ ಚನ್ನೇಶ್, ಹನುಮಂತನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು : ಖಂಡನೆ

ಬೆಳಗಾವಿ ಜಿಲ್ಲೆಯ ಪೀರನವಾಡಿ (ಚನ್ನಪಟ್ಟಣ) ಗ್ರಾಮದಲ್ಲಿ ಆ.೧೫ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ ಹಾಗು ತೆರವುಗೊಳಿಸಿರುವ ಸ್ಥಳದಲ್ಲಿಯೇ ಸರ್ಕಾರವೇ ಪುನಃ ಪ್ರತಿಮೆಯನ್ನು  ಸ್ಥಾಪಿಸಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ತಾಲೂಕು ಕುರುಬರ ಸಂಘ, ಕನಕ ಯುವಪಡೆವತಿಯಿಂದ ಮಂಗಳವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಷ್ಠಾಪನೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ

ಭದ್ರಾವತಿ, ಆ. ೧೮: ಬೆಳಗಾವಿ ಜಿಲ್ಲೆಯ ಪೀರನವಾಡಿ (ಚನ್ನಪಟ್ಟಣ) ಗ್ರಾಮದಲ್ಲಿ ಆ.೧೫ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ ಹಾಗು ತೆರವುಗೊಳಿಸಿರುವ ಸ್ಥಳದಲ್ಲಿಯೇ ಸರ್ಕಾರವೇ ಪುನಃ ಪ್ರತಿಮೆಯನ್ನು  ಸ್ಥಾಪಿಸಬೇಕೆಂದು ಆಗ್ರಹಿಸಿ ತಾಲೂಕು ಕುರುಬರ ಸಂಘ, ಕನಕ ಯುವಪಡೆವತಿಯಿಂದ ಮಂಗಳವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
      ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ವೀರ ಮರಣ ಹೊಂದಿದ ಅಪ್ರತಿಮ ನಾಯಕನಾಗಿದ್ದು, ಸಮಾಜದ ಎಲ್ಲರನ್ನು ಸಂಘಟಿಸಿ ಜಾತ್ಯಾತೀತವಾಗಿ ಹೋರಾಟ ನಡೆಸುವ ಮೂಲಕ ಆದರ್ಶ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಇಂತಹ ಮಹಾನ್ ಆದರ್ಶ ವ್ಯಕ್ತಿ ಆ.೧೫ರಂದು ಜನ್ಮತಾಳಿರುವುದು ಈ ನಾಡಿನ ಸೌಭಾಗ್ಯವಾಗಿದೆ. ಅವರ ಹುಟ್ಟುಹಬ್ಬದ ದಿನದಂದು ಪ್ರತಿಮೆ ಸ್ಥಳಾಂತರ ಮಾಡಿರುವುದು ಕೇವಲ ಕುರುಬ ಸಮಾಜಕ್ಕೆ ಮಾಡಿರುವ ಅವಮಾನವಲ್ಲ. ಇಡೀ ದೇಶದ ಜನರಿಗೆ ಮಾಡಿರುವ ಅವಮಾನವಾಗಿದೆ. ಈ ದುರ್ಘಟನೆಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
        ತಕ್ಷಣ ಸಂಗೊಳ್ಳಿ ರಾಯಣ್ಣರವರ ಪ್ರತಿಮೆಯನ್ನು ಸರ್ಕಾರವೇ ಪ್ರತಿಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಅಲ್ಲಿನ ಜಿಲ್ಲಾಡಳಿತಕ್ಕೆ ಸೂಚಿಸಬೇಕು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಶಾಲಾ ಪಠ್ಯ ಪುಸ್ತಕಗಳಲ್ಲಿ ಸಂಗೊಳ್ಳಿ ರಾಯಣ್ಣರವರ ಹೆಸರು ತೆಗೆದು ಹಾಕುವ ಹುನ್ನಾರಗಳು ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಹೆಸರನ್ನು ಕೈಬಿಡಬಾರದು ಶಾಶ್ವತವಾಗಿ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
      ತಾಲೂಕು ಕುರುಬ ಸಮಾಜದ ಅಧ್ಯಕ್ಷ ಬಿ.ಎಂ ಸಂತೋಷ್, ಉಪಾಧ್ಯಕ್ಷ ಸಣ್ಣಯ್ಯ, ಕಾರ್ಯದರ್ಶಿ ರಾಜೇಶ್, ಖಜಾಂಚಿ ವಸಂತ, ನಿರ್ದೇಶಕರಾದ ಮಂಜುನಾಥ್, ಯೋಗಾನಂದ, ರಾಜಪ್ಪ, ಸತ್ಯ(ಕೋಡಿಹಳ್ಳಿ), ಕನಕ ಯುವಪಡೆ ಅಧ್ಯಕ್ಷ ಜೆ. ಕುಮಾರ, ಜಿ. ವಿನೋದ್‌ಕುಮಾರ್, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ತಾಲೂಕು ಉಪಾಧ್ಯಕ್ಷ ಇಬ್ರಾಹಿಂ ಖಾನ್, ಕೇಸರಿ ಪಡೆ ಗಿರೀಶ್, ಮಂಜುನಾಥ್ ಕೊಯ್ಲಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.