ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಆರೋಪ
ಭದ್ರಾವತಿಯಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ಹಿಂದೆ ಸ್ಮಶಾನ ಭೂಮಿ ಜಾಗಕ್ಕೆ ಸಂಬಂಧಿಸಿದಂತೆ ನಡೆದಿರುವ ಗಲಾಟೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಗ್ರಾಮಸ್ಥರು ಹಾಗು ಬೆಂಬಲಿಗರೊಂದಿಗೆ ಸ್ಥಳಕ್ಕೆ ನ್ಯಾಯ ಕೇಳಲು ಹೋದಾಗ ವಿನಾಕಾರಣ ಗಲಾಟೆ ನಡೆಯುವಂತೆ ಪ್ರಚೋದಿಸಲಾಗಿದ್ದು, ಈ ಹಿನ್ನಲೆಯಲ್ಲಿ ಉಂಟಾಗಿರುವ ಗಲಾಟೆಯಲ್ಲಿ ನಮ್ಮ ಪಾತ್ರವಿಲ್ಲ. ನಮ್ಮ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದ್ದು, ತಾಲೂಕಿನ ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಸಂಗಮೇಶ್ವರ್ ಅಣತಿಯಂತೆ ನಡೆದುಕೊಳ್ಳುತ್ತಿದ್ದು, ಭಯಭೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ವಾತಾವರಣದಿಂದ ಅಧಿಕಾರಿಗಳು ಹೊರಬರುವಂತಾಗಬೇಕು. ತಮ್ಮ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂತಾಗಬೇಕು.
-ಎಂ.ಜೆ ಅಪ್ಪಾಜಿ, ಮಾಜಿ ಶಾಸಕರು, ಭದ್ರಾವತಿ
ಭದ್ರಾವತಿ, ಆ. ೨೮: ವಿನಾಕಾರಣ ಕ್ಷೇತ್ರದ ನಿವಾಸಿಗಳಲ್ಲಿ ಗೊಂದಲ ಉಂಟು ಮಾಡಿ ದಾರಿ ತಪ್ಪಿಸುವ ಕಾರ್ಯದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮುಂದಾಗಿದ್ದು, ಮೊದಲು ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಗಮನ ಹರಿಸಲಿ ಎಂದು ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಆಗ್ರಹಿಸಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಈ ಹಿಂದೆ ಕ್ಷೇತ್ರದ ಶಾಸಕನಾಗಿದ್ದ ಸಂದರ್ಭದಲ್ಲಿ ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾವರಘಟ್ಟ ಸ್ಮಶಾನ ಭೂಮಿಗೆ ಜಾಗ ಮಂಜೂರಾತಿ ಮಾಡಿಸಲಾಗಿತ್ತು. ಇದೀಗ ಈ ಜಾಗಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರಲ್ಲಿ ಗೊಂದಲ ಉಂಟು ಮಾಡಲಾಗುತ್ತಿದೆ. ಒತ್ತುವರಿ ನೆಪದಲ್ಲಿ ಅಮಾಯಕ ರೈತರ ಜಮೀನು ಕಸಿದುಕೊಂಡು ದೌರ್ಜನ್ಯ ವೆಸಲಾಗುತ್ತಿದ್ದು, ಗ್ರಾಮಸ್ಥರಿಗೆ ನಿವೇಶನ ಹಂಚುವ ಸುಳ್ಳು ಭರವಸೆ ನೀಡಲಾಗಿದೆ ಎಂದು ಆರೋಪಿಸಿದರು.
ಸ್ಮಶಾನ ಜಾಗದ ಸಮೀಪದಲ್ಲಿ ಸುಮಾರು ೩೫ ಮಂದಿ ರೈತರಿದ್ದು, ಈ ಪೈಕಿ ಕೇವಲ ಇಬ್ಬರು ರೈತರ ೨೦ ಗುಂಟೆ ಹಾಗು ೭ ಗುಂಟೆ ಜಮೀನನ್ನು ಮಾತ್ರ ಒತ್ತುವರಿ ನೆಪದಲ್ಲಿ ತೆರವುಗೊಳಿಸಲಾಗಿದೆ. ಉಳಿದ ರೈತರ ಜಮೀನನ್ನು ತೆರವುಗೊಳಿಸದೆ ತಾರತಮ್ಯ ವೆಸಗಲಾಗಿದ್ದು, ಈ ತಾರತಮ್ಯ ನೀತಿಯನ್ನು ಖಂಡಿಸುವ ಜೊತೆಗೆ ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಎಂಪಿಎಂ ಹಾಗು ವಿಐಎಸ್‌ಎಲ್ ಕಾರ್ಖಾನೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಡಲಾಗಿದ್ದ ಭರವಸೆಗಳನ್ನು ಶಾಸಕರು ಈಡೇರಿಸಿಕೊಡಲು ಮುಂದಾಗಬೇಕೆಂದರು.
ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದು, ತಾಲೂಕು ಆಡಳಿತ ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ಆಡಳಿತ ಯಂತ್ರ ಸಂಪೂರ್ಣವಾಗಿ ವಿಫಲವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯತನ ಧೋರಣೆಯನ್ನು ವಿರೋಧಿಸಿ ಆ.೩೧ರಂದು ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಿ.ಪಂ. ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ತಾ.ಪಂ. ಅಧ್ಯಕ್ಷೆ ಡಿ. ಲಕ್ಷ್ಮೀದೇವಿ, ಮುಖಂಡರಾದ ಆರ್. ಕರುಣಾಮೂರ್ತಿ, ಕರಿಯಪ್ಪ, ಬದರಿನಾರಾಯಣ, ಜೆ.ಎನ್ ಚಂದ್ರಹಾಸ, ಜಿ.ಡಿ ನಟರಾಜ್, ಎಂ.ಎಸ್ ಸುಧಾಮಣಿ, ವಿಶಾಲಾಕ್ಷಿ, ಮೈಲಾರಪ್ಪ, ಲೋಕೇಶ್ವರ್‌ರಾವ್, ಚನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.