ಸಸಿ ನೆಡುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ
ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಭದ್ರಾವತಿ ನಗರದ ಆನೆಕೊಪ್ಪ ಎಂಪಿಎಂ ಬಡಾವಣೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
ಭದ್ರಾವತಿ, ಆ. ೨೭: ನಗರದ ಆನೆಕೊಪ್ಪದಲ್ಲಿರುವ ಎಂಪಿಎಂ ಬಡಾವಣೆ ಅಭಿವೃದ್ಧಿಗೆ ಬದ್ಧನಾಗಿದ್ದು, ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು.
ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ನಗರದ ಆನೆಕೊಪ್ಪ ಎಂಪಿಎಂ ಬಡಾವಣೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ದಾಟಿಸಿ ಅವರು ಮಾತನಾಡಿದರು.
ಎಂಪಿಎಂ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರ್ಮಿಕರು ಪ್ರಸ್ತುತ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಬಡಾವಣೆ ಅಭಿವೃದ್ಧಿಗೆ ನಗರಸಭೆ ಮೂಲಕ ಸಾಧ್ಯವಾದಷ್ಟು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮುಂದಿನ ೬ ತಿಂಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದರು.
ಬಡಾವಣೆ ಉತ್ತಮ ಪರಿಸರ ಹೊಂದಿದ್ದು, ಭೂಮಿಗೆ ಹೆಚ್ಚಿನ ಬೆಲೆ ಬಂದಿದೆ. ಭವಿಷ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದುವ ವಿಶ್ವಾಸವಿದೆ. ಬಡಾವಣೆಯಲ್ಲಿ ತಕ್ಷಣ ಹೆಚ್ಚಿನ ಮನೆಗಳು ನಿರ್ಮಾಣಗೊಳ್ಳಬೇಕು. ಆಗ ಮಾತ್ರ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯ. ಈಗಾಗಲೇ ಬಹುತೇಕ ಸಮಸ್ಯೆಗಳು ಬಗೆಹರಿದಿವೆ. ಇದನ್ನು ನಿವೇಶನ ಹೊಂದಿರುವವರು ಅರ್ಥ ಮಾಡಿಕೊಳ್ಳಬೇಕು. ಆರ್ಥಿಕ ಸಮಸ್ಯೆಗಳು ಇದ್ದಲ್ಲಿ ಪ್ರಸ್ತುತ ಸಾಲಸೌಲಭ್ಯ ವ್ಯವಸ್ಥೆ ಕಲ್ಪಿಸಿಕೊಳ್ಳಲು ಹಲವು ಯೋಜನೆಗಳಿದ್ದು, ಇವುಗಳ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ಮೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ಎನ್.ಎಸ್ ಸತೀಶ್‌ಚಂದ್ರ ಮಾತನಾಡಿ, ಇಲಾಖೆ ಸಹ ಮರಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿನಾಕಾರಣ ಮರಗಳನ್ನು ಕಡಿಯುವ ಮನಸ್ಥಿತಿ ಹೊಂದಿಲ್ಲ. ಮರಗಳು ಇದ್ದಲ್ಲಿ ಉತ್ತಮ ಪರಿಸರ ಸಾಧ್ಯ. ಪ್ರಸ್ತುತ ಎಂಪಿಎಂ ಕಾರ್ಖಾನೆ ಮೆಸ್ಕಾಂ ಇಲಾಖೆಯಲ್ಲಿ ನೂರಾರು ಕೋ. ರು. ಬಾಕಿ ಉಳಿಸಿಕೊಂಡಿದೆ. ಈ ಹಣ ವಸೂಲಾತಿಗಾಗಿ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಆದರೂ ಸಹ ಕಾರ್ಖಾನೆ ಪ್ರಸ್ತುತ ಎದುರಿಸುತ್ತಿರುವ ಸಂದಿಗ್ದ ಪರಿಸ್ಥಿತಿಗೆ ಪೂರಕವಾಗಿ ಸ್ಪಂದಿಸುತ್ತಿದೆ. ಬಡಾವಣೆಗೆ ನಿರಂತರವಾಗಿ ವಿದ್ಯುತ್ ಪೂರೈಕೆಗೆ ಬದ್ಧವಾಗಿದೆ. ಆದರೆ ಸಹಕಾರ ಸಂಘ ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದರು.
ನಗರಸಭೆ ಪೌರಾಯುಕ್ತ ಮನೋಹರ್ ಮಾತನಾಡಿ, ನಿರ್ಮಾಣಗೊಂಡಿರುವ ಮನೆಗಳಿಗೆ ಸಮರ್ಪಕವಾಗಿ ಯುಜಿಡಿ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು
ವಲಯ ಅರಣ್ಯಾಧಿಕಾರಿ ಕೆ.ಎಚ್ ಮಂಜುನಾಥ್, ಉಪ ವಲಯ ಅರಣ್ಯಾಧಿಕಾರಿ ದಿನೇಶ್‌ಕುಮಾರ್, ಬಡಾವಣೆ ನಿವಾಸಿ ಸಂತೋಷ್ ಹಾಗು ಸಂಘದ ಪದಾಧಿಕಾರಿಗಳು, ಸದಸ್ಯರು, ಬಡಾವಣೆ ನಿವಾಸಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. ಮಾವು, ಹಲಸು, ಬೇವು ಸೇರಿದಂತೆ ಹಲವು ಜಾತಿಯ ಸಸಿಗಳನ್ನು ಬಡಾವಣೆ ವ್ಯಾಪ್ತಿಯಲ್ಲಿ ನೆಡಲಾಯಿತು.
No comments:
Post a Comment