Tuesday, September 1, 2020

ವಿಜಯಲಕ್ಷ್ಮಿ ನಿಧನ

ವಿಜಯಲಕ್ಷ್ಮಿ
ಭದ್ರಾವತಿ, ಸೆ. ೧:  ನಗರದ ಹೊಸಸೇತುವೆ ರಸ್ತೆ ಸಮೀಪದ ನಿವಾಸಿ ವಿಜಯಲಕ್ಷ್ಮಿ (೮೧) ಮಂಗಳವಾರ ನಿಧನ ಹೊಂದಿದರು.
 ಪತಿ, ಇಬ್ಬರು ಪುತ್ರರು , ಓರ್ವ ಪುತ್ರಿ ಹೊಂದಿದ್ದು, ಹೊಳೆಹೊನ್ನೂರು ರಸ್ತೆಯಲ್ಲಿರುವ  ಹಿಂದೂ ರುದ್ರ ಭೂಮಿಯಲ್ಲಿ  ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿತು. ಮೃತರ ನಿಧನಕ್ಕೆ ಆರ್ಯವೈಶ್ಯ ಸಮಾಜ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ಇಂದಿನ ಜನಪ್ರತಿನಿಧಿಗಳಿಗೆ ರಾಮಕೃಷ್ಣ ಹೆಗಡೆ, ಡಿ. ದೇವರಾಜ ಅರಸು ಮಾರ್ಗದರ್ಶಕರು : ಮನೋಹರ್

ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆಯವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ಪಿ. ಸ್ಪರ್ಷರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.  
ಭದ್ರಾವತಿ, ಸೆ. ೧: ಒಳ್ಳೆಯ ಹೃದಯ, ನಾಯಕತ್ವ ಗುಣವಿದ್ದಲ್ಲಿ ಅಧಿಕಾರ ತಾನಾಗಿ ಲಭಿಸುತ್ತದೆ. ಇಂತಹ ಮಹಾನ್ ನಾಯಕರಾದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆಯವರ ಮಾರ್ಗದರ್ಶನದಲ್ಲಿ ಇಂದಿನ ಜನಪ್ರತಿನಿಧಿಗಳು ಮುನ್ನಡೆಯಬೇಕೆಂದು ನಗರಸಭೆ ಪೌರಾಯುಕ್ತ  ಮನೋಹರ್ ಹೇಳಿದರು.
      ಅವರು ನಗರದ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
        ಸಮಾಜಕ್ಕೆ ತಮ್ಮದೇ ಆದ ಸೇವೆ ನೀಡಬೇಕೆಂಬ ಮನೋಭಾವದೊಂದಿಗೆ ರಾಜ್ಯ ರಾಜಕಾರಣಿದಲ್ಲಿ ಉನ್ನತ ಮಟ್ಟಕ್ಕೆ ಏರಿದ ಇಬ್ಬರ ಕೊಡುಗೆ ಅನನ್ಯವಾಗಿದೆ. ಇವರ ಆದರ್ಶಗುಣಗಳೊಂದಿಗೆ ಮುನ್ನಡೆಯುತ್ತಿರುವ ಸಂಘಟನೆ ಸಹ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಯನ್ನು ಸಮಾಜಕ್ಕೆ ನೀಡುವ ಮೂಲಕ ಮುಂಚೂಣಿಗೆ ಬರುವಂತಾಗಬೇಕು. ಸಂಘಟನೆ ವತಿಯಿಂದ ನಗರಸಭೆ ವ್ಯಾಪ್ತಿಯಲ್ಲಿರುವ ಸುಮಾರು ೭೦ ಕೆರೆಗಳ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಇದಕ್ಕೆ ನಗರಸಭೆ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ. ೭೦ ಕೆರೆಗಳ ಪೈಕಿ ಕನಿಷ್ಠ ೩೦ ಕೆರೆಗಳನ್ನಾದರೂ ಅಭಿವೃದ್ಧಿ ಪಡಿಸಿದಲ್ಲಿ ಸಂಘಟನೆ ಹೆಸರು ಶಾಶ್ವತವಾಗಿ ಉಳಿಯುವಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
       ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಮಾತನಾಡಿ, ಕಳೆದ ಸುಮಾರು ೪ ದಶಕಗಳಿಂದ ಸಂಘಟನೆ ವತಿಯಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಡಿ. ದೇವರಾಜ ಅರಸುರವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿ ಅಸ್ತಿತ್ವಕ್ಕೆ ತರುವ ಮೂಲಕ ರಾಜ್ಯದಲ್ಲಿ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಮುನ್ನುಡಿ ಬರೆದರು. ಈ ಪೈಕಿ ಅಂದು ನಗರದ ಫಿಲ್ಟರ್‌ಶೆಡ್, ಲೋಯರ್ ಹುತ್ತಾ ಎಡ ಮತ್ತು ಬಲ ಭಾಗದ ಕೊಳಚೆ ಪ್ರದೇಶಗಳು ಅಭಿವೃದ್ಧಿ ಹೊಂದಿದವು. ಆ ನಂತರ ಉಳಿದ ಕೊಳಚೆ ಪ್ರದೇಶಗಳು ಹಂತ ಹಂತವಾಗಿ ಅಭಿವೃದ್ಧಿಗೊಂಡವು. ಇದೆ ರೀತಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಹೋರಾಟ ನಡೆಸಿದ ಪರಿಣಾಮ ಕುವೆಂಪು ವಿಶ್ವ ವಿದ್ಯಾನಿಲಯ ಸ್ಥಾಪನೆಗೊಂಡಿತು. ನಗರಸಭೆ ವ್ಯಾಪ್ತಿಯಲ್ಲಿ ನ್ಯೂಟೌನ್ ಭಾಗದಲ್ಲಿ ಕುಡಿಯುವ ನೀರಿನ ಯೋಜನೆ, ಕೆಇಬಿ ಕೌಂಟರ್, ಜನ್ನಾಪುರ ಆಸ್ಪತ್ರೆ ಆರಂಭಗೊಂಡವು. ಅಲ್ಲದೆ ತಾಲೂಕು ಪಂಚಾಯಿತಿ ಹಾಗು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಯೋಜನೆಗಳು ಜಾರಿಗೆ ಬಂದವು. ಸಂಘಟನೆ ವತಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹೋರಾಟ ನಡೆಸಲಾಗುವುದು ಎಂದರು.
       ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ಪಿ. ಸ್ಪರ್ಷ, ಜನ್ನಾಪುರ ನಗರ ಆರೋಗ್ಯ ಕೇಂದ್ರದ ಲಾಬ್ ಟೆಕ್ನಿಷಿಯನ್ ಸಚಿನ್, ನಿವೃತ್ತ ಗುತ್ತಿಗೆ ಪೌರಕಾರ್ಮಿಕ ಕೃಷ್ಣಪ್ಪ ಹಾಗು ನಗರಸಭೆ ಪೌರಾಯುಕ್ತ ಮನೋಹರ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
     ಟ್ರಸ್ಟ್ ಪ್ರಮುಖರಾದ ಅಂತೋಣಿ ಗ್ಸೇವಿಯರ್, ಭವಾನಿ ಶಂಕರ್, ರೈತ ಮುಖಂಡ ನೀಲಕಂಠಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶೈಲಜಾ ರಾಮಕೃಷ್ಣ ಸ್ವಾಗತಿಸಿದರು. ರಮಾವೆಂಕಟೇಶ್ ನಿರೂಪಿಸಿದರು.


Monday, August 31, 2020

ಪೌರಕಾರ್ಮಿಕರ ದಿನಾಚರಣೆಯಲ್ಲಿ ಜಾನಪದ ಕಲಾವಿದರಿಗೆ ವೇದಿಕೆ ನೀಡಲು ಮನವಿ

 ಪೌರಕಾರ್ಮಿಕರ ದಿನಾಚರಣೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ಕಲಾವಿದರಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಸೋಮವಾರ ಭದ್ರಾವತಿ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಆ. ೩೧: ಪ್ರತಿ ವರ್ಷ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗುವ ಪೌರಕಾರ್ಮಿಕರ ದಿನಾಚರಣೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ಕಲಾವಿದರಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಸೋಮವಾರ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಯಿತು.
      ಸ್ವಚ್ಛತೆ ಹಾಗು ಕಾರ್ಮಿಕರಿಗೆ ಸಂಬಂಧಿಸಿದ ಮತ್ತು ಅಂಬೇಡ್ಕರ್‌ರವರ ಕುರಿತು ಹಾಡುಗಳನ್ನು ಹಾಡಲು ಕಲಾವಿದರಿಗೆ ಅವಕಾಶ ನೀಡುವಂತೆ  ಮನವಿಯಲ್ಲಿ ಕೋರಲಾಗಿದೆ.
      ಕಲಾವಿದರಾದ ತಮಟೆ ಜಗದೀಶ್, ಜಿ. ದಿವಾಕರ, ಲಾವಣ್ಯ ಮತ್ತು ಶಿವಾನಂದ ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕ ಜಿ.ಟಿ ಗುರುಲಿಂಗಪ್ಪ ನಿಧನ


ಜಿ.ಟಿ ಗುರುಲಿಂಗಪ್ಪ
ಭದ್ರಾವತಿ, ಆ. ೩೧: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷ, ನಿವೃತ್ತ ಶಿಕ್ಷಕ ಜಿ.ಟಿ ಗುರುಲಿಂಗಪ್ಪ ಸೋಮವಾರ ನಿಧನ ಹೊಂದಿದರು.
       ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹೊಂದಿದ್ದರು. ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ ಭದ್ರಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ಸ್ಕೌಟ್ಸ್ ಮಾಸ್ಟರ್ ಆಗಿದ್ದ ಗುರುಲಿಂಗಪ್ಪನವರಿಗೆ ಹಲವು ಪ್ರಶಸ್ತಿಗಳು ಲಭಿಸಿದ್ದವು. ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
      ಮೃತರ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳು, ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ನಿವೃತ್ತಿ ಹೊಂದಿದ ಶಿಕ್ಷಕರುಗಳಿಗೆ ಸನ್ಮಾನ, ಅಭಿನಂದನೆ

ಭದ್ರಾವತಿ ಕಾಗದನಗರ ಪೇಪರ್‌ಟೌನ್ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಬೇಲಿಮಲ್ಲೂರು ಎಂ. ನಾಗಪ್ಪ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಅವರನ್ನು ಸೋಮವಾರ ತಾಲೂಕು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಆ. ೩೧: ತಾಲೂಕಿನ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕರುಗಳಿಗೆ ಸೋಮವಾರ ತಾಲೂಕು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸುಮಾರು ೩೪ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಾಗದನಗರ ಎಂಪಿಎಂ ಶಿಕ್ಷಣ ಮಂಡಳಿಯ ಪೇಪರ್‌ಟೌನ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬೇಲಿಮಲ್ಲೂರು ಎಂ. ನಾಗಪ್ಪ, ಅರಬಿಳಚಿ ಬಸವೇಶ್ವರ ಪ್ರೌಢಶಾಲೆ ಸಹ ಶಿಕ್ಷಕ ದೇವೇಂದ್ರಪ್ಪ ಹಾಗೂ ನ್ಯೂಟೌನ್ ಸೇಂಟ್‌ಚಾರ್ಲ್ಸ್ ಕನ್ನಡ ಶಾಲೆಯ ಶಿಕ್ಷಕಿ ಜಾನಿ ಅವರನ್ನು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದಿಸುವ ಮೂಲಕ ನಿವೃತ್ತಿ ಜೀವನಕ್ಕೆ ಶುಭ ಕೋರಲಾಯಿತು.

Sunday, August 30, 2020

ರಕ್ತದಾನ ಶಿಬಿರ : ೫೦ ಯೂನಿಟ್ ರಕ್ತ ಸಂಗ್ರಹ


ಭದ್ರಾವತಿ ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಜಾಮಿಯಾ ಶಾದಿ ಮಹಲ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ರೋಟರಿ ರಕ್ತ ನಿಧಿ ಮುಖ್ಯಸ್ಥ ಸತೀಶ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
     ಭದ್ರಾವತಿ, ಆ. ೩೦: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತಾಲೂಕು ಶಾಖೆ ವತಿಯಿಂದ ಶಿವಮೊಗ್ಗ ರೋಟರಿ ರಕ್ತ ನಿಧಿ ಸಹಯೋಗದೊಂದಿಗೆ ಭಾನುವಾರ ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಜಾಮಿಯಾ ಶಾದಿ ಮಹಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಸುಮಾರು ೫೦ ಯೂನಿಟ್ ರಕ್ತ ಸಂಗ್ರಹಿಸಲಾಯಿತು.    
      ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಕಾರ್ಯದರ್ಶಿ ಉಮರ್ ಫಾರೂಕ್, ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಲ್ಲಾಹ್ ಬಕಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ರೋಟರಿ ರಕ್ತ ನಿಧಿ ಮುಖ್ಯಸ್ಥ  ಸತೀಶ್‌ರವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ವಿಧಾನಸಭೆ ಕಾರ್ಯದರ್ಶಿ ಹುದ್ದೆಗೆ ಎಸ್. ಮೂರ್ತಿ ಮರು ನೇಮಕಗೊಳಿಸಲು ಆಗ್ರಹ

ಭದ್ರಾವತಿ, ಆ. ೩೦: ಪರಿಶಿಷ್ಟ ಜಾತಿಗೆ ಸೇರಿದ ಎಸ್. ಮೂರ್ತಿಯವರನ್ನು ಪುನಃ ವಿಧಾನಸಭೆ ಕಾರ್ಯದರ್ಶಿ ಸೇವೆಗೆ ನೇಮಕ ಮಾಡಿಕೊಳ್ಳುವಂತೆ ತಾಲೂಕು ಬಾಪೂಜಿ ಹರಿಜನ ಸೇವಾ ಸಂಘ ಆಗ್ರಹಿಸಿದೆ.
    ಪರಿಶಿಷ್ಟ ಜಾತಿಗೆ ಸೇರಿದ ಎಸ್. ಮೂರ್ತಿಯವರನ್ನು ಪ್ರಮುಖ ಹುದ್ದೆಯಿಂದ ಹೊರಗಿಡುವ ಹುನ್ನಾರ ನಡೆಸಲಾಗಿದ್ದು, ಕಾರ್ಯದರ್ಶಿ ಹುದ್ದೆಯಲ್ಲಿದ್ದ ಮೂರ್ತಿಯವರ ಮೇಲೆ ವಿನಾಕಾರಣ ಕರ್ತವ್ಯಲೋಪ ಆರೋಪ ಮಾಡಿ ೨೦೧೮ರಲ್ಲಿ ಸೇವೆಯಿಂದ ಅಮಾನತು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ರಿಟ್ ಪಿಟೀಷನ್ ಹಾಕಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಪಿ.ಬಿ. ಭಜಂತ್ರಿಯವರು ೩ ವಾರಗಳೊಗಾಗಿ ಕಾರ್ಯದರ್ಶಿ ಹುದ್ದೆಗೆ ಮರು ನೇಮಕ ಮಾಡಿಕೊಳ್ಳುವಂತೆ ಜು.೨ರಂದು ತೀರ್ಪು ನೀಡಿದ್ದಾರೆ. ಈ ಆದೇಶವನ್ನು ಪಾಲಿಸದೆ ತೀರ್ಪನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿದ್ದು, ಇದನ್ನು ಸಂಘವು ಖಂಡಿಸುತ್ತದೆ.
   ತಕ್ಷಣ ಸರ್ಕಾರ ನ್ಯಾಯಾಲಯದ ಆದೇಶದಂತೆ ಮೂರ್ತಿಯವರನ್ನು ಮರು ನೇಮಕ ಮಾಡಿಕೊಳ್ಳಬೇಕು. ದಲಿತ ವಿರೋಧಿ ನೀತಿಯನ್ನು ಕೈಬಿಡಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿ, ಕಾನೂನು ಸಚಿವರು ಹಾಗು ಸಭಾಧ್ಯಕ್ಷರ ನಿವಾಸದ ಮುಂದೆ ಬೃಹತ್ ಹೋರಾಟ ನಡೆಸುವುದಾಗಿ ಸಂಘ ಎಚ್ಚರಿಸಿದೆ ಎಂದು ಪ್ರಧಾನ ಕಾರ್ಯದರ್ಶಿ ಎಂ. ರಾಜೇಂದ್ರ ತಿಳಿಸಿದ್ದಾರೆ.