ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆಯವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ಪಿ. ಸ್ಪರ್ಷರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಸೆ. ೧: ಒಳ್ಳೆಯ ಹೃದಯ, ನಾಯಕತ್ವ ಗುಣವಿದ್ದಲ್ಲಿ ಅಧಿಕಾರ ತಾನಾಗಿ ಲಭಿಸುತ್ತದೆ. ಇಂತಹ ಮಹಾನ್ ನಾಯಕರಾದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆಯವರ ಮಾರ್ಗದರ್ಶನದಲ್ಲಿ ಇಂದಿನ ಜನಪ್ರತಿನಿಧಿಗಳು ಮುನ್ನಡೆಯಬೇಕೆಂದು ನಗರಸಭೆ ಪೌರಾಯುಕ್ತ ಮನೋಹರ್ ಹೇಳಿದರು.
ಅವರು ನಗರದ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜಕ್ಕೆ ತಮ್ಮದೇ ಆದ ಸೇವೆ ನೀಡಬೇಕೆಂಬ ಮನೋಭಾವದೊಂದಿಗೆ ರಾಜ್ಯ ರಾಜಕಾರಣಿದಲ್ಲಿ ಉನ್ನತ ಮಟ್ಟಕ್ಕೆ ಏರಿದ ಇಬ್ಬರ ಕೊಡುಗೆ ಅನನ್ಯವಾಗಿದೆ. ಇವರ ಆದರ್ಶಗುಣಗಳೊಂದಿಗೆ ಮುನ್ನಡೆಯುತ್ತಿರುವ ಸಂಘಟನೆ ಸಹ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಯನ್ನು ಸಮಾಜಕ್ಕೆ ನೀಡುವ ಮೂಲಕ ಮುಂಚೂಣಿಗೆ ಬರುವಂತಾಗಬೇಕು. ಸಂಘಟನೆ ವತಿಯಿಂದ ನಗರಸಭೆ ವ್ಯಾಪ್ತಿಯಲ್ಲಿರುವ ಸುಮಾರು ೭೦ ಕೆರೆಗಳ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಇದಕ್ಕೆ ನಗರಸಭೆ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ. ೭೦ ಕೆರೆಗಳ ಪೈಕಿ ಕನಿಷ್ಠ ೩೦ ಕೆರೆಗಳನ್ನಾದರೂ ಅಭಿವೃದ್ಧಿ ಪಡಿಸಿದಲ್ಲಿ ಸಂಘಟನೆ ಹೆಸರು ಶಾಶ್ವತವಾಗಿ ಉಳಿಯುವಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಮಾತನಾಡಿ, ಕಳೆದ ಸುಮಾರು ೪ ದಶಕಗಳಿಂದ ಸಂಘಟನೆ ವತಿಯಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಡಿ. ದೇವರಾಜ ಅರಸುರವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿ ಅಸ್ತಿತ್ವಕ್ಕೆ ತರುವ ಮೂಲಕ ರಾಜ್ಯದಲ್ಲಿ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಮುನ್ನುಡಿ ಬರೆದರು. ಈ ಪೈಕಿ ಅಂದು ನಗರದ ಫಿಲ್ಟರ್‌ಶೆಡ್, ಲೋಯರ್ ಹುತ್ತಾ ಎಡ ಮತ್ತು ಬಲ ಭಾಗದ ಕೊಳಚೆ ಪ್ರದೇಶಗಳು ಅಭಿವೃದ್ಧಿ ಹೊಂದಿದವು. ಆ ನಂತರ ಉಳಿದ ಕೊಳಚೆ ಪ್ರದೇಶಗಳು ಹಂತ ಹಂತವಾಗಿ ಅಭಿವೃದ್ಧಿಗೊಂಡವು. ಇದೆ ರೀತಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಹೋರಾಟ ನಡೆಸಿದ ಪರಿಣಾಮ ಕುವೆಂಪು ವಿಶ್ವ ವಿದ್ಯಾನಿಲಯ ಸ್ಥಾಪನೆಗೊಂಡಿತು. ನಗರಸಭೆ ವ್ಯಾಪ್ತಿಯಲ್ಲಿ ನ್ಯೂಟೌನ್ ಭಾಗದಲ್ಲಿ ಕುಡಿಯುವ ನೀರಿನ ಯೋಜನೆ, ಕೆಇಬಿ ಕೌಂಟರ್, ಜನ್ನಾಪುರ ಆಸ್ಪತ್ರೆ ಆರಂಭಗೊಂಡವು. ಅಲ್ಲದೆ ತಾಲೂಕು ಪಂಚಾಯಿತಿ ಹಾಗು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಯೋಜನೆಗಳು ಜಾರಿಗೆ ಬಂದವು. ಸಂಘಟನೆ ವತಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹೋರಾಟ ನಡೆಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ಪಿ. ಸ್ಪರ್ಷ, ಜನ್ನಾಪುರ ನಗರ ಆರೋಗ್ಯ ಕೇಂದ್ರದ ಲಾಬ್ ಟೆಕ್ನಿಷಿಯನ್ ಸಚಿನ್, ನಿವೃತ್ತ ಗುತ್ತಿಗೆ ಪೌರಕಾರ್ಮಿಕ ಕೃಷ್ಣಪ್ಪ ಹಾಗು ನಗರಸಭೆ ಪೌರಾಯುಕ್ತ ಮನೋಹರ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಟ್ರಸ್ಟ್ ಪ್ರಮುಖರಾದ ಅಂತೋಣಿ ಗ್ಸೇವಿಯರ್, ಭವಾನಿ ಶಂಕರ್, ರೈತ ಮುಖಂಡ ನೀಲಕಂಠಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶೈಲಜಾ ರಾಮಕೃಷ್ಣ ಸ್ವಾಗತಿಸಿದರು. ರಮಾವೆಂಕಟೇಶ್ ನಿರೂಪಿಸಿದರು.
No comments:
Post a Comment