Friday, September 18, 2020

ಉಕ್ಕಿನ ನಗರದಲ್ಲಿ ಕಳಚಿ ಬಿದ್ದ ೫ ದಶಕಗಳ ರಂಗಕೊಂಡಿ

ಹಿರಿಯ ರಂಗದಾಸೋಹಿ, ಎಂಪಿಎಂ ನಿವೃತ್ತ ಕಾರ್ಮಿಕ ಎಸ್.ಜಿ ಶಂಕರಮೂರ್ತಿ ನಿಧನ

ಎಸ್.ಜಿ ಶಂಕರಮೂರ್ತಿ 
ಭದ್ರಾವತಿ, ಸೆ. ೧೮: ನಗರದ ಹಿರಿಯ ರಂಗಕಲಾವಿದ,  ರಂಗದಾಸೋಹಿ(೬೮), ಎಂಪಿಎಂ ಕಾರ್ಖಾನೆ ನಿವೃತ್ತ ಕಾರ್ಮಿಕ ಎಸ್.ಜಿ ಶಂಕರಮೂರ್ತಿ ಶುಕ್ರವಾರ ನಿಧನ ಹೊಂದಿದರು.
      ಪತ್ನಿ, ಓರ್ವ ಪುತ್ರ, ಸೊಸೆ, ಮೊಮ್ಮಗ, ಸಹೋದರರನ್ನು ಹೊಂದಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಶಂಕರಮೂರ್ತಿಯವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.


      ಎಸ್.ಜಿ ಶಂಕರಮೂರ್ತಿ ಹಾಗು ಎಸ್.ಜಿ ಸಂಗಮೇಶ್ವರ ಸಹೋದರರು ಕಳೆದ ೫ ದಶಕಗಳಿಂದ ಸಾಹಿತ್ಯ, ಶಿಲ್ಪ ಕಲೆ ಹಾಗು ರಂಗ ಕಲಾ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು, ಶಂಕರಮೂರ್ತಿಯವರು ಮೂಲತಃ ಶಿಲ್ಪ ಕಲಾವಿದರಾಗಿದ್ದು, ವರನಟ ಡಾ. ರಾಜ್‌ಕುಮಾರ್ ಕುಟುಂಬದೊಂದಿಗೆ ಒಡನಾಡ ಹೊಂದಿದ್ದರು. ಡಾ. ರಾಜ್‌ಕುಮಾರ್‌ರವರು ಬೆಂಗಳೂರಿನಲ್ಲಿ ನಿರ್ಮಿಸಿರುವ ಮನೆಯ ವಾಸ್ತು ಶಿಲ್ಪದ ಜವಾಬ್ದಾರಿಯನ್ನು ಅಂದು ಶಂಕರಮೂರ್ತಿ ಕುಟುಂಬದವರು ವಹಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಅಲ್ಲದೆ ರಾಜ್‌ಕುಮಾರ್‌ರವರ ಹಲವು ಪ್ರತಿಮೆಗಳನ್ನು ನಿರ್ಮಿಸಿಕೊಟ್ಟಿದ್ದರು.
        ಶಂಕರಮೂರ್ತಿಯವರು ಎಂಪಿಎಂ ಕಾರ್ಖಾನೆ ಉದ್ಯೋಗಿಯಾಗಿದ್ದರು. ಸಹೋದರ ಸಂಗಮೇಶ್ವರ ವಿಐಎಸ್‌ಎಲ್ ಕಾರ್ಖಾನೆ ಉದ್ಯೋಗಿದ್ದರು. ಸುಮಾರು ೪ ದಶಕಗಳ ಹಿಂದೆಯೇ ವಿಐಎಸ್‌ಎಲ್ ವಸ್ತು ಸಂಗ್ರಹಾಲಯದಲ್ಲಿ  ಭಾರತರತ್ನ ಸರ್.ಎಂ ವಿಶ್ವೇಶ್ವರಾಯನವರ ಪ್ರತಿಮೆಯನ್ನು ನಿರ್ಮಿಸಿಕೊಟ್ಟು ಪ್ರಶಂಸೆಗೆ ಪಾತ್ರರಾಗಿದ್ದರು.


     ಇತ್ತೀಚಿನ ಕೆಲವು ವರ್ಷಗಳ ಹಿಂದೆ ನಗರದ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಲ್ಲಿ ಮಹಾತ್ಮಗಾಂಧಿ ಪ್ರತಿಮೆ, ಕಳೆದ ತಿಂಗಳು ನಗರದ ರೈಲ್ವೆ ನಿಲ್ದಾಣ ಮುಂಭಾಗ ಅನಾವರಣಗೊಂಡ ಸರ್.ಎಂ ವಿಶ್ವೇಶ್ವರಾಯ ಪ್ರತಿಮೆಗಳನ್ನು ಶಂಕರಮೂರ್ತಿ ನಿರ್ಮಿಸಿಕೊಟ್ಟಿದ್ದರು. ಅಲ್ಲದೆ ನಗರಸಭೆ ಮುಂಭಾಗದ ಉದ್ಯಾನವನದಲ್ಲಿ ಭದ್ರೆ ಮಾತೆಯ ಮೂರ್ತಿ ನಿರ್ಮಾಣಕ್ಕೆ ಸಿದ್ದತೆ ಕೈಗೊಂಡು ಬಹುತೇಕ ಪೂರ್ಣಗೊಳಿಸಿದ್ದರು. ಪ್ರತಿ ವರ್ಷ ಗೌರಿ-ಗಣೇಶ ಹಬ್ಬಕ್ಕೆ ಮೂರ್ತಿಗಳನ್ನು ತಯಾರಿಸಿಕೊಡುತ್ತಿದ್ದರು. ಸುಮಾರು ೨ ದಶಕಗಳಿಗೂ ಹೆಚ್ಚು ಕಾಲದಿಂದ ಆಂಧ್ರ ಪ್ರದೇಶಕ್ಕೆ ತೆರಳಿ ಮೂರ್ತಿಗಳನ್ನು ನಿರ್ಮಿಸಿಕೊಟ್ಟು ಬರುತ್ತಿದ್ದರು.  
     

 ಶಿಲ್ಪ ಕಲಾ ಚಟುವಟಿಕೆಗಳಿಗಿಂತ ರಂಗ ಚಟುವಟಿಕೆಗಳಲ್ಲಿ ಶಂಕರ ಮೂರ್ತಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಅಂದು ನಗರದಲ್ಲಿ ಎಂಪಿಎಂ ಮತ್ತು ವಿಐಎಸ್‌ಎಲ್ ಕಾರ್ಖಾನೆಗಳ ಆರಂಭದ ಜೊತೆ ಜೊತೆಗೆ ರಂಗ ಚಟುವಟಿಕೆಗಳು ಸಹ ಆರಂಭಗೊಂಡಿದ್ದವು. ಇಂತಹ ಸಂದರ್ಭದಲ್ಲಿ ರಂಗಕಲಾವಿದರ ಒಡನಾಡಿಯಾಗಿ ಬೆಳೆದು ರಂಗ ವಿನ್ಯಾಸಕರಾಗಿ, ನಾಟಕ ರಚನೆಗಾರರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಶಾಂತಲ ಆರ್ಟ್ಸ್ ಮತ್ತು ಶಾಂತಲ ಕಲಾ ವೇದಿಕೆಯನ್ನು ಸ್ಥಾಪಿಸುವ ಮೂಲಕ ಅನೇಕ ಶಿಲ್ಪ ಹಾಗು ರಂಗ ಕಲಾವಿದರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತರಾಗಿದ್ದರು. ಅಲ್ಲದೆ ಹಲವು ವರ್ಷಗಳಿಂದ ನಗರದಲ್ಲಿ ಪಾಳುಬಿದ್ದಿದ್ದ ಕನಕಮಂಟಪ ಪುನರ್ ನಿರ್ಮಾಣಗೊಳ್ಳಲು ಪ್ರಮುಖ ಪಾತ್ರವಹಿಸಿದ್ದರು. ರಂಗ ಸೇವೆಯ ತಮ್ಮ ಬದುಕಿನ ಚಿತ್ರಣವನ್ನು ರಂಗಗೊಂಚಲು ಎಂಬ ಪುಸ್ತಕದ ಮೂಲಕ ಹಂಚಿಕೊಂಡಿದ್ದರು.
    ಇವರ ಸೇವೆಯನ್ನು ಗುರುತಿಸಿ ಜಿಲ್ಲಾಡಳಿತ, ತಾಲೂಕು ಆಡಳಿತ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.


     ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್, ವಿವಿಧ ರಂಗ ಚಟುವಟಿಕೆಗಳ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನದೊಂದಿಗೆ ಕಳೆದ ೬ ದಶಕಗಳಿಂದ ಸಾಹಿತ್ಯ, ಶಿಲ್ಪ ಕಲೆ, ರಂಗ ಚಟುವಟಿಕೆಗಳ ಕೊಂಡಿಯಾಗಿದ್ದ ಹಿರಿಯ ಜೀವಿಯೊಂದು ಕಳಚಿಬಿದ್ದಂತಾಗಿದೆ. ಇವರ ನಿಧನ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.
    ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ಶಾಂತಲ ಕಲಾವೇದಿಕೆ ಅಧ್ಯಕ್ಷೆ ಯಶೋಧ ವೀರಭದ್ರಪ್ಪ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ವಿರೂಪಾಕ್ಷಪ್ಪ, ಕನ್ನಡ ಪರಿಷತ್ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ, ಎಂಪಿಎಂ ಮತ್ತು ವಿಐಎಸ್‌ಎಲ್ ಕಾರ್ಮಿಕರು, ಕರ್ನಾಟಕ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

Thursday, September 17, 2020

ಬಾರಿ ಗಾತ್ರದ ಹೆಬ್ಬಾವು ಸೆರೆ

ಭದ್ರಾವತಿ ಹಳೇಬುಳ್ಳಾಪುರದ ನಿವಾಸಿ ಸ್ನೇಕ್ ಜೋಯಲ್ ಸ್ನೇಹಿತರ ತಂಡ ತಾಲೂಕಿನ ಸಮೀಪದ ಉಂಬ್ಳೆಬೈಲು ಗ್ರಾಮದಲ್ಲಿ ಬಾರಿ ಗಾತ್ರದ ಹೆಬ್ಬಾವು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದೆ.

ಭದ್ರಾವತಿ, ಸೆ. ೧೭: ನಗರದ ಹಳೇಬುಳ್ಳಾಪುರದ ನಿವಾಸಿ ಸ್ನೇಕ್ ಜೋಯಲ್ ಸ್ನೇಹಿತರ ತಂಡ ತಾಲೂಕಿನ ಸಮೀಪದ ಉಂಬ್ಳೆಬೈಲು ಗ್ರಾಮದಲ್ಲಿ ಬಾರಿ ಗಾತ್ರದ ಹೆಬ್ಬಾವು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದೆ.
     ಮನೆಯೊಂದರಲ್ಲಿ ಅಡಗಿದ್ದ ಸುಮಾರು ೧೫ ಅಡಿ ಉದ್ದದ, ೩೫ ಕೆ.ಜಿ ತೂಕದ ಹೆಬ್ಬಾವು ಸೆರೆ ಹಿಡಿಯಲಾಗಿದೆ. ಹೆಬ್ಬಾವು ಕಂಡು ಭಯಭೀತರಾಗಿದ್ದ ಮನೆಯವರು ತಕ್ಷಣ ಸ್ನೇಕ್ ಜೋಯಲ್‌ಗೆ ಕರೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಜೋಯಲ್ ಸ್ನೇಹಿತರ ತಂಡ ಸುರಕ್ಷಿತವಾಗಿ ಸೆರೆ ಹಿಡಿದಿದೆ.
      ಜೋಯಲ್ ಸ್ನೇಹಿತರಾದ ಸತ್ಯ, ಡೆನ್ನಿಸ್, ಸಂತು, ತಿಲಕ್, ಜಾಯ್ಸನ್, ಅಭಿ ಮತ್ತು ಲೋಯಿತಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಲೂಕು ಆಡಳಿತದಿಂದ ವಿಶ್ವಕರ್ಮ ದಿನಾಚರಣೆ

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಗುರುವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ವಿಶ್ವಕರ್ಮ ದಿನಾಚರಣೆ ಸರಳವಾಗಿ ಆಚರಿಸಲಾಯಿತು.
ಭದ್ರಾವತಿ, ಸೆ. ೧೭: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಗುರುವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ವಿಶ್ವಕರ್ಮ ದಿನಾಚರಣೆಯನ್ನು ಈ ಬಾರಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಯಿತು.
     ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಶಿರಸ್ತೇದಾರ್ ಮಂಜಾನಾಯ್ಕ, ಕಂದಾಯಾಧಿಕಾರಿ ಪ್ರಶಾಂತ್, ವಿಶ್ವಕರ್ಮ ಸಮಾಜದ ಪ್ರಮುಖರಾದ ಕೃಷ್ಣಾನಂದ ರಾಯ್ಕರ್, ವೆಂಕಟೇಶ್, ಕೃಷ್ಣಪ್ಪ, ಹರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಾಮಾನ್ಯ ದೈಹಿಕ ಶಿಕ್ಷಕನೊಬ್ಬ ಜ್ಯೂನಿಯರ್ ವಿಷ್ಣುವರ್ಧನ್

ದೈಹಿಕ ಶಿಕ್ಷಕ ಅಪೇಕ್ಷ ಮಂಜುನಾಥ್
* ಅನಂತಕುಮಾರ್
ಭದ್ರಾವತಿ: ಶಿಕ್ಷಕ ವೃತ್ತಿಯೊಂದಿಗೆ ಕಲಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಕಾಗದನಗರ ಪ್ರೌಢಶಾಲೆ ದೈಹಿಕ ಶಿಕ್ಷಕ ಮಂಜುನಾಥ್ ಜ್ಯೂನಿಯರ್ ವಿಷ್ಣುವರ್ಧನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
       ಚಿನ್ನನಾಗಯ್ಯ ಮತ್ತು ಮುತ್ಯಾಲಮ್ಮನವರ ಪುತ್ರನಾಗಿ ೧೯೬೪ರಲ್ಲಿ ಜನಿಸಿದ ಮಂಜುನಾಥ್ ೧೯೯೦ ರಿಂದ ಕಾಗದ ನಗರ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೈಹಿಕ ಶಿಕ್ಷಕರಾಗಿದ್ದರೂ ಸಹ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಸ ಸಿಂಹ ಡಾ. ವಿಷ್ಣುವರ್ಧನ್‌ರವರ  ವೇಷಭೂಷಣ, ನಟನೆ, ನೃತ್ಯ ಮತ್ತು ಧ್ವನಿ ಅನುಕರಣೆ ಮೂಲಕ ಕಳೆದ ಹಲವಾರು ವರ್ಷಗಳಿಂದ ಜ್ಯೂನಿಯರ್ ವಿಷ್ಣುವರ್ಧನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
        ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಶಿಕ್ಷಕರ ದಿನಾಚರಣೆ ಸೇರಿದಂತೆ ಹಲವು ಸರ್ಕಾರಿ ಕಾರ್ಯಕ್ರಮಗಳಲ್ಲಿ, ಶಾಲಾ-ಕಾಲೇಜುಗಳ ಕಾರ್ಯಕ್ರಮಗಳಲ್ಲಿ ಹಾಗೂ ಶುಭಾ ಸಮಾರಂಭಗಳಲ್ಲಿ ತಮ್ಮ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೆ ರಾಜ್ಯದ ಮೂಲೆ ಮೂಲೆಗಳಲ್ಲಿ ತಮ್ಮ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದಾರೆ.


ಜ್ಯೂನಿಯರ್ ವಿಷ್ಣುವರ್ಧನ್ ವೇಷದಲ್ಲಿ ಅಪೇಕ್ಷ ಮಂಜುನಾಥ್
   ಮಂಜುನಾಥ್‌ರವರು ಬಹುತೇಕ ಪ್ರದರ್ಶನಗಳನ್ನು ಉಚಿತವಾಗಿ ನೀಡಿದ್ದಾರೆ. ಕೆಲವು ಕಾರ್ಯಕ್ರಮಗಳಲ್ಲಿ ಪಡೆದ ಹಣವನ್ನು ತಮ್ಮ ಸ್ವಂತ ಬಳಕೆಗೆ ಬಳಸದೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಜೊತೆಗೆ ರಾಜ್ಯದ ಹಾಗೂ ಹೊರ ರಾಜ್ಯದ ಕಲಾವಿದರನ್ನು ಗುರುತಿಸಿ ಪ್ರತಿವರ್ಷ ಯುಗಾದಿ ಪುರಾಸ್ಕಾರ ಹೆಸರಿನಲ್ಲಿ ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.
       ಅಪೇಕ್ಷ ನೃತ್ಯ ಕಲಾ ವೃಂದ ಸ್ಥಾಪಿಸುವ ಮೂಲಕ ಹಲವಾರು ವರ್ಷಗಳಿಂದ ಉಚಿತವಾಗಿ ನೃತ್ಯ ತರಬೇತಿ ನೀಡುತ್ತಿದ್ದಾರೆ. ಇವರಿಂದ ತರಬೇತಿ ಪಡೆದ ನೂರಾರು ವಿದ್ಯಾರ್ಥಿಗಳು ಉತ್ತಮ ನೃತ್ಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.  ಪ್ರಸ್ತುತ ಅಪೇಕ್ಷ ಮಂಜುನಾಥ್ ಎಂಬ ಹೆಸರಿನಿಂದಲೇ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ.
        ಕಲಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಕ್ರೀಡಾ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಿರುವ ಮಂಜುನಾಥ್,  ರಾಜ್ಯಮಟ್ಟದ ಅಥ್ಲೆಟಿಕ್ಸ್ ಮತ್ತು ಕಬಡ್ಡಿ ಕ್ರೀಡಾಪಟು ಹಾಗು ತೀರ್ಪುಗಾರರಾಗಿದ್ದಾರೆ. ಅಂತರ್ ಕಾಲೇಜು ಮಟ್ಟದ ಕಬಡ್ಡಿ ಪಂದ್ಯಾವಳಿಗಳಲ್ಲಿ ಚಿನ್ನ ಮತ್ತು ಕಂಚಿನ ಪದಕಗಳನ್ನು ಹಾಗೂ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದ ಮಿನಿಸ್ಟರಿ ಆಫ್ ಎಜುಕೇಷನ್ ಅಂಡ್ ಸೋಷಿಯಲ್ ವೆಲ್‌ಫೇರ್ ನಿಂದ ೩ ಬಾರಿ ಪ್ರಶಸ್ತಿ ಪಡೆದಿದ್ದಾರೆ.
         ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಜೆ.ಪಿ.ಸಮಾಜರತ್ನ ರಾಜ್ಯ ಪ್ರಶಸ್ತಿ, ನೃತ್ಯ ಶ್ರೀ ಪ್ರಶಸ್ತಿ, ಡಾ. ಅಂಬೇಡ್ಕರ್ ಸದ್ಭಾವನಾ ರಾಜ್ಯ ಪ್ರಶಸ್ತಿ, ಚಿತ್ರ ಶ್ರೀ ರಾಜ್ಯ ಪ್ರಶಸ್ತಿ, ಬಸವಜ್ಯೋತಿ ರಾಜ್ಯ ಪ್ರಶಸ್ತಿ, ಕಲಾರತ್ನ ಪ್ರಶಸ್ತಿ, ಸುವರ್ಣ ಕರ್ನಾಟಕ ಕನ್ನಡಿಗ ಕೇರಳ ರಾಜ್ಯ ಪ್ರಶಸ್ತಿ, ನೃತ್ಯ ಕಲಾ ಚೇತನ ಪ್ರಶಸ್ತಿ, ಪತಂಜಲಿ ರತ್ನ ರಾಜ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ ಮತ್ತು ಪ್ರೊ.ಬಿ.ಕೃಷ್ಣಪ್ಪ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ. ನೃತ್ಯಪ್ರಿಯ, ನೃತ್ಯ ಆರಾಧಕ, ಆದರ್ಶ ಶಿಕ್ಷಕ ರತ್ನ ಮತ್ತು ನಗೆ ನಾಟ್ಯ ಚೇತನ ಶ್ರೀ ಬಿರುದುಗಳು ಲಭಿಸಿವೆ.


ಸಮಾರಂಭ ಒಂದರಲ್ಲಿ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರಿಂದ ಸನ್ಮಾನಿಸಲ್ಪಡುತ್ತಿರುವ ಅಪೇಕ್ಷ ಮಂಜುನಾಥ್
     ಎನ್.ಸಿ.ಸಿ ಮತ್ತು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಹಲವು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಲವಾರು ಬಾರಿ ರಕ್ತದಾನ ಸಹ ಮಾಡಿದ್ದಾರೆ.  ಚಂದನ, ಉದಯ, ಝೀ ಕನ್ನಡ ಸೇರಿದಂತೆ ಹಲವು ಟಿ.ವಿ ಚಾನಲ್‌ಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
      ಸಾಹಿತ್ಯ ಕ್ಷೇತ್ರದಲ್ಲೂ ಸೇವೆ ಸಲ್ಲಿಸಬೇಕೆಂಬ ಹಂಬಲದೊಂದಿಗೆ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಕಳೆದ ಹಲವಾರು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪರಿಷತ್ ಹಲವಾರು ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಪ್ರಸ್ತುತ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕಳೆದ ಸುಮಾರು ೧ ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.  ಒಟ್ಟಾರೆ ಜ್ಯೂನಿಯರ್ ವಿಷ್ಣುವರ್ಧನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಒಬ್ಬ ಸಾಮಾನ್ಯ ದೈಹಿಕ ಶಿಕ್ಷಕನೊಬ್ಬ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ.
       ಶಾಲಾ-ಕಾಲೇಜುಗಳಲ್ಲಿ ಸಸಿ ನೆಡುವ ಕಾರ್ಯಕ್ರಮ :
    ಚಲನಚಿತ್ರ ನಟ, ಸಾಹಸ ಸಿಂಹ ದಿವಂಗತ ಡಾ. ವಿಷ್ಣುವರ್ಧನ್ ೭೦ನೇ ಜನ್ಮದಿನದ ಅಂಗವಾಗಿ ಸೆ.೧೮ರಂದು ಡಾ. ವಿಷ್ಣು ಸೇವಾ ಸಮಿತಿ ವತಿಯಿಂದ ನಗರದ ವಿವಿಧ ಶಾಲಾ-ಕಾಲೇಜುಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
     ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ ೯ ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜ್ಯೂನಿಯರ್ ವಿಷ್ಣುವರ್ಧನ್, ಕಲಾವಿದ ಅಪೇಕ್ಷ ಮಂಜುನಾಥ್ ಕೋರಿದ್ದಾರೆ.  

Wednesday, September 16, 2020

೩ಡಿ ಡಿಜಿಟಲೀಕರಣಕ್ಕೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ

ಭದ್ರಾವತಿ ಹಳೇನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ.
ಭದ್ರಾವತಿ, ಸೆ. ೧೬: ಇಲ್ಲಿನ ಹಳೇನಗರದ ಪುರಾಣ ಪ್ರಸಿದ್ದ ೧೩ನೇ ಶತಮಾನದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ೩ಡಿ ಡಿಜಿಟಲೀಕರಣಗೊಳ್ಳಲಿದೆ.
     ಹೊಯ್ಸಳ ಸಾಮ್ರಾಜ್ಯದ ವೀರನರಸಿಂಹ ಬೇಲೂರು, ಹಳೇಬೀಡಿನ ಮಾದರಿಯಲ್ಲಿಯೇ ಈ ದೇವಾಲಯವನ್ನು ೧೨೨೬ರಲ್ಲಿ ವ್ಯಯನಾಮ ಸಂವತ್ಸರದಂದು ಕಟ್ಟಿಸಿದ್ದನು ಎನ್ನಲಾಗಿದೆ. ಹೊಯ್ಸಳ ಶಿಲ್ಪ ಕಲೆಯಿಂದ ಕೂಡಿದ್ದು,  ಮುಖ್ಯ ಗರ್ಭಗುಡಿಯಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವರು, ಎಡತೊಡೆಯ ಮೇಲೆ ಲಕ್ಷ್ಮೀ ದೇವಿಯನ್ನು ಕೂರಿಸಿಕೊಂಡು, ಶಂಖ, ಚಕ್ರ, ಗದಾ, ಪದ್ಮಾಧಾರಿಣಿಯಾಗಿ ಕುಳಿತಿರುವ ವಿಗ್ರಹವಿದೆ. ಎಡಭಾಗದ ಗರ್ಭಗುಡಿಯಲ್ಲಿ ಶಂಕು-ಚಕ್ರ ಪದ್ಮಾ ಗದಾಧಾರಿಯಾಗಿ ಪುರುಷೋತ್ತಮನ ಅತಿ ಎತ್ತರದ ವಿಗ್ರಹವಿದೆ. ಇದನ್ನು ಚನ್ನಕೇಶವ ಸ್ವಾಮಿ ದೇವರು ಎಂದು ಕರೆಯಲಾಗುತ್ತದೆ. ಈ ವಿಗ್ರಹದ ಸುತ್ತ ಕಲ್ಲಿನಲ್ಲಿಯೇ ಕೆತ್ತಿರುವ ವಿಷ್ಣುವಿನ ದಶಾವತಾರಗಳನ್ನು ಕಾಣಬಹುದಾಗಿದೆ. ಬಲಭಾಗದ ಗರ್ಭಗುಡಿಯಲ್ಲಿ ವೇಣುಗೋಪಾಲ ಸ್ವಾಮಿ ವಿಗ್ರಹವಿದೆ.  ಈ ವಿಗ್ರಹದ ಹಿಂದೆ ಕಲ್ಲಿನಲ್ಲಿಯೇ ಕೆತ್ತಿರುವ ಪ್ರಭಾವಳಿಯಲ್ಲಿ ಗೋಪಿಕಾಸ್ತ್ರೀಯರು ಹಾಗೂ ಅನೇಕ ಭಂಗಿಯ ಕೆತ್ತನೆಗಳು ಇವೆ. ದೇವಸ್ಥಾನದ ಹೊರಭಾಗಗಳಲ್ಲಿ ನೂರಾನಲವತ್ತೊಂದು ವಿಗ್ರಹಗಳು ಇದ್ದು, ತುಂಬಾ ಸುಂದರ ಕೆತ್ತನೆಯಿಂದ ಕೂಡಿವೆ.
     ಈ ದೇವಸ್ಥಾನದ ಸುತ್ತಳತೆ ಸುಮಾರು ೩೫ ಅಡಿಗಳಾಗಿದ್ದು, ದೇವಾಲಯದ ಒಳಗೆ ನಾಲ್ಕು ಕಂಬಗಳಿವೆ ಒಂದು ರಂಗಮಂಟಪವಿದೆ. ನಕ್ಷತ್ರಕಾರದ ಮಂಟಪದ ಮೇಲೆ ಪೂರ್ವಾಭಿಮುಖವಾಗಿ ನಿಮಾರ್ಣಗೊಂಡಿದೆ. ಈ ದೇವಾಲಯವನ್ನು ಪ್ರಸಿದ್ದ ಶಿಲ್ಪಿ ಜಕಣಾಚಾರಿಯ ಮಗ ಡಕಣಾಚಾರಿ ಕೆತ್ತಿದನೆಂದು ತಿಳಿಯಲಾಗಿದೆ.
      ಇದೀಗ ಜಿಲ್ಲೆಯ ಪಾರಂಪರಿಕ ಕಟ್ಟಡಗಳು, ಸ್ಮಾರಕಗಳು, ಅರಮನೆ, ದೇವಸ್ಥಾನಗಳು ಸೇರಿ ಒಟ್ಟು ೧೨ ಸ್ಥಳಗಳನ್ನು ೩ಡಿ ಲೇಸರ್ ತಂತ್ರಜ್ಞಾನ ಬಳಸಿ ಡಿಜಿಟಲೀಕರಣಗೊಳಿಸಲಾಗುತ್ತಿದೆ. ಈ ಪೈಕಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ಸಹ ಒಂದಾಗಿದೆ. ಈ ದೇವಸ್ಥಾನ ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಟ್ಟಿದೆ. ೩ಡಿ ಡಿಜಿಟಲೀಕರಣದಿಂದ ಸ್ಥಳದ ಮೂಲ ಸ್ವರೂಪ ಹಾಗು ತಾಣಗಳ ಸೌಲಭ್ಯಗಳನ್ನು ಸುಧಾರಿಸಬಹುದಾಗಿದೆ. ಈ ಹಿನ್ನಲೆಯಲ್ಲಿ ದೇವಸ್ಥಾನ ಮತ್ತಷ್ಟು ಅಭಿವೃದ್ದಿಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಮಾಜಿ ಶಾಸಕ ಅಪ್ಪಾಜಿಗೆ ಕಸಾಪ ವತಿಯಿಂದ ಸಂತಾಪ

ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮತ್ತು ನಿವೃತ್ತ ಶಿಕ್ಷ ಕ  ಜಿ.ಟಿ ಗುರುಲಿಂಗಯ್ಯ ಅವರಿಗೆ ಸಂತಾಪ ಸೂಚಿಸಲಾಯಿತು .
ಭದ್ರಾವತಿ, ಸೆ. ೧೬: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮತ್ತು ನಿವೃತ್ತ ಶಿಕ್ಷ ಕ  ಜಿ.ಟಿ ಗುರುಲಿಂಗಯ್ಯ ಅವರಿಗೆ ಸಂತಾಪ ಸೂಚಿಸಲಾಯಿತು .
     ನ್ಯೂ ಟೌನ್ ಪರಿಷತ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೃತರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.
    ಪರಿಷತ್ ತಾಲ್ಲೂಕು ಅಧ್ಯಕ್ಷ ಅಪೇಕ್ಷಾ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.  ಕತ್ತಲಗೆರೆ ತಿಮ್ಮಪ್ಪ ಮೃತರನ್ನು ಸ್ಮರಿಸಿದರು.  ಉಪಾಧ್ಯಕ್ಷರಾದ ನಾಸಿರ್ ಖಾನ್, ಕಾರ್ಯದರ್ಶಿಗಳಾದ ಸಿ. ಚೆನ್ನಪ್ಪ, ವೈ ಕೆ. ಹನುಮಂತಯ್ಯ, ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ  ಚಂದ್ರಶೇಖರಪ್ಪ ಚಕ್ರಸಾಲಿ, ಪ್ರಮುಖರಾದ ಸುಧಾಮಣಿ, ಧನಂಜಯ, ರೇವಣಪ್ಪ, ಯು. ಮಹಾದೇವಪ್ಪ, ಶಿವರುದ್ರಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವೈದ್ಯರು, ಸಿಬ್ಬಂದಿಗಳ ವಿರುದ್ಧ ಆಕ್ರೋಶ

ಭದ್ರಾವತಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಇಲಾಖೆ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾವತಿ, ಸೆ. ೧೬: ಕೊರೋನಾ ಸೋಂಕು ತಪಾಸಣೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗು ವೈದ್ಯರ ವರ್ತನೆಗೆ ತಾಲೂಕು ಪಂಚಾಯಿತಿ ಸದಸ್ಯ ಧರ್ಮೇಗೌಡ ಆಕ್ರೋಶ ವ್ಯಕ್ತಪಡಿಸಿದರು.
     ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಧರ್ಮೇಗೌಡ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ವೈದ್ಯರು ವಿನಾಕಾರಣ ಸಾರ್ವಜನಿಕರಲ್ಲಿ ಕೊರೋನಾ ಸೋಂಕು ಭೀತಿ ಹುಟ್ಟಿಸುತ್ತಿದ್ದು, ಸೋಂಕಿನ ಲಕ್ಷಣಗಳಿಲ್ಲ್ಲದಿದ್ದರೂ ಸಹ ಕ್ವಾರಂಟೈನ್‌ಗಳಿಗೆ ಕಳುಹಿಸಲಾಗುತ್ತಿದೆ. ಇದರಿಂದಾಗಿ ಕುಟುಂಬಸ್ಥರು ಹಾಗು ಬಂಧು ಮಿತ್ರರು ಆತಂಕಕ್ಕೆ ಒಳಗಾಗುವಂತಾಗಿದೆ ಎಂದು ಆರೋಪಿಸಿದರು.
       ಬಹುತೇಕ ಮಂದಿಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲದಿದ್ದರೂ ತಪಾಸಣೆ ನಡೆಸಿ ಶಿವಮೊಗ್ಗದಲ್ಲಿ ಕ್ವಾರಂಟೈನ್ ಮಾಡಿ ನಂತರ ಮನೆಗೆ ಕಳುಹಿಸಲಾಗುತ್ತಿದೆ. ಕ್ವಾರಂಟೈನ್‌ಗಳಲ್ಲಿ ಊಟೋಪಚಾರವಾಗಲಿ, ಆರೋಗ್ಯದ ಬಗ್ಗೆ ವಿಚಾರಿಸುವವರು ಸಹ ಯಾರು ಇರುವುದಿಲ್ಲ. ಕ್ವಾರಂಟೈನ್ ಸಮಸ್ಯೆಗಳನ್ನು ಅಲ್ಲಿಂದ ಬಂದಿರುವವರು ನಮ್ಮ ಬಳಿ  ಹೇಳಿಕೊಳ್ಳುತ್ತಿದ್ದಾರೆ. ಪಾಸಿಟೀವ್ ಪ್ರಕರಣಗಳನ್ನು ಹೆಚ್ಚಾಗಿ ತೋರಿಸಬೇಕೆಂಬ ಉದ್ದೇಶದಿಂದ ಈ ರೀತಿ ವೈದ್ಯರು, ಸಿಬ್ಬಂದಿಗಳು ನಡೆದುಕೊಳ್ಳುತ್ತಿದ್ದಾರೆಂದು ದೂರಿದರು.
         ಈ ಹಿಂದೆ ಜನರು ವೈದ್ಯರನ್ನು ದೇವರು ಎಂಬ ಭಾವನೆ ಹೊಂದಿದ್ದರು. ಆದರೆ ಇಂದಿನ ವೈದ್ಯರು, ಸಿಬ್ಬಂದಿಗಳನ್ನು ಕಂಡರೆ ಭಯಪಡುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
     ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ ಉತ್ತರಿಸಿ, ಸರ್ಕಾರದ ಬದಲಾದ ನಿಯಮಗಳಿಗೆ ತಕ್ಕಂತೆನಡೆದುಕೊಳ್ಳಲಾಗುತ್ತಿದೆ. ಯಾವುದೇ ರೀತಿ ಭಯ ಹುಟ್ಟಿಸುತ್ತಿಲ್ಲ. ಯಾವುದೇ ಭಯವಿಲ್ಲದೆ ಎಲ್ಲರೂ ಸಹ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ. ಈ ಬಗ್ಗೆ  ಆತಂಕಪಡುವ ಅಗತ್ಯವಿಲ್ಲ. ಕೆಲವು ಬಾರಿ ವ್ಯತ್ಯಾಸಗಳು ಕಂಡು ಬಂದಿರಬಹುದು. ಆದರೆ ನಿಖರವಾದ ಫಲಿತಾಂಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ದೇವರನರಸೀಪುರ ಹಾಗು ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ಗಳನ್ನು ತೆರೆಯಲಾಗಿದೆ. ಯಾವುದೇ ರೋಗ ಲಕ್ಷಣಗಳು ಕಂಡು ಬರದವರನ್ನು ಇಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಹೆಚ್ಚಿನ ರೋಗ ಲಕ್ಷಣಗಳನ್ನು ಹೊಂದಿರುವವರನ್ನು ಮಾತ್ರ ಶಿವಮೊಗ್ಗಕ್ಕೆ ಕಳುಹಿಸಲಾಗುತ್ತಿದೆ. ಹೆಚ್ಚಿನ ಪಾಸಿಟೀವ್ ಪ್ರಕರಣಗಳನ್ನು ತೋರಿಸುವ ಉದ್ದೇಶದಿಂದ ಯಾರನ್ನು ಸಹ ಕ್ವಾರಂಟೈನ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
      ಉಳಿದಂತೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ತಹಸೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳುತ್ತಿಲ್ಲ. ಜನರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯತನದಿಂದ ವರ್ತಿಸುತ್ತಿದ್ದಾರೆಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
   ಸಭೆಯಲ್ಲಿ ಉಪಾಧ್ಯಕ್ಷೆ ನೇತ್ರಾಬಾಯಿ, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಕಾರ್ಯನಿರ್ವಾಹಣಾಧಿಕಾರಿ ಡಾ. ಜಿ. ಮಂಜುನಾಥ್,  ಸದಸ್ಯರಾದ ಧರ್ಮೇಗೌಡ, ಆರ್. ತಿಪ್ಪೇಶ್‌ರಾವ್, ಅಣ್ಣಾಮಲೈ, ಗೀತಾ ಜಗದೀಶ್, ಎಚ್.ಎಂ. ಪ್ರೇಮ್‌ಕುಮಾರ್, ಯಶೋದಮ್ಮ, ಎಂ.ಜಿ ದಿನೇಶ್, ಕೆ.ವಿ ರುದ್ರಪ್ಪ, ಶಮಾಬಾನು, ಸರೋಜಮ್ಮ ಹಾಜ್ಯನಾಯ್ಕ ಮತ್ತು ಆಶಾ ಶ್ರೀಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿವಿಧ ಇಲಾಖೆಗಳ ಅಧಿಕಾರಿಗಳಾದ ಕೃಷಿ ಸಹಾಯಕ ನಿರ್ದೇಶಕ ಶಶಿಧರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್, ತೋಟಗಾರಿಕೆ ಇಲಾಖೆ ಇಲಾಖೆ ಸಹಾಯಕ ನಿರ್ದೇಶಕ ಕಾಂತರಾಜ್, ಅರಣ್ಯ ಇಲಾಖೆಯ ಸಹಾಯಕ ವಲಯ ಅರಣ್ಯಾಧಿಕಾರಿ ದಿನೇಶ್‌ಕುಮಾರ್, ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.