ಭದ್ರಾವತಿಯಲ್ಲಿ ಭದ್ರಾ ಕಾಲೋನಿ ಮತ್ತು ಬೊಮ್ಮನಕಟ್ಟೆ ವ್ಯಾಪ್ತಿಯ ಅಂಗನವಾಡಿ ಸಹಾಯಕಿಯರಿಗಾಗಿ ಬೊಮ್ಮನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 'ಪೋಷಣ್ ಮಾಸಾಚರಣೆ' ಕಾರ್ಯಕ್ರಮಕ್ಕೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಾವಿತ್ರಿ ಚಾಲನೆ ನೀಡಿದು.
ಭದ್ರಾವತಿ, ಸೆ. ೧೯: ಆರೋಗ್ಯವಂತ ಮಗು ದೇಶದ ಆಸ್ತಿಯಾಗಿದ್ದು, ಈ ಹಿನ್ನಲೆಯಲ್ಲಿ ಮಗುವಿಗೆ ಪೌಷ್ಠಿಕ ಆಹಾರದ ಅಗತ್ಯವಿದೆ ಎಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಾವಿತ್ರಿ ಹೇಳಿದರು.
ಭದ್ರಾ ಕಾಲೋನಿ ಮತ್ತು ಬೊಮ್ಮನಕಟ್ಟೆ ವ್ಯಾಪ್ತಿಯ ಅಂಗನವಾಡಿ ಸಹಾಯಕಿಯರಿಗಾಗಿ ಬೊಮ್ಮನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 'ಪೋಷಣ್ ಮಾಸಾಚರಣೆ' ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ತಾಯಂದಿರು ಗರ್ಭಾವಸ್ಥೆಯಲ್ಲಿ ಇರುವಾಗಲೇ ಪೌಷ್ಟಿಕ ಆಹಾರ ಸೇವಿಸಬೇಕು. ಇದು ಮಗುವಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಶಾಲೆಯ ಶಿಕ್ಷಕ ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಹಣ ವ್ಯಯ ಮಾಡುತ್ತಿದ್ದು, ಸಾರ್ವಜನಿಕರು ಇಂತಹ ಯೋಜನೆಗಳ ಸದುಪಯೋಗಪಡೆದುಕೊಳ್ಳಲು ಸಹಕಾರಿಯಾಗುವ ನಿಟ್ಟಿನಲ್ಲಿ ಅಂಗನವಾಡಿ ಸಹಾಯಕಿಯರು ಕಾರ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್, ಮಧ್ಯಾಹ್ನದ ಊಟ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರತಿಭಾವಂತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಶಾಲೆಯ ಶಿಕ್ಷಕರಾದ ವಿಶ್ವನಾಥ್, ಉಷಾರಾಣಿ, ಸುಜಾತ, ಪ್ರಮೀಳಾ, ಸುಶ್ಮಿತಾ, ವಿಜಯಕುಮಾರಿ, ಶಾಬಾನ, ಭದ್ರಾ ಕಾಲೋನಿ ಮತ್ತು ಬೊಮ್ಮನಕಟ್ಟೆ ವ್ಯಾಪ್ತಿಯ ಅಂಗನವಾಡಿ ಸಹಾಯಕಿಯರು ಉಪಸ್ಥಿತರಿದ್ದರು.