Tuesday, September 22, 2020

ಕವಲಗುಂದಿ ತಗ್ಗು ಪ್ರದೇಶದ ನಿವಾಸಿಗಳಿಗೆ ಮನೆ ನಿರ್ಮಾಣ ಉನ್ನತ ಅಧಿಕಾರಿಗಳ ಗಮನಕ್ಕೆ

ಪೌರಾಯುಕ್ತ ಮನೋಹರ್ ಭರವಸೆ

ನದಿ ನೀರಿನಿಂದ ನಿರಾಶ್ರಿತಗೊಂಡಿರುವ ಭದ್ರಾವತಿ ಕವಲಗುಂದಿ ಗ್ರಾಮದ ತಗ್ಗು ಪ್ರದೇಶದ ನಿವಾಸಿಗಳು ತಕ್ಷಣ ಮನೆ ನಿರ್ಮಿಸಿ ಕೊಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಭದ್ರಾವತಿ, ಸೆ. ೨೨: ಪ್ರತಿ ಬಾರಿ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ಮನೆಗಳು ಜಲಾವೃತಗೊಂಡು ನಿರಾಶ್ರಿತರಾಗುತ್ತಿರುವ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. ೨ರ ಕವಲಗುಂದಿ ಗ್ರಾಮದ ತಗ್ಗು ಪ್ರದೇಶದ ಸುಮಾರು ೩೦ ಕುಟುಂಬಗಳಿಗೆ ಪುನರ್ ವಸತಿ ನಿರ್ಮಿಸಿಕೊಡುವ ಸಂಬಂಧ ನೆನೆಗುದಿಗೆ ಬಿದ್ದಿರುವ ವಿಚಾರವನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರುವುದಾಗಿ ನಗರಸಭೆ ಪೌರಾಯುಕ್ತ ಮನೋಹರ್ ನಿವಾಸಿಗಳಿಗೆ ಭರವಸೆ ನೀಡಿದರು.
      ಕೆಲವು ತಿಂಗಳುಗಳ ಹಿಂದೆ ಆಶ್ರಯ ಸಮಿತಿ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕವಲಗುಂದಿ ಗ್ರಾಮದ ತಗ್ಗು ಪ್ರದೇಶದ ಸುಮಾರು ೩೦ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ನಿವೇಶನಗಳನ್ನು ನೀಡಲು ತೀರ್ಮಾನಿಸಿದ್ದು, ಜೇಡಿಕಟ್ಟೆ ಹೊಸೂರಿನಲ್ಲಿ ನಿವೇಶನಗಳನ್ನು ಗುರುತಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ವರದಿ ಸಲ್ಲಿಸಲಾಗಿದೆ. ಈ ವರದಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನಲೆಯಲ್ಲಿ ಅಪ್ಪರ್ ಹುತ್ತಾ ತಾತ್ಕಾಲಿಕ ಗಂಜಿ ಕೇಂದ್ರದಲ್ಲಿರುವ ಅಲ್ಲಿನ ನಿವಾಸಿಗಳು ಪುನಃ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
      ನಿರಾಶ್ರಿತರ ಪರವಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ನಿರಾಶ್ರಿತರಿಗೆ ಬೆಂಬಲ ಸೂಚಿಸಿ ಚಹಾಕೂಟ ನಡೆಸಲಾಯಿತು. ತಕ್ಷಣ ಮನೆಗಳನ್ನು ನಿರ್ಮಿಸಿಕೊಡುವಂತೆ ಪೌರಾಯುಕ್ತರಿಗೆ ಒತ್ತಾಯಿಸಲಾಯಿತು.
    ನಿರಾಶ್ರಿತರಾದ ಮಾದೇಶ್ವರ, ರವಿಕುಮಾರ್, ಮಂಜಮ್ಮ, ಜಯಣ್ಣ, ಮಂಜುಳಾ, ನಾಗರತ್ನ, ರಘು, ಶೀಲಾ, ಕಸ್ತೂರಿ, ಆಲಮೇಲಮ್ಮ, ಕಾವ್ಯ, ಪೂಜಾಶ್ರೀ ಹಾಗೂ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್, ಪ್ರಮುಖರಾದ ರಮಾ ವೆಂಕಟೇಶ್, ಗೀತಾ ತಿರುಮಲೇಗೌಡ, ಆರ್. ತಮ್ಮಯ್ಯ ಮತ್ತು ಗ್ರಾಮ ಲೆಕ್ಕಾಧಿಕಾರಿ ಪ್ರೇಮ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನದಿ ನೀರಿನಿಂದ ನಿರಾಶ್ರಿತಗೊಂಡಿರುವ ಭದ್ರಾವತಿ ಕವಲಗುಂದಿ ಗ್ರಾಮದ ತಗ್ಗು ಪ್ರದೇಶದ ನಿವಾಸಿಗಳನ್ನು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ನೇತೃತ್ವದಲ್ಲಿ ನ್ಯೂ ಕಾಲೋನಿ ಬಿ.ಕೆ ಸಂಗಮೇಶ್ವರ್ ಅಭಿಮಾನಿಗಳು ಭೇಟಿ ಮಾಡಿ ದಿನ ಬಳಕೆ ವಸ್ತುಗಳನ್ನು ವಿತರಿಸಿದರು.
       ಬಿ.ಕೆ ಮೋಹನ್ ನಿರಾಶ್ರಿತರ ಭೇಟಿ:
   ಕೊರೋನಾ ಸೋಂಕಿಗೆ ಒಳಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಪರವಾಗಿ ಸಹೋದರ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.  ತಕ್ಷಣ ನಿವೇಶನಗಳನ್ನು ಹಂಚಿಕೆ ಮಾಡಿ ಮನೆ ನಿರ್ಮಾಣಕ್ಕೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿ ಆತಂಕಕ್ಕೆ ಒಳಗಾಗದಂತೆ ಮನವಿ ಮಾಡಿದರು.
         ಶಾಸಕ ಬಿ.ಕೆ ಸಂಗಮೇಶ್ವರ್ ನ್ಯೂಕಾಲೋನಿ ಅಭಿಮಾನಿಗಳು ನಿರಾಶ್ರಿತರಿಗೆ ಟಬಲ್, ಮಾಸ್ಕ್, ಸ್ಯಾನಿಟೈಜರ್, ಬ್ರೆಡ್, ಬಿಸ್ಕೇಟ್, ಜ್ಯೂಸ್ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ವಿತರಿಸಿದರು. ನಗರಸಭೆ ಮಾಜಿ ಸದಸ್ಯ ಮುಕುಂದಪ್ಪ, ಪೌರಾಯುಕ್ತ ಮನೋಹರ್ ಹಿರಿಯ ಮುಖಂಡ ಎಸ್.ಎಸ್ ಬೈರಪ್ಪ, ಪ್ರಾನ್ಸಿಸ್, ಸೆಲ್ವರಾಜ್, ಪ್ರಸನ್ನ, ಸುಬ್ಬು, ಸಂಪತ್, ರವಿ, ವಿಜಯ್ ಗಾಂಧಿ, ಮ್ಯಾಥ್ವ್ ರಾಖಿ, ಹನುಮಂತ, ಐಸಾಕ್, ಪಾಂಡು, ಪುಟ್ಟ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಪ್ರಧಾನ ಮಂತ್ರಿಗೆ ಮನವಿ

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಶಾಖೆ ವತಿಯಿಂದ ಅಧ್ಯಕ್ಷೆ ಸುಶೀಲಬಾಯಿ ನೇತೃತ್ವದಲ್ಲಿ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ತಹಸೀಲ್ದಾರ್ ರಂಗಮ್ಮ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಶಾಖೆ ವತಿಯಿಂದ ಅಧ್ಯಕ್ಷೆ ಸುಶೀಲಬಾಯಿ ನೇತೃತ್ವದಲ್ಲಿ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ತಹಸೀಲ್ದಾರ್ ರಂಗಮ್ಮ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
       ಸರ್ಕಾರ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ/ಯುಕೆಜಿ ತರಗತಿಗಳನ್ನು ಪ್ರಾರಂಭಿಸಬೇಕು ಮತ್ತು ಐಸಿಡಿಎಸ್ ಯೋಜನೆಯನ್ನು ಉಳಿಸಿಕೊಳ್ಳಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪೂರೈಸಿದ ಮಕ್ಕಳಿಗೆ ಪ್ರಾಥಮಿಕ ಶಾಲೆಗೆ ದಾಖಲಿಸಲು ಅಂಗನವಾಡಿ ಕೇಂದ್ರಗಳಿಂದಲೇ ವರ್ಗಾವಣೆ ಪ್ರಮಾಣ ಪತ್ರ ನೀಡುವಂತೆ ಕ್ರಮ ಕೈಗೊಳ್ಳಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾಗಿ ಒಂದು ವರ್ಷ ಕಳೆದರೂ ಸಹ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಮಸ್ಯೆಗಳಿಗೆ ಸ್ಪಂದಿಸದ ಹಿನ್ನಲೆಯಲ್ಲಿ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕೆಂದು ಒತ್ತಾಯಿಸಲಾಯಿತು.
      ರಾಜ್ಯದಲ್ಲಿ ಸುಮಾರು ೪೫ ವರ್ಷಗಳಿಂದ ಕಾರ್ಯಕರ್ತೆ ಮತ್ತು ಸಹಾಯಕಿಯರಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ತಕ್ಷಣ ಕಾಯಂಗೊಳಿಸಬೇಕು. ನಿವೃತ್ತಿ ಹೊಂದಿರುವವರಿಗೆ ನಿವೃತ್ತಿ ವೇತನ ಜಾರಿಗೊಳಿಸಬೇಕು. ಎನ್‌ಪಿಎಸ್ ಯೋಜನೆಯ ಹಣ ತಕ್ಷಣ ನೀಡಬೇಕು. ಕೊರೋನಾ ವಾರಿಯರ್‍ಸ್‌ಗಳಾಗಿ ಸೇವೆ ಸಲ್ಲಿಸಿ ಮೃತಪಟ್ಟಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕುಟುಂಬಗಳಿಗೆ ತಕ್ಷಣ ಸರ್ಕಾರ ನಿಗದಿ ಪಡಿಸಿರುವಂತೆ ೩೦ ಲಕ್ಷ ರು. ಪರಿಹಾರ ನೀಡಬೇಕೆಂದು ಆಗ್ರಹಿಸಲಾಯಿತು.
      ಫೆಡರೇಷನ್ ಪ್ರಮುಖರಾದ ಸುಶೀಲಾ ಬದನೆಹಾಳ್, ಆರ್. ಭಾಗ್ಯಮಣಿ, ಕೆ.ಸಿ ವಿಶಾಲಾ, ಜಿ.ಕೆ ಸುಲೋಚನಾ ಮತ್ತು ಆರ್. ವೇದಾವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮಕೇಳಿ ತಹಸೀಲ್ದಾರ್ ತಕ್ಷಣ ಸೇವೆಯಿಂದ ಅಮಾನತುಗೊಳಿಸಿ

ತಾಲೂಕು ಕಛೇರಿ ಮುಂಭಾಗ ಪ್ರತಿಭಟನಾ ಧರಣಿ : ಆಗ್ರಹ


ಪರಿಶಿಷ್ಟ ಜಾತಿ ಮಹಿಳೆಯನ್ನು ಲೌಂಗಿಕವಾಗಿ ಶೋಷಣೆ ಮಾಡಿರುವ ತಹಸೀಲ್ದಾರ್ ಎಚ್.ಸಿ ಶಿವಕುಮಾರ್‌ರವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಲಾಯಿತು.
ಭದ್ರಾವತಿ: ಪರಿಶಿಷ್ಟ ಜಾತಿ ಮಹಿಳೆಯನ್ನು ಲೌಂಗಿಕವಾಗಿ ಶೋಷಣೆ ಮಾಡಿರುವ ತಹಸೀಲ್ದಾರ್ ಎಚ್.ಸಿ ಶಿವಕುಮಾರ್‌ರವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಲಾಯಿತು.
      ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ), ಎಂ.ಜೆ ಅಪ್ಪಾಜಿ ಅಭಿಮಾನಿಗಳ ಬಳಗ, ಪ್ರಗತಿಪರ ಸಂಘಟನೆಗಳು, ವಿವಿಧ ಸಮಾಜಗಳು, ಮಹಿಳಾ ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಧರಣಿಯಲ್ಲಿ ತಹಸೀಲ್ದಾರ್ ಶಿವಕುಮಾರ್‌ರವರು ಮಾಡಿರುವ ತಪ್ಪಿಗೆ ಶಿಕ್ಷೆಯಾಗಲೇ ಬೇಕು. ಕೇವಲ ಕರ್ತವ್ಯದಿಂದ ಬಿಡುಗಡೆಗೊಳಿಸಿದರೆ ಸಾಲದು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸೇವೆಯಿಂದ ಅಮಾನತುಗೊಳಿಸಬೇಕು. ತಕ್ಷಣ ಅವರನ್ನು ಬಂಧಿಸಬೇಕೆಂದು ಆಗ್ರಹಿಸಲಾಯಿತು.
     ಟಿ.ಎಚ್ ಹಾಲೇಶಪ್ಪ, ಆರ್ ಕರುಣಾಮೂರ್ತಿ, ಎಚ್. ರವಿಕುಮಾರ್, ಬದರಿನಾರಾಯಣ್, ಎಸ್. ಮಂಜುನಾಥ್, ಕೆ. ಮಂಜುನಾಥ್, ಇಬ್ರಾಹಿಂ ಖಾನ್, ಬಸವರಾಜ ಆನೇಕೊಪ್ಪ, ಎಂ. ಕುಬೇಂದ್ರಪ್ಪ, ಉಮೇಶ್, ಎಂ. ಪಳನಿರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Monday, September 21, 2020

ಶಾಸಕ ಬಿ.ಕೆ ಸಂಗಮೇಶ್ವರ್ ಶೀಘ್ರ ಗುಣಮುಖರಾಗಲು ವಿಶೇಷ ಪೂಜೆ, ಪ್ರಾರ್ಥನೆ

ಶಾಸಕ ಬಿ.ಕೆ ಸಂಗಮೇಶ್ವರ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಭದ್ರಾವತಿ ಹಳೇನಗರದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
     ಭದ್ರಾವತಿ, ಸೆ. ೨೧: ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಕೊರೋನಾ ಸೋಂಕಿನ ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ದೇವಸ್ಥಾನ, ದರ್ಗಾದಲ್ಲಿ ವಿಶೇಷ ಪೂಜೆ ಸೋಮವಾರ ಸಂಜೆ ನೆರವೇರಿಸಲಾಯಿತು.
      ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ಸಹ ಭಾನುವಾರ ಸಂಜೆ ಶಾಸಕ ಬಿ.ಕೆ ಸಂಗಮೇಶ್ವರ್ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಾಗಿ ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರವರ ಸಲಹೆ ಮೇರೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ನಗರದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ದೇವರ ಪ್ರಾರ್ಥನೆಗೆ ಮೊರೆ ಹೋಗಿದ್ದಾರೆ.
     ಪಕ್ಷದ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ ನೇತೃತ್ವದಲ್ಲಿ ಹಳೇನಗರದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
    ಕೆಪಿಸಿಸಿ ಎಸ್.ಸಿ ಘಟಕದ ಸಂಚಾಲಕ ರಾಘವೇಂದ್ರ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ರಾಮಚಂದ್ರ, ರೇಣುಕಮ್ಮ, ಲೋಕೇಶ್, ಎಂ. ಶಿವಕುಮಾರ್, ಶೇಷಗಿರಿ, ರೂಪಾ ನಾರಾಯಣ, ಅಣ್ಣೋಜಿರಾವ್, ಶ್ರೀಧರ್, ಗೋಪಿ, ರಾಮಕೃಷ್ಣೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಶಾಸಕ ಬಿ.ಕೆ ಸಂಗಮೇಶ್ವರ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ಸೈಯದ್ ಸಾದತ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
     ಸೈಯದ್ ಸಾದತ್ ದರ್ಗಾದಲ್ಲಿ ಪ್ರಾರ್ಥನೆ:
    ನಗರದ ತರೀಕೆರೆ ರಸ್ತೆಯಲ್ಲಿರುವ ಸೈಯದ್ ಸಾದತ್ ದರ್ಗಾದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಶೀಘ್ರ ಗುಣಮುಖರಾಗಲಿ ಎಂದು ಮೌಲ್ವಿ ಆಸೀಪುಲ್ಲ ನೇತೃತ್ವದಲ್ಲಿ ಪ್ರಾರ್ಥಿಸಲಾಯಿತು.
      ಮುಖಂಡರಾದ ಜೆಬಿಟಿ ಬಾಬು, ಟಿಪ್ಪು ಸುಲ್ತಾನ್, ಸಮೀವುಲ್ಲಾ, ಅಬ್ದುಲ್ ಖಾದರ್, ಜಾವಿದ್, ಮುಸ್ವೀರ್ ಬಾಷಾ, ಎನ್‌ಎಕೆ ಇಮ್ರಾನ್ ಖಾನ್, ಬಷೀರ್ ಅಹಮದ್, ಇಮ್ರಾನ್ ಜುಲೆಬಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





Sunday, September 20, 2020

ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಕೊರೋನಾ ಸೋಂಕು : ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು

ಬಿ.ಕೆ ಸಂಗಮೇಶ್ವರ್
ಭದ್ರಾವತಿ, ಸೆ. ೨೦: ಶಾಸಕ ಬಿ.ಕೆ ಸಂಗಮೇಶ್ವರ್‌ಗೂ ಕೊರೋನಾ ಸೋಂಕು ತಗುಲಿದ್ದು, ಭಾನುವಾರ ಸಂಜೆ ದಿಢೀರನೆ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
     ಕಳೆದ ೨ ದಿನಗಳ ಹಿಂದೆ ಮನೆಯಲ್ಲಿ ಕೆಲಸ ಮಾಡುವ ೪ ಮಂದಿ ಕೆಲಸಗಾರರಲ್ಲಿ ಕೊರೋನಾ ಇರುವುದು ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಸಂಗಮೇಶ್ವರ್ ಮತ್ತು ಸಹೋದರ್ ಬಿ.ಕೆ ಮೋಹನ್ ನಿವಾಸಗಳನ್ನು ಸೀಲ್‌ಡೌನ್ ಮಾಡಲಾಗಿತ್ತು.
     ಈ ನಡುವೆ ಕೊರೋನಾ ತಪಾಸಣೆ ವರದಿಯಲ್ಲಿ ಸಂಗಮೇಶ್ವರ್‌ಗೆ ಸೋಂಕು ಇರುವುದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ನಾರಾಯಣ ಹೃದಯಾಲಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

ಕಾಮಕೇಳಿ ತಹಸೀಲ್ದಾರ್ ಅಮಾನತ್ತಿಗೆ ಆಗ್ರಹಿಸಿ ಸೆ.೨೧ರಂದು ಪ್ರತಿಭಟನಾ ಧರಣಿ

ಭದ್ರಾವತಿ ನ್ಯೂಟೌನ್ ಗಾಂಧಿ ಉದ್ಯಾನವನದಲ್ಲಿ ಭಾನುವಾರ  ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ), ಎಂ.ಜೆ ಅಪ್ಪಾಜಿ ಅಭಿಮಾನಿಗಳ ಬಳಗ, ಪ್ರಗತಿಪರ ಸಂಘಟನೆಗಳು, ವಿವಿಧ ಸಮಾಜಗಳು, ಮಹಿಳಾ ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರು ಪೂರ್ವಭಾವಿ ಸಭೆ ನಡೆಸಿದರು.
ಭದ್ರಾವತಿ, ಸೆ. ೨೦: ಪರಿಶಿಷ್ಟ ಜಾತಿ ಮಹಿಳೆಯನ್ನು ಲೌಂಗಿಕವಾಗಿ ಶೋಷಣೆ ಮಾಡಿರುವ ತಹಸೀಲ್ದಾರ್ ಎಚ್.ಸಿ ಶಿವಕುಮಾರ್‌ರವರನ್ನು ತಕ್ಷಣ ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಬೆಳಿಗ್ಗೆ ತಾಲೂಕು ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ.
     ಈ ಸಂಬಂಧ ನ್ಯೂಟೌನ್ ಗಾಂಧಿ ಉದ್ಯಾನವನದಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಸಿದ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ), ಎಂ.ಜೆ ಅಪ್ಪಾಜಿ ಅಭಿಮಾನಿಗಳ ಬಳಗ, ಪ್ರಗತಿಪರ ಸಂಘಟನೆಗಳು, ವಿವಿಧ ಸಮಾಜಗಳು, ಮಹಿಳಾ ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರು ಬೆಳಿಗ್ಗೆ ೧೧ ಗಂಟೆಗೆ ಪ್ರತಿಭಟನಾ ಧರಣಿ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ. ಸಾರ್ವಜನಿಕರು ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.
      ಸಭೆಯಲ್ಲಿ ಪ್ರಮುಖರಾದ ಟಿ.ಎಚ್ ಹಾಲೇಶಪ್ಪ, ಎಸ್. ಮಣಿಶೇಖರ್, ಎಚ್. ರವಿಕುಮಾರ್, ಬದರಿನಾರಾಯಣ್, ಎಸ್. ಮಂಜುನಾಥ್, ಕೆ. ಮಂಜುನಾಥ್, ಇಬ್ರಾಹಿಂ ಖಾನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಹೋರಾಟದ ಮೂಲಕ ಕೈಗಾರಿಕಾ ನಗರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ : ಎಚ್.ಸಿ ರಮೇಶ್

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಮೋ ಗ್ರೂಪ್ ಮತ್ತು ಬಿಜೆಪಿ ಕಾರ್ಯಕರ್ತರಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನ ಸಮಾರಂಭವನ್ನು ಕೇಂದ್ರ ಸರ್ಕಾರದ ಮೈಕ್ರೋ ಸ್ಮಾಲ್ ಮೀಡಿಯಂ ಎಂಟರ್ ಪ್ರೈಸಸ್(ಎಂ.ಎಸ್.ಎಂ.ಇ) ಸಂಸ್ಥೆಯ ನೂತನ ನಿರ್ದೇಶಕ,  ಉದ್ಯಮಿ ಎಚ್.ಸಿ ರಮೇಶ್ ಉದ್ಘಾಟಿಸಿದರು.
ಭದ್ರಾವತಿ, ಸೆ.೨೦ :  ಕೈಗಾರಿಕಾ ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಹೋರಾಟ ನಡೆಸುವುದಾಗಿ ಕೇಂದ್ರ ಸರ್ಕಾರದ ಮೈಕ್ರೋ ಸ್ಮಾಲ್ ಮೀಡಿಯಂ ಎಂಟರ್ ಪ್ರೈಸಸ್(ಎಂ.ಎಸ್.ಎಂ.ಇ) ಸಂಸ್ಥೆಯ ನೂತನ ನಿರ್ದೇಶಕ,  ಉದ್ಯಮಿ ಎಚ್.ಸಿ ರಮೇಶ್ ಭರವಸೆ ವ್ಯಕ್ತಪಡಿಸಿದರು.
        ಎಂಎಸ್‌ಎಂಇ ಸಂಸ್ಥೆಗೆ ನೇಮಕಗೊಂಡ ನಂತರ ಅವರು ಮೊದಲ ಬಾರಿಗೆ  ಭಾನುವಾರ  ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಮೋ ಗ್ರೂಪ್ ಮತ್ತು ಬಿಜೆಪಿ ಕಾರ್ಯಕರ್ತರ ಅಭಿನಂದನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
       ವಿಐಎಸ್‌ಎಲ್ ಕಾರ್ಖಾನೆಯ ಕಾರ್ಮಿಕನ ಮಗನಾಗಿ ಹುಟ್ಟಿರುವ ನಾನು ಈ ನಗರದ ಋಣ ತೀರಿಸುವುದು ನನ್ನ ಜವಾಬ್ದಾರಿಯಾಗಿದೆ. ಪಕ್ಷದ ಕೇಂದ್ರ ಹಾಗೂ ರಾಜ್ಯದ ನಾಯಕರು ಬಹಳ ಪ್ರಮುಖವಾದ ಜವಬ್ದಾರಿಯನ್ನು ನೀಡಿದ್ದಾರೆ.  ನನಗೆ ವಹಿಸಿಕೊಟ್ಟಿರುವ ಜವಬ್ದಾರಿಗೆ ಸದಾ ಚಿರಋಣಿಯಾಗಿದ್ದು, ಕ್ಷೇತ್ರದಲ್ಲಿ ಸಾಮಾನ್ಯ ಜನರ ಸಂಕಷ್ಟಗಳನ್ನು ಅರಿತು ಅವರ ಪರವಾಗಿ ಹೋರಾಟ ನಡೆಸಲು ಸಿದ್ದವಾಗಿದ್ದೇನೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಸಹ ಸ್ಪಂದಿಸುವುದಾಗಿ ಭರವಸೆ ನೀಡಿದರು.
       ಎಂಪಿಎಂ ಮತ್ತು ವಿಐಎಸ್‌ಎಲ್ ಎರಡು ಕಾರ್ಖಾನೆಗಳ ಸಮಸ್ಯೆಗಳನ್ನು ರಾಜ್ಯ ಮತ್ತು ಕೇಂದ್ರ ನಾಯಕರುಗಳ ಬಳಿ ಕೊಂಡೊಯ್ದು ವಾಸ್ತವ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಗಮನ ಸೆಳೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಕ್ಷೇತ್ರದ ಸಮಸ್ತ ನಾಗರೀಕರು, ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದರು.    


ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಕೇಂದ್ರ ಸರ್ಕಾರದ ಮೈಕ್ರೋ ಸ್ಮಾಲ್ ಮೀಡಿಯಂ ಎಂಟರ್ ಪ್ರೈಸಸ್(ಎಂ.ಎಸ್.ಎಂ.ಇ) ಸಂಸ್ಥೆಯ ನೂತನ ನಿರ್ದೇಶಕ,  ಉದ್ಯಮಿ ಎಚ್.ಸಿ ರಮೇಶ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

    ನಗರಸಭೆ ಹಿರಿಯ ಸದಸ್ಯ ಕೆ.ಎನ್ ಭೈರಪ್ಪಗೌಡ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಸುಂದರ್ ಬಾಬು ಮಾತನಾಡಿದರು. ಇದಕ್ಕೂ ಮೊದಲು ನಗರಕ್ಕೆ ಆಗಮಿಸಿದ ಎಚ್.ಸಿ ರಮೇಶ್‌ರವರನ್ನು ನಮೋ ಗ್ರೂಪ್ ಮತ್ತು ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
        ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ರಮೇಶ್‌ರವನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
     ಟ್ರಸ್ಟ್ ಛೇರ‍್ಮನ್ ಆರ್. ವೇಣುಗೋಪಾಲ್, ಪ್ರಮುಖರಾದ ಅಂತೋಣಿ ಗ್ಸೇವಿಯರ್, ಭವಾನಿ ಶಂಕರ್, ಆರ್. ಮುಕುಂದಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.