Tuesday, September 22, 2020

ಕವಲಗುಂದಿ ತಗ್ಗು ಪ್ರದೇಶದ ನಿವಾಸಿಗಳಿಗೆ ಮನೆ ನಿರ್ಮಾಣ ಉನ್ನತ ಅಧಿಕಾರಿಗಳ ಗಮನಕ್ಕೆ

ಪೌರಾಯುಕ್ತ ಮನೋಹರ್ ಭರವಸೆ

ನದಿ ನೀರಿನಿಂದ ನಿರಾಶ್ರಿತಗೊಂಡಿರುವ ಭದ್ರಾವತಿ ಕವಲಗುಂದಿ ಗ್ರಾಮದ ತಗ್ಗು ಪ್ರದೇಶದ ನಿವಾಸಿಗಳು ತಕ್ಷಣ ಮನೆ ನಿರ್ಮಿಸಿ ಕೊಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಭದ್ರಾವತಿ, ಸೆ. ೨೨: ಪ್ರತಿ ಬಾರಿ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ಮನೆಗಳು ಜಲಾವೃತಗೊಂಡು ನಿರಾಶ್ರಿತರಾಗುತ್ತಿರುವ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. ೨ರ ಕವಲಗುಂದಿ ಗ್ರಾಮದ ತಗ್ಗು ಪ್ರದೇಶದ ಸುಮಾರು ೩೦ ಕುಟುಂಬಗಳಿಗೆ ಪುನರ್ ವಸತಿ ನಿರ್ಮಿಸಿಕೊಡುವ ಸಂಬಂಧ ನೆನೆಗುದಿಗೆ ಬಿದ್ದಿರುವ ವಿಚಾರವನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರುವುದಾಗಿ ನಗರಸಭೆ ಪೌರಾಯುಕ್ತ ಮನೋಹರ್ ನಿವಾಸಿಗಳಿಗೆ ಭರವಸೆ ನೀಡಿದರು.
      ಕೆಲವು ತಿಂಗಳುಗಳ ಹಿಂದೆ ಆಶ್ರಯ ಸಮಿತಿ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕವಲಗುಂದಿ ಗ್ರಾಮದ ತಗ್ಗು ಪ್ರದೇಶದ ಸುಮಾರು ೩೦ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ನಿವೇಶನಗಳನ್ನು ನೀಡಲು ತೀರ್ಮಾನಿಸಿದ್ದು, ಜೇಡಿಕಟ್ಟೆ ಹೊಸೂರಿನಲ್ಲಿ ನಿವೇಶನಗಳನ್ನು ಗುರುತಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ವರದಿ ಸಲ್ಲಿಸಲಾಗಿದೆ. ಈ ವರದಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನಲೆಯಲ್ಲಿ ಅಪ್ಪರ್ ಹುತ್ತಾ ತಾತ್ಕಾಲಿಕ ಗಂಜಿ ಕೇಂದ್ರದಲ್ಲಿರುವ ಅಲ್ಲಿನ ನಿವಾಸಿಗಳು ಪುನಃ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
      ನಿರಾಶ್ರಿತರ ಪರವಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ನಿರಾಶ್ರಿತರಿಗೆ ಬೆಂಬಲ ಸೂಚಿಸಿ ಚಹಾಕೂಟ ನಡೆಸಲಾಯಿತು. ತಕ್ಷಣ ಮನೆಗಳನ್ನು ನಿರ್ಮಿಸಿಕೊಡುವಂತೆ ಪೌರಾಯುಕ್ತರಿಗೆ ಒತ್ತಾಯಿಸಲಾಯಿತು.
    ನಿರಾಶ್ರಿತರಾದ ಮಾದೇಶ್ವರ, ರವಿಕುಮಾರ್, ಮಂಜಮ್ಮ, ಜಯಣ್ಣ, ಮಂಜುಳಾ, ನಾಗರತ್ನ, ರಘು, ಶೀಲಾ, ಕಸ್ತೂರಿ, ಆಲಮೇಲಮ್ಮ, ಕಾವ್ಯ, ಪೂಜಾಶ್ರೀ ಹಾಗೂ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್, ಪ್ರಮುಖರಾದ ರಮಾ ವೆಂಕಟೇಶ್, ಗೀತಾ ತಿರುಮಲೇಗೌಡ, ಆರ್. ತಮ್ಮಯ್ಯ ಮತ್ತು ಗ್ರಾಮ ಲೆಕ್ಕಾಧಿಕಾರಿ ಪ್ರೇಮ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನದಿ ನೀರಿನಿಂದ ನಿರಾಶ್ರಿತಗೊಂಡಿರುವ ಭದ್ರಾವತಿ ಕವಲಗುಂದಿ ಗ್ರಾಮದ ತಗ್ಗು ಪ್ರದೇಶದ ನಿವಾಸಿಗಳನ್ನು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ನೇತೃತ್ವದಲ್ಲಿ ನ್ಯೂ ಕಾಲೋನಿ ಬಿ.ಕೆ ಸಂಗಮೇಶ್ವರ್ ಅಭಿಮಾನಿಗಳು ಭೇಟಿ ಮಾಡಿ ದಿನ ಬಳಕೆ ವಸ್ತುಗಳನ್ನು ವಿತರಿಸಿದರು.
       ಬಿ.ಕೆ ಮೋಹನ್ ನಿರಾಶ್ರಿತರ ಭೇಟಿ:
   ಕೊರೋನಾ ಸೋಂಕಿಗೆ ಒಳಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಪರವಾಗಿ ಸಹೋದರ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.  ತಕ್ಷಣ ನಿವೇಶನಗಳನ್ನು ಹಂಚಿಕೆ ಮಾಡಿ ಮನೆ ನಿರ್ಮಾಣಕ್ಕೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿ ಆತಂಕಕ್ಕೆ ಒಳಗಾಗದಂತೆ ಮನವಿ ಮಾಡಿದರು.
         ಶಾಸಕ ಬಿ.ಕೆ ಸಂಗಮೇಶ್ವರ್ ನ್ಯೂಕಾಲೋನಿ ಅಭಿಮಾನಿಗಳು ನಿರಾಶ್ರಿತರಿಗೆ ಟಬಲ್, ಮಾಸ್ಕ್, ಸ್ಯಾನಿಟೈಜರ್, ಬ್ರೆಡ್, ಬಿಸ್ಕೇಟ್, ಜ್ಯೂಸ್ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ವಿತರಿಸಿದರು. ನಗರಸಭೆ ಮಾಜಿ ಸದಸ್ಯ ಮುಕುಂದಪ್ಪ, ಪೌರಾಯುಕ್ತ ಮನೋಹರ್ ಹಿರಿಯ ಮುಖಂಡ ಎಸ್.ಎಸ್ ಬೈರಪ್ಪ, ಪ್ರಾನ್ಸಿಸ್, ಸೆಲ್ವರಾಜ್, ಪ್ರಸನ್ನ, ಸುಬ್ಬು, ಸಂಪತ್, ರವಿ, ವಿಜಯ್ ಗಾಂಧಿ, ಮ್ಯಾಥ್ವ್ ರಾಖಿ, ಹನುಮಂತ, ಐಸಾಕ್, ಪಾಂಡು, ಪುಟ್ಟ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment