Tuesday, September 22, 2020

ಕೊರೋನಾ ವಾರಿಯರ್ಸ್‌ಗಳಾದ ಪೌರಕಾರ್ಮಿಕರ ಬದುಕು ಹಸನಾಗಲಿ

೧೫೦ಕ್ಕೂ ಹೆಚ್ಚು ಪೌರಕಾರ್ಮಿಕರ ಪೈಕಿ ಬಹುತೇಕರ ಬದುಕು ಹೇಳಿಕೊಳ್ಳುವಂತಿಲ್ಲ

ಕೊರೋನಾ ಸಂಕಷ್ಟಕ್ಕೆ ಒಳಗಾಗಿರುವ ಪೌರಕಾರ್ಮಿಕರನ್ನು ಗುರುತಿಸಿ ಮಹಿಳಾ ಸಂಘಟನೆಯೊಂದಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿ ಅವರ ನೆರವಿಗೆ ಮುಂದಾಗಿರುವುದು.
* ಅನಂತಕುಮಾರ್
ಭದ್ರಾವತಿ, ಸೆ. ೨೨: ಕಳೆದ ಸುಮಾರು ೬ ತಿಂಗಳುಗಳಿಂದ ಕೊರೋನಾ ಸಂಕಷ್ಟದ ನಡುವೆಯೂ ನಗರದ ಸ್ವಚ್ಛತೆಯೊಂದಿಗೆ ಸುಂದರ ಪರಿಸರಕ್ಕೆ ಕಾರಣಕರ್ತರಾಗಿರುವ ಪೌರಕಾರ್ಮಿಕರನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ದೇಶದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ನಡೆದಿರುವ ಬೆಳವಣಿಗೆಗಳು ಪ್ರತಿಯೊಬ್ಬರು ತಮ್ಮ ಬದುಕಿನ ಕೊನೆಯವರೆಗೂ ಮರೆಯಲು ಸಾಧ್ಯವಿಲ್ಲ. ಸೋಂಕು ಇಂದಿಗೂ ಕಡಿಮೆಯಾಗಿಲ್ಲ. ಪ್ರತಿದಿನ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಪ್ರತಿಷ್ಠಿತ ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು, ವೈದ್ಯರು, ಪೊಲೀಸರು, ಶ್ರೀಸಾಮಾನ್ಯರು ಸೇರಿದಂತೆ ಎಲ್ಲರ ಸಾವು ನಮ್ಮೆದುರು ಕಂಡು ಬರುತ್ತಿದೆ.  ಮನೆಯಿಂದ ಹೊರಬರಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಗಲಿರುಳು ಸ್ವಚ್ಛತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸುಂದರ ಪರಿಸರಕ್ಕೆ ಕಾರಣಕರ್ತರಾಗಿರುವವರು ಪೌರ ಕಾರ್ಮಿಕರು.  ಸರ್ಕಾರ ಇವರನ್ನು ನೆಪಮಾತ್ರಕ್ಕೆ ಕೊರೋನಾ ವಾರಿಯರ್ಸ್ ಎಂದು ಘೋಷಿಸಿ ಬಿಟ್ಟಿದೆ. ಆದರೆ ವಾಸ್ತವವಾಗಿ ಇವರ ಬದುಕು ಕೇಳಿವವರು ಯಾರು ಇಲ್ಲ.
         ಇಲ್ಲಿನ ನಗರಸಭೆಯಲ್ಲಿ ಸುಮಾರು ೨೫೦ಕ್ಕೂ ಹೆಚ್ಚು ಮಂದಿ ಪೌರಕಾರ್ಮಿಕರಿದ್ದು, ಈ ಪೈಕಿ ೯೫ ಕಾಯಂ, ೭೧ ಗುತ್ತಿಗೆ, ೨೮ ಶೌಚಾಲಯ ಕೆಲಸಗಾರರು, ೨೧ ಲೋಡರ್‍ಸ್, ೨೧ ಡ್ರೈವರ್ ಮತ್ತು ಕ್ಲೀನರ್ ಹಾಗು ೫೦ ಮನೆ ಮನೆ ಕಸ ಸಂಗ್ರಹಿಸುವವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಹುತೇಕ ಪೌರಕಾರ್ಮಿಕರ  ಬದುಕು ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿಲ್ಲ. ಈ ನಡುವೆ ನಗರಸಭೆಗೆ ಮನೋಹರ್ ಪೌರಾಯುಕ್ತರಾಗಿ ಬಂದ ನಂತರ ಕಳೆದ ೩-೪ ವರ್ಷಗಳಿಂದ ಪೌರಕಾರ್ಮಿಕರ ಸಮಸ್ಯೆಗಳು ಕಡಿಮೆಯಾಗಿವೆ ಎಂದರೆ ತಪ್ಪಾಗಲಾರದು. ಆದರೂ ಸಹ ಬಹುತೇಕ ಬೇಡಿಕೆಗಳು ಬಾಕಿ ಉಳಿದಿವೆ.
    ಪೌರಾಯುಕ್ತ ಮನೋಹರ್‌ರವರ ಪ್ರಯತ್ನದ ಫಲವಾಗಿ ನಗರದಲ್ಲಿ ಸೂರಿಲ್ಲದ ಪೌರಕಾರ್ಮಿಕರಿಗೆ ಸೂರು ಲಭಿಸುತ್ತಿದೆ. ಪೌರಕಾರ್ಮಿಕರ ವಸತಿ ಸಂಕೀರ್ಣ ರಂಗಪ್ಪ ವೃತ್ತ ಸಮೀಪದ ಜೈಭೀಮ ನಗರದಲ್ಲಿ ಇದೀಗ ಪ್ರಗತಿಯಲ್ಲಿದೆ. ನಿರಂತರ ಹೋರಾಟದ ಫಲವಾಗಿ ಪೌರಕಾರ್ಮಿಕರ ಕೆಲವೊಂದು ಬೇಡಿಕೆಗಳು ಈಡೇರಿವೆ. ವಾಸ್ತವ್ಯವಾಗಿ ಅವರ ಎಲ್ಲಾ ಬೇಡಿಕೆಗಳು ಈಡೇರಬೇಕಾಗಿದೆ.
       ಸಮಾಜದಲ್ಲಿ ಪೌರಕಾರ್ಮಿಕರ ಸೇವೆ ಅಮೂಲ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಪೌರಕಾರ್ಮಿಕರಿಲ್ಲದ ಸಮಾಜ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಪೌರಕಾರ್ಮಿಕರು ಎಂದಿಗೂ ಇತರೆ ಸರ್ಕಾರಿ ನೌಕರರಂತೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರಿಗೆ ಬರುವ ವೇತನ ತೀರ ಕಡಿಮೆ. ಈ ಹಿನ್ನಲೆಯಲ್ಲಿ ಅವರ ಎಲ್ಲಾ ಬೇಡಿಕೆಗಳು ಈಡೇರಬೇಕು.  ಪ್ರತಿಯೊಬ್ಬರು ಅವರ ಪರವಾಗಿ ನಿಲ್ಲಬೇಕಾಗಿದೆ. ಅದರಲ್ಲೂ ಪ್ರಸ್ತುತ ಪರಿಸ್ಥಿತಿಯಲ್ಲಿ ಪೌರಕಾರ್ಮಿಕರ ಸೇವೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಜೀವದ ಹಂಗು ತೊರೆದು ಕೊರೋನಾ ವಾರಿಯರ್ಸ್‌ಗಳಾಗಿ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ಪೌರಕಾರ್ಮಿಕರಿಗೆ ನಮ್ಮೆಲ್ಲರ ಗೌರವಪೂರ್ವಕ ನಮನ ಸಲ್ಲಬೇಕಾಗಿದೆ.


ನಗರದಲ್ಲಿ ಎಲ್ಲಿಬೇಕೆಂದರಲ್ಲಿ ಕಸ ಎಸೆಯಂದತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ರಂಗೋಲಿ ಬಿಡಿಸಿ ಸುತ್ತಮುತ್ತಲಪರಿಸರ ಸುಂದಗೊಳಿಸಿರುವುದು.
      ಸೆ.೨೩ರಂದು ಪೌರಕಾರ್ಮಿಕರ ದಿನಾಚರಣೆ:
ಪ್ರತಿ ವರ್ಷದಂತೆ ಈ ಬಾರಿ ಸಹ ಪೌರಕಾರ್ಮಿಕರ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಕೊರೋನಾ ಹಿನ್ನಲೆಯಲ್ಲಿ ಈ ಬಾರಿ ಸರಳವಾಗಿ ನಗರಸಭೆ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರಸಭೆ ಪೌರಾಯುಕ್ತ ಮನೋಹರ್, ಪೌರಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು  ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.
    ಸ್ವಚ್ಛತಾ ಕಾರ್ಯ ಸ್ಥಗಿತ:
ಪೌರಕಾರ್ಮಿಕರ ದಿನಾಚರಣೆ ಹಿನ್ನಲೆಯಲ್ಲಿ ಪೌರಕಾರ್ಮಿಕರಿಗೆ ರಜೆ ಘೋಷಿಸಲಾಗಿದ್ದು, ಈ ಹಿನ್ನಲೆಯಲ್ಲಿ ನಗರದಲ್ಲಿ ಬುಧವಾರ ಸ್ವಚ್ಛತಾ ಕಾರ್ಯ ನಡೆಯುವುದಿಲ್ಲ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಸಹಕರಿಸುವಂತೆ ಪೌರಾಯುಕ್ತರು ಕೋರಿದ್ದಾರೆ.

No comments:

Post a Comment