![](https://blogger.googleusercontent.com/img/b/R29vZ2xl/AVvXsEj6TSxQrrDqOsy390BHnwzPlwlH6AXQmekEOaiCwuSUg_ZvBMP5PXXmBQqULDIekgrkdb7Df413lNZTWv7R80-ohgdaVdbbiCOS885meXsG5fhRopXUT1uRy_dVkp9ZECGIew95gHPfCXwL/w400-h193-rw/D25-BDVT1-727826.jpg)
ಕಳೆದ ೩ ದಿನಗಳಿಂದ ಸೇತುವೆ ಮೇಲೆ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದು.
ಭದ್ರಾವತಿ, ಸೆ. ೨೫: ನಗರದ ಹೃದಯ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಇರುವ ಹೊಸ ಸೇತುವೆ ಮೇಲೆ ಕಳೆದ ೩ ದಿನಗಳಿಂದ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ಪ್ರತಿ ಬಾರಿಯಂತೆ ಈ ಬಾರಿ ಸಹ ಈ ಸೇತುವೆ ನೀರಿನಲ್ಲಿ ಮುಳುಗಡೆಗೊಂಡ ಪರಿಣಾಮ ಬೃಹತ್ ಕೊಳವೆಗಳು ನೀರಿನಲ್ಲಿ ಕೊಚ್ಚಿ ಹೋಗುವ ಜೊತೆಗೆ ತಡೆಗೋಡೆಗೆ ಹಾನಿ ಉಂಟಾಗಿದೆ.
ಸುಮಾರು ೪ ದಶಕಗಳಷ್ಟು ಹಳೇಯದಾದ ಈ ಸೇತುವೆ ನಿರ್ಮಾಣ ಇಂದಿಗೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಸೇತುವೆಯಿಂದ ಸ್ವಲ್ಪ ದೂರದಲ್ಲಿರುವ ಸುಮಾರು ೧೬೦ ವರ್ಷಗಳಷ್ಟು ಹಳೇಯದಾದ ಭದ್ರಾ ಸೇತುವೆ ಇಂದಿಗೂ ಮಾದರಿಯಾಗಿ ಕಂಡು ಬರುತ್ತಿದೆ.
ಹಳೇನಗರ ಮತ್ತು ಹೊಸನಗರ ಎರಡು ಭಾಗಗಳಿಗೆ ಸಂಪರ್ಕ ಕೊಂಡಿಗಳಾಗಿರುವ ಈ ಎರಡು ಸೇತುವೆಗಳ ನಡುವೆ ಬಹಳಷ್ಟು ವ್ಯತ್ಯಾಸಗಳಿವೆ. ಭದ್ರಾ ಸೇತುವೆ ಮೇಲಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಿಸಿರುವ ಹೊಸಸೇತುವೆ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಮುಳುಗಡೆಯಾಗುತ್ತಿದ್ದು, ಪ್ರತಿ ಬಾರಿ ಸೇತುವೆ ಹಾನಿಗೊಳಗಾಗುತ್ತಿದೆ. ಅಲ್ಲದೆ ಸಂಚಾರಕ್ಕೆ ತೊಂದರೆ ಎದುರಾಗುತ್ತಿದೆ.
ಬಹಳ ವರ್ಷಗಳಿಂದ ಈ ಸೇತುವೆ ಎತ್ತರಿಸಬೇಕೆಂಬ ಬೇಡಿಕೆ ಇದ್ದು, ಮುಖ್ಯಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಂಬಂಧಪಟ್ಟ ಸಚಿವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೆ ಇದುವರೆಗೂ ಕಾರ್ಯಕರ್ತಗೊಂಡಿಲ್ಲ. ಈ ನಡುವೆ ಭದ್ರಾ ಸೇತುವೆ ಶಿಥಿಲಗೊಂಡಿರುವ ಪರಿಣಾಮ ಕಳೆದ ೩ ವರ್ಷಗಳಿಂದ ಈ ಸೇತುವೆಗೆ ಬದಲಿ ನಿರ್ಮಿಸಲಾಗುತ್ತಿದೆ. ಆದರೆ ಹೊಸ ಸೇತುವೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೊಸ ಸೇತುವೆ ಎತ್ತರಿಸುವ ಅಥವಾ ತಡೆಗೋಡೆಗೆ ಹಾನಿಯಾಗದಂತೆ, ಸಂಚಾರಕ್ಕೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕೈಗೊಳ್ಳುವ ಚಿಂತನೆ ಸಹ ನಡೆದಿಲ್ಲ. ಪ್ರತಿ ಬಾರಿ ಸೇತುವೆ ನೀರಿನಲ್ಲಿ ಮುಳುಗಡೆಗೊಂಡಾಗ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡುವ ಜನಪ್ರತಿನಿಧಿಗಳು, ಅಧಿಕಾರಿಗಳು ನಂತರ ಮೌನಕ್ಕೆ ಶರಣಾಗುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ.
ಭದ್ರಾವತಿ ಹೃದಯ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಇರುವ ಹೊಸ ಸೇತುವೆ ಕಳೆದ ೫ ದಿನಗಳ ಹಿಂದೆ ನೀರಿನಲ್ಲಿ ಮುಳುಗಡೆಯಾಗಿದ್ದ ದೃಶ್ಯ. ಪ್ರತಿ ಬಾರಿ ಸೇತುವೆಯ ಎರಡು ಬದಿಯ ತಡೆಗೋಡೆಗಳು, ಬೃಹತ್ ಕೊಳವೆಗಳು, ಕೇಬಲ್‌ಗಳು, ವಿದ್ಯುತ್ ಕಂಬಗಳು ನೀರಿನಲ್ಲಿ ಕೊಚ್ಚಿ ಹೋಗಿ ಹಾನಿ ಉಂಟಾಗುತ್ತಿದ್ದು, ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರು. ನಷ್ಟ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಶೀಘ್ರವೇ ಕ್ರಮ ಕೈಗೊಳ್ಳುವ ಮೂಲಕ ಉಂಟಾಗುತ್ತಿರುವ ನಷ್ಟ ತಪ್ಪಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
೩ ದಿನಗಳಿಂದ ಸಂಚಾರಕ್ಕೆ ಮುಕ್ತ:
ಈ ಬಾರಿ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಹಿನ್ನಲೆಯಲ್ಲಿ ೨ ದಿನಗಳ ಕಾಲ ಸೇತುವೆ ಸಂಪೂರ್ಣವಾಗಿ ಮುಳುಗಡೆಗೊಂಡಿತ್ತು. ಹಂತ ಹಂತವಾಗಿ ನೀರು ಇಳಿಮುಖವಾದ ನಂತರ ಸೇತುವೆ ಮೇಲೆ ಸಿಕ್ಕಿಹಾಕಿಕೊಂಡಿದ್ದ ನೀರಿನಲ್ಲಿ ಬುಡ ಸಮೇತ ಕಿತ್ತು ಕೊಂಡು ಬಂದಿರುವ ಮರ ಸೇರಿದಂತೆ ಇನ್ನಿತರ ವಸ್ತುಗಳನ್ನು ತೆರವುಗೊಳಿಸಲಾಗಿದೆ.
ತಡೆಗೋಡೆ ಕೊಚ್ಚಿಕೊಂಡು ಹೋಗಿರುವ ಭಾಗಗಳಲ್ಲಿ ಬ್ಯಾರಿಗೇಡ್‌ಗಳನ್ನು ಅಳವಡಿಸಲಾಗಿದ್ದು, ನದಿಯಲ್ಲಿ ಬಿದ್ದಿರುವ ಬೃಹತ್ ಕೊಳವೆ, ಕೇಬಲ್‌ಗಳನ್ನು ತೆರವುಗೊಳಿಸಲಾಗುತ್ತಿದೆ. ಈ ನಡುವೆ ಬಸ್ಸು, ಲಾರಿ ಸೇರಿದಂತೆ ಭಾರಿ ವಾಹನಗಳ ಸಂಚಾರ ಹೊರತುಪಡಿಸಿ ಉಳಿದ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿದೆ.