Monday, September 28, 2020

ಎಂಪಿಎಂ ಕಾರ್ಮಿಕರ ನಿಯೋಜನೆಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ

ಸಂಸದ ಬಿ.ವೈ ರಾಘವೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆ

ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ
ಭದ್ರಾವತಿ, ಸೆ. ೨೮: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ೨೨೦ ಕಾರ್ಮಿಕರನ್ನು ಕಾಯಂಗೊಳಿಸುವ ಸಂಬಂಧ ಸೋಮವಾರ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
     ಶಿವಮೊಗ್ಗದ ಅತಿಥಿ ಗೃಹದಲ್ಲಿ ಸಂಸದ ಬಿ.ವೈ ರಾಘವೇಂದ್ರರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಎಂಪಿಎಂ ಕಾರ್ಖಾನೆಯಲ್ಲಿ ೨೦೧೭ರ ಸ್ವಯಂ ನಿವೃತ್ತಿ ಯೋಜನೆ ನಂತರ ಬಾಕಿ ಇರುವ ೨೨೦ ಕಾರ್ಮಿಕರ ಪೈಕಿ ಈಗಾಗಲೇ ೧೨೫ ಕಾರ್ಮಿಕರನ್ನು ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿಯೋಜನೆ ಮೇಲೆ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಉಳಿದಿರುವ ೯೩ ಕಾರ್ಮಿರನ್ನು ಸಹ ವಿವಿಧ ನಿಗಮ-ಮಂಡಳಿಗಳಲ್ಲಿ ನಿಯೋಜನೆ ಮೇಲೆ ನೇಮಕಗೊಳಿಸುವಂತೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್‌ರವರಿಗೆ ಸರ್ಕಾರ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಸದರು ಸೂಚಿಸಿದರು.
       ಎಲ್ಲಾ ಕಾರ್ಮಿಕರನ್ನು ನಿಯೋಜನೆ ಮೇಲೆ ತೆರಳಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿಕೊಟ್ಟು ಆ ಇಲಾಖೆಯಲ್ಲಿಯೇ ವಿಲೀನಗೊಳಿಸಿದಾಗ ಮಾತ್ರ ಸರ್ಕಾರದ ನಿರ್ಧಾರದಂತೆ ಕಾರ್ಖಾನೆಯನ್ನು ಅಭಿವೃದ್ಧಿಗೊಳಿಸಲು ಸಾಧ್ಯ. ಈ ಹಿನ್ನಲೆಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಕೈಗೊಳ್ಳುವಂತೆ ಸೂಚಿಸಲಾಯಿತು. ಸಭೆಯಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಬಿ ಶಿವಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ, ಸೂಡಾ ಅಧ್ಯಕ್ಷ ಎಸ್.ಎಸ್ ಜ್ಯೋತಿಪ್ರಕಾಶ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಎಂಪಿಎಂ ಕಾರ್ಖಾನೆ ವಿವಿಧ ಕಾರ್ಮಿಕ ಸಂಘಟನೆಗಳು ಮುಖಂಡರು ಪಾಲ್ಗೊಂಡಿದ್ದರು.  

ಕರ್ನಾಟಕ ಬಂದ್‌ಗೆ ಬಹುತೇಕ ಸಂಘಟನೆಗಳ ಬೆಂಬಲ : ರೈತ ವಿರೋಧಿ ಕಾಯ್ದೆ ಹಿಂಪಡೆಯಲು ಆಗ್ರಹ

ಭದ್ರಾವತಿಯಲ್ಲಿ ಸೋಮವಾರ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಸೆ. ೨೮: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರಲು ಮುಂದಾಗಿರುವ ಜನ ವಿರೋಧಿ ಹಾಗು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯಾದ್ಯಂತ ರೈತ ಸಂಘ ಸೇರಿದಂತೆ ಇನ್ನಿತರ ಸಂಘಟನೆಗಳಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ಬಂದ್‌ಗೆ ನಗರದಲ್ಲಿ ಬಹುತೇಕ ಸಂಘಟನೆಗಳು ಬೆಂಬಲ ಸೂಚಿಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದವು.
       ನಗರದ ಅಂಡರ್ ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಮಾಲಾರ್ಪಣೆ ಮಾಡಿದ ವಿವಿಧ ಸಂಘಟನೆಗಳ ಪ್ರಮುಖರು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಜನ ವಿರೋಧಿ ಮತ್ತು ರೈತ ವಿರೋಧಿ ಧೋರಣೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
       ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ, ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಐ), ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ, ಜಾತ್ಯಾತೀತ ಜನತಾದಳ, ಆಮ್ ಆದ್ಮಿ ಪಾರ್ಟಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸ್ನೇಹಜೀವಿ ಬಳಗ, ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್, ವೆಲೆಫೇರ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ), ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ), ಸಿಐಟಿಯು, ಹಮಾಲರ ಸಂಘ, ಜನಕರ್ನಾಟಕ ಸಂಘಟನೆ, ಆದಿ ದ್ರಾವಿಡ ಹಿತರಕ್ಷಣಾ ಸಮಿತಿ, ತರಕಾರಿ ಮಂಡಿ ಮಾಲೀಕರ ಸಂಘ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ, ಕೆ.ಜಿ.ಎನ್ ನೌಜವಾನ್ ಕಮಿಟಿ ಯುವ ಪಡೆ, ತಾಲೂಕು ಛಾಯಗ್ರಾಹಕರ ಸಂಘ, ಛಲವಾದಿ ಮಹಾಸಭಾ, ಫಾರುಕ್ ಎ.ಅಜಮ್ ಚಾರಿಟಬಲ್ ಟ್ರಸ್ಟ್, ಕನಾಟಕ ಜನ ಸೈನ್ಯ, ಕುವೆಂಪು ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಸಂಘ, ಸಂಗೊಳ್ಳಿ ರಾಯಣ್ಣ ಸೇವಾ ಸಮಿತಿ, ಅಂಬೇಡ್ಕರ್ ಯುವಕರ ಸಂಘ, ಮಾದಗ ದಂಂಡೋರ, ತಾಲೂಕು ಕುಂಚ ಕಲಾವಿದರ ಸಂಘ ಸೇರಿದಂತೆ ಇನ್ನಿತರ ಸಂಘಟನೆಗಳು ಪಾಲ್ಗೊಂಡಿದ್ದವು.


ಭದ್ರಾವತಿಯಲ್ಲಿ ಸೋಮವಾರ ಕರ್ನಾಟಕ ಬಂದ್ ಬೆಂಬಲಿಸಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಮೆರವಣಿಗೆ ನಡೆಸಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆಗಳನ್ನು ಖಂಡಿಸಿದವು.
      ನಗರದಲ್ಲಿ ಬಂದ್ ಬಹುತೇಕ ಯಶಸ್ವಿಯಾಗಿದ್ದು, ಪೆಟ್ರೋಲ್ ಬಂಕ್, ಹೋಟೆಲ್, ಮಾಲ್‌ಗಳು, ಮಾರುಕಟ್ಟೆ ಸೇರಿದಂತೆ ಹಲವೆಡೆ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿತ್ತು. ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟು ಮುಚ್ಚಲ್ಪಟ್ಟಿದ್ದವು. ಆಟೋ, ಟ್ಯಾಕ್ಸಿ, ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಉಳಿದಂತೆ ಸರ್ಕಾರಿ ಬಸ್‌ಗಳು ಎಂದಿನಂತೆ ಸಂಚರಿಸಿದವು. ಸರ್ಕಾರಿ ಕಛೇರಿಗಳು ಎಂದಿನಂತೆ ತೆರೆಯಲ್ಪಟ್ಟಿದ್ದವು.

Sunday, September 27, 2020

ಎಂ.ಜೆ ಅಪ್ಪಾಜಿ ಒಂದು ನೆನಪು

ಬಿ.ಎಚ್ ರಸ್ತೆ ಲೋಯರ್ ಹುತ್ತಾ ಎಂ.ಜೆ ಅಪ್ಪಾಜಿ ಅಭಿಮಾನಿಗಳ ಬಳಗದ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ಶ್ರೀ ಭದ್ರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಎಂ.ಜೆ ಅಪ್ಪಾಜಿ ಒಂದು ನೆನಪು' ಕಾರ್ಯಕ್ರಮವನ್ನು ಜೆಡಿಎಸ್ ಪಕ್ಷದ ರಾಜ್ಯ ಮುಖಂಡ ಎಂ. ಶ್ರೀಕಾಂತ್ ಉದ್ಘಾಟಿಸಿದರು.
ಭದ್ರಾವತಿ, ಸೆ. ೨೮: ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾ ಎಂ.ಜೆ ಅಪ್ಪಾಜಿ ಅಭಿಮಾನಿಗಳ ಬಳಗದ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ಶ್ರೀ ಭದ್ರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಎಂ.ಜೆ ಅಪ್ಪಾಜಿ ಒಂದು ನೆನಪು' ಕಾರ್ಯಕ್ರಮವನ್ನು ಜೆಡಿಎಸ್ ಪಕ್ಷದ ರಾಜ್ಯ ಮುಖಂಡ ಎಂ. ಶ್ರೀಕಾಂತ್ ಉದ್ಘಾಟಿಸಿದರು.
ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ಗಾನ ಗಂಧರ್ವ, ಗಾಯಕ ಎಸ್.ಬಿ ಬಾಲಸುಬ್ರಮಣ್ಯಂರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಲಾಯಿತು.
ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಆನಂದ್, ಛತ್ರಪತಿ ಶಿವಾಜಿ ಸೇವಾ ಸಂಘದ ಅಧ್ಯಕ್ಷ ಯಶವಂತರಾವ್ ಘೋರ್ಪಡೆ, ಅಪ್ಪಾಜಿಯವರ ಪುತ್ರ ಎಂ.ಎ ಅಜಿತ್, ಮುಖಂಡರಾದ ಕೆ. ಕರಿಯಪ್ಪ, ಎಸ್.ಪಿ ಮೋಹನ್ ರಾವ್, ಲೋಕೇಶ್ವರ್‌ರಾವ್, ಎಂ. ರಾಜು, ಎಂ.ಎಸ್ ಸುಧಾಮಣಿ ಸೇರಿದಂತೆ ನೂರಾರು ಮಂದಿ ಅಪ್ಪಾಜಿ ಅಭಿಮಾನಿಗಳು, ಕಾರ್ಯಕರ್ತರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಪಟೇಲ್ ಹನುಮಂತಪ್ಪ ನಿಧನ

ಪಟೇಲ್ ಹನುಮಂತಪ್ಪ
ಭದ್ರಾವತಿ, ಸೆ. ೨೮: ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷೆ ಪದ್ಮಮ್ಮರವರ ಪತಿ ಹಳೇನಗರದ ರಥಬೀದಿ ರಸ್ತೆ ನಿವಾಸಿ, ಜಮೀನ್ದಾರ್  ಆರ್. ಪಟೇಲ್ ಹನುಮಂತಪ್ಪ(೭೪) ನಿಧನ ಹೊಂದಿದರು.
       ಪತ್ನಿ, ೨ ಗಂಡು, ೨ ಹೆಣ್ಣು ಮಕ್ಕಳು, ಸೊಸೆ ಹಾಗು ಅಳಿಯಂದಿರು, ಮೊಮ್ಮಕ್ಕಳನ್ನು ಹೊಂದಿದ್ದರು. ಹನುಮಂತಪ್ಪ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಒಡನಾಡಿಯಾಗಿ ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಮಧು ಬಂಗಾರಪ್ಪ, ಜಿ.ಪಂ. ಸದಸ್ಯ ಜೆ.ಪಿ ಯೋಗೇಶ್, ಜೆಡಿಎಸ್ ಮುಖಂಡ ಎಂ. ಶ್ರೀಕಾಂತ್, ಸಿಂಗನಮನೆ ಗ್ರಾ.ಪಂ. ಸದಸ್ಯ ಟಿ.ಡಿ. ಶಶಿಕುಮಾರ್, ನಾಗರಾಜ್  ಮಧುಗಿರಿ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.  

ಶತಾಯುಷಿ ಫಾತೀಮಾ ಬೀ ನಿಧನ

ಫಾತೀಮಾ ಬೀ ನಿಧನ
ಭದ್ರಾವತಿ: ಮಾಜಿ ನಗರಸಭೆ ಸದಸ್ಯ, ಹಳೇನಗರದ ನಿವಾಸಿ ಅಬ್ದುಲ್ ರಹಮಾನ್(ದಿಲ್ದಾರ್)ರವರ ತಾಯಿ, ಶತಾಯುಷಿ ಫಾತೀಮಾ ಬೀ(೧೧೬) ಭಾನುವಾರ ನಿಧನ ಹೊಂದಿದರು.
೭ ಗಂಡು, ೫ ಹೆಣ್ಣು ಮಕ್ಕಳು, ಸೊಸೆ, ಅಳಿಯಂದಿರು ಹಾಗು ಮೊಕ್ಕಳನ್ನು ಹೊಂದಿದ್ದರು. ಮೃತರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

Saturday, September 26, 2020

ಮಹಿಳಾ ಕಾಂಗ್ರೆಸ್‌ನಿಂದ ಮಹಿಳೆಯರಿಗಾಗಿ ‘ಘನತೆ’ ಜಾಗೃತಿ ಕಾರ್ಯಕ್ರಮ

ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಮುಟ್ಟಿನಿಂದಲೇ ನಮ್ಮೆಲ್ಲರ ಹುಟ್ಟು ಎಂಬ ಘೋಷ ವ್ಯಾಕ್ಯದೊಂದಿಗೆ ಹೆಣ್ಣು ಮಕ್ಕಳಿಗೆ ಋತುಸ್ರಾವದ ಮಾಸದಲ್ಲಿ ಆರೋಗ್ಯದ ಕಾಳಜಿ ಹಾಗು ಕೊರೋನ ಬಗ್ಗೆ ಜಾಗೃತಿ ಮತ್ತು ಸ್ವಚ್ಛತೆ ಕುರಿತು ಅರಿವು ಮೂಡಿಸುವ "ಘನತೆ " ಕಾರ್ಯಕ್ರಮ ಭದ್ರಾವತಿ ಹಳೇನಗರದ ನಿರ್ಮಲ ಆಸ್ಪತ್ರೆ ಹಿಂಭಾಗದ ಹನುಮಂತ ನಗರ ಶ್ರೀ ಚೌಡೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಸೆ. ೨೫: ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಮುಟ್ಟಿನಿಂದಲೇ ನಮ್ಮೆಲ್ಲರ ಹುಟ್ಟು ಎಂಬ ಘೋಷ ವ್ಯಾಕ್ಯದೊಂದಿಗೆ ಹೆಣ್ಣು ಮಕ್ಕಳಿಗೆ ಋತುಸ್ರಾವದ ಮಾಸದಲ್ಲಿ ಆರೋಗ್ಯದ ಕಾಳಜಿ ಹಾಗು ಕೊರೋನ ಬಗ್ಗೆ ಜಾಗೃತಿ ಮತ್ತು ಸ್ವಚ್ಛತೆ ಕುರಿತು ಅರಿವು ಮೂಡಿಸುವ "ಘನತೆ " ಕಾರ್ಯಕ್ರಮ ಹಳೇನಗರದ ನಿರ್ಮಲ ಆಸ್ಪತ್ರೆ ಹಿಂಭಾಗದ ಹನುಮಂತ ನಗರ ಶ್ರೀ ಚೌಡೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
     ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಬದಲಾದ ಕಾಲಘಟ್ಟದಲ್ಲಿ ಮತ್ತಷ್ಟು ಜಾಗೃತಗೊಳ್ಳುವ ಜೊತೆಗೆ ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಕರೆ ನೀಡಲಾಯಿತು. ಇದೆ ಸಂದರ್ಭದಲ್ಲಿ ಮಹಿಳೆಯರಿಗೆ ಬಾಗಿನ ನೀಡಲಾಯಿತು.
      ಮಹಿಳಾ ಕಾಂಗ್ರೆಸ್ ತಾಲೂಕು ಅಧ್ಯಕ್ಷೆ ಮಂಜುಳ ರಾಮಚಂದ್ರ, ಕೆಪಿಸಿಸಿ ಕಾರ್ಮಿಕ ರಾಜ್ಯ ಕಾರ್ಯದರ್ಶಿ ನಳಿನಾ ದಾಮೋದರ್, ತಾಲ್ಲೂಕು ಮಹಿಳಾ ಕಾರ್ಮಿಕ ವಿಭಾಗ ಅಧ್ಯಕ್ಷೆ ರೂಪ ನಾರಾಯಣ್, ಉಪಾಧ್ಯಕ್ಷೆ ಗೀತಾ, ಪದ್ಮಮ್ಮ, ಮಾಜಿ ನಗರಸಭಾ ಸದಸ್ಯರಾದ ಶೋಭಾ ರವಿಕುಮಾರ್, ಗೌರಮ್ಮ ಸೇರಿದಂತೆ ಮಹಿಳಾ ಘಟಕದ ಪದಾಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.

ಮನೆಯ ಬೀಗ ಮುರಿದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳವು

ಭದ್ರಾವತಿ, ಸೆ. ೨೬: ಮನೆಯಲ್ಲಿ ಯಾರು ಇಲ್ಲದಿರುವಾಗ ಮನೆಯ ಬೀಗ ಮುರಿದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಹೊಸ ಸೀಗೆಬಾಗಿಯಲ್ಲಿ ನಡೆದಿದೆ.
     ಬೋರೇಗೌಡ ಎಂಬುವರ ಮನೆಯಲ್ಲಿ ಕಳವು ಪ್ರಕರಣ ನಡೆದಿದ್ದು, ಕುಟುಂಬ ಸಮೇತ ಸೆ.೧೯ರಂದು ಮನೆಗೆ ಬೀಗ ಹಾಕಿಕೊಂಡು ಕೆ.ಆರ್ ಪೇಟೆ ತಾಲೂಕಿನ ಇಕ್ಕೇರಿ, ದಬ್ಬಗಟ್ಟೆ ಗ್ರಾಮಕ್ಕೆ ತೆರಳಿದ್ದು, ಸುಮಾರು ೬ ದಿನಗಳ ನಂತರ ಸೆ.೨೪ರಂದು ಹಿಂದಿರುಗಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಮನೆ ಬಾಗಿಲು ಬೀಗ ಮುರಿದಿರುವುದು ಕಂಡು ಬಂದಿದ್ದು, ಒಳ ಹೋಗಿ ಪರಿಶೀಲಿಸಿದಾಗ ಬೀರುವಿನಲ್ಲಿದ್ದ ೩ ಮತ್ತು ೪ ಗ್ರಾಂ. ತೂಕದ ತಲಾ ಎರಡು ಜೊತೆ ಕಿವಿಯೋಲೆ, ೬ ಗ್ರಾಂ. ತೂಕದ ಒಂದು ಜೊತೆ ಕಿವಿಯೋಲೆ, ೩ ಗ್ರಾಂ. ತೂಕದ ಒಂದು ಜೊತೆ ಕಿವಿಯ ಮಾಟಿ, ೬ ಗ್ರಾಂ. ತೂಕ ಕಿವಿ ಹ್ಯಾಂಗಿಂಗ್, ೫ ಗ್ರಾಂ. ತೂಕದ ಉಂಗುರ, ೩ ಗ್ರಾಂ. ತೂಕದ ಗುಂಡು ಡ್ರಾಪ್ಸ್ ಮತ್ತು ೩೫ ಗ್ರಾಂ. ತೂಕದ ಆಭರಣ ಸೇರಿದಂತೆ ಒಟ್ಟು ೧.೫೭ ಲಕ್ಷ ರು. ಮೌಲ್ಯದ ೭೧ ಗ್ರಾಂ. ತೂಕದ ಚಿನ್ನಾಭರಣಗಳನ್ನು ಹಾಗು ೧೫೦ ಗ್ರಾಂ. ತೂಕದ ೨ ಬೆಳ್ಳಿಯ ಲಕ್ಷ್ಮಿ ಮುಖವಾಡಗಳು, ೧೦೦ ಗ್ರಾಂ. ತೂಕ ಕಾಲುಚೈನ್, ೩೦ ಗ್ರಾಂ. ತೂಕದ ಒಂದು ಬೆಳ್ಳಿ ಕಡಗ ಮತ್ತು ೨೦ ಗ್ರಾಂ. ತೂಕದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿದೆ.
    ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.