Tuesday, September 29, 2020

ತುಂಗಾಬಾಯಿ ನಿಧನ

ತುಂಗಾಬಾಯಿ
ಭದ್ರಾವತಿ ಸೆ. ೨೯: ನಗರದ ಹೊಸಮನೆ ನಿವಾಸಿ  ತುಂಗಾಬಾಯಿ(೭೦) ಮಂಗಳವಾರ ಅನಾರೋಗ್ಯದಿಂದ ನಿಧನ ಹೊಂದಿದರು.
         ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. ಮೃತರು ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅ.೫ರಂದು ಎಂ.ಜೆ ಅಪ್ಪಾಜಿ ಒಂದು ನೆನಪು

ಭದ್ರಾವತಿ, ಸೆ. ೨೯: ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಸ್ಮರಣಾರ್ಥ ಅಪ್ಪರ್ ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಅ.೫ರಂದು ಸಂಜೆ ೫.೩೦ಕ್ಕೆ ಎಂ.ಜೆ ಅಪ್ಪಾಜಿಯವರ ಒಂದು ನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
          ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಶಾರದ ಅಪ್ಪಾಜಿ, ಎಂ.ಎ ಅಜಿತ್ ಹಾಗು ಒಕ್ಕಲಿಗರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿರುವರು. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಅ.೨ರಂದು ಗಾಂಧಿ ಜಯಂತಿ

ಭದ್ರಾವತಿ, ಸೆ. ೨೯: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಅ.೨ರಂದು ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಹಮ್ಮಿಕೊಳ್ಳಲಾಗಿದೆ.
         ನ್ಯೂಟೌನ್ ಶಾರದ ಮಂದಿರದಲ್ಲಿ ಬೆಳಿಗ್ಗೆ ೯ ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಪ್ರತಿ ವರ್ಷದಂತೆ ಈ ಬಾರಿ ಸಹ ಪವಿತ್ರ ಗ್ರಂಥಗಳಾದ ಭಗವದ್ಗೀತೆ, ಬೈಬಲ್ ಮತ್ತು ಕುರಾನ್ ಪಠಣ ನಡೆಯಲಿದೆ. 'ಕೊರೋನಾ ವಾರಿಯರ್ಸ್ ಅಂಡ್ ಸ್ವಚ್ಛ ಹಿ ಸ್ವಾಸ್ಥ್ಯ' ಕುರಿತು ಕಿರುನಾಟಕ, ಗಾಂಧಿಜೀಯವರ ಜೀವನ ಚರಿತ್ರೆ ಕುರಿತು ರಸಪ್ರಶ್ನೆ ಹಾಗು ಗಾಂಧಿಜೀ ಮತ್ತು ದೇಶಭಕ್ತಿ ಗೀತೆಗಳ ಗಾಯನ ನಡೆಯಲಿದೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್ ಪ್ರವೀಣ್‌ಕುಮಾರ್ ಕೋರಿದ್ದಾರೆ.

ಧರ್ಮಸ್ಥಳ ಸಂಘದಿಂದ ವನಮಹೋತ್ಸವ

ಭದ್ರಾವತಿಯಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಗರಸಭೆ ವ್ಯಾಪ್ತಿಯ ಹೊಸಮನೆ ಅಶ್ವಥ್‌ನಗದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.
      ಭದ್ರಾವತಿ, ಸೆ. ೨೯: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಗರಸಭೆ ವ್ಯಾಪ್ತಿಯ ಹೊಸಮನೆ ಅಶ್ವಥ್‌ನಗದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.
      ಯೋಜನೆ ವತಿಯಿಂದ ಪರಿಸರ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ತಾಲೂಕು ಯೋಜನಾಧಿಕಾರಿ ಕೆ. ಪ್ರಸಾದ್, ಮೇಲ್ವಿಚಾರಕಿ ನೇತ್ರಾಬಾಯಿ, ಕೃಷಿ ವಿಭಾಗದ ಮೇಲ್ವಿಚಾರಕ ಗೋವಿಂದಪ್ಪ, ಈ ಭಾಗದ ಒಕ್ಕೂಟದ ಅಧ್ಯಕ್ಷೆ ಕಾವೇರಮ್ಮ ಸೇರಿದಂತೆ ಸೇವಾ ಪ್ರತಿನಿಧಿಗಳು, ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.


ಭಗತ್ ಸಿಂಗ್ ೧೧೩ನೇ ಜನ್ಮದಿನ : ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ

ಭದ್ರಾವತಿಯಲ್ಲಿ ಕೇಸರಿ ಪಡೆ ವತಿಯಿಂದ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರ, ಮಹಾನ್ ದೇಶಭಕ್ತ ಸರ್ದಾರ್ ಭಗತ್ ಸಿಂಗ್‌ರವರ ೧೧೩ನೇ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಭದ್ರಾವತಿ, ಸೆ. ೨೯: ನಗರದ ಕೇಸರಿ ಪಡೆ ವತಿಯಿಂದ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರ, ಮಹಾನ್ ದೇಶಭಕ್ತ ಸರ್ದಾರ್ ಭಗತ್ ಸಿಂಗ್‌ರವರ ೧೧೩ನೇ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
       ಹೊಸ ಸೇತುವೆ ರಸ್ತೆಯಲ್ಲಿರುವ ಜಿ.ಎಸ್ ಆಟೋಮೊಬೈಲ್ ಮುಂಭಾಗ ಆಯೋಜಿಸಲಾಗಿದ್ದ ೪ನೇ ವರ್ಷದ ಶಿಬಿರದಲ್ಲಿ ಸುಮಾರು ೫೫ಕ್ಕೂ ಹೆಚ್ಚು ರಕ್ತದಾನಿಗಳು ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ಭಗತ್‌ಸಿಂಗ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕೇಸರಿಪಡೆ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Monday, September 28, 2020

ಕೆ.ಆರ್ ಹಿರಣ್ಣಯ್ಯ ನಿಧನ

ಕೆ.ಆರ್ ಹಿರಣ್ಣಯ್ಯ
ಭದ್ರಾವತಿ, ಸೆ. ೨೮: ಇಲ್ಲಿನ ಹಳೇನಗರದ ನಿವಾಸಿ ಕೆ.ಆರ್.ಹಿರಣ್ಣಯ್ಯ(೯೦) ಭಾನುವಾರ ನಿಧನ ಹೊಂದಿದರು.
         ಮೃತರು ನಾಲ್ವರು ಪುತ್ರರನ್ನು ಹೊಂದಿದ್ದು, ಇವರ ಅಂತ್ಯಕ್ರಿಯೆ ಸೋಮವಾರ ಶಿವಮೊಗ್ಗದಲ್ಲಿ ನೆರವೇರಿತು. ಹಿರಣ್ಣಯ್ಯ ಹಳೇನಗರ ರಾಮೇಶ್ವರ ದೇವಾಲಯ ಸಮಿತಿ ಅಧ್ಯಕ್ಷರಾಗಿ, ವೇದಮಾತ ಅನ್ನದಾನ ಸಮಿತಿ ಪ್ರಾರಂಭಿಕ ಟ್ರಸ್ಟಿಯಾಗಿ  ಸೇವೆ ಸಲ್ಲಿಸಿದ್ದರು. ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಎಂಪಿಎಂ ಕಾರ್ಮಿಕರ ನಿಯೋಜನೆಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ

ಸಂಸದ ಬಿ.ವೈ ರಾಘವೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆ

ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ
ಭದ್ರಾವತಿ, ಸೆ. ೨೮: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ೨೨೦ ಕಾರ್ಮಿಕರನ್ನು ಕಾಯಂಗೊಳಿಸುವ ಸಂಬಂಧ ಸೋಮವಾರ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
     ಶಿವಮೊಗ್ಗದ ಅತಿಥಿ ಗೃಹದಲ್ಲಿ ಸಂಸದ ಬಿ.ವೈ ರಾಘವೇಂದ್ರರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಎಂಪಿಎಂ ಕಾರ್ಖಾನೆಯಲ್ಲಿ ೨೦೧೭ರ ಸ್ವಯಂ ನಿವೃತ್ತಿ ಯೋಜನೆ ನಂತರ ಬಾಕಿ ಇರುವ ೨೨೦ ಕಾರ್ಮಿಕರ ಪೈಕಿ ಈಗಾಗಲೇ ೧೨೫ ಕಾರ್ಮಿಕರನ್ನು ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿಯೋಜನೆ ಮೇಲೆ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಉಳಿದಿರುವ ೯೩ ಕಾರ್ಮಿರನ್ನು ಸಹ ವಿವಿಧ ನಿಗಮ-ಮಂಡಳಿಗಳಲ್ಲಿ ನಿಯೋಜನೆ ಮೇಲೆ ನೇಮಕಗೊಳಿಸುವಂತೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್‌ರವರಿಗೆ ಸರ್ಕಾರ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಸದರು ಸೂಚಿಸಿದರು.
       ಎಲ್ಲಾ ಕಾರ್ಮಿಕರನ್ನು ನಿಯೋಜನೆ ಮೇಲೆ ತೆರಳಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿಕೊಟ್ಟು ಆ ಇಲಾಖೆಯಲ್ಲಿಯೇ ವಿಲೀನಗೊಳಿಸಿದಾಗ ಮಾತ್ರ ಸರ್ಕಾರದ ನಿರ್ಧಾರದಂತೆ ಕಾರ್ಖಾನೆಯನ್ನು ಅಭಿವೃದ್ಧಿಗೊಳಿಸಲು ಸಾಧ್ಯ. ಈ ಹಿನ್ನಲೆಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಕೈಗೊಳ್ಳುವಂತೆ ಸೂಚಿಸಲಾಯಿತು. ಸಭೆಯಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಬಿ ಶಿವಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ, ಸೂಡಾ ಅಧ್ಯಕ್ಷ ಎಸ್.ಎಸ್ ಜ್ಯೋತಿಪ್ರಕಾಶ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಎಂಪಿಎಂ ಕಾರ್ಖಾನೆ ವಿವಿಧ ಕಾರ್ಮಿಕ ಸಂಘಟನೆಗಳು ಮುಖಂಡರು ಪಾಲ್ಗೊಂಡಿದ್ದರು.