Thursday, October 1, 2020

ಓರ್ವ ಮನೆಗಳ್ಳನ ಬಂಧನ : ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ವಶ

ಹಳೇನಗರ-ನ್ಯೂಟೌನ್ ಠಾಣೆ ಪೊಲೀಸರ ಜಂಟಿ ಕಾರ್ಯಾಚರಣೆ

 ಮನೆಗಳ್ಳತನ ಪ್ರಕರಣಗಳಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಭದ್ರಾವತಿ ಹಳೇನಗರ ಹಾಗು ನ್ಯೂಟೌನ್ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ಗುರುವಾರ ನಡೆದಿದ್ದು, ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
      ಭದ್ರಾವತಿ, ಅ. ೧: ಮನೆಗಳ್ಳತನ ಪ್ರಕರಣಗಳಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಹಳೇನಗರ ಹಾಗು ನ್ಯೂಟೌನ್ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ಗುರುವಾರ ನಡೆದಿದ್ದು, ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
      ಶಿವಮೊಗ್ಗ ಬಸವಾಪುರ ಹಾಯ್‌ಹೊಳೆ ನಿವಾಸಿ ವೆಂಕಟೇಶ್ ಅಲಿಯಾಸ್ ಕೆಮ್ಮಣ್ಣುಗುಂಡಿ(೪೪) ಎಂಬಾತನನ್ನು ಬಂಧಿಸಲಾಗಿದ್ದು, ಈತನನಿಂದ ಒಟ್ಟು ೫.೯೮ ಲಕ್ಷ ರು. ಮೌಲ್ಯದ ೧೩೩ ಗ್ರಾಂ. ತೂಕದ ಚಿನ್ನದ ಆಭರಣ, ೨೯ ಸಾವಿರ ರು. ಮೌಲ್ಯದ ೫೯೯ ಗ್ರಾಂ. ತೂಕದ ಬೆಳ್ಳಿಯ ಆಭರಣ ಹಾಗು ಅಂದಾಜು ೧೫ ಸಾವಿರ ರು. ಮೌಲ್ಯದ ಎಲ್‌ಇಡಿ ಟಿ.ವಿ ಸೇರಿದಂತೆ ಒಟ್ಟು ೬.೪೨ ಲಕ್ಷ ರು. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
      ಈತನ ವಿರುದ್ಧ ಹಳೇನಗರ ಮತ್ತು ನ್ಯೂಟೌನ್ ಪೊಲೀಸ್ ಠಾಣೆಗಳಲ್ಲಿ ಹಾಗು ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಮತ್ತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಒಟ್ಟು ೪ ಮನೆಗಳ್ಳತನ ಪ್ರಕರಣಗಳು ದಾಖಲಾಗಿದ್ದವು.
      ಪ್ರಕರಣಗಳನ್ನು ಬೇಧಿಸಲು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತರಾಜು, ಹೆಚ್ಚುವರಿ ರಕ್ಷಣಾಧಿಕಾರಿ ಡಾ. ಎಚ್.ಡಿ ಶೇಖರ್, ಪೊಲೀಸ್ ಉಪಾಧೀಕ್ಷಕ ಸುಧಾಕರ ಎಸ್ ನಾಯ್ಕ ಮಾರ್ಗದರ್ಶನದಲ್ಲಿ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
      ಹಳೇನಗರ ಪೊಲೀಸ್ ಠಾಣಾಧಿಕಾರಿ ಶ್ರೀನಿವಾಸ್, ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಸಿಬ್ಬಂದಿ ವೆಂಕಟೇಶ್, ನ್ಯೂಟೌನ್ ಪೊಲೀಸ್ ಠಾಣೆ ಸಿಬ್ಬಂದಿ ಮಂಜುನಾಥ, ಪಾಲಾಕ್ಷನಾಯ್ಕ, ನಗರ ವೃತ್ತ ನಿರೀಕ್ಷಕರ ಕಛೇರಿ ಸಿಬ್ಬಂದಿ ಸುನಿಲ್, ಹಳೇನಗರ ಪೊಲೀಸ್ ಠಾಣೆ ಸಿಬ್ಬಂದಿ ಹಾಲೇಶ್, ಚಾಲಕ ಮಧುಸೂಧನ್ ಸೇರಿದಂತೆ ಇನ್ನಿತರರು ಪ್ರಕರಣಗಳ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣ ಯಶಸ್ವಿಯಾಗಿ ಬೇಧಿಸಿರುವ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ.

ಗಾಂಜಾ ಅಮಲಿಗೆ ಓರ್ವ ಬಲಿ ?

ಭದ್ರಾವತಿ ಹೊಸಮನೆ ಹನುಮಂತನಗರದಲ್ಲಿ  ಓರ್ವನನ್ನು  ಭೀಕರವಾಗಿ ಕೊಲೆ ಮಾಡಿರುವುದು. 
ಭದ್ರಾವತಿ, ಅ. ೧: ನಗರದ ಹೊಸಮನೆ  ಹನುಮಂತನಗರದಲ್ಲಿ  ಓರ್ವನನ್ನು  ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
      ಶಾರುಖ್ ಖಾನ್(೨೬) ಎಂಬಾತನನ್ನು ಕೊಲೆ ಮಾಡಲಾಗಿದೆ.  ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.  ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.  ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ  ಪರಿಶೀಲನೆ ನಡೆಸಿದ್ದಾರೆ.
   ಸ್ಥಳೀಯರ ಮಾಹಿತಿ ಪ್ರಕಾರ ಈ ಭಾಗದಲ್ಲಿ ಓಸಿ,  ಇಸ್ಪೀಟ್, ಗಾಂಜಾ ಸೇವನೆ ಸೇರಿದಂತೆ ಹಲವು ಕಾನೂನು ಬಾಹಿರ ಕೃತ್ಯಗಳು ನಡೆಯುತ್ತಿದ್ದು, ಕೊಲೆಯಾದ ವ್ಯಕ್ತಿ ಕೂಡ ಈ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದನು. ಅಲ್ಲದೆ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಆತನ ಕೊಲೆ ನಡೆದಿರುವ ಸಾಧ್ಯತೆ ಇದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

Wednesday, September 30, 2020

ಕಡುಬಡವರಿಗೆ, ಸಂತ್ರಸ್ಥರಿಗೆ ದಿನಸಿ ಸಾಮಗ್ರಿ, ದಿನ ಬಳಕೆ ವಸ್ತುಗಳ ವಿತರಣೆ

ಕಡುಬಡವರಿಗೆ ಹಾಗು ಮಳೆಯಿಂದ ಸಂತ್ರಸ್ಥರಾದ ಕುಟುಂಬಗಳಿಗೆ ಭದ್ರಾವತಿ ಆಂಜನೇಯ ಅಗ್ರಹಾರದಲ್ಲಿ ಬುಧವಾರ ಆಹಾರ ಸಾಮಗ್ರಿ ಹಾಗು ದಿನ ಬಳಕೆ ವಸ್ತುಗಳನ್ನು ವಿತರಿಸಲಾಯಿತು.
ಭದ್ರಾವತಿ, ಸೆ. ೩೦: ಕಡುಬಡವರಿಗೆ ಹಾಗು ಮಳೆಯಿಂದ ಸಂತ್ರಸ್ಥರಾದ ಕುಟುಂಬಗಳಿಗೆ ನಗರದ ಆಂಜನೇಯ ಅಗ್ರಹಾರದಲ್ಲಿ ಬುಧವಾರ ಆಹಾರ ಸಾಮಗ್ರಿ ಹಾಗು ದಿನ ಬಳಕೆ ವಸ್ತುಗಳನ್ನು ವಿತರಿಸಲಾಯಿತು.
        ಆಹಾರ ಸಾಮಗ್ರಿಗಳಾದ ಅಕ್ಕಿ, ಬೇಳೆ, ಎಣ್ಣೆ, ಸಕ್ಕರೆ, ಟೀ ಪುಡಿ, ದಿನ ಬಳಕೆ ವಸ್ತುಗಳಾದ ಸೋಪು, ಟೂತ್‌ಫೇಸ್ಟ್, ಹ್ಯಾಂಡ್ ವಾಸ್, ಸ್ಯಾನಿಟೈಜರ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಿತರಿಸಲಾಯಿತು.
        ಶಿವಮೊಗ್ಗ ಹರಿಗೆ ಲೀತಾ ಚಾರಿಟಬಲ್ ಟ್ರಸ್ಟ್ ಮತ್ತು ಜ್ಞಾನ ಜ್ಯೋತಿ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಎಂ.ಎ ಅಜಿತ್, ಗುಣಶೇಖರ್, ಪ್ರಮುಖರಾದ ಬಿ.ಆರ್ ಕುಮಾರ್, ಸತೀಶ್, ಎಂ.ಪಿ ಶಿವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅ.೪ರಂದು ಜೆ.ಎಚ್ ಪಟೇಲ್ ೯೧ನೇ ಜನ್ಮದಿನ

ಭದ್ರಾವತಿ, ಸೆ. ೩೦: ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್ ಪಟೇಲ್‌ರವರ ೯೧ನೇ ಜನ್ಮದಿನ ಅ.೪ರಂದು ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
      ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್ ಪಟೇಲ್‌ರವರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದ ದಿವ್ಯಸಾನಿಧ್ಯ ಸರ್ವಧರ್ಮಪೀಠದ ನಿರಂಜನ ದೇಶಿ ಕೇಂದ್ರ ಸ್ವಾಮೀಜಿ ವಹಿಸಲಿದ್ದು, ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಜೆಡಿಯು ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್ ಕುಮಾರ್ ಕೋರಿದ್ದಾರೆ.

ಸಿಐಐ ಪಿಎಸ್‌ಇ ಕೌನ್ಸಿಲ್‌ಗೆ ಅನಿಲ್‌ಕುಮಾರ್ ಚೌಧರಿ

ಅನಿಲ್‌ಕುಮಾರ್ ಚೌಧರಿ  
ಭದ್ರಾವತಿ, ಸೆ. ೩೦: ದಿ ಕಾನ್‌ಫೆಡೆರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿಸ್(ಸಿಐಐ) ಪಿಎಸ್‌ಇ ಕೌನ್ಸಿಲ್‌ಗೆ ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅನಿಲ್‌ಕುಮಾರ್ ಚೌಧರಿ ನಾಮನಿರ್ದೇಶನಗೊಂಡಿದ್ದಾರೆ.
     ೨೦೦೭ರಲ್ಲಿ ಸ್ಥಾಪನೆಯಾದ ಸಿಐಐ ಪಿಎಸ್‌ಇ ಸರ್ಕಾರ  ಮತ್ತು  ಸಾರ್ವಜನಿಕ ವಲಯದ ಉದ್ಯಮಗಳ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಹುದೊಡ್ಡ ಕೌನ್ಸಿಲ್ ಆಗಿದ್ದು, ಉದ್ಯಮಗಳ ನಿಯಮ ಹಾಗು ಸಲಹೆಗಳನ್ನು ನೀಡಲಿದೆ. ಪ್ರಸ್ತುತ ೧೦ ಮಹಾರತ್ನಾಸ್, ೧೪ ನವರತ್ನಾಸ್ ಮತ್ತು ೭೨  ಮಿನಿ ರತ್ನಾಸ್ ಕಂಪನಿಗಳ ಒಟ್ಟು ೯೬ ಸದಸ್ಯರನ್ನು ಒಳಗೊಂಡಿದೆ.
       ಆತ್ಮನಿರ್ಭರ್ ಭಾರತ್ ಯೋಜನೆಯನ್ನು ಸಹಕಾರಗೊಳಿಸಲು ಕೌನ್ಸಿಲ್ ಶೀಘ್ರದಲ್ಲಿಯೇ ಹಲವು ಯೋಜನೆಗಳನ್ನು ರೂಪಿಸಿಕೊಳ್ಳಲಿದೆ. ಈ ಹಿನ್ನಲೆಯಲ್ಲಿ ಉಕ್ಕು ಪ್ರಾಧಿಕಾರದಲ್ಲಿ ಹೆಚ್ಚಿನ ಸೇವಾನುಭವ ಹೊಂದಿರುವ ಅನಿಲ್‌ಕುಮಾರ್ ಚೌಧರಿಯವರ ನಾಮನಿರ್ದೇಶನ ಹೆಚ್ಚು ಗಮನ ಸೆಳೆದಿದೆ ಎಂದು ವಿಐಎಸ್‌ಎಲ್ ಆಡಳಿತ ಮಂಡಳಿ ತಿಳಿಸಿದೆ.

ಆರೋಗ್ಯವಂತ, ಸದೃಢ ಮಕ್ಕಳ ಬೆಳವಣಿಗೆಗೆ ಪೋಷಣ್ ಅಭಿಯಾನ ಸಹಕಾರಿ : ಸುರೇಶ್

ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಭದ್ರಾವತಿ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ವಿನಾಯಕ ಸೇವಾ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ವಿ. ಕದಿರೇಶ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ, ಸೆ. ೩೦: ಮಗು ಜನಿಸುವ ಆರಂಭಕ್ಕೂ ಮೊದಲೇ ಗರ್ಭಿಣಿ ತಾಯಿ ಹಾಗು ಮಗುವಿನ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದ್ದು, ಇದರಿಂದಾಗಿ ಆರೋಗ್ಯವಂತ ಹಾಗು ಸದೃಢವಾದ ಮಕ್ಕಳ ಬೆಳವಣಿಗೆ ಸಾಧ್ಯವಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್ ತಿಳಿಸಿದರು.
          ಅವರು ಬುಧವಾರ ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ವಿನಾಯಕ ಸೇವಾ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ಮಾತನಾಡಿದರು.
       ಪ್ರತಿ ವರ್ಷ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಪೋಷಣ್ ಅಭಿಯಾನ ಕೈಗೊಳ್ಳುವ ಮೂಲಕ ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ಆರೋಗ್ಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಪೌಷ್ಠಿಕತೆ ಎದುರಾಗದಂತೆ ಎಚ್ಚರ ವಹಿಸುವುದು ಈ ಅಭಿಯಾನದ ಗುರಿಯಾಗಿದೆ. ಈ ಬಾರಿ ೪ ಉದ್ದೇಶಗಳೊಂದಿಗೆ  ಸರ್ಕಾರದ ಇತರೆ ಇಲಾಖೆಗಳ, ಸ್ಥಳೀಯ ಸಂಸ್ಥೆಗಳ ಹಾಗು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಅಭಿಯಾನ ಯಶಸ್ವಿಗೆ ಇಲಾಖೆ ಮುಂದಾಗಿದೆ ಎಂದರು.
      ತಾಲೂಕಿನಾದ್ಯಂತ ಸುಮಾರು ೨೬೦ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಲ್ಲಿ ಈ ಬಾರಿ ಪೌಷ್ಠಿಕಾಂಶ ನೀಡುವ ಸಸಿಗಳನ್ನು ನೆಡುವ ಮೂಲಕ ಭವಿಷ್ಯದಲ್ಲಿ ಆ ಸಸಿಗಳು ಬೆಳವಣಿಗೆ ಹೊಂದಿ ಮಹಿಳೆಯರು ಮತ್ತು ಮಕ್ಕಳ ನೆರವಿಗೆ ಬರುವಂತಾಗಬೇಕೆಂಬ ಉದ್ದೇಶ ಹೊಂದಲಾಗಿದೆ. ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಠಿಕತೆ ಎದುರಾಗದಂತೆ ಅಂಗನವಾಡಿ ಕೇಂದ್ರಗಳಲ್ಲಿಯೇ ಪೌಷ್ಠಿಕ ಆಹಾರಗಳನ್ನು ಸಿದ್ದಪಡಿಸುವ ತರಬೇತಿ ಸಹ ನೀಡಲಾಗುತ್ತಿದೆ. ಅಲ್ಲದೆ ಪೌಷ್ಠಿಕ ಆಹಾರ ಪದಾರ್ಥಗಳನ್ನು ಗರ್ಭಿಣಿ ಹಾಗು ಬಾಣಂತಿ ಮಹಿಳೆಯರಿಗೆ ಇಲಾಖೆ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಈ ಯೋಜನೆ ಯಶಸ್ವಿಗೊಳಿಸಲು ಸಹಕರಿಯಾಗುವಂತೆ ಮೊಬೈಲ್‌ಗಳನ್ನು ಸಹ ನೀಡಲಾಗಿದೆ. ಈ ಅಭಿಯಾನಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದ್ದು, ಆಗ ಮಾತ್ರ ಯಶಸ್ವಿಯಾಗಲಿದೆ ಎಂದರು.


ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಭದ್ರಾವತಿ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ವಿನಾಯಕ ಸೇವಾ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಮಕ್ಕಳಿಂದಲೇ ಅಭಿಯಾನ ಕುರಿತು ಹೆಚ್ಚಿನ ಮಾಹಿತಿ ಹಾಗು ಜಾಗೃತಿ ಮೂಡಿಸಲಾಯಿತು.
       ತಾಲೂಕು ಪಂಚಾಯಿತಿ ಹಿರಿಯ ಸದಸ್ಯ ಧರ್ಮೇಗೌಡ ಮಾತನಾಡಿ, ಪ್ರಸ್ತುತ ಹಮ್ಮಿಕೊಂಡಿರುವ ಅಭಿಯಾನ ಮಹತ್ವಪೂರ್ಣವಾಗಿದೆ. ದೇಶದ ಭವಿಷ್ಯದ ಸದೃಢ ಪ್ರಜೆಯನ್ನು ರೂಪಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಮಹಿಳೆಯರ ಮತ್ತು ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದು ಪ್ರಸ್ತುತ ಉತ್ತಮ ಬೆಳವಣಿಗೆಯಾಗಿದೆ ಎಂದರು.    
          ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣೆಶೇಖರ್, ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ. ಕದಿರೇಶ್, ತಾ.ಪಂ. ಸದಸ್ಯ ಕೆ. ಮಂಜುನಾಥ್, ನಗರಸಭಾ ಸದಸ್ಯರಾದ ಬದರಿನಾರಾಯಣ, ಮಣಿ ಎ.ಎನ್.ಎಸ್, ರೇಣುಕಾ ಸುದೀಪ್‌ಕುಮಾರ್, ಸಹಾಯಕ ಶಿಶು ಅಬಿವೃದ್ಧಿ ಯೋಜನಾಧಿಕಾರಿ ಸಾವಿತ್ರಿ  ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳಿಂದಲೇ  ಅಭಿಯಾನ ಕುರಿತು ಹೆಚ್ಚಿನ ಮಾಹಿತಿ ಹಾಗು ಜಾಗೃತಿ ಮೂಡಿಸಲಾಯಿತು.
ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Tuesday, September 29, 2020

ತುಂಗಾಬಾಯಿ ನಿಧನ

ತುಂಗಾಬಾಯಿ
ಭದ್ರಾವತಿ ಸೆ. ೨೯: ನಗರದ ಹೊಸಮನೆ ನಿವಾಸಿ  ತುಂಗಾಬಾಯಿ(೭೦) ಮಂಗಳವಾರ ಅನಾರೋಗ್ಯದಿಂದ ನಿಧನ ಹೊಂದಿದರು.
         ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. ಮೃತರು ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.