Saturday, October 3, 2020

ಗೊಂದಿ ಚಾನಲ್‌ನಲ್ಲಿ ಈಜಲು ಹೋದ ಇಬ್ಬರು ಯುವಕರು ನೀರು ಪಾಲು

ತುರ್ತು ಕಾರ್ಯಾಚರಣೆಯಲ್ಲಿ ಓರ್ವನ ರಕ್ಷಣೆ

ಶನಿವಾರ ಮಧ್ಯಾಹ್ನ ಭದ್ರಾವತಿ ದೊಡ್ಡಗೊಪ್ಪೇನಹಳ್ಳಿ ಬಳಿ ಗೊಂದಿ ಚಾನಲ್‌ನಲ್ಲಿ ಈಜಲು ಹೋಗಿ ಇಬ್ಬರು ಯುವಕರ ಮೃತಪಟ್ಟಿರುವುದು.  
ಭದ್ರಾವತಿ, ಅ. ೩: ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ದೊಡ್ಡಗೊಪ್ಪೇನಹಳ್ಳಿ ಬಳಿ ಗೊಂದಿ ಚಾನಲ್‌ನಲ್ಲಿ ನಡೆದಿದೆ.
      ಜನ್ನಾಪುರದ ನಿವಾಸಿಗಳಾದ ರಾಜೇಶ್(೩೮) ಮತ್ತು ಮನೋಜ್(೧೭) ಎಂಬುವರು ಸಾವನ್ನಪ್ಪಿದ್ದು, ಓರ್ವನನ್ನು ರಕ್ಷಿಸಲಾಗಿದೆ. ಒಟ್ಟು ೯ ಜನರು ಚಾನಲ್‌ನ ಆಂಜನೇಯ ಬಂಡೆ ಬಳಿ ಈಜಲು ತೆರಳಿದ್ದು, ಈ ಪೈಕಿ ಈ ಇಬ್ಬರು ನೀರಿನ ಸುಳಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ತುರ್ತು ಕಾರ್ಯಾಚರಣೆ ನಡೆಸಿ ಕಾರ್ತಿಕ್(೧೩) ಎಂಬ ಬಾಲಕನನ್ನು ರಕ್ಷಿಸಲಾಗಿದೆ.
       ಘಟನಾ ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಕಾಗದನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಭಾಗದಲ್ಲಿ ಈ ಹಿಂದೆ ಸಹ ಈ ರೀತಿಯ ಘಟನೆಗಳು ನಡೆದಿವೆ ಎನ್ನಲಾಗಿದೆ.

ಅ.೪ರಂದು ಪಟೇಲ್ ಜನ್ಮದಿನ

ಜೆ.ಎಚ್ ಪಟೇಲ್
ಭದ್ರಾವತಿ, ಅ. ೩: ಜೆ.ಎಚ್ ಪಟೇಲ್ ಅಭಿಮಾನಿ ಬಳಗದ ವತಿಯಿಂದ ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲ್‌ರವರ ೯೦ನೇ ವರ್ಷದ ಜನ್ಮ ದಿನ ಅ. ೪ರಂದು ಬೆಳಿಗ್ಗೆ ೧೧ ಗಂಟೆಗೆ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
       ನಿರಂಜನ ದೇಶಿ ಕೇಂದ್ರ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದು, ತ್ರಿಶೂಲ್ ಪಾಣಿ ಪಟೇಲ್ ಉಪಸ್ಥಿತರಿರುವರು. ಕಾರಿಗನೂರು ಜಿ.ಪಂ. ಸದಸ್ಯ, ರೈತ ಮುಖಂಡ ತೇಜಸ್ವಿ ವಿ. ಪಟೇಲ್ ಅಧ್ಯಕ್ಷತೆ ವಹಿಸಲಿದ್ದು, ಶಿರಸ್ತೇದಾರ್ ಮಂಜಾನಾಯ್ಕ, ನಗರಸಭೆ ಪೌರಾಯುಕ್ತ ಮನೋಹರ್, ನ್ಯೂಟೌನ್ ಠಾಣಾಧಿಕಾರಿ ಮೋಹನ್‌ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ನಗರಸಭಾ ಸದಸ್ಯ ಎಂ.ಎ ಅಜಿತ್, ಕೆ.ವಿ ಶಿವರಾಮ್, ಸುಮನ್ ದಯಾಳನ್, ಕಲಾವತಿ, ದಿವ್ಯಶ್ರೀ, ಎಸ್. ಉಮೇಶ್, ರವಿ ಕಿಶನ್, ಜಮಾನುಲ್ಲಾಖಾನ್, ಸತೀಶ್‌ಪಟೇಲ್, ಗಂಗಾಧರ್, ಶಿವಕುಮಾರ್, ಕೆ. ಪ್ರಸಾದ್, ಸಿದ್ದಲಿಂಗಯ್ಯ, ಎಂ.ಎಸ್ ಜನಾರ್ಧನ ಅಯ್ಯಂಗಾರ್, ಕೆ.ಎಸ್ ಸತ್ಯನಾರಾಯಣ, ನಲ್ಲೂರು ಉಸ್ಮಾನ್ ಷರೀಫ್, ಬಿ.ಎನ್ ರಾಜು ಮತ್ತು ಬಿ.ವಿ ಗಿರೀಶ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
      ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜೆಡಿಯು ಪಕ್ಷದ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ  ಹಾಗು ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್‌ಕುಮಾರ್ ಕೋರಿದ್ದಾರೆ.

ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಪ್ರತಿಭಟನೆ : ಮನವಿ

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗು ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗು ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶನಿವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಅ. ೩: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗು ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗು ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶನಿವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
       ಹಲವಾರು ವರ್ಷಗಳಿಂದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರೂ ಸಹ ಇದುವರೆಗೂ ಯಾವುದೇ ಬೇಡಿಕೆ ಈಡೇರಿಲ್ಲ. ಇದರಿಂದಾಗಿ ನೌಕರರು ಸಂಕಷ್ಟಕ್ಕೆ ಒಳಗಾಗಿದ್ದು, ಹೋರಾಟ ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಸೆ.೨೪ರಿಂದ ನಿರಂತರವಾಗಿ ಹಂತ ಹಂತವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರೆಸಲಾಗುವುದು. ತಕ್ಷಣ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
       ಪ್ರಮುಖರಾದ ಡಾ. ದತ್ತಾತ್ರೇಯ, ಡಾ. ಕಿರಣ್, ಡಾ. ವರ್ಷ, ನೇತ್ರಾವತಿ, ಗ್ರೇಷಿಯಾ, ವಸಂತ, ಆಶಾ ಮೆಂಟರ್, ಸಚಿನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Friday, October 2, 2020

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ೫೦೦ ರು. ದಂಡ

ಎಲ್ಲಿಬೇಕೆಂದರಲ್ಲಿ ಕಸ ಹಾಕುವಂತಿಲ್ಲ, ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ

ಭದ್ರಾವತಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ನಗರಸಭೆ ಸಿಬ್ಬಂದಿಗಳು ದಂಡ ವಿಧಿಸುತ್ತಿರುವುದು.
ಭದ್ರಾವತಿ, ಅ. ೨: ನಗರಸಭೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಬರುವವರಿಗೆ ಶನಿವಾರದಿಂದ ೫೦೦ ರು. ದಂಡ ವಿಧಿಸಲಾಗುವುದು ಎಂದು ಪೌರಾಯುಕ್ತ ಮನೋಹರ್ ತಿಳಿಸಿದ್ದಾರೆ.
        ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ೧೦೦ ರು. ದಂಡ ವಿಧಿಸಲಾಗುತ್ತಿದ್ದು, ಇದೀಗ ಹೊಸ ಸರ್ಕಾರಿ ಆದೇಶ ಬಂದಿದೆ. ಈ ಪ್ರಕಾರ ೫೦೦ ರು. ದಂಡ ವಿಧಿಸಲಾಗುವುದು. ಶುಕ್ರವಾರ ೧೦೦ ರು. ದಂಡ ವಿಧಿಸಲಾಗಿದ್ದು, ಒಟ್ಟು ೬,೭೦೦ ರು. ವಸೂಲಾತಿ ಮಾಡಲಾಗಿದೆ ಎಂದರು.
     ಉಳಿದಂತೆ ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಹೋಟೆಲ್, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಬಳಕೆ ಮಾಡುವುದು ಕಂಡು ಬಂದಲ್ಲಿ ನಗರಸಭೆ ಆಡಳಿತ ದಂಡ ವಿಧಿಸಲಿದೆ.
    ಇದೆ ರೀತಿ ಎಲ್ಲಿಬೇಕೆಂದರಲ್ಲಿ ಕಸ ಎಸೆಯುವುದನ್ನು ಸಹ ನಿಷೇಧಿಸಲಾಗಿದ್ದು, ಪ್ರತಿಯೊಬ್ಬರು ಕಸ ಎಸೆಯದೆ ಸಂಗ್ರಹಿಸಿಟ್ಟುಕೊಂಡು ನಗರಸಭೆ ವತಿಯಿಂದ ಕಸ ಸಂಗ್ರಹಕ್ಕೆ ನಿಯೋಜಿಸಿರುವ ಸಿಬ್ಬಂದಿಗಳಿಗೆ ನೀಡುವುದು. ಒಂದು ವೇಳೆ ಎಲ್ಲಿಬೇಕೆಂದರಲ್ಲಿ ಕಸ ಎಸೆಯುವುದು ಕಂಡು ಬಂದಲ್ಲಿ ದಂಡ ವಿಧಿಸಲಿದೆ.
     ನಗರಸಭೆ ಪರಿಸರ ಅಭಿಯಂತರ ರಕ್ಷಿತ್ ನೇತೃತ್ವದ ಹಿರಿಯ ಆರೋಗ್ಯ ನಿರೀಕ್ಷಕರಾದ ಆರ್.ಬಿ ಸತೀಶ್, ಆಶಾಲತಾ ಹಾಗು ಸೂಪರ್‌ವೈಸರ್ ಎನ್.ಗೋವಿಂದ ಸೇರಿದಂತೆ ಇನ್ನಿತರನ್ನೊಳಗೊಂಡ ತಂಡ ಈಗಾಗಲೇ ಈ ನಿಟ್ಟಿನಲ್ಲಿ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ.

ಚರಂಡಿ ಕಾಮಗಾರಿ ವ್ಯವಸ್ಥಿತವಾಗಿ ಕೈಗೊಳ್ಳುಲು ಒತ್ತಾಯಿಸಿ ಮನವಿ

ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೫ ಮತ್ತು ೭ರಲ್ಲಿ ಬಾಕ್ಸ್ ಮಾದರಿ ಚರಂಡಿ ಕಾಮಗಾರಿ ವ್ಯವಸ್ಥಿತವಾಗಿ ಕೈಗೊಳ್ಳುವಂತೆ ಒತ್ತಾಯಿಸಿ ಎಸ್‌ಡಿಪಿಐ ವತಿಯಿಂದ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಅ. ೨: ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ವತಿಯಿಂದ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. ೫ ಮತ್ತು ೭ರಲ್ಲಿ ಕೈಗೊಳ್ಳಲಾಗುತ್ತಿರುವ ಬಾಕ್ಸ್ ಮಾದರಿ ಚರಂಡಿ ನಿರ್ಮಾಣ ಕಾಮಗಾರಿ ವ್ಯವಸ್ಥಿತವಾಗಿ ಕೈಗೊಂಡಿಲ್ಲ. ಇದರಿಂದಾಗಿ  ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಗಿದೆ.
          ವಾರ್ಡ್ ನಂ.೭ರ ಖಲಂದರಿಯಾ ವ್ಯಾಪ್ತಿಯಲ್ಲಿ ಚರಂಡಿ ಕಾಮಗಾರಿ ಸರಿಯಾಗಿ ಕೈಗೊಳ್ಳದ ಕಾರಣ ಕಲ್ಮಶಗೊಂಡ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ದುರ್ವಾಸನೆಯಿಂದಾಗಿ ಸ್ಥಳೀಯ ನಿವಾಸಿಗಳು, ರಸ್ತೆಯಲ್ಲಿ ಸಂಚರಿಸುವವರು ತೊಂದರೆ ಅನುಭವಿಸುವಂತಾಗಿದೆ.   
       ವಾರ್ಡ್ ನಂ.೫ರ ಖಾಜಿ ಮೊಹಲ್ಲಾದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಇಂಜಿನಿಯರ್ ಶ್ರೇಯಸ್‌ರವರು ಕಾಮಗಾರಿ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆದರೆ ಕಾಮಗಾರಿ ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ. ಇದನ್ನು ಪ್ರಶ್ನಿಸಲು ಮುಂದಾದರೆ ಶ್ರೇಯಸ್‌ರವರು ಉಡಾಫೆಯಿಂದ ವರ್ತಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.

ಅ.೪ರಂದು ಮನೋಜ್ ದತ್ತಿ ಕಾರ್ಯಕ್ರಮ

ಭದ್ರಾವತಿ, ಅ. ೨: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅ.೪ರಂದು ಬೆಳಿಗ್ಗೆ ೧೦ ಗಂಟೆಗೆ ಎಸ್. ಶ್ರೀನಿವಾಸ್ ದತ್ತಿ ದಾನಿಗಳ ಸಹಕಾರದೊಂದಿಗೆ ಮನೋಜ್ ದತ್ತಿ ಕಾರ್ಯಕ್ರಮ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
        ಅಂಧ ಮಕ್ಕಳಿಂದ ಸುಗಮ ಸಂಗೀತ ಹಾಗು ಗಾನಗಾರುಡಿಗ ಡಾ. ಎಸ್.ಪಿ ಬಾಲಸುಬ್ರಮಣ್ಯಂರವರಿಗೆ ನುಡಿ ನಮನ ನಡೆಯಲಿದ್ದು,  ಉದ್ಯಮಿ ಎನ್ ಪ್ರಕಾಶ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 
        ಕಸಾಪ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದು,  ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಆಡಳಿತಾಧಿಕಾರಿ ಶಾರದ ಶಿವಬಸಪ್ಪ, ಕಸಾಪ ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿ, ಕಾರ್ಯದರ್ಶಿಗಳಾದ ಚನ್ನಪ್ಪ, ವೈ.ಕೆ ಹನುಮಂತಯ್ಯ ಹಾಗು ಸಂಚಾಲಕ ಚಂದ್ರಶೇಖರಪ್ಪ ಚಕ್ರಸಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.  

ವಿಐಎಸ್‌ಎಲ್ ಸೇರಿದಂತೆ ಹಲವೆಡೆ ಮಹಾತ್ಮಗಾಂಧಿ, ಲಾಲ್‌ಬಹದ್ದೂರ್ ಶಾಸ್ತ್ರಿ ಜನ್ಮದಿನ

ಭಾರತೀಯ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ನ್ಯೂಟೌನ್ ಶಾರದ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಪಿತ ಮಹಾತ್ಮಗಾಂಧಿಯವರ ೧೫೧ನೇ ಜನ್ಮದಿನ ಕಾರ್ಯಕ್ರಮವನ್ನು ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆ.ಎಲ್ ಶ್ರೀನಿವಾಸ್ ರಾವ್ ಉದ್ಘಾಟಿಸಿದರು.
ಭದ್ರಾವತಿ, ಅ. ೨: ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸೇರಿದಂತೆ ಹಲವೆಡೆ ಮಹಾತ್ಮ ಗಾಂಧಿ ಜಯಂತಿ ಆಚರಿಸಲಾಯಿತು.
         ನ್ಯೂಟೌನ್ ಶಾರದ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಕೆ.ಎಲ್ ಶ್ರೀನಿವಾಸ್ ರಾವ್ ಉದ್ಘಾಟಿಸಿದರು. ಆಡಳಿತ ಮತ್ತು ಸಿಬ್ಬಂದಿ ವಿಭಾಗದ ಪ್ರಭಾರಿ ಮಹಾಪ್ರಬಂಧಕ ಪಿ.ಪಿ ಚಕ್ರಬರ್ತಿ, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಅಧಿಕಾರಿಗಳ ಸಂಘದ ಅಧ್ಯಕ್ಷ ಎ.ಆರ್ ವೀರಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
        ಗಮನ ಸೆಳೆದ ಕಿರು ನಾಟಕ:
       ಕೊರೋನಾ ಯೋಧರಿಗೆ ಗೌರವ ನಮನ ಮತ್ತು ಸ್ವಚ್ಛ ಭಾರತ-ಸ್ವಾಸ್ಥ್ಯಾ ಭಾರತ ಕಿರು ನಾಟಕ ಹೆಚ್ಚು ಗಮನ ಸೆಳೆಯಿತು. ಕಲಾವಿದರಾದ ಬಿ.ಎಸ್. ವಸಂತ್, ಪಿ.ವಿ ರಾಘವೇಂದ್ರ, ಸೀತಾರಾಮ, ಕೆ.ಎನ್ ಮಂಜುನಾಥ್, ಭಾನುಪ್ರಕಾಶ್, ಬಿ. ಕುಶಾಲ, ಬಿ. ಸೃಜನ, ಗಿರಿಜ, ತ್ರಿವೇಣಿ ಮತ್ತು ಭಾನುಪ್ರಕಾಶ್ ಬಾಬುರವರ ಅಭಿನಯ ಮೆಚ್ಚುಗೆಗೆ ಪಾತ್ರವಾಯಿತು.
       ಮಹಾತ್ಮಗಾಂಧಿ ಕುರಿತ ಪ್ರೇಕ್ಷಕರ ರಸಪ್ರಶ್ನೆ ಕಾರ್ಯಕ್ರಮವನ್ನು ಕ್ವಿಜ್ ಮಾಸ್ಟರ್‌ಗಳಾದ ನಾಗೇಶ್ ಮತ್ತು ರಾಘವೇಂದ್ರ ನಡೆಸಿಕೊಟ್ಟರು. ಹಾಡುಗಾರಿಕೆ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
       ಆರಂಭದಲ್ಲಿ ನಾಗರಾಜ್-ಭಗವದ್ಗೀತೆ, ನೂರಾ ಮೆನೆಜಸ್-ಬೈಬಲ್ ಮತ್ತು ಹಫೀಜ್ ಉರ್ ರಹಮಾನ್-ಕುರಾನ್ ಪವಿತ್ರ  ಗ್ರಂಥಗಳ ಆಯ್ದ ಸಾಲುಗಳನ್ನು ಪಠಿಸಿದರು.
      ವೈದ್ಯಕೀಯ ವಿಭಾಗದ ಜಂಟಿ ನಿರ್ದೇಶಕಿ ಡಾ.ಕೆ.ಎಸ್ ಕವಿತ ನಿರೂಪಿಸಿದರು. ವಿವಿಧ ವಿಭಾಗಗಳ ಅಧಿಕಾರಿಗಳು, ಕಾರ್ಮಿಕ ಹಾಗು ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ನಗರಾಡಳಿತ ಹಾಗು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.


ರಾಷ್ಟ್ರಪಿತ ಮಹಾತ್ಮಗಾಂಧಿಯವರ ೧೫೧ನೇ ಹಾಗು ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿಯವರ ೧೧೬ನೇ ಜನ್ಮದಿನ ಅಂಗವಾಗಿ ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಸಾರ್ವಜನಿಕರಿಗೆ ಕೊರೋನಾ ಸೋಂಕು ಹರಡದಂತೆ ಜಾಗೃತಿ ಹಾಗು ಉಚಿತ ಮಾಸ್ಕ್ ವಿತರಿಸಲಾಯಿತು.
         ಕೊರೋನಾ ಸೋಂಕು ಕುರಿತು ಜಾಗೃತಿ, ಮಾಸ್ಕ್ ವಿತರಣೆ:
      ರಾಷ್ಟ್ರಪಿತ ಮಹಾತ್ಮಗಾಂಧಿಯವರ ೧೫೧ನೇ ಹಾಗು ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿಯವರ ೧೧೬ನೇ ಜನ್ಮದಿನ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು.
       ಕಾಲೇಜಿನ ಯುವ ರೆಡ್ ಕ್ರಾಸ್, ರೋವರ್ಸ್ ಮತ್ತು ರೆಂಜರ್ಸ್  ಘಟಕದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರಲ್ಲಿ ಕೊರೋನಾ ಸೋಂಕು ಹರಡದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಫಲಕಗಳನ್ನು ಪ್ರದರ್ಶಿಸಿ ಜಾಥಾ ನಡೆಸಲಾಯಿತು. ಅಲ್ಲದೆ ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸಲಾಯಿತು.
      ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ, ಯುವ ರೇಡ್ ಕ್ರಾಸ್ ಸಂಚಾಲಕ ಹಾಗೂ ದೈಹಿಕ ಶಿಕ್ಷಣ ಬೋಧಕ ಎಂ.ಡಿ ವಿಶ್ವನಾಥ, ಪ್ರೊ. ಮಲ್ಲಪ್ಪ ಎಂ, ಡಾ. ಬಿ ಜಿ ಅಮೃತೇಶ್ವರ್ ಹಾಗು ಕಾಲೇಜಿನ ರೋವರ್ಸ್, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ನ್ಯೂಟೌನ್‌ನಲ್ಲಿರುವ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿಯವರ ೧೫೧ನೇ ಹಾಗು ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿಯವರ ೧೧೬ನೇ ಜನ್ಮದಿನ ಸರಳವಾಗಿ ಆಚರಿಸಲಾಯಿತು.
          ವಿಐಎಸ್‌ಎಲ್ ನಿವೃತ್ತ ಕಾರ್ಮಿಕರಿಂದ ಮಹಾತ್ಮಗಾಂಧಿ ಜಯಂತಿ:
      ನ್ಯೂಟೌನ್‌ನಲ್ಲಿರುವ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿಯವರ ೧೫೧ನೇ ಹಾಗು ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿಯವರ ೧೧೬ನೇ ಜನ್ಮದಿನ ಸರಳವಾಗಿ ಆಚರಿಸಲಾಯಿತು.
ಹನುಮಂತರಾವ್, ನರಸಿಂಹಯ್ಯ, ಶಂಕರ್, ಕೆಂಪಯ್ಯ, ನರಸಿಂಹಚಾರ್, ಬಸವರಾಜ್, ರವೀಂದ್ರರೆಡ್ಡಿ, ನಂಜಪ್ಪ, ವೀರಭದ್ರಪ್ಪ, ಲಾಜರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ತಾಲೂಕು ಕಚೇರಿ ಸಮೀಪದಲ್ಲಿರುವ ಆಮ್ ಆದ್ಮಿ ಪಾರ್ಟಿ ವತಿಯಿಂದ ರಾಷ್ಟ್ರಪಿತ ಮಹಾತ್ಮಗಾಂಧಿಯವರ ೧೫೧ನೇ ಜನ್ಮದಿನ ಸರಳವಾಗಿ ಆಚರಿಸಲಾಯಿತು.
        ಆಮ್ ಆದ್ಮಿ ಪಾರ್ಟಿಯಿಂದ ಗಾಂಧಿ ಜಯಂತಿ:
     ನಗರದ ತಾಲೂಕು ಕಚೇರಿ ಸಮೀಪದಲ್ಲಿರುವ ಆಮ್ ಆದ್ಮಿ ಪಾರ್ಟಿ ವತಿಯಿಂದ ರಾಷ್ಟ್ರಪಿತ ಮಹಾತ್ಮಗಾಂಧಿಯವರ ೧೫೧ನೇ ಜನ್ಮದಿನ ಸರಳವಾಗಿ ಆಚರಿಸಲಾಯಿತು.
      ಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಲಾಯಿತು. ಪಕ್ಷದ ಪ್ರಮುಖರು ಮಾತನಾಡಿ, ಇತ್ತೀಚಿನ ಕೆಲವು ವರ್ಷಗಳಿಂದ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ, ಧೋರಣೆಗಳನ್ನು ಖಂಡಿಸಲಾಯಿತು. ಪ್ರಮುಖರಾದ ಪರಮೇಶ್ವರಚಾರ್, ಎಚ್. ರವಿಕುಮಾರ್, ಜಾವೇದ್, ಟಿ.ವಿ ಜೋಸೆಫ್, ವಿಲ್ಸನ್, ವಿನೋದ್, ಮುಳ್ಕೆರೆ ಲೋಕೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.