ಆರ್‌ಟಿಸಿಯಲ್ಲಿ ಅರಣ್ಯ ಭೂಮಿ ನಮೂದು, ಗ್ರಾಮಸ್ಥರಲ್ಲಿ ಆತಂಕ
![](https://blogger.googleusercontent.com/img/b/R29vZ2xl/AVvXsEgJPJowUHJwmjWSTBZ3XorDDeXUx7Kpm6g1oAxQu1zS-N6GXNakHE6-Ac4gLa8MrzneKPKr1ZkyZ_uYLEpytcVduP5MVeDMHEXxoAHqSN06T1bR4zzgs1hVNdCFL0_QcFqYGqsjNknSaIVd/w400-h185-rw/D6-BDVT-710197.jpg)
ಸಾಗುವಳಿ ಚೀಟಿ ಹಾಗು ಖಾತೆ ಪಹಣಿ ನೀಡಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅನುಕೂಲ ಕಲ್ಪಿಸಿಕೊಡಬೇಕೆಂದು ಭದ್ರಾವತಿ ತಾಲೂಕಿನ ದಾನವಾಡಿ ಮತ್ತು ಕೋಡಿ ಹೊಸೂರು ಗ್ರಾಮಸ್ಥರು ಮಂಗಳವಾರ ತಹಸೀಲ್ದಾರ್‌ಗೆ ಮನವಿ ಮಾಡಿದರು.
ಭದ್ರಾವತಿ, ಅ. ೬: ಸಾಗುವಳಿ ಚೀಟಿ ಹಾಗು ಖಾತೆ ಪಹಣಿ ನೀಡಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅನುಕೂಲ ಕಲ್ಪಿಸಿಕೊಡಬೇಕೆಂದು ತಾಲೂಕಿನ ದಾನವಾಡಿ ಗ್ರಾಮಸ್ಥರು ಮಂಗಳವಾರ ತಹಸೀಲ್ದಾರ್‌ಗೆ ಮನವಿ ಮಾಡಿದ್ದಾರೆ.
ಹೊಳೆಹೊನ್ನೂರು ಹೋಬಳಿ, ಅರಕೆರೆ ಅಂಚೆ, ದಾನವಾಡಿ ಗ್ರಾಮದ ಸರ್ವೆ ನಂ. ೩೩ರಲ್ಲಿ ಒಟ್ಟು ೪೬೯ ಎಕರೆ ಗೋಮಾಳ ಜಮೀನು ಇದ್ದು, ೨೦೧೨-೧೩ನೇ ಸಾಲಿನಲ್ಲಿ ಅರಣ್ಯ ಎಂದು ಗಣಕೀಕೃತ ಆರ್‌ಟಿಸಿ ದಾಖಲೆಯಲ್ಲಿ ತಪ್ಪಾಗಿ ನಮೂದಾಗಿದೆ.
ಈ ಜಮೀನಿನಲ್ಲಿ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಕುಟುಂಬದ ರೈತರು ಸುಮಾರು ೬೦-೭೦ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಜೀವನ ಸಾಗುತ್ತಿದ್ದಾರೆ. ಒಟ್ಟು ೯೦ ರಿಂದ ೯೫ ಕುಟುಂಬಗಳು ವಾಸಿಸುತ್ತಿದ್ದು, ಇದುವರೆಗೂ ಯಾವುದೇ ದಾಖಲೆಗಳನ್ನು ನೀಡಿರುವುದಿಲ್ಲ. ರೈತರು ಹಲವಾರು ಬಾರಿ ತಾಲೂಕು ಕಛೇರಿಗೆ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ೨೦೧೨-೧೩ರವರೆಗೆ ಜಮೀನಿನ ಆರ್‌ಟಿಸಿ ದಾಖಲೆಯಲ್ಲಿ ಗೋಮಾಳ ಜಮೀನು ಎಂದು ನಮೂದಾಗಿರುತ್ತದೆ. ನಂತರ ಯಾವುದೇ ದಾಖಲಾತಿ ಇಲ್ಲದೆ ಅರಣ್ಯ ಇಲಾಖೆ ಜಮೀನು ಎಂದು ತಪ್ಪಾಗಿ ನಮೂದಿಸಲಾಗಿರುತ್ತದೆ.
ತಕ್ಷಣ ಆರ್‌ಟಿಸಿ ದಾಖಲೆಯಲ್ಲಿ ನಮೂದಾಗಿರುವ ತಪ್ಪನ್ನು ಸರಿಪಡಿಸಿಕೊಂಡು ರೈತರಿಗೆ ೫೦, ೫೩ ಮತ್ತು ೫೭ ಅಡಿಯಲ್ಲಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಪರಿಗಣಿಸಿ ಸಾಗುವಳಿ ಚೀಟಿ ಹಾಗು ಖಾತೆ ಪಹಣಿಯನ್ನು ನೀಡುವ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದೆ ರೀತಿ ಹೊಳೆಹೊನ್ನೂರು ಹೋಬಳಿ, ಅರಕೆರೆ ಅಂಚೆ, ಕೋಡಿ ಹೊಸೂರು ಗ್ರಾಮದ ಗ್ರಾಮಸ್ಥರು ಸಹ ಮನವಿ ಸಲ್ಲಿಸಿದ್ದು, ಸರ್ವೆ ನಂ. ೧೨ ಮತ್ತು ೨೨ರಲ್ಲಿ ಒಟ್ಟು ೨೩ ಎಕರೆ ೨೬ ಗುಂಟೆ ಹಾಗು ಸರ್ವೆ ನಂ. ೨೨ರಲ್ಲಿ ೧೪೫ ಎಕರೆ ೨೮ ಗುಂಟೆ ಗೋಮಾಳ ಮತ್ತು ದನಗಳ ಮುಫತ್ತು ಜಮೀನು ಇದ್ದು, ೧೯೮೪-೮೫ರ ನಂತರ ಈ ಎರಡು ಜಮೀನು ಸಹ ದಾನವಾಡಿ ಮೈನರ್ ಫಾರೆಸ್ಟ್ ಎಂದು ಆರ್‌ಟಿಸಿ ದಾಖಲೆಯಲ್ಲಿ ತಪ್ಪಾಗಿ ನಮೂದಾಗಿರುತ್ತದೆ. ಈ ಹಿನ್ನಲೆಯಲ್ಲಿ ಎರಡು ಜಮೀನುಗಳಲ್ಲಿ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವವರಿಗೆ ತಕ್ಷಣ ಸಾಗುವಳಿ ಚೀಟಿ ಹಾಗು ಖಾತೆ ಪಹಣಿ ನೀಡಿ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಅನುಕೂಲ ಕಲ್ಪಿಸಿಕೊಡುವಂತೆ ಮನವಿ ಮಾಡಲಾಗಿದೆ.
ಮನವಿಯನ್ನು ಶಿರಸ್ತೇದಾರ್ ಮಲ್ಲಿಕಾರ್ಜುನಯ್ಯ ಸ್ವೀಕರಿಸಿದರು. ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಕರ್ನಾಟಕ ಜನ ಸೈನ್ಯ ಅಧ್ಯಕ್ಷ ಕೆ. ಮಂಜುನಾಥ್, ಗ್ರಾಮಸ್ಥರಾದ ನಾಗಪ್ಪ, ಕೃಷ್ಣಪ್ಪ, ಬಸಪ್ಪ, ಎಂ. ಚಂದ್ರಪ್ಪ, ಎಚ್. ಬಸ ವರಾಜ, ಚಂದ್ರಮ್ಮ, ಶೋಭ, ಜಯಮ್ಮ, ರವಿ, ರತ್ನಮ್ಮ, ನಂಜಮ್ಮ, ನರಸಿಂಹಪ್ಪ, ಕಮಲಮ್ಮ, ಜಯಮ್ಮ, ಬಿ.ಆರ್ ಬಸವರಾಜಪ್ಪ, ಟಿ.ಎಲ್ ಶೇಖರಪ್ಪ, ದೇವಮ್ಮ, ಶಾಂತಮ್ಮ, ಎಸ್.ಎಂ ನಾಗರಾಜಪ್ಪ, ಕರಿಯಮ್ಮ, ರತ್ನಾಬಾಯಿ, ಆರ್. ರವಿಚಂದ್ರ, ಶರಣಪ್ಪ, ಎಂ. ಚಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.