ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಾಡಹಬ್ಬ ದಸರಾ ಅಂಗವಾಗಿ ಆಯೋಜಿಸಲಾಗಿದ್ದ ಸಭೆಯಲ್ಲಿ ಪೌರಾಯುಕ್ತ ಮನೋಹರ್ ಮಾತನಾಡಿದರು.
ಭದ್ರಾವತಿ: ವಿಶ್ವದಾದ್ಯಂತ ಕೋವಿಡ್-೧೯ ವ್ಯಾಪಿಸುವ ಮೂಲಕ ಶ್ರೀಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದ್ದು, ಈ ನಡುವೆ ಎಲ್ಲಾ ಸಂಕಷ್ಟಗಳಿಂದ ನಮ್ಮನ್ನು ದೂರ ಮಾಡುವಂತಾಗಲಿ ಎಂಬ ಆಶಯದೊಂದಿಗೆ ಈ ಬಾರಿ ನಗರಸಭೆ ಆಡಳಿತದಿಂದ ಅತ್ಯಂತ ಸರಳವಾಗಿ ೯ ದಿನಗಳ ಕಾಲ ನಾಡಹಬ್ಬ ದಸರಾ ಆಚರಿಸಲಾಗುತ್ತಿದೆ ಎಂದು ಪೌರಾಯುಕ್ತ ಮನೋಹರ್ ತಿಳಿಸಿದರು.
ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಪೌರಾಯುಕ್ತರು ಈ ಬಾರಿ ನಾಡಹಬ್ಬವನ್ನು ಜನ ಜಾಗೃತಿ ಹಬ್ಬವಾಗಿ ಆಚರಿಸಲಿದ್ದು, ಇದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲಾಗಿದೆ. ಅ.೧೭ರಂದು ಬೆಳಿಗ್ಗೆ ೧೦.೩೦ಕ್ಕೆ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಸ್ಥಾನದ ಪ್ರಾಂಗಣದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು. ಅ.೧೮ರಂದು ಬೆಳಿಗ್ಗೆ ೧೦ ಗಂಟೆಗೆ ಕೊರೋನಾ ಜಾಗೃತಿ ನಡಿಗೆ ಆಯೋಜಿಸಲಾಗಿದ್ದು, ಅ.೧೯ರಂದು ಸಂಜೆ ೪ ಗಂಟೆಗೆ ಕೊರೋನಾ ಬಾಧಕ ಕುರಿತ ಅನುಭವ, ಅನಿಸಿಕೆ, ಅಭಿಪ್ರಾಯಗಳನ್ನೊಳಗೊಂಡ ಕವನಗಳನ್ನು ಸ್ಥಳದಲ್ಲಿಯೇ ಸ್ವರಚಿಸಿ ವಾಚನ ಮಾಡುವ ಸ್ಪರ್ಧೆ ನಡೆಯಲಿದೆ. ಪ್ರಥಮ ೩ ಮಂದಿಗೆ ಬಹುಮಾನಗಳನ್ನು ನೀಡಲಿದ್ದು, ಗರಿಷ್ಠ ೧೦೦ ಮಂದಿ ಮಾತ್ರ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗು ಹೆಸರು ನೋಂದಾಯಿಸಲು ಈಶ್ವರಪ್ಪ, ಮೊ: ೯೮೮೦೧೯೦೪೪೧ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು.
ಅ.೨೦ರಂದು ಬೆಳಿಗ್ಗೆ ೧೧ ಗಂಟೆಗೆ ರಂಗೋಲಿ ಮೂಲಕ ಜನಾರೋಗ್ಯ ಸಂದೇಶ ಸಾರುವ ನಿಟ್ಟಿನಲ್ಲಿ 'ದಸರೆಯ ಸ್ವಚ್ಛ ಸುಂದರ ರಂಗೋಲಿ' ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಗರಿಷ್ಠ ೫೦ ಮಂದಿ ಮಾತ್ರ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗು ಹಿಸರು ನೋಂದಾಯಿಸಲು ಶಾಂತಕುಮಾರಿ, ಮೊ: ೯೫೩೫೩೨೬೨೮೪ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು.
ಅ.೨೧ರಂದು ಬೆಳಿಗ್ಗೆ ೧೧ ಗಂಟೆಗೆ ಜನಾರೋಗ್ಯ ಕಾಡುವಂತಹ ಆಹಾರ ತಯಾರಿಕೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 'ಅಡುಗೆ-ಆರೋಗ್ಯ' ಸ್ಪರ್ಧೆಯನ್ನು ನ್ಯೂಟೌನ್ ಬಂಟರ ಭವನದಲ್ಲಿ ಆಯೋಜಿಸಲಾಗಿದ್ದು, ಗರಿಷ್ಠ ೫೦ ಮಂದಿ ಮಾತ್ರ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗು ಹೆಸರು ನೋಂದಾಯಿಸಲು ಸುವಾಸಿನಿ, ಮೊ: ೯೪೮೧೦೬೩೩೯೨ ಸಂಖ್ಯೆಗೆ ಹಾಗು ಅ.೨೨ರಂದು ಮಧ್ಯಾಹ್ನ ೩ ಗಂಟೆಗೆ ಹಳೇನಗರದ ಬಲಿಜ ಸಮುದಾಯ ಭವನದಲ್ಲಿ ಕೊರೋನಾ ಜಾಗೃತಿ ಮೂಡಿಸುವ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಗರಿಷ್ಠ ೫೦ ಮಂದಿ ಮಾತ್ರ ಭಾಗವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿ ಹಾಗು ಹೆಸರು ನೋಂದಾಯಿಸಲು ನರಸಿಂಹಮೂರ್ತಿ, ಮೊ: ೯೪೪೯೧೨೪೮೮೮ ಕರೆ ಮಾಡಬಹುದಾಗಿದೆ ಎಂದರು.
![](https://blogger.googleusercontent.com/img/b/R29vZ2xl/AVvXsEgEWmcZMfg5niWWr6UnPrHjum4vSJXDlvOp1f4V3zwnTipiF4kmov9yKMIdbYME_ljOyg2ajqMSRrJjlHViwpvsvGruPd5vX9dhWBo-leyHrtVQA_5b0MB9CTKdCQ-KjUyixnmgFW3thE92/w400-h225-rw/2AP1TD2-b598c7937e0cb7c3ddb3d98f6d897d82.jpg)
ಅ.೨೩ರಂದು ಮಧ್ಯಾಹ್ನ ೩ ಗಂಟೆಗೆ ನ್ಯೂಟೌನ್ ಬಂಟರ ಭವನದಲ್ಲಿ ಭಾಷಣ ಸ್ಪರ್ಧೆ ಆಯೋಜಿಸಲಾಗಿದ್ದು, ಗರಿಷ್ಠ ೫೦ ಮಂದಿ ಮಾತ್ರ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗು ಹೆಸರು ನೋಂದಾಯಿಸಲು ಮೊ: ೯೦೩೬೭೫೧೬೯೯ ಸಂಖ್ಯೆಗೆ ಕರೆ ಮಾಡಬಹುದಾಗಿದ್ದು, ಅ.೨೪ರಂದು ಮಧ್ಯಾಹ್ನ ೩ ಗಂಟಗೆ ನಗರಸಭೆ ಸಭಾಂಗಣದಲ್ಲಿ ಕಳೆದ ೬ ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿರುವ ಕೊರೋನಾ ವಾರಿರ್ಯಸ್‌ಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉಳಿದಂತೆ ಅ.೨೫ ರಂದು ಆಯುಧ ಪೂಜೆ, ೨೬ರಂದು ಶಮಿಪೂಜೆ ಪ್ರತಿವರ್ಷದಂತೆ ಈ ಬಾರಿ ಸಹ ನಡೆಯಲಿವೆ. ಆದರೆ ಯಾವುದೇ ರೀತಿ ವೈಭವದ ಆಚರಣೆಗಳಿರುವುದಿಲ್ಲ ಎಂದು ಪೌರಾಯುಕ್ತರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಕಂದಾಯಾಧಿಕಾರಿ ರಾಜ್‌ಕುಮಾರ್, ಇಂಜಿನಿಯರ್ ರಂಗರಾಜಪುರೆ, ಲೆಕ್ಕಾಧಿಕಾರಿ ಸೈಯದ್ ಮೆಹಬೂಬ್ ಆಲಿ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು, ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ವಸಂತ್‌ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.