Wednesday, October 28, 2020

ಕೋವಿಡ್-೧೯ ಅರಿವು, ಪ್ರತಿಜ್ಞಾ ವಿಧಿ ಸ್ವೀಕಾರ

ಕೊರೋನಾ ವೈರಸ್ ನಿಯಂತ್ರಿಸುವ ಉದ್ದೇಶದಿಂದ ಭದ್ರಾವತಿ ಅಗ್ನಿಶಾಮಕ ಠಾಣೆಯಲ್ಲಿ ಜಾಗೃತಿ ಅರಿವು ಮತ್ತು ಪ್ರತಿಜ್ಞಾ ವಿಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಅ. ೨೮: ನಗರದ ಅಗ್ನಿಶಾಮಕ ಠಾಣೆಯಲ್ಲಿ ಕೊರೋನಾ ವೈರಸ್ ನಿಯಂತ್ರಿಸುವ  ಉದ್ದೇಶದಿಂದ ಜಾಗೃತಿ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
      ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್ ಸಿಬ್ಬಂದಿಗಳಿಗೆ ಕೊರೋನಾ ಜಾಗೃತಿ ಅರಿವಿನ ಮಹತ್ವ ತಿಳಿಸಿಕೊಡುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಹೆಚ್ಚಿನ ಗಮನ ನೀಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾರ್ವಜನಿಕರಿಗೂ ಅರಿವು ಮೂಡಿಸಬೇಕೆಂದು ಕರೆ ನೀಡಿದರು.

ನಗರಸಭೆ ವ್ಯಾಪ್ತಿ ಕೆರೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಸಚಿವರಿಗೆ ಮನವಿ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸುವುದು, ನಗರಸಭೆಗೆ ರು.೧೦೦ ಕೋ. ವಿಶೇಷ ಅನುದಾನ ಬಿಡುಗಡೆಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಗರದ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್ ಈಶ್ವರಪ್ಪರವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
      ಭದ್ರಾವತಿ, ಅ. ೨೮: ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸುವುದು, ನಗರಸಭೆಗೆ ರು.೧೦೦ ಕೋ. ವಿಶೇಷ ಅನುದಾನ ಬಿಡುಗಡೆಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಗರದ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್ ಈಶ್ವರಪ್ಪರವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
    ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಅಭಿವೃದ್ಧಿ ಪಡಿಸುವ ರೀತಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿರುವ ಸುಮಾರು ೬೯ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು.  ಕೆರೆಗಳಲ್ಲಿ ಅಂತರ್ಜಲ ಹೆಚ್ಚಿಸಿ ದನಗಾಹಿಗಳಿಗೆ, ರೈತರಿಗೆ ಅನುಕೂಲ ಕಲ್ಪಿಸಿಕೊಡಲು ತಕ್ಷಣ ಯೋಜನೆ ರೂಪಿಸುವಂತೆ ಒತ್ತಾಯಿಸಲಾಗಿದೆ.
      ನಗರಸಭೆ ಅಸ್ತಿತ್ವಕ್ಕೆ ಬಂದು ೨೫ ವರ್ಷಗಳು ತುಂಬಿರುವ ಹಿನ್ನಲೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ರು.೧೦೦ ಕೋ. ವಿಶೇಷ ಅನುದಾನ ಬಿಡುಗಡೆಗೊಳಿಸುವುದು. ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಖಾಲಿ ನಿವೇಶನದಲ್ಲಿ ಹೈಟೆಕ್  ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲು ರು. ೩ ಕೋ. ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ.
    ನಗರದ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಪುನಶ್ಚೇತನಗೊಳಿಸಲು ಕಾರ್ಖಾನೆಗೆ ಸೇರಿದ ನಗರಾಡಳಿತ ಪ್ರದೇಶವನ್ನು ಖಾಸಗಿಯವರಿಗೆ ವಹಿಸಿಕೊಡುವ ವಿಚಾರ ತಿಳಿದು ಬಂದಿದ್ದು, ಈ ವ್ಯಾಪ್ತಿಯ ೪,೫,೬ ಮತ್ತು ೮ನೇ ವಾರ್ಡ್ ಹಾಗೂ ಆನೆಕೊಪ್ಪ ಕೊಳಚೆ ಪ್ರದೇಶದ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಖಾಸಗಿಯವರಿಗೆ ಹಸ್ತಾಂತರ ಮಾಡದೆ ನಗರಸಭೆಗೆ ವಹಿಸಿಕೊಡುವಂತೆ ಕೋರಲಾಗಿದೆ.
    ಟ್ರಸ್ಟ್  ಛೇರ‍್ಮನ್ ಆರ್. ವೇಣುಗೋಪಾಲ್‌ರವರು ಸುಮಾರು ೪೦ ವರ್ಷಗಳಿಂದ ನಿರಂತರವಾಗಿ ಹೋರಾಟಗಳನ್ನು ನಡೆಸಿಕೊಂಡು ಬರುವ ಮೂಲಕ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಅವರ ಸುಧೀರ್ಘ ಹೋರಾಟದ ಸವಿನೆನಪಿಗಾಗಿ ಪೌರಕಾರ್ಮಿಕರೊಡನೆ ಸ್ನೇಹ ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಚಿವರು ಈ ಕಾರ್ಯಕ್ರಮ ಉದ್ಘಾಟಿಸುವ ಮೂಲಕ ಸುಮಾರು ೨೫ ವರ್ಷಗಳಿಂದ ನಡೆಯದಿರುವ ನಗರಸಭೆ ಪ್ರಗತಿಪರಿಶೀಲನಾ ಸಭೆ ನಡೆಸಬೇಕೆಂದು ಮನವಿ ಮಾಡಲಾಗಿದೆ.
     ಟ್ರಸ್ಟ್ ಪ್ರಮುಖರಾದ ಛೇರ‍್ಮನ್ ಆರ್. ವೇಣುಗೋಪಾಲ್, ಕಾರ್ಯದರ್ಶಿ ವಿ. ಅಂಜನ, ಡಿ. ದೇವರಾಜ ಅರಸ್ ಜನಸ್ಪಂದನ ವೇದಿಕೆ ಕಾರ್ಯಧ್ಯಕ್ಷೆ ರಮಾವೆಂಕಟೇಶ್, ಶೋಭ, ಭವಾನಿ ಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಜಾಗೃತಿಯೊಂದಿಗೆ ಪ್ರಾಮಾಣಿಕರಾಗಿ ಸಂಸ್ಥೆ, ಸಮಾಜ, ದೇಶದೆಡೆಗೆ ನಿಷ್ಠೆ ತೋರಿಸಿ : ಕೆ.ಎಲ್.ಎಸ್ ರಾವ್

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಆಡಳಿತ ಕಛೇರಿ ಇಸ್ಪಾತ್ ಭವನದ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕಾರ್ಯಪಾಲಕ ನಿರ್ದೇಶಕ ಕೆ.ಎಸ್.ಎಸ್ ರಾವ್  ಸರ್.ಎಂ ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಾಗೃತಿ ತಿಳುವಳಿಕೆ ಸಪ್ತಾಹಕ್ಕೆ ಚಾಲನೆ ನೀಡಿದರು.
ಭದ್ರಾವತಿ, ಅ. ೨೮: ಪ್ರತಿಯೊಬ್ಬರು ಜಾಗರೂಕರಾಗಿ, ಪ್ರಾಮಾಣಿಕರಾಗಿ ತಮ್ಮ ಕೆಲಸ, ಸಂಸ್ಥೆ, ಸಮಾಜ ಹಾಗೂ ದೇಶದೆಡೆಗೆ ನಿಷ್ಠೆ ತೋರಬೇಕೆಂದು ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆ.ಎಲ್.ಎಸ್ ರಾವ್ ಹೇಳಿದರು.
    ಅವರು ಕಾರ್ಖಾನೆಯ ಆಡಳಿತ ಕಛೇರಿ ಇಸ್ಪಾತ್ ಭವನದ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ  ಸರ್.ಎಂ ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆಮಾಡುವ ಮೂಲಕ ಜಾಗೃತಿ ತಿಳುವಳಿಕೆ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.
       ಯಾರೂ ಸಹ ವಿಜಿಲೆನ್ಸ್ ವಿಭಾಗದ ಬಗ್ಗೆ ಭಯಪಡುವ ಅಗತ್ಯವಿಲ್ಲ.  ಈ ವಿಭಾಗ ಮುನ್ನಚ್ಚರಿಕೆ ಕ್ರಮಗಳ ಕುರಿತು ನಮಗೆ ಮಾರ್ಗದರ್ಶನ ನೀಡುತ್ತದೆ. ನಾವು ವೆಚ್ಚ ಕಡಿಮೆಗೊಳಿಸುವ ಮೂಲಕ ನಮ್ಮ ಕೆಲಸದೆಡೆಗೆ ಪ್ರತಿಶತ ೧೦೦ರಷ್ಟು ಗುರಿ ಸಾಧಿಸುವ ಜೊತೆಗೆ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಬೇಕೆಂದರು.
      ವಿಜಿಲೆನ್ಸ್ ಮತ್ತು ಎಸಿವಿಓ ವಿಭಾಗದ ಉಪ ಮಹಾಪ್ರಬಂಧಕ ಆರ್. ಜಯಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ಪ್ರತಿನಿತ್ಯ ಜಾಗೃತರಾಗಿ ಮುನ್ನಡೆಯುವ ಜೊತೆಗೆ ನಿಷ್ಠೆ ಮತ್ತು ಪ್ರಾಮಾಣಿಕತೆ ಪ್ರತಿಯೊಂದು ಹಂತದಲ್ಲೂ ಕಾಯ್ದಿರಿಸಿಕೊಳ್ಳಬೇಕು. ಈ ಬಾರಿ ಸಪ್ತಾಹದ ಧ್ಯೇಯ ವಾಕ್ಯ 'ಜಾಗೃತ ಭಾರತ, ಸಮೃದ್ಧ ಭಾರತ' ಎಂಬುದಾಗಿದೆ. ಮುಂಜಾಗ್ರತೆ ಕ್ರಮಗಳನ್ನು ಮತ್ತು ಇ-ಆಡಳಿತ ಸಾಧನಗಳನ್ನು ಬಳಸಿ ಸಂಸ್ಥೆಯೆಡೆಗೆ ತಮ್ಮ ನಿಷ್ಠೆಯನ್ನು ಕಾಯ್ದುಕೊಂಡು ಸಂಸ್ಥೆಯ ಜೊತೆಗೆ ದೇಶದ ಸಮೃದ್ಧಿಯನ್ನು ಹೆಚ್ಚಿಸಬೇಕೆಂದರು.
     ಸ್ಥಾವರ ವಿಭಾಗದ ಮುಖ್ಯ ಮಹಾಪ್ರಬಂಧಕ ಸುರಜಿತ್ ಮಿಶ್ರಾ,  ಸಿಬ್ಬಂದಿ ಮತ್ತು ಆಡಳಿತ ವಿಭಾಗದ ಮಹಾಪ್ರಬಂಧಕ ಪಿ.ಪಿ. ಚಕ್ರವರ್ತಿ, ಅಧಿಕಾರಿಗಳ ಸಂಘದ ಅಧ್ಯಕ್ಷ ಎ.ಆರ್. ವೀರಣ್ಣ, ಕಾರ್ಮಿಕರ ಸಂಘದ ಅಧ್ಯಕ್ಷ  ಜೆ. ಜಗದೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಮಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಅಧಿಕಾರಿಗಳಾದ  ಡಿ. ಲೋಕೇಶ್ವರ, ಸುರಜೀತ್ ಮಿಶ್ರಾ ಮತ್ತು ಟಿ. ರವಿಚಂದ್ರನ್ ಕನ್ನಡ, ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಪ್ರತಿಙ ವಿಧಿ ಬೋಧಿಸಿದರು.
    ಪಿ.ಎಚ್.ಆರ್ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ಮಹಾಪ್ರಬಂಧಕ ಎಲ್. ಪ್ರವೀಣ್‌ಕುಮಾರ್, ಪ್ರಾಜೆಕ್ಟ್ ಮತ್ತು ಮೈನ್ಸ್ ವಿಭಾಗದ ಮಹಾಪ್ರಬಂಧಕ ಮೋಹನ್ ರಾಜ್ ಶೆಟ್ಟಿ ಮತ್ತು ವಿಐಎಸ್‌ಎಲ್ ಆಸ್ಪತ್ರೆ ಜಂಟಿ ನಿರ್ದೇಶಕ ಡಾ. ಎಂ.ವೈ ಸುರೇಶ್‌ರವರು ರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ವಿಜಿಲೆನ್ಸ್ ಕಮಿಷನರ್‌ರವರ ಸಂದೇಶಗಳನ್ನು ವಾಚಿಸಿದರು.
      ಕೋವಿಡ್-೧೯ ಮಾರ್ಗಸೂಚಿ ಅನುಸಾರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಮಾಸ್ಕ್ ಧರಿಸುವಿಕೆ ಬಗ್ಗೆ ಅರಿವು ಮೂಡಿಸುವ ಹಿನ್ನಲೆಯಲ್ಲಿ ಕನ್ನಡ, ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ  ಸ್ಪರ್ಧೆ ಮತ್ತು ಗ್ರೀಟಿಂಗ್ ಕಾರ್ಡ್ ರಚಿಸುವ ಸ್ಪರ್ಧೆಯನ್ನು ಅಧಿಕಾರಿಗಳು, ಕಾಯಂ ಮತ್ತು ಗುತ್ತಿಗೆ ಕಾರ್ಮಿಕರಿಗೆ ಆಯೋಜಿಸಲಾಗಿತ್ತು. ಹೌಸ್ ಕೀಪಿಂಗ್ ಸ್ಪರ್ಧೆಯನ್ನು ೨ ವಿಭಾಗಗಳಲ್ಲಿ ಉತ್ಪಾದಕಾ ಮತ್ತು ಸೇವಾ ಇಲಾಖೆಗಳಿಗೆ ಆಯೋಜಿಸಲಾಗಿತ್ತು.
     ವೈದ್ಯಕೀಯ ಮತ್ತು ಆರೋಗ್ಯ ಸೇವೆ ವಿಭಾಗದ ಜಂಟಿ ನಿರ್ದೇಶಕಿ ಡಾ|| ಎಸ್.ಕವಿತಾ  ಪ್ರಾರ್ಥಿಸಿದರು. ವಿಜಿಲೆನ್ಸ್ ವಿಭಾಗದ ಹಿರಿಯ ವ್ಯವಸ್ಥಾಪಕ ವಿಕಾಸ್ ಬಸೇರ್ ನಿರೂಪಿಸಿದರು.  ಟೆಕ್ನಿಷಿಯನ್‌ಕೇದಾರ್‌ನಾಥ್ ವಂದಿಸಿದರು.

Tuesday, October 27, 2020

ಭ್ರಷ್ಟಾಚಾರ ದೇಶದ ಬಹುದೊಡ್ಡ ಸಮಸ್ಯೆ : ಡಾ. ಬಿ.ಜಿ ಧನಂಜಯ

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಭ್ರಷ್ಟಾಚಾರದ ವಿರುದ್ಧ ಅರಿವು ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಅ. ೨೭: ಭ್ರಷ್ಟಾಚಾರ ಪ್ರಸ್ತುತ ದೇಶದ ಬಹುದೊಡ್ಡ ಸಮಸ್ಯೆಯಾಗಿದ್ದು, ಇದರಿಂದಾಗಿ ದೇಶದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ನಗರದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಹೇಳಿದರು.
   ಅವರು ಮಂಗಳವಾರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಭ್ರಷ್ಟಾಚಾರದ ವಿರುದ್ಧ ಅರಿವು ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು. ಭ್ರಷ್ಟಾಚಾರ ದೇಶದಲ್ಲಿ ಅಪಾಯಕಾರಿ ಸಾಮಾಜಿಕ ಸಮಸ್ಯೆಯಾಗಿ ರೂಪುಗೊಂಡಿದೆ. ಎಲ್ಲಾ ಕ್ಷೇತ್ರಗಳಿಗೂ ಇದರಿಂದ ಹಿನ್ನಡೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಇದರ ವಿರುದ್ಧ ಯುವ ಸಮುದಾಯ ಜಾಗೃತಗೊಂಡು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.
    ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಸಿಬಿಐ, ಲೋಕಾಯುಕ್ತ, ಎಸಿಬಿ ಮತ್ತು ಪೊಲೀಸ್ ವ್ಯವಸ್ಥೆಗಳು ಮತ್ತಷ್ಟು ಸದೃಢಗೊಳ್ಳಬೇಕು. ನಾಗರೀಕ ಸಮಾಜ ದಕ್ಷ ಹಾಗು ಪ್ರಾಮಾಣಿಕ ಅಧಿಕಾರಿಗಳು ಮತ್ತು ನೌಕರರನ್ನು ಗುರುತಿಸಿ ಗೌರವಿಸಬೇಕು. ಯುವ ಸಮುದಾಯ ಜಯಪ್ರಕಾಶ್ ನಾರಾಯಣ್ ಮತ್ತು ಲೋಹಿಯರವರ ಸಮಾಜವಾದಿ ಚಿಂತನೆಗಳನ್ನು, ಆದರ್ಶತನಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.
    ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾಲೇಜಿನ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಸಪ್ತಾಹದಲ್ಲಿ ಪಾಲ್ಗೊಂಡಿದ್ದರು.

೩೬ ವರ್ಷಗಳಿಂದ ಹಾಸಿಗೆ ಹಿಡಿದಿರುವ ವಿಕಲಚೇತನ ಯುವತಿ

ಪಿಂಚಣಿ ಸೇರಿದಂತೆ ಸರ್ಕಾರಿ ಸೌಲಭ್ಯಗಳಿಗೆ ಮನವಿ : ತಾಲೂಕು ಆಡಳಿತ ಸ್ಪಂದನೆ

ಹಾಸಿಗೆ ಹಿಡಿದಿರುವ ಭದ್ರಾವತಿ ತಾಲ್ಲೂಕಿನ ಹೊಳೆಗಂಗೂರು ಗ್ರಾಮದ ಸುಮಾರು ೩೬ ವರ್ಷದ ವಿಕಲಚೇತನ ಯುವತಿ.
ಭದ್ರಾವತಿ, ಅ. ೨೭:  ತಾಲ್ಲೂಕಿನ ಹೊಳೆಗಂಗೂರು ಗ್ರಾಮದ ಸುಮಾರು ೩೬ ವರ್ಷದ ವಿಕಲಚೇತನ ಯುವತಿಗೆ ಇದುವರೆಗೂ ಸರ್ಕಾರದ ಯಾವುದೇ ಪಿಂಚಣಿ  ಸೌಲಭ್ಯ ಲಭಿಸಿಲ್ಲ. ಓಡಾಡುವುದಕ್ಕೂ ಅಸಾಧ್ಯವಾಗಿ ಹಾಸಿಗೆ ಹಿಡಿದಿರುವ ಯುವತಿಯ ನೆರವಿಗೆ ತಾಲೂಕು ಆಡಳಿತ ಮುಂದಾಗುವಂತೆ ಆಮ್ ಆದ್ಮಿ ಪಾರ್ಟಿ ಮನವಿ ಮಾಡಿದೆ.
   ಮನವಿಗೆ ಸ್ಪಂದಿಸಿ ಶಿರಸ್ತೇದಾರ್ ಮಂಜಾನಾಯ್ಕ ಹಾಗು ಭೂಮಿ ಕೇಂದ್ರದ ಮಲ್ಲಿಕಾರ್ಜುನಯ್ಯರವರು ಮಂಗಳವಾರ ಯುವತಿಯ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿ ತಕ್ಷಣ  ಕ್ರಮ ಕೈಗೊಂಡು ಪಿಂಚಣಿ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಭರವಸೆ ನೀಡಿದರು. ತಾಲೂಕು ಆಡಳಿತದ ಕಾರ್ಯ ವೈಖರಿಗೆ ಆಮ್ ಆದ್ಮಿ ಪಾರ್ಟಿ ಮೆಚ್ಚುಗೆ ವ್ಯಕ್ತಪಡಿಸಿದೆ.


ಶಿರಸ್ತೇದಾರ್ ಮಂಜಾನಾಯ್ಕ ಹಾಗು ಭೂಮಿ ಕೇಂದ್ರದ ಮಲ್ಲಿಕಾರ್ಜುನಯ್ಯರವರು ಮಂಗಳವಾರ ಯುವತಿಯ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದರು.
      ಅಧಿಕಾರಿಗಳ ಭೇಟಿ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿಯ ಪರಮೇಶ್ವರಚಾರ್, ಇಬ್ರಾಹಿಂ ಖಾನ್, ಪರಮೇಶ್ವರ್ ನಾಯ್ಕ್, ಜಾವೇದ್, ಎಚ್.  ರವಿಕುಮಾರ್ ಸೇರಿದಂತೆ  ಇತರರು ಉಪಸ್ಥಿತರಿದರು.

Monday, October 26, 2020

ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಸಮಸ್ಯೆ : ಪೂರಕ ಸ್ಪಂದನೆ

ಅಧಿಕಾರಿಗಳೊಂದಿಗೆ ಸಭೆ ನಡೆಸಿ ಭರವಸೆ ನೀಡಿದ ಸಂಸದ ಬಿ.ವೈ ರಾಘವೇಂದ್ರ

ಭದ್ರಾವತಿ ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಸಂಸದ ಬಿ.ವೈ ರಾಘವೇಂದ್ರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಭದ್ರಾವತಿ, ಅ. ೨೬: ನಗರದ ವಿಐಎಸ್‌ಎಲ್ ಕಾರ್ಖಾನೆಯ ವಸತಿ ಗೃಹಗಳಲ್ಲಿ ವಾಸವಾಗಿರುವ ನಿವೃತ್ತ ಕಾರ್ಮಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸಂಸದ ಬಿ.ವೈ ರಾಘವೇಂದ್ರ ಭರವಸೆ ನೀಡಿದರು.
    ಅವರು ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಕಾರ್ಖಾನೆಯ ಅಧಿಕಾರಿಗಳು ಹಾಗು ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿ, ಕಾರ್ಖಾನೆಯ ನಗರಾಡಳಿತ ಇಲಾಖೆ ವಿರುದ್ಧ ಇತ್ತೀಚೆಗೆ ನಿವೃತ್ತ ಕಾರ್ಮಿಕರು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿರುವ ಮಾಹಿತಿ ತಿಳಿದು ಬಂದಿದೆ. ಪ್ರಸ್ತುತ ನಿಗದಿಪಡಿಸಲಾಗಿರುವ ಬಾಡಿಗೆ ದರ ಕಡಿಮೆಗೊಳಿಸಲು ಕಾರ್ಖಾನೆ ಆಡಳಿತ ಮಂಡಳಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಮುಂದಿನ ೬ ವರ್ಷಗಳವರೆಗೆ ಬಾಡಿಗೆ ದರ ಹೆಚ್ಚಳ ಮಾಡದಂತೆ ಸೂಚಿಸಲಾಗಿದೆ ಎಂದರು.
    ಉಳಿದಂತೆ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ಸೂಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳಾದರೂ ಅಥವಾ ಸಮಸ್ಯೆಗಳು ಎದುರಾದಲ್ಲಿ ಸಹ ನಿವೃತ್ತ ಕಾರ್ಮಿಕರ ಪರವಾಗಿ ಇರುವುದಾಗಿ ಭರವಸೆ ನೀಡಿದರು.
ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ಕಾರ್ಯ ಚಟುವಟಿಗಳನ್ನು ಖಾಸಗಿಯವರಿಗೆ ವಹಿಸಿಕೊಡುವ ಪ್ರಕ್ರಿಯೆಗಳು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಟೆಂಡರ್ ಸಹ ಅಂತಿಮಗೊಂಡಿದೆ. ಈ ಹಿನ್ನಲೆಯಲ್ಲಿ ವಸತಿ ಗೃಹಗಳಲ್ಲಿ ವಾಸವಿರುವ ಕಾರ್ಮಿಕರನ್ನು ಖಾಲಿ ಮಾಡಲು ಅಲ್ಲಿನ ನಗರಡಳಿತ ಇಲಾಖೆ ಸೂಚಿಸಿದ್ದು, ಶೀಘ್ರದಲ್ಲಿಯೇ ಕಾರ್ಖಾನೆಯಲ್ಲಿ ಕಾರ್ಯಚಟುವಟಿಕೆಗಳು ಪುನಃ ಆರಂಭಗೊಳ್ಳಲಿವೆ ಎಂದರು.
    ಪತ್ರಿಕಾಭವನಕ್ಕೆ ೫೦ ಲಕ್ಷ ರು. ನೆರವು:
   ಹಳೇನಗರದ ಕಾರ್ಯನಿರತರ ಪತ್ರಕರ್ತರ ಸಂಘದ ಪತ್ರಿಕಾಭವನದಲ್ಲಿ ಮುಂದುವರೆದ ಅಭಿವೃದ್ಧಿ ಕಾಮಗಾರಿಗಳಿಗೆ ರು.೫೦ ಲಕ್ಷ ಅನುದಾನ ನೀಡುವುದಾಗಿ ಸಂಸದರು ಭರವಸೆ ನೀಡಿದರು.
    ಪತ್ರಿಕಾ ಭವನ ಕಟ್ಟಡ ಸಮಿತಿ ಅಧ್ಯಕ್ಷ, ಹಿರಿಯ ಪತ್ರಕರ್ತ ಕಣ್ಣಪ್ಪ ಹಾಗು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ನೇತೃತ್ವದಲ್ಲಿ ಸುಮಾರು ರು. ೧.೬ ಕೋ. ಅನುದಾನಕ್ಕೆ ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಸಂಸದರು ಸದ್ಯಕ್ಕೆ ರು. ೫೦ ಲಕ್ಷ ಅನುದಾನ ನೀಡಲಾಗುವುದು. ಕಾಮಗಾರಿ ಮುಕ್ತಾಯದ ನಂತರ ಮುಂದಿನ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುವುದು ಎಂದರು.
    ಮೈಕ್ರೋ ಸ್ಮಾಲ್ ಮೀಡಿಯಂ ಎಂಟರ್‌ಪ್ರೈಸಸ್ ಸಂಸ್ಥೆ ರಾಜ್ಯಾಧ್ಯಕ್ಷ ಎಚ್.ಸಿ ರಮೇಶ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್ ಜ್ಯೋತಿಪ್ರಕಾಶ್, ಬಿಜೆಪಿ ಪಕ್ಷದ ಪ್ರಮುಖರಾದ ಎಂ. ಪ್ರಭಾಕರ್, ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ಪಿ. ಗಣೇಶ್‌ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಾಡಹಬ್ಬ ೯ ದಿನಗಳ ಜನಜಾಗೃತಿ ದಸರಾ ಆಚರಣೆಗೆ ತೆರೆ

ಉತ್ಸವ ಮೆರವಣಿಗೆಗೆ ಶಾಸಕ ಸಂಗಮೇಶ್ವರ್ ಚಾಲನೆ, 

ಬನ್ನಿ ಮುಡಿದ ಉಪವಿಭಾಗಾಧಿಕಾರಿ ಪ್ರಕಾಶ್

ಭದ್ರಾವತಿಯಲ್ಲಿ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೯ ದಿನಗಳ ಜನಜಾಗೃತಿ ದಸರಾ ಸೋಮವಾರ ಉಪವಿಭಾಗಾಧಿಕಾರಿ, ನಗರಸಭೆ ಆಡಳಿತಾಧಿಕಾರಿ ಟಿ.ವಿ ಪ್ರಕಾಶ್ ಬನ್ನಿ ಮುಡಿಯುವ ಮೂಲಕ ಅಂತ್ಯಗೊಂಡಿತು.
ಭದ್ರಾವತಿ, ಅ. ೨೬: ನಾಡಹಬ್ಬ ದಸರಾ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೯ ದಿನಗಳ ಜನಜಾಗೃತಿ ದಸರಾ ಸೋಮವಾರ ಉಪವಿಭಾಗಾಧಿಕಾರಿ, ನಗರಸಭೆ ಆಡಳಿತಾಧಿಕಾರಿ ಟಿ.ವಿ ಪ್ರಕಾಶ್ ಬನ್ನಿ ಮುಡಿಯುವ ಮೂಲಕ ಅಂತ್ಯಗೊಂಡಿತು.
     ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆ ೯ ದಿನಗಳ ಜನಜಾಗೃತಿ ದಸರಾ ಯಶಸ್ವಿಯಾಗಿ ನಡೆಯಿತು. ಹಬ್ಬದ ಆಚರಣೆಯಂತೆ ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜೆಯೊಂದಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ನಂದಿ ಧ್ಜಜಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉತ್ಸವ ಮೆರವಣಿಗೆಗೆ ಚಾಲನೆ ನೀಡಿದರು.
    ಮೆರವಣಿಗೆಯಲ್ಲಿ ಕ್ಷೇತ್ರಪಾಲಕ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ, ಶ್ರೀ ಹಳದಮ್ಮ, ನಗರಸಭೆ ಶ್ರೀ ಚಾಮುಂಡೇಶ್ವರಿ ಸೇರಿದಂತೆ ಕೇವಲ ೪ ಉತ್ಸವ ಮೂರ್ತಿಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಮೆರವಣಿಗೆ ತಾಲೂಕು ಕಛೇರಿ ರಸ್ತೆಯಲ್ಲಿ ಸಾಗಿ ಕನಕಮಂಟಪ ಮೈದಾನ ಬಂದು ತಲುಪಿತು.
    ನಂತರ ಉಪವಿಭಾಗಾಧಿಕಾರಿ, ನಗರಸಭೆ ಆಡಳಿತಾಧಿಕಾರಿ ಟಿ.ವಿ ಪ್ರಕಾಶ್ ಬನ್ನಿ ಮುಡಿಯುವ ಮೂಲಕ ಅಂತ್ಯಗೊಳಿಸಿದರು. ರಾವಣ ದಹನ ಮತ್ತು ಸಿಡಿ ಮದ್ದುಗಳ ಪ್ರದರ್ಶನ ಆಕರ್ಷಕವಾಗಿ ಕಂಡು ಬಂದಿತು. ಸರ್ಕಾರದ ಮಾರ್ಗಸೂಚಿಯಂತೆ  ಸಾಮಾಜಿಕ ಅಂತರ, ಮಾಸ್ಕ್ ಬಳಕೆಯೊಂದಿಗೆ ಸುಮಾರು ೨೦೦ ಮಂದಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.


ಭದ್ರಾವತಿಯಲ್ಲಿ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೯ ದಿನಗಳ ಜನಜಾಗೃತಿ ದಸರಾ ಆಚರಣೆಯ ಕೊನೆಯ ದಿನವಾದ ಸೋಮವಾರ ಉತ್ಸವ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
       ಶಾಸಕ ಬಿ.ಕೆ ಸಂಗಮೇಶ್ವರ್ ವಿಷಾದ:
  ಬನ್ನಿಮಂಟದಲ್ಲಿ ಕ್ಷೇತ್ರದ ದಸರಾ ಆಚರಣೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್ ಈ ಬಾರಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ತನ್ನದೇ ಆದ ಪರಂಪರೆಯನ್ನು ಹೊಂದಿರುವ ನಾಡಹಬ್ಬ ದಸರಾ ವಿಜೃಂಭಣೆ ಕಳೆದುಕೊಂಡಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
    ಪ್ರತಿ ವರ್ಷ ಸುಮಾರು ೩೦ ರಿಂದ ೪೦ ಸಾವಿರ ಜನರು ಒಂದೆಡೆ ಸೇರಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಆದರೆ ಈ ಬಾರಿ ವಿಜೃಂಭಣೆ ಇಲ್ಲದಿದ್ದರೂ ಸಹ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ೯ನೇ ದಿನಗಳ ಆಚರಣೆಯನ್ನು ನಗರಸಭೆ ಆಡಳಿತ ಎಲ್ಲಾ ಇಲಾಖೆಗಳು ಹಾಗು ಸಂಘ-ಸಂಸ್ಥೆಗಳು ಮತ್ತು ನಾಗರೀಕರ ಸಹಕಾರದೊಂದಿಗೆ ಯಶಸ್ವಿಗೊಳಿಸಿರುವುದು ಹೆಮ್ಮೆಯ ವಿಚಾರವಾಗಿದ್ದು, ಈ ಹಿನ್ನಲೆಯಲ್ಲಿ ಕ್ಷೇತ್ರದ ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಸಹಾಯಕ ಅರ್ಚಕ ಶ್ರೀನಿವಾಸ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಯಶಸ್ವಿಯಾಗಿ ಜರುಗಿದವು.
    ಪೌರಾಯುಕ್ತ ಮನೋಹರ್, ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ, ನಿವೃತ್ತ ತಹಸೀಲ್ದಾರ್ ಸೋಮಶೇಖರ್, ಪ್ರಮುಖರಾದ ಶ್ರೀ ಹಳದಮ್ಮ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬಿ.ಎಂ ಸಂತೋಷ್, ಪ್ರಮುಖರಾದ ಮಂಗೋಟೆ ರುದ್ರೇಶ್, ಬಿ.ಕೆ ಶ್ರೀನಾಥ್, ನರಸಿಂಹಚಾರ್, ರಮಾಕಾಂತ, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.