Friday, November 6, 2020

ಕೇರಳ ಸಮಾಜಂ ವತಿಯಿಂದ ೬೫ನೇ ಕನ್ನಡ ರಾಜ್ಯೋತ್ಸವ

ಭದ್ರಾವತಿಯಲ್ಲಿ ಕೇರಳ ಸಮಾಜಂ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೬೫ನೇ ಕನ್ನಡ ರಾಜ್ಯೋತ್ಸವ ಜನ್ನಾಪುರದಲ್ಲಿರುವ ಕಛೇರಿ ಆವರಣದಲ್ಲಿ ಅಚರಿಸಲಾಯಿತು.
ಭದ್ರಾವತಿ, ನ. ೬: ಕೇರಳ ಸಮಾಜಂ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೬೫ನೇ ಕನ್ನಡ ರಾಜ್ಯೋತ್ಸವ ಜನ್ನಾಪುರದಲ್ಲಿರುವ ಕಛೇರಿ ಆವರಣದಲ್ಲಿ ಅಚರಿಸಲಾಯಿತು.
    ಕೇರಳ ಸಮಾಜಂ ಅಧ್ಯಕ್ಷ ಗಂಗಾಧರ್ ಧ್ವಜಾರೋಹಣ ನೆರವೇರಿಸಿದರು. ಮಹಿಳಾ ವಿಭಾಗಂ ಸದಸ್ಯರ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಕಾರ್ಯದರ್ಶಿ ಕಲ್ಯಾಣಿ ಶಶಿಧರನ್ ಕರ್ನಾಟಕ ಉದಯ ಹಾಗು ವೈಭವದ ರಾಜ್ಯೋತ್ಸವ ಕುರಿತು ಮಾತನಾಡಿದರು.
    ಕಾರ್ಯದರ್ಶಿ ಪಿ.ಆರ್ ಪ್ರಭಾಕರನ್, ಖಜಾಂಚಿ ಎ. ಚಂದ್ರಶೇಖರ್ ಸೇರಿದಂತೆ ಪದಾಧಿಕಾರಿಗಳು, ಮುಖಂಡರು, ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಕಸಾಪ ನಿಕಟಪೂರ್ವ ಅಧ್ಯಕ್ಷರಿಂದ ಪರಿಷತ್ ಹೆಸರು ದುರುಪಯೋಗ

ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದು ಅನಿವಾರ್ಯ : ಅಪೇಕ್ಷ ಮಂಜುನಾಥ್

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ಮಾತನಾಡಿದರು.
ಭದ್ರಾವತಿ, ನ. ೬: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷರಾದ ಡಿ. ಮಂಜುನಾಥ್‌ರವರು ಪರಿಷತ್ ಹೆಸರು  ದುರುಪಯೋಗ ಪಡಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆಂದು ಪರಿಷತ್ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ಆರೋಪಿಸಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅಧಿಕಾರದ ಅವಧಿ ಮುಗಿದ ನಂತರ ಪರ್ಯಾಯ ಸಂಘಟನೆ ಮಾಡಿಕೊಳ್ಳುವ ಜೊತೆಗೆ ಪರಿಷತ್ ಹೆಸರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಪರಿಷತ್ ಹೆಸರಿನಲ್ಲಿ ಈ ಹಿಂದೆ ರೂಪಿಸಲಾಗಿರುವ ಕಾರ್ಯಕ್ರಮಗಳನ್ನು ಪರ್ಯಾಯವಾಗಿ ರೂಪಿಸಿಕೊಂಡಿರುವ ಸಂಘಟನೆಯಲ್ಲಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದೆ ರೀತಿ ತಾಲೂಕಿನಲ್ಲೂ ಪರ್ಯಾಯ ಸಂಘಟನೆ ರೂಪಿಸಿಕೊಂಡು ಹೆಸರು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇದು ಪರಿಷತ್‌ಗೆ ಮಾಡುತ್ತಿರುವ ದ್ರೋಹವಾಗಿದೆ ಎಂದರು.
     ಡಿ. ಮಂಜುನಾಥ್‌ರವರು ಸಾಹಿತ್ಯ ಗ್ರಾಮ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರ ನಡೆಸಿದ್ದು, ಈ ಸಂಬಂಧ ಈಗಾಗಲೇ ಜಿಲ್ಲಾಧ್ಯಕ್ಷರಾದ ಡಿ.ಬಿ ಶಂಕರಪ್ಪ ರಾಜ್ಯ ಪರಿಷತ್ ಅಧ್ಯಕ್ಷರಾದ ಡಾ. ಮನು ಬಳಿಗಾರ್‌ಗೆ ದೂರು ನೀಡಿದ್ದಾರೆ. ತನಿಖೆಯಿಂದ ಅವ್ಯವಹಾರ ನಡೆದಿರುವುದು ದೃಢಪಟ್ಟಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಪರಿಷತ್ ಆದೇಶಿದೆ. ಈ ಭ್ರಷ್ಟಾಚಾರವನ್ನು ಪರಿಷತ್‌ನ ಒಬ್ಬ ಸಾಮಾನ್ಯ ಸದಸ್ಯನಾಗಿ ಖಂಡಿಸುತ್ತೇನೆ. ಇದೆ ರೀತಿ ಮುಂದುವರೆದಲ್ಲಿ ಪರಿಷತ್ ಎಲ್ಲಾ ಸದಸ್ಯರು ಮುಂದಿನ ದಿನಗಳಲ್ಲಿ ಡಿ. ಮಂಜುನಾಥ್ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಎಚ್ಚರಿಸಿದರು.
          ನ.೧೦ರಂದು ಅಭಿನಂದನಾ ಕಾರ್ಯಕ್ರಮ:
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗು ಶ್ರೀ ಬಸವೇಶ್ವರ ಧರ್ಮಸಂಸ್ಥೆ ವತಿಯಿಂದ ನ.೧೦ರಂದು ಬೆಳಿಗ್ಗೆ ೧೦ ಗಂಟೆಗೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಪರಿಷತ್ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ ಆಶಯ ನುಡಿಗಳನ್ನಾಡಲಿದ್ದಾರೆ. ನಗರಸಭೆ ಪೌರಾಯುಕ್ತ ಮನೋಹರ್, ಪರಿಷತ್ ಜಿಲ್ಲಾಧ್ಯಕ್ಷ ಡಿ.ಬಿ ಶಂಕರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಶ್ರೀ ಬಸವೇಶ್ವರ ಸಂಸ್ಥೆ ಟ್ರಸ್ಟಿ ಎಂ. ಶಶಿಕಲಾ ಶಿವಕುಮಾರ್, ಡಾ. ವೀಣಾ ಎಸ್ ಭಟ್, ಡಾ. ನಾಸಿರ್‌ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
      ಆಕ್ರೋಶ ವ್ಯಕ್ತಪಡಿಸಿದರು. ಎಚ್ ಎನ್ ಮಹಾರುದ್ರ, ಸತ್ಯಮೂರ್ತಿ, ವೈ ಕೆ ಹನುಮಂತಯ್ಯ ಮತ್ತು ಸಿ ಚನ್ನಪ್ಪ ಇದ್ದರು.

ಮದ್ಯದಂಗಡಿಯಿಂದ ಸಾರ್ವಜನಿಕರಿಗೆ ಕಿರಿಕಿರಿ : ಸೂಕ್ತ ಕ್ರಮಕ್ಕೆ ಆಗ್ರಹ

ಕರ್ನಾಟಕ ಜನ್ಯಸೈನ್ಯ ವತಿಯಿಂದ ಪೌರಾಯುಕ್ತರಿಗೆ ಮನವಿ

ಭದ್ರಾವತಿ ಜನ್ನಾಪುರದಲ್ಲಿ ಮದ್ಯದಂಗಡಿಯೊಂದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಕರ್ನಾಟಕ ಜನ್ಯಸೈನ್ಯ ವತಿಯಿಂದ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ನ. ೬: ನಗರದ ಜನ್ನಾಪುರದಲ್ಲಿ ಮದ್ಯದಂಗಡಿಯೊಂದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಕರ್ನಾಟಕ ಜನ್ಯಸೈನ್ಯ ವತಿಯಿಂದ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಯಿತು.
    ಜನ್ನಾಪುರದ ಪ್ರಮುಖ ವಾಣಿಜ್ಯ ರಸ್ತೆಯಲ್ಲಿ ಅನ್ನಪೂರ್ಣೇಶ್ವರಿ ವೈನ್ಸ್ ತೆರೆಯಲಾಗಿದ್ದು, ಈ ಮದ್ಯದಂಗಡಿಯಲ್ಲಿ ಕಾನೂನು ಬಾಹಿರವಾಗಿ ವ್ಯವಹಾರ ನಡೆಸಲಾಗುತ್ತಿದೆ. ವ್ಯಾಪಾರಕ್ಕೆ ನಿಗದಿಪಡಿಸಲಾದ ಸ್ಥಳ ಬಿಟ್ಟು ನಗರಸಭೆ ಆಡಳಿತದ ಯಾವುದೇ ಪರವಾನಗಿ ಇಲ್ಲದೆ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ನೀರಿನ ನಲ್ಲಿ ಸೌಲಭ್ಯ ಕಲ್ಪಿಸಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಅಂಗಡಿ ಬಳಿ ರಸ್ತೆಯ ಮಧ್ಯ ಭಾಗದಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ವಾಹನಗಳು ಹಾಗು ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ. ಅಲ್ಲದೆ ಸಮೀಪದಲ್ಲಿಯೇ ದೇವಸ್ಥಾನವಿದ್ದು, ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ತೊಂದರೆಯಾಗುತ್ತಿದೆ. ಅದರಲ್ಲೂ ಮಹಿಳೆಯರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.  
   ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾರದಮ್ಮ, ತಾಲೂಕು ಅಧ್ಯಕ್ಷೆ ಶಾಂತಮ್ಮ, ಮುಖಂಡರಾದ ಸಂತೋಷ್‌ಕುಮಾರ್, ಅನಿಲ್‌ಕುಮಾರ್, ಶ್ರೀನಿವಾಸ್, ಅನುರಾಧ, ಅನಂತರಾಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Thursday, November 5, 2020

ಶ್ರೀ ಯಲ್ಲಮ್ಮ ದೇವಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ

     ಭದ್ರಾವತಿ, ಅ. ೫: ಹಳೆನಗರದ ಶ್ರೀ ಯಲ್ಲಮ್ಮದೇವಿ ದೇವಸ್ಥಾನ ಸಮುದಾಯ ಭವನ ನಿರ್ಮಾಣಕ್ಕೆ ಗುರುವಾರ ಶಾಸಕ ಬಿ ಕೆ ಸಂಗಮೇಶ್ವರ ಭೂಮಿಪೂಜೆ ನೆರವೇರಿಸಿದರು.
     ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ನೆರವು ನೀಡುವುದಾಗಿ ಭರವಸೆ ನೀಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷರಾದ ಸೀತಾರಾಮಪ್ಪ, ಪ್ರಮುಖರಾದ ಈಶ್ವರಪ್ಪ, ಎಂ.ಆರ್ ಅಶೋಕ್ ಕುಮಾರ್, ನಾರಾಯಣಪ್ಪ ಇತರರು ಉಪಸ್ಥಿತರಿದ್ದರು.   

ಟಿಎಪಿಸಿಎಂಎಸ್ ಚುನಾವಣೆ : ೭ ಸ್ಥಾನಗಳಿಗೆ ಶಾಸಕರ ಬೆಂಬಲಿಗರು ಆಯ್ಕೆ

ಸಂಗಮೇಶ್ವರ್ ಜೊತೆ ಸಂಭ್ರಮ ಹಂಚಿಕೊಂಡ ಬೆಂಬಲಿಗರು, ಕಾರ್ಯಕರ್ತರು

ಭದ್ರಾವತಿ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸೊಸೈಟಿ (ಟಿಎಪಿಸಿಎಂಎಸ್)ಗೆ ನಡೆದ ಚುನಾವಣೆಯಲ್ಲಿ ಹೆಚ್ಚಿನ ಮತಗಳೊಂದಿಗೆ ಜಯಶೀಲರಾದ ಬೆಂಬಲಿಗರನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಅಭಿನಂದಿಸಿದರು.
ಭದ್ರಾವತಿ: ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸೊಸೈಟಿ (ಟಿಎಪಿಸಿಎಂಎಸ್)ಗೆ ನಡೆದ ಚುನಾವಣೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಬೆಂಬಲಿಗರು ಹೆಚ್ಚಿನ ಮತಗಳೊಂದಿಗೆ ಜಯಗಳಿಸಿದ್ದಾರೆ.
    ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷೆ ಕೆ.ಎಂ ಕಾವೇರಮ್ಮ, ನಗರಸಭೆ ಮಾಜಿ ಅಧ್ಯಕ್ಷ ಬಿ.ಟಿ.ನಾಗರಾಜ್, ಅತ್ತಿಗುಂದ ಆರ್. ಶ್ರೀನಿವಾಸ್, ಓ.ಎನ್ ರತ್ನಮ್ಮ, ಡಿ.ಬಿ ಹಳ್ಳಿ ಬಸವರಾಜ್, ಎಚ್.ಲೋಕೇಶಪ್ಪ, ಮತ್ತು ನಂಜಪ್ಪ ಆಯ್ಕೆಯಾಗಿದ್ದಾರೆ.
ಬೆಂಬಲಿಗರು ಚುನಾವಣೆಯಲ್ಲಿ ಜಯಶೀಲರಾದ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಶಾಸಕರು ಬೆಂಬಲಿಗರನ್ನು ಅಭಿನಂದಿಸುವ ಮೂಲಕ ರೈತರಿಗೆ ಇನ್ನೂ ಹೆಚ್ಚಿನ ನೆರವಾಗುವ ರೀತಿಯಲ್ಲಿ ನೂತನ ಆಡಳಿತ ಮಂಡಳಿ ಮುನ್ನಡೆಸುವಂತೆಕೊಂಡು ಕರೆ ನೀಡಿದರು.
   ಶಾಸಕರೊಂದಿಗೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಚುನಾವಣೆಯಲ್ಲಿ ಜಯಶೀಲರಾದ ಬೆಂಬಲಿಗರು ಕಾಂಗ್ರೆಸ್ ಬಾವುಟ ಹಿಡಿದು ಜೈಕಾರ ಹಾಕುವ ಮೂಲಕ ಸಂಭ್ರಮ ಹಂಚಿಕೊಂಡರು.
    ಶಶಿಧರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಮುಖಂಡರಾದ ಟಿ. ಜನಾರ್ಧನ, ಅಣ್ಣೋಜಿರಾವ್, ಎಂ. ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಅರ್ನಬ್ ಗೋಸ್ವಾಮಿ ಬಂಧನ : ಮಹಾರಾಷ್ಟ್ರ ಸರ್ಕಾರ ವಜಾಗೊಳಿಸಲು ಆಗ್ರಹ

ಪಬ್ಲಿಕ್ ಖಾಸಗಿ ಟಿವಿ ವಾಹಿನಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯವರನ್ನು ಮಹಾರಾಷ್ಟ್ರ ಸರ್ಕಾರ ನಿರಾಧಾರ ಕೇಸಿನಲ್ಲಿ ಬಂಧಿಸಿದೆ ಎಂದು ಆರೋಪಿಸಿರುವ ಬಿಜೆಪಿ ಯುವ ಮೋರ್ಚಾ ತಕ್ಷಣ ಮಹಾರಾಷ್ಟ್ರ ಸರ್ಕಾರವನ್ನು ವಜಾಮಾಡಬೇಕೆಂದು ಆಗ್ರಹಿಸಿ ಗುರುವಾರ ಭದ್ರಾವತಿ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಭದ್ರಾವತಿ, ನ. ೫: ರಿಪಬ್ಲಿಕ್ ಖಾಸಗಿ ಟಿವಿ ವಾಹಿನಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯವರನ್ನು ಮಹಾರಾಷ್ಟ್ರ ಸರ್ಕಾರ ನಿರಾಧಾರ ಕೇಸಿನಲ್ಲಿ ಬಂಧಿಸಿದೆ ಎಂದು ಆರೋಪಿಸಿರುವ ಬಿಜೆಪಿ ಯುವ ಮೋರ್ಚಾ ತಕ್ಷಣ ಮಹಾರಾಷ್ಟ್ರ ಸರ್ಕಾರವನ್ನು ವಜಾಮಾಡಬೇಕೆಂದು ಆಗ್ರಹಿಸಿ ಗುರುವಾರ ನಗರದ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
      ಯುವ ಮೋರ್ಚಾ ಪ್ರಮುಖರು ಮಾತನಾಡಿ, ರಾಷ್ಟ್ರೀಯವಾದಿ ಸಂತರ ಹತ್ಯೆ, ಡ್ರಗ್ಸ್ ಮಾಫಿಯಾ ವಿರುದ್ಧ ಧ್ವನಿ ಎತ್ತಿರುವ ಹಿನ್ನಲೆಯಲ್ಲಿ ಗೋಸ್ವಾಮಿಯವರನ್ನು ಬಂಧಿಸಲಾಗಿದೆ. ಮಹಾರಾಷ್ಟ್ರ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದ್ದು, ಈ ಹಿನ್ನಲೆಯಲ್ಲಿ ಸರ್ಕಾರ ವಜಾಗೊಳಿಸಬೇಕೆಂದು ಆಗ್ರಹಿಸಿದರು.
    ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಕಾರ್ಯದರ್ಶಿ ಚಂದ್ರು, ಯುವ ಮೋರ್ಚಾ ಅಧ್ಯಕ್ಷ ವಿಜಯ್, ಉಪಾಧ್ಯಕ್ಷ ಯೋಗೇಶ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಧನುಷ್ ಬೋಸ್ಲೆ, ಎನ್. ಗೋಕುಲ ಕೃಷ್ಣನ್, ಸಚಿನ್, ದೇವರಾಜ್, ಹೇಮಂತ್, ಆಕಾಶ್, ವಿಜಯ್, ಗೋಪಿನಾಥ್, ಕೃಷ್ಣ, ಲಕ್ಷ್ಮಣ್, ಧನ್ಯಕುಮಾರ್, ಜಾನು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಗೃಹರಕ್ಷಕ ಅಧಿಕಾರಿಗಳ ತರಬೇತಿ ಜೆ. ಹೇಮಂತರಾಮನ್‌ಗೆ ಚಿನ್ನದ ಪದಕ

ಪ್ರಶಸ್ತಿ ಪತ್ರ, ಪದಕದೊಂದಿಗೆ ಜೆ. ಹೇಮಂತರಾಮನ್
ಭದ್ರಾವತಿ, ನ. ೫: ಬೆಂಗಳೂರಿನ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಅಕಾಡೆಮಿಯಲ್ಲಿ ಅ.೧೦ರಿಂದ ನ.೪ರವರೆಗೆ ನಡೆದ "ಗೃಹರಕ್ಷಕರ ಅಧಿಕಾರಿಗಳ ತರಬೇತಿ"ಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಪ್ರತಿನಿಧಿಸಿದ್ದ ಭದ್ರಾವತಿ ಘಟಕದ ಗೃಹರಕ್ಷಕ ಜೆ. ಹೇಮಂತರಾಮನ್ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
      ಹೇಮಂತರಾಮನ್ ಈ ಹಿಂದೆ ಸಹ ಹಲವಾರು ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಗೃಹರಕ್ಷಕ ದಳ ಜಿಲ್ಲಾ ಸಮಾದೇಷ್ಟ ಎಸ್. ಶಿವಕುಮಾರ್, ಜಿಲ್ಲಾ ಸಹಾಯಕ ಬೋಧಕ ಎಚ್. ದಿನೇಶ್, ಭದ್ರಾವತಿ ಪ್ರಭಾರ ಘಟಕಾಧಿಕಾರಿ ಜಗದೀಶ್, ಎನ್.ಸಿ.ಓ ಅಧಿಕಾರಿಗಳು, ಘಟಕದ ಎಲ್ಲಾ ಗೃಹರಕ್ಷಕ ಸದಸ್ಯರುಗಳು ಅಭಿನಂದಿಸಿದ್ದಾರೆ.