Thursday, November 19, 2020

ನ.೨೨ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ನ. ೧೯: ಮೆಸ್ಕಾಂ ನಗರ ಉಪವಿಭಾಗ ಘಟಕ-೫ರ ಮಾಚೇನಹಳ್ಳಿ ಶಾಖಾ ವ್ಯಾಪ್ತಿಯಲ್ಲಿ ಐಪಿಡಿಎಸ್ ಹಾಗು ವಿದ್ಯುತ್ ಮಾರ್ಗಗಳ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.೨೨ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ಮಾಚೇನಹಳ್ಳಿ, ಕೈಗಾರಿಕಾ ಪ್ರದೇಶ, ಡೈರಿ ವೃತ್ತ, ಜೇಡಿಕಟ್ಟೆ, ವಿಶ್ವೇಶ್ವರಯ್ಯನಗರ, ಶಿವರಾಮನಗರ, ಬಿ.ಎಚ್ ರಸ್ತೆ, ಕ.ರಾ.ಮೀ.ಪೋ. ವಸತಿ ಗೃಹಗಳು, ಜಯಂತಿ ಗ್ರಾಮ, ರಾಮಮೂರ್ತಿ ಮಿನರಲ್ಸ್, ಬಾಳೇನಹಳ್ಳಿ, ಗೌಡ್ರಕೊಪ್ಪ, ವೀರಭದ್ರ ಕಾಲೋನಿ, ಹೊನ್ನವಿಲೆ, ಶೆಟ್ಟಿಹಳ್ಳಿ, ಮಾಚೇನಹಳ್ಳಿ, ಮಲ್ನಾಡ್ ಆಸ್ಪತ್ರೆ, ಅರೇಕೊಪ್ಪ, ಬಿದರೆ, ನಿದಿಗೆ, ದುಮ್ಮಳ್ಳಿ, ಓತಿಘಟ್ಟ, ಸೋಗಾನೆ, ಆಚಾರಿ ಕ್ಯಾಂಪ್, ರೆಡ್ಡಿ ಕ್ಯಾಂಪ್, ಹೆರೆಕಟ್ಟೆ ಹಾಗು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.


Saturday, November 14, 2020

ನ.೧೬ರಿಂದ ಪುನಃ ಸೈನಿಕ ತರಬೇತಿ ಆರಂಭ

ಭದ್ರಾವತಿ, ನ. ೧೪: ಭಾರತೀಯ ಸೈನ್ಯಕ್ಕೆ ಸೇರಲು ಇಚ್ಛಿಸುವ ಯುವಕರಿಗೆ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಉಚಿತ ತರಬೇತಿ ನೀಡಲಾಗುತ್ತಿದ್ದು, ಲಾಕ್‌ಡೌನ್ ಹಿನ್ನಲೆಯಲ್ಲಿ ಸುಮಾರು ೬ ತಿಂಗಳ ಹಿಂದೆ ಸ್ಥಗಿತಗೊಂಡಿದ್ದ ತರಬೇತಿ ಇದೀಗ ನ.೧೬ರಿಂದ ಪುನಃ ಆರಂಭಗೊಳ್ಳಲಿದೆ.
    ಭಾರತೀಯ ಸೈನ್ಯಕ್ಕೆ ಸೇರಲು ಸೈನಿಕ ಇಲಾಖೆ ಆಹ್ವಾನಿಸಿದ ಸಂದರ್ಭದಲ್ಲಿ ಸುಮಾರು ೩ ರಿಂದ ೬ ತಿಂಗಳವರೆಗೆ ಪ್ರತಿ ಬಾರಿ ತರಬೇತಿ ನೀಡಲಾಗುತ್ತಿದೆ. ಈ ಬಾರಿ ಜನವರಿ ಆರಂಭದಲ್ಲಿ ಪ್ರಾರಂಭಿಸಲಾಗಿದ್ದ ತರಬೇತಿ ಕೋವಿಡ್-೧೯ರ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿದ ಪರಿಣಾಮ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
    ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಪುನಃ ತರಬೇತಿ ಆರಂಭಗೊಳ್ಳಲಿದ್ದು, ತಾಲೂಕಿನ ಯುವಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷ ಅಶೋಕ್ ಕೋರಿದ್ದಾರೆ. ತರಬೇತಿ ಸಂದರ್ಭದಲ್ಲಿ ಉಪಹಾರದ ವ್ಯವಸ್ಥೆಯನ್ನು ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್ ಕೈಗೊಂಡಿದ್ದಾರೆ.

ವಿಶ್ವೇಶ್ವರಯ್ಯ ಖಾಸಗಿ ಬಸ್ ಏಜೆಂಟರ್, ಕಾರ್ಮಿಕರ ಸಂಘದ ನೂತನ ಕಛೇರಿ ಉದ್ಘಾಟನೆ

ಭದ್ರಾವತಿಯಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲಿ ವಿಶ್ವೇಶ್ವರಯ್ಯ ಖಾಸಗಿ ಬಸ್ ಏಜೆಂಟರ್ ಮತ್ತು ಕಾರ್ಮಿಕರ ಸಂಘದ ನೂತನ ಕಛೇರಿಯನ್ನು ಸಮಾಜ ಸೇವೆಕ, ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್ ಉದ್ಘಾಟಿಸಿದರು.
ಭದ್ರಾವತಿ, ನ. ೧೪: ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ವಿಶ್ವೇಶ್ವರಯ್ಯ ಖಾಸಗಿ ಬಸ್ ಏಜೆಂಟರ್ ಮತ್ತು ಕಾರ್ಮಿಕರ ಸಂಘದ ನೂತನ ಕಛೇರಿಯನ್ನು ಸಮಾಜ ಸೇವೆಕ, ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್ ಉದ್ಘಾಟಿಸಿದರು.
     ಕಛೇರಿ ನಿರ್ಮಾಣಕ್ಕೆ ಹೆಚ್ಚಿನ ನೆರವು ನೀಡುವ ಮೂಲಕ ಸಹಕರಿಸಿದ ಉಮೇಶ್‌ರವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಸಂಘದ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು.
     ಪೌರಾಯುಕ್ತ ಮನೋಹರ್, ಸಂಘದ ಅಧ್ಯಕ್ಷ ಶ್ರೀನಿವಾಸ್, ಗೌರವಾಧ್ಯಕ್ಷ ಧರ್ಮರಾಜ್, ಸತೀಶ್‌ಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಎಂ. ಪ್ರಭಾಕರ್, ಬಿ.ಕೆ ಶ್ರೀನಾಥ್, ಚನ್ನೇಶ್, ವಿಜಯ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸುಪ್ರೀಂಕೋರ್ಟ್ ಮಾರ್ಗಸೂಚಿ ಉಲ್ಲಂಘಿಸಿ ಪಟಾಕಿ ಮಾರಾಟ : ಸೂಕ್ತ ಕ್ರಮಕ್ಕೆ ಆಗ್ರಹಿಸಿ ಶಶಿಕುಮಾರ್ ಎಸ್ ಗೌಡ ಏಕಾಂಗಿ ಹೋರಾಟ

ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಭದ್ರಾವತಿ ಪಟಾಕಿ ಮಾರಾಟ ಮಾಡಲಾಗುತ್ತಿದ್ದು, ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜನತಾದಳ(ಸಂಯುಕ್ತ) ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಏಕಾಂಗಿಯಾಗಿ ಶನಿವಾರ ನಗರಸಭೆ ಮುಂಭಾಗ ಹೋರಾಟ ನಡೆಸಿ ಮನವಿ ಸಲ್ಲಿಸಿದರು.
ಭದ್ರಾವತಿ, ನ. ೧೪: ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನಗರದಲ್ಲಿ ಪಟಾಕಿ ಮಾರಾಟ ಮಾಡಲಾಗುತ್ತಿದ್ದು, ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜನತಾದಳ(ಸಂಯುಕ್ತ) ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಏಕಾಂಗಿಯಾಗಿ ಶನಿವಾರ ನಗರಸಭೆ ಮುಂಭಾಗ ಹೋರಾಟ ನಡೆಸಿದರು.
     ಈ ಬಾರಿ ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಕೇವಲ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದ್ದು, ಕೆಲವು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ. ಹಳೇನಗರದ ಕನಕಮಂಟಪ ಮೈದಾನ, ನ್ಯೂಟೌನ್ ಚರ್ಚ್ ಮೈದಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಆದರೆ ವ್ಯಾಪಾರಸ್ಥರು ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಮಳಿಗೆಗಳ ನಡುವೆ ಮಾರ್ಗಸೂಚಿಯಂತೆ ಅಂತರ ನಿಗದಿಪಡಿಸಿಲ್ಲ. ಸ್ಯಾನಿಟೈಜರ್, ಮಾಸ್ಕ್ ಬಳಕೆ ಸಹ ಕಂಡು ಬರುತ್ತಿಲ್ಲ. ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ಮತ್ತು ನಗರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್, ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಕಂದಾಯಾಧಿಕಾರಿ ಪ್ರಶಾಂತ್ ಮನವಿ ಸ್ವೀಕರಿಸಿ ಬೇಡಿಕೆ ಈಡೇರಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
     ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕನ್ನಡ ಶಾಲೆ ಉಳಿವಿಗಾಗಿ ಗೋಕಾಕ್ ಮಾದರಿ ಚಳುವಳಿ ಅನಿವಾರ್ಯ : ಬಿ.ಕೆ ಮೋಹನ್

ಭದ್ರಾವತಿ ಅಂಡರ್‌ಬ್ರಿಡ್ಜ್ ಬಳಿ ನೆಹರು ಆಟೋ ಚಾಲಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ನ. ೧೪: ಪ್ರಸ್ತುತ ರಾಜ್ಯದಲ್ಲಿ ಕನ್ನಡ ಶಾಲೆಗಳು ಮುಚ್ಚಲ್ಪಡುತ್ತಿದ್ದು, ಕನ್ನಡ ಶಾಲೆಗಳ ಉಳಿವಿಗಾಗಿ ಈ ಹಿಂದೆ ವರನಟ  ಡಾ. ರಾಜ್‌ಕುಮಾರ್ ನೇತೃತ್ವದಲ್ಲಿ ನಡೆಸಿದ ಗೋಕಾಕ್ ಚಳುವಳಿ ಮಾದರಿಯಂತೆ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹೇಳಿದರು.
   ಅವರು ಶನಿವಾರ ಅಂಡರ್‌ಬ್ರಿಡ್ಜ್ ಬಳಿ ನೆಹರು ಆಟೋ ಚಾಲಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ದಲ್ಲಿ ಕರ್ನಾಟಕ ರಾಜ್ಯ ವಿಭಿನ್ನವಾಗಿದ್ದು, ಎಲ್ಲಾ ಭಾಷೆಯ, ಎಲ್ಲಾ ಧರ್ಮದ ಜನರು ಇಲ್ಲಿ ನೆಲೆನಿಂತಿದ್ದಾರೆ. ಎಲ್ಲರನ್ನು ಪೋಷಿಸಿ ಸಲಹುವ ಶಕ್ತಿ ಈ ನಾಡು ಹೊಂದಿದ್ದು, ಇಂತಹ ನಾಡಿನ ನೆಲ, ಜಲ, ಭಾಷೆ ಮೇಲಿನ ಅಭಿಮಾನ ಹೆಚ್ಚಾಗಬೇಕೆಂದರು.
ಪ್ರಸ್ತುತ ಕೊರೊನಾ ಪರಿಣಾಮದಿಂದಾಗಿ ಎಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದು, ಇಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಆಟೋ ಚಾಲಕರು ಕನ್ನಡ ನಾಡಿನ ಮೇಲೆ ಅಭಿಮಾನ ಹೊಂದುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಸಂಘದ ಅಧ್ಯಕ್ಷ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕನ್ನಡ ಧ್ವಜದೊಂದಿಗೆ ಆಟೋ ಚಾಲಕರು ನಗರದ ವಿವಿಧೆಡೆ ಸಂಚರಿಸಿದರು.

Friday, November 13, 2020

ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ : ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ

ಮಾರಾಟಗಾರರಿಗೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್  ಎಚ್ಚರಿಕೆ

ಭದ್ರಾವತಿ, ನ. ೧೩: ಕೋವಿಡ್-೧೯ರ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಗಳನ್ನು ಅನುಸರಿಸಿ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಜಿ. ಸಂತೋಷ್ ಕುಮಾರ್ ಪರವಾನಗಿ ಪಡೆದ ಪಟಾಕಿ ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು.
      ಅವರು ತಾಲೂಕು ಕಚೇರಿ ಸಭಾಂಗಣದಲ್ಲಿ ಪಟಾಕಿ ಮಾರಾಟಕ್ಕೆ ಸಂಬಂಧಿಸಿದಂತೆ ನಡೆಸಿದ ಸಭೆಯಲ್ಲಿ ಮಾತನಾಡಿ, ಪಟಾಕಿ ಮಾರಾಟಕ್ಕೆ ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಅಧಿಕೃತ ಪರವಾನಗಿದಾರರು ಮಾತ್ರ ಹಸಿರು ಪಟಾಕಿ ಮಾರಾಟ ಮಳಿಗೆಗಳನ್ನು ನ.೧೬ರ ವರೆಗೆ ಮಾತ್ರ ತೆರೆಯಬೇಕು. ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು, ಮಳಿಗೆಗಳ ನಡುವೆ ೬ ಮೀಟರ್ ಅಂತರವಿರಬೇಕು,  ಮಳಿಗೆಗಳ ಸುತ್ತಲೂ ಪ್ರತಿ ದಿನ ಸ್ಯಾನಿಟೈಜರ್ ಮಾಡಬೇಕು, ಪಟಾಕಿ ಖರೀದಿಗೆ ಬರುವ ಸಾರ್ವಜನಿಕರಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಸೇರಿದಂತೆ ಕನಿಷ್ಠ ೬ ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ತಿಳಿಸಿದರು. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದರು.

ಹಿರಿಯ ಪತ್ರಕರ್ತ ರವಿಬೆಳಗೆರೆಗೆ ಸಂತಾಪ

ಭದ್ರಾವತಿ, ನ. ೧೩: ಹಿರಿಯ ಪತ್ರಕರ್ತ ರವಿಬೆಳಗೆರೆಯವರ ನಿಧನಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಂತಾಪ ಸೂಚಿಸಲಾಯಿತು.
    ಹಳೇನಗರದ ಪತ್ರಿಕಾಭವನದಲ್ಲಿ ನಡೆದ ಸಭೆಯಲ್ಲಿ ಮೌನಾಚರಣೆ ನಡೆಸುವ ಮೂಲಕ ರವಿಬೆಳಗೆರೆ ನಿಧನದಿಂದ ಪತ್ರಿಕಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದು, ಇವರ ಅಗಲಿಕೆಯಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ಕರುಣಿಸಲೆಂದು ಪ್ರಾರ್ಥಿಸಲಾಯಿತು.
    ಇದೆ ರೀತಿ ಕೋವಿಡ್-೧೯ರ ಪರಿಣಾಮ ರಾಜ್ಯದ ವಿವಿಧೆಡೆ ಮೃತಪಟ್ಟಿರುವ ಎಲ್ಲಾ ಪತ್ರಕರ್ತರಿಗೂ ಸಂತಾಪ ಸೂಚಿಸಲಾಯಿತು. ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅಧ್ಯಕ್ಷತೆ ವಹಿಸಿದ್ದರು.