Thursday, November 26, 2020

ವಿಐಎಸ್‌ಎಲ್ ಕಾರ್ಖಾನೆ ಖಾಸಗಿಕರಣ ವಿರೋಧಿಸಿ ಪ್ರತಿಭಟನೆ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಖಾಸಗಿಕರಣ ವಿರೋಧಿಸಿ ಗುರುವಾರ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ನ. ೨೬: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ  ಖಾಸಗಿಕರಣಗೊಳಿಸಬಾರದು ಹಾಗು ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಕಾರ್ಖಾನೆ ಮುಂಭಾಗ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
    ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುತ್ತಿದೆ. ಅಲ್ಲದೆ ಹಲವಾರು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕ ವರ್ಗವನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಕಾರ್ಮಿಕ ಮುಖಂಡರು ಆರೋಪಿಸಿದರು.
     ವಿಐಎಸ್‌ಎಲ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗಿಕರಣಗೊಳಿಸಬಾರದು. ಇದರಿಂದ ಭವಿಷ್ಯದಲ್ಲಿ ಕಾರ್ಖಾನೆ ಶಾಶ್ವತವಾಗಿ ಮುಚ್ಚಿ ಹೋಗಲಿದೆ. ಕಾರ್ಮಿಕರು ಬೀದಿ ಪಾಲಾಗಲಿದ್ದು, ಉದ್ಯೋಗ ಹುಡುಕಿಕೊಂಡು ಬೇರೆಡೆಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದೀಗ ನಿವೃತ್ತ ಕಾರ್ಮಿಕರು ವಾಸಿಸುತ್ತಿರುವ ಮನೆಗಳನ್ನು ಖಾಲಿ ಮಾಡಿಸುವ ಹುನ್ನಾರ ನಡೆಸಲಾಗುತ್ತಿದ್ದು, ೩೦-೪೦ ವರ್ಷ ಕಾರ್ಖಾನೆಯಲ್ಲಿ ದುಡಿದ ಕಾರ್ಮಿಕರು, ಕುಟುಂಬ ವರ್ಗದವರು ಅತಂತ್ರರಾಗಿ ಬದುಕುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಕ್ಷಣ ಖಾಸಗಿಕರಣ ಪ್ರಕ್ರಿಯೆ ಕೈಬಿಡಬೇಕು. ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಬೇಕು. ಕಾರ್ಮಿಕರಿಗೆ ನಿರಂತರವಾಗಿ ಕೆಲಸ ನೀಡಬೇಕೆಂದು ಆಗ್ರಹಿಸಿದರು.
    ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಪದಾಧಿಕಾರಿಗಳಾದ ಬಸಂತಕುಮಾರ್, ಅಮೃತ್, ರಾಘವೇಂದ್ರ, ಮೋಹನ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ರಾಕೇಶ್, ನಿವೃತ್ತ ಕಾರ್ಮಿಕರ ಸಂಘದ ನರಸಿಂಹಚಾರ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸುರೇಶ್ ಸೇರಿದಂತೆ ಕಾಯಂ ಮತ್ತು ಗುತ್ತಿಗೆ ಕಾರ್ಮಿಕರು, ಇನ್ನಿತರರು ಪಾಲ್ಗೊಂಡಿದ್ದರು.  

ವಿವಿಧ ಬೇಡಿಕೆ ಈಡೇರಿಕೆಗಾಗಿ ಗ್ರಾಮೀಣ ನೌಕರರ ಪ್ರತಿಭಟನೆ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘಟನೆ(ಎಐಜಿಡಿಎಸ್‌ಯು)ವತಿಯಿಂದ ಗುರುವಾರ ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಸಮೀಪದಲ್ಲಿರುವ ಪ್ರಧಾನ ಅಂಚೆ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ನ. ೨೬: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘಟನೆ(ಎಐಜಿಡಿಎಸ್‌ಯು)ವತಿಯಿಂದ ಗುರುವಾರ ನಗರದ ವಿಐಎಸ್‌ಎಲ್ ಕಾರ್ಖಾನೆ ಸಮೀಪದಲ್ಲಿರುವ ಪ್ರಧಾನ ಅಂಚೆ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
   ಗ್ರಾಮೀಣ ಅಂಚೆ ನೌಕರರನ್ನು ಖಾಯಂಗೊಳಿಸಬೇಕು, ಸೇವಾವಧಿಯಲ್ಲಿ ಕಾಲ ಕಾಲಕ್ಕೆ ಬಡ್ತಿ ನೀಡಬೇಕು, ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು, ೧೮೦ ದಿನಗಳ ರಜಾ ನಗದೀಕರಣಕ್ಕೆ ಮಂಜೂರಾತಿ ನೀಡಬೇಕು, ತಡೆಹಿಡಿದ ತುಟ್ಟಿ ಭತ್ಯೆಯನ್ನು ಬಿಡುಗಡೆಗೊಳಿಸಬೇಕು, ಹಬ್ಬದ ಮುಂಗಡ ಹಣವನ್ನು ಬಡ್ಡಿ ರಹಿತವಾಗಿ ನೀಡಬೇಕು, ಗುಂಪು ವಿಮಾ ಮೊತ್ತ ಹೆಚ್ಚಿಸಬೇಕು ಮತ್ತು ಕಾನೂನು ಬದ್ದವಲ್ಲದ ಫೆಡಿಲಿಟಿ ಬಾಂಡ್ ನೀತಿ ರದ್ದುಗೊಳಿಸಬೇಕು ಸೇರಿದಂತೆ ಇತ್ಯಾದಿ ೧೨ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
  ಸಂಘಟನೆಯ ಶಿವಮೊಗ್ಗ ವಿಭಾಗದ ಖಜಾಂಚಿ ಎಚ್.ವಿ ರಾಜ್‌ಕುಮಾರ್ ನೇತೃತ್ವ ವಹಿಸಿದ್ದರು. ಅಂಚೆ ಕಛೇರಿಯ ಎಲ್ಲಾ ಗ್ರಾಮೀಣ ಅಂಚೆ ನೌಕರರು ಪಾಲ್ಗೊಂಡಿದ್ದರು.

ಭದ್ರಾವತಿ ವಿವಿಧೆಡೆ ಸಂವಿದಾನ ದಿನ ಆಚರಣೆ

ಭದ್ರಾವತಿ ಬೈಪಾಸ್ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಗುರುವಾರ ವಿಶೇಷವಾಗಿ ಸಂವಿಧಾನ ದಿನ ಆಚರಿಸಲಾಯಿತು.
ಭದ್ರಾವತಿ, ನ. ೨೬: ನಗರದ ರಂಗಪ್ಪ ವೃತ್ತ, ಅಗ್ನಿಶಾಮಕ ಠಾಣೆ, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ವಿವಿಧೆಡೆ ಗುರುವಾರ ಸಂವಿಧಾನ ದಿನ ಆಚರಿಸಲಾಯಿತು.
       ಅಗ್ನಿಶಾಮಕ ಠಾಣೆಯಲ್ಲಿ ಸಂವಿಧಾನ ದಿನ ಆಚರಣೆ :
   ನಗರದ ಬೈಪಾಸ್ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ವಿಶೇಷವಾಗಿ ಸಂವಿಧಾನ ದಿನ ಆಚರಿಸಲಾಯಿತು. ಮಕ್ಕಳಿಗೆ ಚರ್ಚಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ಮತ್ತು ಸಂಸತ್ ಅಣುಕು ಪ್ರದರ್ಶನ ಏರ್ಪಡಿಸಲಾಗಿತ್ತು. ಅಲ್ಲದೆ ಅಗ್ನಿ ಅವಗಡಗಳ ಕುರಿತು ಜಾಗೃತಿ ಮೂಡಿಸಲಾಯಿತು. ಠಾಣಾಧಿಕಾರಿ ವಸಂತ ಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಕೊರೋನಾ ಸಂಕಷ್ಟದ ಸಮಯದಲ್ಲಿ ಹಮ್ಮಿಕೊಳ್ಳಲಾಗಿರುವ ವಿಶೇಷ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. 
  

ಭದ್ರಾವತಿ ರಂಗಪ್ಪ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ಎಸ್‌ಸಿ ಮೋರ್ಚಾ ವತಿಯಿಂದ ಸಂವಿಧಾನ ದಿನ ಆಚರಿಸಲಾಯಿತು.
     ಬಿಜೆಪಿ ಎಸ್‌ಸಿ ಮೋರ್ಚಾದಿಂದ ಸಂವಿಧಾನ ದಿನ ಆಚರಣೆ:
   ರಂಗಪ್ಪ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ಎಸ್‌ಸಿ ಮೋರ್ಚಾ ವತಿಯಿಂದ ಸಂವಿಧಾನ ದಿನ ಆಚರಿಸಲಾಯಿತು. ಕಾರ್ಯಕ್ರಮ ಆರಂಭಕ್ಕೂ ಮೊದಲು ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಇರುವ ಭಾರತರತ್ನ, ಸಂವಿಧಾನ ಶಿಲ್ಪಿ, ಡಾ. ಬಾಬಾ ಸಾಹೇಬ್ ಅಂಬೇಡ್‌ರವರ ಪ್ರತಿಮೆ ಮಾಲಾರ್ಪಣೆ ಮಾಡಲಾಯಿತು.
    ಎಸ್‌ಸಿ ಮೋರ್ಚಾ ಅಧ್ಯಕ್ಷ ಪಿ. ಗಣೇಶ್‌ರಾವ್ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಕಾರ್ಯದರ್ಶಿ ಚನ್ನೇಶ್, ಮುಖಂಡರಾದ ವಿ. ಕದಿರೇಶ್, ಕೂಡ್ಲಿಗೆರೆ ಹಾಲೇಶ್, ಬಿ.ಕೆ ಶ್ರೀನಾಥ್, ರಾಮನಾಥ ಬರ್ಗೆ, ಕುಪ್ಪಸ್ವಾಮಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನ ಆಚರಿಸಲಾಯಿತು.
      ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನ ಆಚರಣೆ:
    ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನ ಆಚರಣೆ ಪ್ರಯುಕ್ತ ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಮಾತನಾಡಿ, ಭಾರತೀಯ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠ ಹಾಗು ಬಲಿಷ್ಠ ಸಂವಿಧಾನವಾಗಿದೆ. ಎಲ್ಲರೂ ಸಂವಿಧಾನವನ್ನು ಗೌರವಿಸುವ ಮೂಲಕ ಅದರಂತೆ ಮುನ್ನಡೆಬೇಕೆಂದರು.
ಉಪನ್ಯಾಸಕರಾದ ಡಾ. ಬಿ.ಜಿ ಅಮೃತೇಶ್ವರ, ಎನ್‌ಯುಆರ್ ಹೆಗಡೆ, ಡಾ. ಬಸವರಾಜ್, ಮಲ್ಲಪ್ಪ, ಉಮೇಶ್, ರೇವಣ್ಣಸಿದ್ದಪ್ಪ, ಡಾ. ಜಿ.ಆರ್ ರಾಜಶೇಖರ್, ಮನೋಹರ್ ಹಾಗು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮಾನವ ಹಕ್ಕುಗಳ ರಕ್ಷಣೆ, ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಕಾರ್ಮಿಕ ಘಟಕದ ಉಪ ನಿರ್ದೇಶಕರಾಗಿ ಎನ್. ಉಮೇಶ್

ಎನ್ ಉಮೇಶ್
ಭದ್ರಾವತಿ, ನ. ೨೬: ಭಾರತ ಸರ್ಕಾರದಿಂದ ಸಾಮಾಜಿಕ ಸೇವಾ ಟ್ರಸ್ಟ್‌ಗಳ ಕಾಯಿದೆಯಡಿ ನೋಂದಾಯಿಸಲ್ಪಟ್ಟಿರುವ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಕಾರ್ಮಿಕ ಘಟಕದ ತಾಲ್ಲೂಕು ಉಪ ನಿರ್ದೇಶಕರಾಗಿ ಸುರಗಿತೋಪಿನ ಎನ್. ಉಮೇಶ್ ನೇಮಕಗೊಂಡಿದ್ದಾರೆ.
   ಮಂಡಳಿಯ ಅಧ್ಯಕ್ಷರ ಆದೇಶದ ಮೇರೆಗೆ ಪ್ರಧಾನ ಕಾರ್ಯದರ್ಶಿಗಳು ನೇಮಕಾತಿಗೆ ಆದೇಶ ಹೊರಡಿಸಿದ್ದಾರೆಂದು ರಾಷ್ಟ್ರೀಯ ಹೆಚ್ಚುವರಿ ಮುಖ್ಯ ನಿರ್ದೇಶಕ ಆರ್. ಸ್ಕಂದ ಶರತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಉಮೇಶ್‌ರವರು ನಗರದ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಹಲವಾರು ವರ್ಷಗಳಿಂದ ಗುತ್ತಿಗೆ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಾರ್ಮಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Wednesday, November 25, 2020

ಮಕ್ಕಳಿಗೆ ಪುಸ್ತಕ ಓದುವ, ಬರೆಯುವ, ಸಾಹಿತ್ಯದ ಅಭಿರುಚಿ ಮೂಡಿಸುವ ಪ್ರಯತ್ನ ನಡೆಯುತ್ತಿಲ್ಲ

'ನಾಡ ದೇವಿಗೆ ನಮನ ಕನ್ನಡ ರಾಜ್ಯೋತ್ಸವ' ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ವಿಷಾದ

ಭದ್ರಾವತಿ ಅಂತರಗಂಗೆ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕ, ಕನ್ನಡ ಸಾಹಿತ್ಯಾಭಿಮಾನಿಗಳ ಬಳಗ ಅಂತರಗಂಗೆ ಆಯೋಜಿದ್ದ 'ನಾಡ ದೇವಿಗೆ ನಮನ ಕನ್ನಡ ರಾಜ್ಯೋತ್ಸವ' ಕಾರ್ಯಕ್ರಮವನ್ನು ಡಾ. ಮೋಹನ್ ಚಂದ್ರಗುತ್ತಿ, ಡಿ. ಮಂಜುನಾಥ್, ಕೋಗಲೂರು ತಿಪ್ಪೇಸ್ವಾಮಿ ಸೇರಿದಂತೆ ಇತರರು ಉದ್ಘಾಟಿಸಿದರು.
    ಭದ್ರಾವತಿ, ನ. ೨೫; ಪರಸ್ಪರ ನಡುವೆ ಮಾತುಕತೆಗಳು ಕಡಿಮೆಯಾಗುತ್ತಿವೆ. ಟಿ.ವಿ ಮಾದ್ಯಮಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಹಾಗು ಮೊಬೈಲ್‌ಗಳ ಮೊರೆ ಹೋಗಿ ಪುಸ್ತಕ ಓದುವ, ಬರೆಯುವ ಹಾಗು ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಮೂಡಿಸುವ ಪ್ರಯತ್ನ ಪೋಷಕರಿಂದಾಗುತ್ತಿಲ್ಲ ಎಂದು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ವಿಷಾದ ವ್ಯಕ್ತಪಡಿಸಿದರು.
   ಅವರು ತಾಲೂಕಿನ ಅಂತರಗಂಗೆ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕ, ಕನ್ನಡ ಸಾಹಿತ್ಯಾಭಿಮಾನಿಗಳ ಬಳಗ ಅಂತರಗಂಗೆ ಆಯೋಜಿದ್ದ 'ನಾಡ ದೇವಿಗೆ ನಮನ ಕನ್ನಡ ರಾಜ್ಯೋತ್ಸವ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಸಾಮಾನ್ಯರಿಂದ ಕನ್ನಡ ನಾಡು, ಭಾಷೆ, ಸಂಸ್ಕೃತಿ ಬೆಳೆದು ಬಂದಿದೆ ಹೊರತು. ಬೇರೆ ಯಾರಿಂದಲೂ ಅಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಾಗಿದೆ. ಕನ್ನಡ ರಾಜ್ಯೋತ್ಸವ ಆಚರಣೆ ಎಂದರೆ ಕೇವಲ ದ್ವಜಾರೋಹಣ ಮಾಡಿ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡುವುದಷ್ಟೆ ಅಲ್ಲ. ಮಕ್ಕಳಿಗೆ ಉತ್ತಮ ಗುಣ, ನಡತೆ, ಸಂಸ್ಕೃತಿಯ ಜೊತೆಗೆ ಭಾಷೆಯ ಮಹತ್ವ ಹೇಳಿ ಕೊಡುವುದಾಗಿದೆ ಎಂದರು.  
     ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ರಾಜ್ಯೋತ್ಸವ ಎಂದಾಕ್ಷಣ ಸಂಭ್ರಮಿಸಬೇಕಾದ ದಿನಗಳು ಇದುವರೆಗೂ ಒದಗಿ ಬರದಿರುವುದು ಈ ನಾಡಿನ ದೊಡ್ಡ ದುರಂತವಾಗಿದೆ. ಮಕ್ಕಳಿಗೆ ಯಾವ ಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕು ಎಂಬುದರ ಬಗ್ಗೆ ಪೋಷಕರಲ್ಲಿಯೇ ಗೊಂದಲವಿದೆ, ಆಂಗ್ಲ ಭಾಷೆಯಲ್ಲಿ ಶಿಕ್ಷಣ ದೊರೆಯದಿದ್ದರೆ ಮುಂದಿನ ದಿನಗಳು ಕಷ್ಟವಾಗುತ್ತದೆ ಎಂಬ ತಪ್ಪು ಕಲ್ಪನೆಗಳು ಪ್ರತಿ ಪೋಷಕರಲ್ಲೂ ಮೂಡುತ್ತಿವೆ. ಎಲ್ಲಾ ಭಾಷೆಯನ್ನು ಕಲಿಯಬೇಕು. ಯಾವುದೇ ಭಾಷೆಯನ್ನು ಕಡೆಗಣಿಸಬಾರದು. ಆದರೆ ಮೊದಲ ಆದ್ಯತೆ ಕನ್ನಡ ಭಾಷೆಗೆ ನೀಡಬೇಕೆಂದರು.  
  ಕನ್ನಡ ಭಾಷೆಯಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ವೇದಿಕೆ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ನಾಗರಾಜ್, ವಿ.ಎಚ್ ಹರೀಶ್‌ಬಾಬು, ಎಸ್.ಕೆ ಗುರುಸ್ವಾಮಿ, ಬಿ. ನಾಗೇಶ್, ಶ್ರೀಧರ್, ಅಶೋಕ್, ಪೀಟರ್, ಗುರು, ಲೋಕೇಶ್ ಶಿವಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ವಿಐಎಸ್‌ಎಲ್ ಉಳಿಸಿ ಹೋರಾಟ ಸಮಿತಿ ಅಸ್ತಿತ್ವಕ್ಕೆ

ಭದ್ರಾವತಿ, ನ. ೨೫: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಖಾಸಗಿಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಈ ಹಿನ್ನಲೆಯಲ್ಲಿ ಇದರ ವಿರುದ್ಧ ಹೋರಾಟ ನಡೆಸಲು ಇದೀಗ ಹಿರಿಯ ಕಾರ್ಮಿಕ ಮುಖಂಡ ಎಸ್.ಎನ್ ಬಾಲಕೃಷ್ಣ ನೇತೃತ್ವದಲ್ಲಿ ವಿಐಎಸ್‌ಎಲ್ ಉಳಿಸಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
      ಸಮಿತಿ ಗೌರವಾಧ್ಯಕ್ಷರಾಗಿ ಶಾಸಕ ಬಿ.ಕೆ ಸಂಗಮೇಶ್ವರ್, ಕಾರ್ಯಾಧ್ಯಕ್ಷರಾಗಿ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಜೆ.ಎನ್ ಚಂದ್ರಹಾಸ, ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಉಪಾಧ್ಯಕ್ಷರಾಗಿ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಜೆ.ಎಸ್ ನಾಗಭೂಷಣ, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ನಗರಸಭೆ ಸದಸ್ಯ ಎಂ.ಎ ಅಜಿತ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಗುರೇಶ್ ಮತ್ತು ಕಾಂಗ್ರೆಸ್ ಮುಖಂಡ ಬಾಲಕೃಷ್ಣ ನೇಮಕಗೊಂಡಿದ್ದಾರೆ.
     ಕಾರ್ಯದರ್ಶಿಗಳಾಗಿ ಬಸಂತ್‌ಕುಮಾರ್, ಬಿ.ಆರ್ ನಾಗರಾಜ್, ಸಿ.ವಿ ರಾಘವೇಂದ್ರ, ಎಸ್. ಮೋಹನ್, ಎಚ್. ರವಿಕುಮಾರ್, ರಾಕೇಶ್, ಬಿ.ಎನ್ ರಾಜು, ನರಸಿಂಹಚಾರ್, ಗೌರವ ಸಲಹೆಗಾರರಾಗಿ ಡಿ.ಸಿ ಮಾಯಣ್ಣ, ಕರಿಯಪ್ಪ, ಎಸ್. ಮಣಿಶೇಖರ್, ಜೆ.ಪಿ ಯೋಜೇಶ್, ಎಸ್. ಕುಮಾರ್, ಬಸವಂತಪ್ಪ, ಸುರೇಶ್, ಮಹಮ್ಮದ್ ಸನಾವುಲ್ಲಾ, ಸತ್ಯ, ಬಿ.ಜಿ ರಾಮಲಿಂಗಯ್ಯ, ರವಿ, ಸುಧಾಮಣಿ, ಲಕ್ಷ್ಮಿದೇವಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಎಸ್ ಭೈರಪ್ಪ, ನರಸಿಂಹಮೂರ್ತಿ, ಎಂ. ನಾರಾಯಣ, ಕಾಂತರಾಜ್, ವೆಂಕೆಟೇಶ್, ಕೆಂಪಯ್ಯ, ಆರ್. ಶಂಕರ್, ನಂಜಪ್ಪ, ಎಂ.ಎಚ್ ತಿಪ್ಪೇಸ್ವಾಮಿ, ಸುರೇಶ್ ವರ್ಮಾ, ಯಲ್ಲೋಜಿರಾವ್, ರಾಮಚಂದ್ರ, ಮಾದೇಗೌಡ, ಎಸ್. ಗುಣಕರ, ಎಂ.ಎಲ್ ಯೋಗೀಶ, ಎಸ್.ಪಿ ರಾಜಣ್ಣ, ಪಿ. ರಾಜು, ಎ.ಎಲ್.ಡಬ್ಲ್ಯೂ ಕುಮಾರ್, ಪ್ರಹಲ್ಲಾದ, ಪ್ರದೀಪ್‌ಕುಮಾರ್ ಮತ್ತು ಕೆ.ಆರ್ ಮನುರವರನ್ನು ಆಯ್ಕೆ ಮಾಡಲಾಗಿದೆ.


ಕಸಾಪ ವತಿಯಿಂದ ನ.೨೬ರಂದು ದತ್ತಿ ಕಾರ್ಯಕ್ರಮ

ಭದ್ರಾವತಿ, ನ. ೨೫: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದತ್ತಿ ದಾನಿಗಳಾದ ವಿಜಾಪುರ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಡಾ. ಎಸ್.ಎಸ್ ವಿಜಯ ಸಹಕಾರೊಂದಿಗೆ ನ.೨೬ರಂದು ಬೆಳಿಗ್ಗೆ ೧೧ ಗಂಟೆಗೆ ಕಾಗದನಗರದ ಆಂಗ್ಲ ಶಾಲೆ(ಪಿಟಿಇಎಸ್)ಯ ದತ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
     ಎಂಪಿಎಂ ಶಿಕ್ಷಣ ಸಂಸ್ಥೆಗಳ ಕೋಶಾಧ್ಯಕ್ಷ ಎಂ.ಡಿ ರವಿಕುಮಾರ್ ಉದ್ಘಾಟಿಸಲಿದ್ದು, ಕಸಾಪ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ವಚನಗಾರ್ತಿಯರ ವಚನ ಗಾಯನ ಮತ್ತು ವ್ಯಾಖ್ಯಾನ ಕುರಿತು ಬೊಮ್ಮನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎ. ತಿಪ್ಪೇಸ್ವಾಮಿ ಉಪನ್ಯಾಸ ನೀಡಲಿದ್ದು, ಕಸಾಪ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ ಆಶಯ ನುಡಿಗಳನ್ನಾಡಲಿದ್ದಾರೆ. ಪ್ರಾಂಶುಪಾಲರಾದ ಆರ್. ಸತೀಶ್, ಜಿ.ಎನ್ ಲಕ್ಷ್ಮೀಕಾಂತ, ಮುಖ್ಯೋಪಾಧ್ಯಾಯಿನಿ ಭಾರತಿ, ಕಸಾಪ ಕಾರ್ಯದರ್ಶಿಗಳಾದ ಸಿ. ಚನ್ನಪ್ಪ, ವೈ.ಕೆ ಹನುಮಂತಯ್ಯ, ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.