೬೦ ವರ್ಷಗಳಿಂದ ನಡೆಯದ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು ಬಿಎಸ್‌ವೈ, ಬಿವೈಆರ್ ಅವಧಿಯಲ್ಲಿ ಅನುಷ್ಠಾನ
![](https://blogger.googleusercontent.com/img/b/R29vZ2xl/AVvXsEjLKhqtaRLWEOhs1Fdh2MgYQQAQlbU6i3JZ2t3IRs5DoHRJ0btLYbfEqStw0IEAm5dgI4cSx9_VHFaKVrQNrFxzqmEagt_ovNZvolIwItwM9b-yv8cD3BFdQtuCIOnGTM7qDtsuddHCxl4W/s320-rw/D2-BDVT1-766917.jpg)
ಮೈಸೂರು ರೈಲ್ವೆ ವಿಭಾಗ ಸಲಹಾ ಸಮಿತಿ ಸಮಿತಿ ಸದಸ್ಯ ಎನ್. ವಿಶ್ವನಾಥರಾವ್
ಭದ್ರಾವತಿ, ಡಿ. ೨: ಕೋಟೆ ಗಂಗೂರು ರೈಲ್ವೆ ಕೋಚಿಂಗ್ ಟರ್ಮಿನಲ್ ಕುರಿತು ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ತೀ.ನಾ ಶ್ರೀನಿವಾಸ್ ನೀಡಿರುವ ಹೇಳಿಕೆ ಸರಿಯಲ್ಲ. ಜಿಲ್ಲೆಯಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಇದುವರೆಗೂ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಅವರು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು ವಿಷಾದನೀಯ ಎಂದು ರೈಲ್ವೆ ಮೈಸೂರು ವಿಭಾಗದ ಸಲಹಾ ಸಮಿತಿ ಸದಸ್ಯ, ನಗರದ ನಿವಾಸಿ ಎನ್. ವಿಶ್ವನಾಥರಾವ್ ತಿಳಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ನಾನು ಕಳೆದ ೪ ವರ್ಷಗಳಿಂದ ರೈಲ್ವೆ ಸಲಹಾ ಸಮಿತಿ ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರ ಪರಿಶ್ರಮದಿಂದಾಗಿ ಜಿಲ್ಲೆಯಲ್ಲಿ ಸುಮಾರು ೬೦ ವರ್ಷಗಳಿಂದ ನಡೆಯದಿರುವ ರೈಲ್ವೆ ಇಲಾಖೆಗೆ ಸಂಬಂಧಿಸಿದ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.
ಉದಾಹರಣೆಗೆ ಭದ್ರಾವತಿ ರೈಲ್ವೆ ನಿಲ್ದಾಣವನ್ನು ಯಾರು ಸಹ ನಿರೀಕ್ಷಿಸಲಾರದಷ್ಟು ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜಿಲ್ಲೆಯಲ್ಲಿ ರೈಲ್ವೆ ಇಲಾಖೆಯಿಂದ ರೈಲ್ವೆ ಮೇಲ್ಸೇತುವೆಗಳು, ವರ್ತುಲ ರಸ್ತೆ, ಅರಸಾಳು ಶಂಕರ್‌ನಾಗ್‌ರವರ ಕನಸಿನ ಮಾಲ್ಗುಡಿ ನೆನಪಿನ ಮ್ಯೂಸಿಯಂ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಅಲ್ಲದೆ ಬೆಂಗಳೂರು-ಶಿವಮೊಗ್ಗ ಸಿಂಟರ್ ಸಿಟಿ, ಜನಶತಾಬ್ದಿ, ಮೈಸೂರು, ಚೆನ್ನೈ, ತಿರುಪತಿಗಳಿಗೆ ಹೊಸ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹೀಗೆ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಇದೀಗ ರೈಲ್ವೆ ಕೋಚಿಂಗ್ ಟರ್ಮಿನಲ್ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ. ಇದೊಂದು ದೊಡ್ಡ ಪ್ರಮಾಣದ ಕಾರ್ಯವಾಗಿದ್ದು, ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಲಭಿಸಲಿದೆ. ಈ ಯೋಜನೆಯನ್ನು ಅಧಿಕಾರಿಗಳ ಸೂಕ್ತ ನಿರ್ದೇಶನ ದ ಮೇರೆಗೆ ಜಿಲ್ಲೆಯ ಕೋಟೆ ಗಂಗೂರಿಗೆ ಸ್ಥಳಾಂತರಿಸಲಾಗಿದೆ. ಇದರಿಂದ ಜಿಲ್ಲೆಗೆ ಯಾವುದೇ ರೀತಿ ನಷ್ಟವಾಗಿಲ್ಲ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ತೀ.ನಾ ಶ್ರೀನಿವಾಸ್‌ರವರು ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊದಲು ಈ ಹಿಂದಿನ ಕಾಂಗ್ರೆಸ್ ಸರ್ಕಾರ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗು ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರ ಅವಧಿಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ತುಲನೆ ಮಾಡಿ ನೋಡಿ. ಪ್ರಸ್ತುತ ಟರ್ಮಿನಲ್ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡಿ. ಇಲ್ಲವಾದಲ್ಲಿ ಗಂಡ-ಹೆಂಡತಿ ನಡುವಿನ ಜಗಳದ ಮಧ್ಯೆ ಕೂಸು ಬಡವಾದಂತೆ ಯೋಜನೆ ಕೈತಪ್ಪಿ ಹೋಗುವುದು ಖಚಿತ ಎಂದು ಎಚ್ಚರಿಸಿದ್ದಾರೆ.