ಭದ್ರಾವತಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ನಗರದ ಪದ್ಮನಿಲಯ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ಶಾಸಕ ವೈ.ಎಸ್.ವಿ ದತ್ತಾ ಉದ್ಘಾಟಿಸಿದರು.
ಭದ್ರಾವತಿ, ಡಿ. ೧೧: ಮಾನವ ಹಕ್ಕುಗಳು ಬಹಳ ಶ್ರೇಷ್ಠತೆ ಹಾಗು ಶಕ್ತಿಯುತವಾಗಿದ್ದು, ಇವುಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಕಡೂರು ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ ದತ್ತಾ ಹೇಳಿದರು.
ಅವರು ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ನಗರದ ಪದ್ಮನಿಲಯ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಾನವ ಸಮುದಾಯದ ನಡುವೆ ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಾನವ ಹಕ್ಕುಗಳು ಹೆಚ್ಚು ಶಕ್ತಿಯುತವಾಗಿದ್ದು, ಪ್ರತಿಯೊಬ್ಬರ ಬದುಕಿಗೂ ಬೆಲೆ ತಂದು ಕೊಡುತ್ತವೆ ಎಂದರು.
ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮಾನವೀಯ ಮೌಲ್ಯಗಳ ಪರವಾಗಿ ಧ್ವನಿ ಎತ್ತಿದ ಜನಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದರು. ಇವರ ಸ್ಮರಣಾರ್ಥ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಇವರ ಹೆಸರನ್ನು ನಾಮಕರಣಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಹೋರಾಟ ಆರಂಭಿಸಲಾಗಿದೆ. ಇದರ ಜವಾಬ್ದಾರಿ ತಮಗೆ ವಹಿಸಲಾಗಿದೆ. ಯಾವುದೇ ಕಾರಣಕ್ಕೂ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಅಪ್ಪಾಜಿ ಹೆಸರು ನಾಮಕರಣ ಮಾಡುವಂತೆ ವಿಧಾನಸೌಧದ ಮಟ್ಟದಲ್ಲಿ ಸಹ ಹೋರಾಟ ನಡೆಸಲು ಸಿದ್ದವಿರುವುದಾಗಿ ಭರವಸೆ ನೀಡಿದರು.
ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ ಮಾನವ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು. ಹಿರಿಯ ಕಾರ್ಮಿಕ ಹೋರಾಟಗಾರ ಡಿ.ಸಿ ಮಾಯಣ್ಣ ಅಧ್ಯಕ್ಷತೆ ವಹಿಸಿದ್ದರು.
ಸರೋಜಮ್ಮ ಬಿ. ಶಂಕರಪ್ಪ ಮತ್ತು ನಿತಿಲ್ ಎಂ. ಶ್ರೀನಿವಾಸನ್, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ನಗರಸಭೆ ಸದಸ್ಯರಾದ ಆರ್. ಕರುಣಾಮೂರ್ತಿ, ಎಂ.ಎ ಅಜಿತ್, ಬದರಿನಾರಾಯಣ, ಲಕ್ಷ್ಮೀದೇವಿ,ವಿಶಾಲಾಕ್ಷಿ, ಮಾಜಿ ಸದಸ್ಯ ಕೆ. ಕರಿಯಪ್ಪ, ಜನಸೈನ್ಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾರದಮ್ಮ, ಕರಾವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್, ಕಲಾವಿದ ಆಂಜನೇಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.